ಮಂಡ್ಯ ನೂತನ ರೈಲು ನಿಲ್ದಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ: ಒಂದೇ ವೇದಿಕೆಯಲ್ಲಿ ಸುಮಲತಾ, ಚಲುವರಾಯಸ್ವಾಮಿ
ಒಂದೆಡೆ ರಾಜಕೀಯ ಆರೋಪ ಪ್ರತ್ಯಾರೋಪಗಳಿಂದ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಮಂಡ್ಯ ಸಂಸ ಸುಮಲತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಸೋಮವಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮಂಡ್ಯ ನೂತನ ರೈಲ್ವೆ ನಿಲ್ದಾಣಕ್ಕೆ ಪ್ರಧಾನಿ ಮೋದಿ ವರ್ಚುವಲ್ ಆಗಿ ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭ ಈ ವಿದ್ಯಮಾನ ನಡೆದಿದೆ.
ಮಂಡ್ಯ, ಫೆಬ್ರವರಿ 26: ಮಂಡ್ಯ ರೈಲು ನಿಲ್ದಾಣವನ್ನು (Mandya Railway Station) ಮೇಲ್ದರ್ಜೆಗೆ ಏರಿಸಿ ಹೊಸದಾಗಿ ನಿರ್ಮಾಣ ಮಾಡುವ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ವರ್ಚುವಲ್ ಆಗಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಮಂಡ್ಯ ಸಂಸದೀಯ ಸುಮಲತಾ (Sumalatha), ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ (N Chaluvarayaswamy) ಜೊತೆಯಾಗಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ, ಕಳೆದ ಕೆಲವು ದಿನಗಳಿಂದ ಸುಮಲತಾ ಮತ್ತು ಚಲುವರಾಯಸ್ವಾಮಿ ಪರಸ್ಪರ ಟೀಕಾ ಪ್ರಹಾರದಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ, ವೇದಿಕೆ ಹಂಚಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿ ಮಂಡ್ಯ, ತುಮಕೂರು, ಕೋಲಾರ ಸೇರಿದಂತೆ ದೇಶದ ವಿವಿಧ ಪ್ರದೇಶಗಳ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಕರ್ನಾಟಕದ ವಿಜಯಪುರ ನಗರದ ಕೇಂದ್ರ ರೇಲು ನಿಲ್ದಾಣದಲ್ಲಿ ಕೂಡ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಸಂಸದ ರಮೇಶ ಜಿಗಜಿಣಗಿ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಮೋದಿ ಘೋಷಣೆ ಕೂಗಿದ ಕಾರ್ಯಕರ್ತರು
ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಗಾಗೂ ಜೈಶ್ರೀರಾಂ ಎಂದು ಘೋಷಣೆ ಕೂಗಿದರು. ಇದೆ ವೇಳೆ ಸಚಿವರ ಬೆಂಬಲಿಗರು, ‘ಚಲುವರಾಯಸ್ವಾಮಿಗೆ ಜೈ’ ಎಂಬ ಘೋಷಣೆಗಳನ್ನು ಕೂಗಿದರು. ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗಿದ್ದು ಚಲುವರಾಯಸ್ವಾಮಿಯವರ ಸಿಟ್ಟಿಗೆ ಕಾರಣವಾಯಿತು. ಇದು ಸರ್ಕಾರಿ ಕಾರ್ಯಕ್ರಮ. ಯಾವೊಂದು ರಾಜಕೀಯ ಪಕ್ಷದ ಕಾರ್ಯಕ್ರಮವೂ ಅಲ್ಲ. ಹೀಗಾಗಿ ನೀವು ಎಷ್ಟೇ ಘೋಷಣೆ ಕೂಗಿದರೂ ಪ್ರಯೋಜನವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಂಡ್ಯ ಕ್ಷೇತ್ರದ ಕುತೂಹಲ ಹೆಚ್ಚಾಗಿದೆ. ಬಿಜೆಪಿ ಜೆಡಿಎಸ್ ಮೈತ್ರಿಕೂಟವು ಸೀಟು ಹಂಚಿಕೆಯನ್ನು ಇನ್ನೂ ಅಂತಿಮ ಗೊಳಿಸಿಲ್ಲ. ಆದಾಗ್ಯೂ ಮಂಡ್ಯ ಕ್ಷೇತ್ರದ ಟಿಕೆಟ್ ಜೆಡಿಎಸ್ ಗೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಸಮಾಧಾನಗೊಂಡಿರುವ ಸುಮಲತಾ ಹಲವು ಸಭೆಗಳನ್ನು ನಡೆಸಿದ್ದಾರೆ. ಒಂದು ವೇಳೆ ಬಿಜೆಪಿ ಬೆಂಬಲ ಸಿಗದಿದ್ದರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರಿ ಕಾರ್ಯಕ್ರಮವಾದರೂ, ಚಲುವರಾಯಸ್ವಾಮಿ ಜೊತೆ ವೇದಿಕೆ ಹಂಚಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ವಿರಾಮಕ್ಕಾಗಿ ರೆಸಾರ್ಟ್ಗೆ ಹೋಗುತ್ತಿದ್ದೇವೆಂದ ಚಲುವರಾಯಸ್ವಾಮಿ
ಕೆಲಸದ ಒತ್ತಡಲ್ಲಿ ಒಂದು ದಿನ ವಿರಾಮ ಬೇಕಿತ್ತು. ಹಾಗಾಗಿ ರೆಸಾರ್ಟ್ಗೆ ಹೋಗುತ್ತಿದ್ದೇವೆ ಎಂದು ಮಂಡ್ಯದಲ್ಲಿ ಸಚಿವ ಎನ್ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ರೆಸಾರ್ಟ್ ರಾಜಕೀಯದ ಮೊರೆ ಹೋಗಿರುವ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ. ನಮಗೆ ಮಾತ್ರ ಭಯ, ಜೆಡಿಎಸ್ ಬಿಜೆಪಿಗೆ ಭಯ ಅನ್ನೋದೆ ಇಲ್ಲ. ಸಂಖ್ಯೆ ಇಲ್ಲದೆ ಇರುವವರು ಪರದಾಡುತ್ತಾರೆ. ನಮ್ಮ ಬಳಿ ಸಾಕಷ್ಟು ಸಂಖ್ಯೆ ಇದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಬಿಜೆಪಿ ಶಾಸಕ ಸೋಮಶೇಖರ್ ನಮ್ಮ ಜೊತೆಗೆ ವಿಶ್ವಾಸದಿಂದ ಇದ್ದಾರೆ ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಚೆನ್ನೈ-ಬೆಂಗಳೂರು-ಮೈಸೂರು ಸಂಪರ್ಕಿಸಲಿದೆ ಮಹತ್ವದ ಹೈ ಸ್ಪೀಡ್ ರೈಲು ಯೋಜನೆ; ಭೂಸ್ವಾಧೀನಕ್ಕಾಗಿ ಭೂ ಮಾಲೀಕರೊಂದಿಗೆ ಸಭೆ
ಮಂಡ್ಯ ಶಾಸಕರ ಕುರಿತು ಪುಟ್ಟರಾಜು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಜೊತೆಗೆ ನಾವು ಹೋಲಿಕೆ ಮಾಡಲಾಗುತ್ತದೆಯೇ? ಮಂಡ್ಯ ಟಿಕೆಟ್ ಚರ್ಚೆ ಆಗಿಹೋಗಿದೆ. ಆದ್ರೆ, ಚುನಾವಣೆ ಕಮಿಟಿಯವರು ಅದನ್ನು ಪ್ರಕಟ ಮಾಡ್ತಾರೆ. ಸ್ಟಾರ್ ಚಂದ್ರು ಫೈನಲ್ ಆಗೋದು ಖಚಿತ. ಮುಂದಿನ ತಿಂಗಳು 10 ರಂದು ಸಿಎಂ ಮಂಡ್ಯ ಜಿಲ್ಲೆಗೆ ಬರಲಿದ್ದಾರೆ. ಬಹುಶ ಅಂದಿನಿಂದಲೇ ಚುನಾವಣೆಗೆ ಅಧಿಕೃತ ಪ್ರಚಾರ ಆರಂಭವಾಗಬಹುದು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:44 am, Mon, 26 February 24