ಮಂಡ್ಯ, ಜನವರಿ 12: ನಿಷೇಧಾಜ್ಞೆ ಉಲ್ಲಂಘಿಸಿ 2017ರಲ್ಲಿ ಬೈಕ್ ಱಲಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯ (Mandya) ಬಿಜೆಪಿಯ 17 ಮಂದಿ ಕಾರ್ಯಕರ್ತರಿಗೆ (BJP Workers) ಪಾಂಡವಪುರ ಜೆಎಂಎಫ್ಸಿ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಈ ಕಾರ್ಯಕರ್ತರು ಎಸ್ಡಿಪಿಐ, ಪಿಎಫ್ಐ ಸಂಘಟನೆಗಳ ವಿರುದ್ಧದ ಪ್ರತಿಭಟನೆಗೆ ಮಂಗಳೂರಿಗೆ ಹೊರಟಿದ್ದರು. ಪಾಂಡವಪುರದಿಂದ ಮಂಗಳೂರಿಗೆ ಬೈಕ್ ಱಲಿ ಮೂಲಕ ಹೊರಟಿದ್ದರು. ಇದೇ ವೇಳೆ ಪಾಂಡವಪುರದಲ್ಲಿ ಪ್ರತಿಭಟನಾಕಾರರನ್ನು ತಡೆದಿದ್ದ ಪೊಲೀಸರು, ಎಫ್ಐಆರ್ ದಾಖಲಿಸಿ ನಂತರ ಚಾರ್ಜ್ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಗೆ ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲೇ ಕೋರ್ಟ್ ಸಮನ್ಸ್ ಜಾರಿ ಮಾಡಿದ್ದು, ಇದೀಗ ಮಾಹಿತಿ ಬಹಿರಂಗಗೊಂಡಿದೆ.
ಒಂದೆಡೆ, ಬಿಜೆಪಿ ಕಾರ್ಯಕರ್ತರ ಹಾಗೂ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ರಿಓಪನ್ ಮಾಡುತ್ತಿದೆ ಎಂಬ ಪ್ರತಿಪಕ್ಷದ ಆರೋಪದ ಬೆನ್ನಲ್ಲೇ ಈ ವಿದ್ಯಮಾನವೂ ನಡೆದಿದೆ.
ಕಾರ್ಯಕರ್ತರಿಗೆ ಸಮನ್ಸ್ ಜಾರಿ ವಿಚಾರವಾಗಿ ಪೊಲೀಸರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇಷ್ಟು ವರ್ಷ ಇಲ್ಲದ ಸಮನ್ಸ್ ಈಗ ಯಾಕೆ ಎಂದು ಬಿಜೆಪಿ ಪ್ರಶ್ನೆ ಮಾಡಿದೆ. ಜತೆಗೆ, ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಹಿಂದೂ, ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ: ಬಿಜೆಪಿಯ ಕ್ಲಸ್ಟರ್ ಮಟ್ಟದ ಸಭೆ ಪೂರ್ಣ, ಈಗ ವಿಜಯೇಂದ್ರ ಚಿತ್ತ ದೆಹಲಿಯತ್ತ
ಈ ಮಧ್ಯೆ, ನಾವು ಯಾವುದೇ ನೋಟಿಸ್ ನೀಡಿಲ್ಲ. ಅದು ಕೋರ್ಟ್ನಿಂದ ಜಾರಿಯಾಗಿರುವ ಸಮನ್ಸ್ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಕಳೆದ ತಿಂಗಳೇ ಸಮನ್ಸ್ ಜಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ