ಮೈಸೂರು, ಮೇ.24: ಲಕ್ಷಾಂತರ ಜನರ ಜೀವನಾಡಿ ಕಾವೇರಿ ನದಿ(Cauvery River)ಗೆ ಇದೀಗ ಸಂಕಷ್ಟ ಎದುರಾಗಿದೆ. ಪ್ರತಿನಿತ್ಯ ಕಾವೇರಿ ಒಡಲಿಗೆ ಮೈಸೂರಿನ ಕೊಳಚೆ ನೀರು ಸೇರ್ಪಡೆಯಾಗುತ್ತಿದೆ. ಅಂದಹಾಗೆ ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿ ಗ್ರಾಮದ ಬಳಿ ಕಾವೇರಿ ನದಿ ಪಶ್ಚಿಮ ಮುಖವಾಗಿ ಹರಿಯುತ್ತಾಳೆ. ಆದರೆ, ಅದೇ ಸ್ಥಳಕ್ಕೆ ಮೈಸೂರಿನಿಂದ ಬರುವ ಕೊಳಚೆ ನೀರು, ಕೆಲ ಕಾರ್ಖಾನೆಗಳ ರಾಸಾಯನಿಕಯುಕ್ತ ನೀರು ಬಂದು ಸೇರುತ್ತಿದೆ. ಆದರೆ, ಕೊಳಚೆ ನೀರನ್ನ ಶುದ್ದೀಕರಣ ಮಾಡದೇ ಅದೇ ನೀರನ್ನು ಮಂಡ್ಯ, ರಾಮನಗರಕ್ಕೂ ಕೂಡ ಹರಿಬಿಡಲಾಗುತ್ತಿದೆ.
ಜೊತೆಗೆ ಕೆಮಿಕಲ್ ಮಿಶ್ರಿತ ನೀರಿನಿಂದ ನೊರೆ ಕೂಡ ಸೃಷ್ಠಿ ಆಗುತ್ತಿದ್ದು, ಆ ನೀರನ್ನ ಶುದ್ದೀಕರಣ ಮಾಡಿ, ಶ್ರೀರಂಗಪಟ್ಟಣದ ಹಲವು ವಾರ್ಡ್ಗಳಿಗೆ ಕುಡಿಯಲು ಸರಬರಾಜು ಮಾಡಲಾಗುತ್ತದೆ. ಇದರಿಂದ ಅನೇಕ ಜನರು ಅನೇಕ ಸಮಸ್ಯೆಗಳನ್ನ ಕೂಡ ಎದುರಿಸುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಮೈಸೂರು ಮಹಾನಗರ ಪಾಲಿಕೆ ಈ ರೀತಿ ಕದ್ದುಮುಚ್ಚಿ ರಾತ್ರೋರಾತ್ರಿ ಶುದ್ದೀಕರಣ ಮಾಡದೇ ಕೊಳಚೆ ನೀರನ್ನ ಕಾವೇರಿ ನದಿಗೆ ಹರಿಬಿಡುತ್ತಿದ್ದಾರೆ. ಒಂದು ಕಡೆ ಅದೇ ನೀರನ್ನ ಶುದ್ದೀಕರಣ ಮಾಡಿ ಶ್ರೀರಂಗಪಟ್ಟಣದ ನಗರ ವಾಸಿಗಳಿಗೆ ಕುಡಿಯಲು ಸರಬರಾಜು ಮಾಡಿದ್ರೆ, ಮತ್ತೊಂದು ಕಡೆ ಅದೇ ನೀರನ್ನ ವ್ಯವಸಾಯಕ್ಕೆ, ಜನವಾರುಗಳು ಕುಡಿಯಲು, ಮೈ ತೊಳೆಯಲು ಸಹ ಬಳಸಲಾಗುತ್ತಿದೆ.
ಇದನ್ನೂ ಓದಿ:ಮೈಸೂರಿನಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಸಾವು: ಮೂವರು ಅಧಿಕಾರಿಗಳು ಅಮಾನತು
ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೆ ತಲೆ ಕೆಡಿಸಿಕೊಂಡಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೂ ಕೂಡ ಕಾರಣವಾಗಿದ್ದು, ಕೂಡಲೇ ಸರ್ಕಾರ ಎಚ್ಚೇತ್ತುಕೊಳ್ಳಬೇಕು. ಶುದ್ದೀಕರಣ ಮಾಡಿ ನದಿಗೆ ನೀರನ್ನ ಹರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಅವರನ್ನು ಕೇಳಿದ್ರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದೀಗ ಆ ನೀರನ್ನ ವಾರ್ಡ್ಗೆ ಸರಬರಾಜು ಮಾಡುತ್ತಿಲ್ಲ. ಮೈಸೂರು ಪಾಲಿಕೆಗೂ ಕೂಡ ಪತ್ರ ಬರೆದಿದ್ದೇವೆ ಎನ್ನುತ್ತಿದ್ದಾರೆ. ಒಟ್ಟಾರೆ ರಾಜ್ಯದ ಜೀವನಾಡಿ ಕಾವೇರಿಗೆ ಮೈಸೂರಿನ ಕೊಳಚೆ ನೀರು ಸೇರ್ಪಡೆ ಆಗಿ ದಿನದಿಂದ ದಿನಕ್ಕೆ ಮಲೀನವಾಗುತ್ತಿದೆ. ಅಷ್ಟೇ ಅಲ್ಲದೆ ಜನರು ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ, ಸರ್ಕಾರ ಎಚ್ಚೇತ್ತುಕೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ