ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ನಂದೀಶ್ ಕುಟುಂಬಸ್ಥರಲ್ಲಿ ಹೆಚ್ಚಿದ ಆತಂಕ, ನೆರವು ನೀಡ್ತಾರಾ ದರ್ಶನ್?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟ ದರ್ಶನ್ ಹಾಗೂ ಇತರ 7 ಮಂದಿ ಆರೋಪಿಗಳಿಗೆ ಆರು ತಿಂಗಳ ಬಳಿಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ ದಾಸನನ್ನು ನಂಬಿ ಜೈಲು ಪಾಲಾಗಿರುವ ಪ್ರಕರಣದ ಎ5 ಆರೋಪಿ ನಂದೀಶ್ ಕುಟುಂಬಸ್ಥರ ಆತಂಕ ಹೆಚ್ಚಾಗಿದೆ. ನಂದೀಶ್ ಜಾಮೀನು ಕೋರಿ ಹೈಕೋರ್ಟ್​​ಗೆ ಅರ್ಜಿಯೇ ಸಲ್ಲಿಸಿಲ್ಲ. ಆತನ ಕುಟುಂಬದವರೀಗ ದರ್ಶನ್ ನೆರವಿಗಾಗಿ ಹಾತೊರೆಯುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ನಂದೀಶ್ ಕುಟುಂಬಸ್ಥರಲ್ಲಿ ಹೆಚ್ಚಿದ ಆತಂಕ, ನೆರವು ನೀಡ್ತಾರಾ ದರ್ಶನ್?
ಆರೋಪಿ ನಂದೀಶ್ ತಾಯಿ ಭಾಗ್ಯಮ್ಮ ಮತ್ತು ದರ್ಶನ್
Edited By:

Updated on: Dec 14, 2024 | 5:57 PM

ಮಂಡ್ಯ, ಡಿಸೆಂಬರ್ 14: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಗ್ಯಾಂಗ್ ಜೈಲು ಪಾಲಾಗಿತ್ತು. ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ರದ್ದಾಗಿತ್ತು. ಹೀಗಾಗಿ ಮತ್ತೆ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಮಧ್ಯೆ ನಟ ದರ್ಶನ್ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಪಾಲಾಗಿದ್ದರು. ಈಗಾಗಲೇ ವಾದ ವಿವಾದ ಆಲಿಸಿದ್ದ ಹೈಕೋರ್ಟ್ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಜಾಮೀನು ನೀಡಿದೆ. ಇದು ದರ್ಶನ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಆದರೆ, ದರ್ಶನ್​ನನ್ನೇ ನಂಬಿ ಜೈಲು ಪಾಲಾಗಿರುವ ಮಂಡ್ಯ ಮೂಲದ, ಪ್ರಕರಣ ಎ5 ಆರೋಪಿ ನಂದೀಶ್​ಗೆ ಜಾಮೀನು ಪಡೆಯುವ ಯತ್ನವೇ ಮಾಡಲಾಗದಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ.

ಮಗನಿಗೆ ಜಾಮೀನು ಸಿಗದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನಂದೀಶ್ ತಾಯಿ ಭಾಗ್ಯಮ್ಮ, ದರ್ಶನ್ ಆಚೆ ಬರುತ್ತಿದ್ದಾರೆ. ಅವರೇ‌ ನೋಡಿಕೊಳ್ಳುತ್ತಾರೆ. ನಮಗೆ ದರ್ಶನ್ ಮೇಲೆ ಈಗಲೂ ನಂಬಿಕೆ ಇದೆ. ವಕೀಲರನ್ನು ನೇಮಿಸಿಕೊಂಡು ಜಾಮೀನು ಪಡೆಯುವ ಆರ್ಥಿಕ ಶಕ್ತಿ ನಮಗಿಲ್ಲ. ಕೂಲಿ ನಾಲಿ ಮಾಡಿ ಜೀವನ ಮಾಡುತ್ತಿದ್ದೇವೆ. ಜಾಮೀನು ವಿಚಾರದಲ್ಲಿ ಏನು ಆಗಿದೆಯೋ ನಮಗೆ ಗೊತ್ತಿಲ್ಲ. ನನ್ನ ಮಗನನ್ನು ನೋಡಲು ಒಂದು ತಿಂಗಳ ಹಿಂದೆ ಹೋಗಿದ್ದೆವು. ಮಗನೂ ಸಹ ಬೇಲ್ ಬಗ್ಗೆ ಮಾತನಾಡಿಲ್ಲ. ನಟ ದರ್ಶನ್ ಬೇಲ್ ಕೊಡಿಸುವ ನಂಬಿಕೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ರೇಣುಕಾ ಸ್ವಾಮಿ ಪ್ರಕರಣ: ದರ್ಶನ್​ ಸೇರಿ 7 ಆರೋಪಿಗಳಿಗೆ ಜಾಮೀನು

ಒಟ್ಟಾರೆ ನಟ ದರ್ಶನ್​​ಗೆ ಸದ್ಯ ಬಿಗ್ ರಿಲೀಫ್ ಸಿಕ್ಕಿದೆ. ಆದರೆ ದರ್ಶನ್​​ಗಾಗಿ ಜೈಲು ಪಾಲಾದ ಆರೋಪಿ ನಂದೀಶ್ ಕಥೆ ಏನು ಎಂಬುದು ಕುಟುಂಬಸ್ಥರ ಆತಂಕವಾಗಿದೆ. ನಂದೀಶ್ ಬೆನ್ನಿಗೆ ದರ್ಶನ್ ನಿಲ್ಲುತ್ತಾರಾ ಕಾದು ನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ