Darshan Case: ರೇಣುಕಾ ಸ್ವಾಮಿ ಪ್ರಕರಣ: ದರ್ಶನ್ ಸೇರಿ 7 ಆರೋಪಿಗಳಿಗೆ ಜಾಮೀನು
Darshan Thoogudeepa in Renukaswamy Murder case: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ದರ್ಶನ್ರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ್ ಗೌಡ, ಪ್ರದೋಶ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ದರ್ಶನ್ರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ದರ್ಶನ್, ಪವಿತ್ರಾ ಗೌಡ, ಪ್ರದೋಶ್, ಅನುಕುಮಾರ್, ನಾಗರಾಜು, ಲಕ್ಷ್ಮಣ್, ಜಗದೀಶ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜುಲೈ 11 ರಂದು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಪ್ರಸ್ತುತ ಅವರು ಅನಾರೋಗ್ಯದ ಕಾರಣ ನೀಡಿ ಹೈಕೋರ್ಟ್ನಿಂದ ಮಧ್ಯಂತರ ಜಾಮೀನು ಪಡೆದಿದ್ದಾರೆ. ಈಗ ಅವರಿಗೆ ಜಾಮೀನು ಮಂಜೂರಾಗಿದ್ದು, ತಾತ್ಕಾಲಿಕ ನಿರಾಳತೆ ದೊರಕಿದೆ.
ದರ್ಶನ್ ಪರ ವಾದ ಮಂಡಿಸಿದ್ದ ಸಿವಿ ನಾಗೇಶ್ ಅವರು, ದರ್ಶನ್ ಅವರದ್ದು ರೇಣುಕಾ ಸ್ವಾಮಿ ಕೊಲೆಯಲ್ಲಿ ಪಾತ್ರವಿಲ್ಲ ಎಂದು ವಾದಿಸಿದ್ದರು. ಪೊಲೀಸರು ಕೆಲವು ಉತ್ಪ್ರೇಕ್ಷಿತ ಆರೋಪಗಳನ್ನು ದರ್ಶನ್ ವಿರುದ್ಧ ಮಾಡಿದ್ದಾರೆ ಎಂದು ವಾದಿಸಿದ್ದರು. ದರ್ಶನ್ ಪರ ವಕೀಲರ ವಾದವನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಅವರು ದರ್ಶನ್ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಜೊತೆಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಪವಿತ್ರಾ ಗೌಡ, ಪ್ರದೋಶ್, ಅನುಕುಮಾರ್, ನಾಗರಾಜು, ಲಕ್ಷ್ಮಣ್, ಜಗದೀಶ್ ಅವರಿಗೂ ಜಾಮೀನು ದೊರೆತಿದೆ.
ಇದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಾಲ್ವರಿಗೆ ಈ ಹಿಂದೆಯೇ ಜಾಮೀನು ದೊರೆತಿತ್ತು, ಇಂದು ಏಳು ಮಂದಿಗೆ ಜಾಮೀನು ದೊರೆತಿದೆ. ಆ ಮೂಲಕ ಈ ಪ್ರಕರಣದ 11 ಆರೋಪಿಗಳಿಗೆ ಜಾಮೀನು ದೊರೆತಂತಾಗಿದೆ. ಜಾಮೀನಿನಿಂದ ದರ್ಶನ್ಗೆ ನಿರಾಳತೆ ದೊರೆತಿದ್ದು, ಅವರ ಮೇಲೆ ಈಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾದ ಒತ್ತಡವೂ ತೊಲಗಿದೆ. ಮಾತ್ರವಲ್ಲದೆ ನಿಂತಿರುವ ಸಿನಿಮಾಗಳ ಚಿತ್ರೀಕರಣಕ್ಕೂ ಅವರು ತೆರಳಬಹುದಾಗಿದೆ.
ಅನಾರೋಗ್ಯದ ಕಾರಣ ನೀಡಿ ಈಗಾಗಲೇ ಮಧ್ಯಂತರ ಜಾಮೀನನ್ನ ದರ್ಶನ್ ಪಡೆದಿದ್ದಾರೆ. ಇನ್ನು ಇಂದು ಜಾಮೀನು ಪಡೆದ ಪ್ರಕರಣದ ಇತರೆ ಆರೋಪಿಗಳು ಸೋಮವಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆ. ಪವಿತ್ರಾ ಗೌಡ ಸಹ ಸೋಮವಾರವೇ ಜೈಲಿನಿಂದ ಹೊರಬರಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:35 pm, Fri, 13 December 24