ಮಂಡ್ಯ: ಜಿಲ್ಲೆಯ ನಾಗಮಂಗಲದ ಕೆಎಸ್ಆರ್ಟಿಸಿ ಚಾಲಕ (KSRTC Driver) ಜಗದೀಶ್ ವರ್ಗಾವಣೆ ಆದೇಶವನ್ನು ತಡೆಹಿಡಿಯಲಾಗಿದೆ. ವರ್ಗಾವಣೆಗೆ ಮನನೊಂದು ಜಗದೀಶ್ ನಾಗಮಂಗಲ ಬಸ್ ಡಿಪೋ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದರು. ಈ ಪ್ರಕರಣದಲ್ಲಿ ಸಚಿವ ಚಲುವರಾಯಸ್ವಾಮಿ ಹೆಸರು ಕೇಳಿಬಂದಿದ್ದು, ಇದು ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆಯೇ ಇದೀಗ ಜಗದೀಶ್ ಅವರ ವರ್ಗಾವಣೆಯನ್ನು ತಡೆಹಿಡಿಲಾಗಿದೆ. ಈ ಬಗ್ಗೆ ಸ್ವತಃ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (N chaluvaraya swamy) ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಇಂದು (ಜುಲೈ 05) ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ವರ್ಗಾವಣೆ ಸಹಜ ಪ್ರಕ್ರಿಯೆ. ಕೆಲವರು ಅನಾವಶ್ಯಕ ಈ ರೀತಿ ರಾಜಕೀಯ ಮಾಡುವುದು ಪರಿಪಾಟಲು. ಸರ್ಕಾರದ ಬದಲಾದಾಗ ಎಲ್ಲರ ಕಾಲದಲ್ಲೂ ವರ್ಗಾವಣೆ ಆಗಿರುತ್ತೆ. ನಾನು ಆ ಚಾಲಕನಿಗೆ ವರ್ಗಾವಣೆಗೆ ಲೆಟರ್ ಕೊಟ್ಟಿಲ್ಲ, ವರ್ಗಾವಣೆ ಮಾಡಿ ಎಂದು ಹೇಳಿಲ್ಲ. ಆದರೆ ವರ್ಗಾವಣೆ ಆಗಿದೆ. ಆ ಚಾಲಕನ ಬಾವ ನನಗೆ ಫೋನ್ ಮಾಡಿದ್ರು, ಹಾಗಾಗಿ ಅದನ್ನ ನಾನೇ ಹೋಲ್ಡ್ ಮಾಡುವಂತೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಇದರಲ್ಲಿ ಏನಾದ್ರೂ ತಪ್ಪಿದ್ರೆ ತನಿಖೆ ಮಾಡಿ ಆಮೇಲೆ ವರ್ಗಾವಣೆ ಮಾಡಿ ಅಂತ ಹೇಳಿದ್ದೆ. ಅದನ್ನ ರದ್ದು ಮಾಡಿ ಎಂದು ಇವರು (ಜಗದೀಶ್) ನಿನ್ನೆ(ಜುಲೈ 04) ಹೋಗಿ ಈ ರೀತಿ ಮಾಡಿಕೊಂಡಿದ್ದಾರೆ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ . ಹಿಂದೆಯೂ ಸಾಕಷ್ಟು ವರ್ಗಾವಣೆ ಆಗಿದೆ. ಹಾಗಾಂತ ಜೆಡಿಎಸ್ ನವರೆಲ್ಲರನ್ನೂ ವರ್ಗಾವಣೆ ಮಾಡುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಇನ್ನು ಜಗದೀಶ್ ಆತ್ಮಹತ್ಯೆಗೆ ತಂದೆ ರಾಜೇಗೌಡ ಪ್ರತಿಕ್ರಿಯಿಸಿದ್ದು, ನನ್ನ ಮಗನ ವಿರುದ್ಧ ಸುಳ್ಳು ಆರೋಪ ಮಾಡಿ ವರ್ಗಾವಣೆ ಮಾಡಲಾಗಿದೆ. ಸಚಿವ ಚಲುವರಾಯಸ್ವಾಮಿ ಸೂಚನೆ ಮೇರೆಗೆ ವರ್ಗಾವಣೆ ಮಾಡಿದ್ದಾರೆ. ನಾವು ಮೊದಲಿನಿಂದಲೂ ಜೆಡಿಎಸ್, ಕುಮಾರಸ್ವಾಮಿ ಅಭಿಮಾನಿಗಳು. ನನ್ನ ಸೊಸೆ ಗ್ರಾಮ ಪಂಚಾಯಿತಿ ಸದಸ್ಯೆಯಾದ್ದರಿಂದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪ ಮಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದ ಆರೋಪ ಮೇಲೆ ಜಗದೀಶ್ ಅವರನ್ನು ವರ್ಗಾವಣೆ ಮಾಡಲಾಗಿತ್ತು ಎಂದು ಆರೋಪ ಕೇಳಿಬಂದಿದ್ದು, ಇದರಿಂದ ಆಕ್ರೋಶಗೊಂಡ ಜಗದೀಶ್, ರಾಜಕೀಯ ದ್ವೇಷದಿಂದ ವರ್ಗಾವಣೆ ಮಾಡಿದ್ದಾರೆಂದು ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ನಾಗಮಂಗಲ ಬಸ್ ಡಿಪೋ ಬಳಿ ಸಚಿವರ ವಿರುದ್ಧ ಬಾಯಿಗೆ ಬಂದಂತೆ ಬೈದ ಜಗದೀಶ್, ನಂತರ ವಿಷ ಸೇವಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 am, Thu, 6 July 23