ಮಂಡ್ಯ, ಫೆ.14: ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮದ ಬಳಿ ಎರಡು ಕಾರುಗಳು ನಡುವೆ ಡಿಕ್ಕಿಯಾಗಿ(Accident) ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಂಗಳೂರು ಕಡೆಗೆ ತೆರಳುತ್ತಿದ್ದ ವರ್ಣಾ ಕಾರು ಡಿವೈಡರ್ ಹೊಡೆದು, ಮೈಸೂರು ಕಡೆಗೆ ಹೋಗುತ್ತಿದ್ದ ಶಿಫ್ಟ್ ಕಾರಿಗೆ ಡಿಕ್ಕಿಯಾಗಿದೆ. ಮೂವರಿಗೆ ಗಂಭೀರ ಗಾಯವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ: ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ ಘಟನೆ ವಿಜಯಪುರ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ನಸುಕಿನ ಜಾವ ನಡೆದಿದೆ. ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಕ್ರಾಸ್ ಬಳಿ ಅವಘಡ ಸಂಭವಿಸಿದೆ. ದುರ್ಘಟನೆಯಲ್ಲಿ ರಾಜೇಂದ್ರ ಜಗದೀಶ ಬಿಸನಾಳ (28) ಹಾಗೂ ರಾಹುಲ್ ಈರಣ್ಣ ಕಂಬಾರ (26) ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಅಪಘಾತದಲ್ಲಿ ಯುವಕ ದಾರುಣ ಸಾವು -ಅಪಘಾತ ಮಾಡಿದ ವ್ಯಕ್ತಿಯೂ ಮನನೊಂದು ಸೂಸೈಡ್: ಮಡಿಕೇರಿಯಲ್ಲಿ ಕರುಣಾಜನಕ ಕಥೆ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿ ದೆಹಲಿ ಮೂಲದ ಕರಣ್ ಅಗರವಾಲ್(24) ಎಂಬಾತ ಧಾರುಣ ಸಾವನ್ನಪ್ಪಿದ್ದಾರೆ. ಹಿಂಬದಿ ಸವಾರ ಅರಮಂಜಿತ್ ಸಿಂಗ್ಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಂದಿಬೆಟ್ಟದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಈ ಕುರಿತು ಏರ್ಪೋರ್ಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಾಮರಾಜನಗರ: ಸೋಮವಾರಪೇಟೆ ಬೈಪಾಸ್ ಬಳಿ ಟೆಂಪೋ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಳಂದೂರು ತಾಲೂಕು ಕಂದಹಳ್ಳಿ ನಿವಾಸಿ ಅನಿತಾ(30) ಮೃತ ರ್ದುದೈವಿ. ಇನ್ನುಳಿದ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಚಾಮರಾಜನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:Kelvin Kiptum: ಭೀಕರ ರಸ್ತೆ ಅಪಘಾತದಲ್ಲಿ ವಿಶ್ವ ದಾಖಲೆ ವೀರ ಕೆಲ್ವಿನ್ ದುರ್ಮರಣ..!
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಹೊಸಟ್ಟಿ ಕ್ರಾಸ್ ಬಳಿ ಟಿಪ್ಪರ್ -ಬೈಕ್ ಮಧ್ಯ ಅಪಘಾತವಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಅಥಣಿ ತಾಲೂಕಿನ ಪಿಕೆ ನಾಗನೂರ ನಿವಾಸಿ ದರ್ಶನ್ ಕಾಂಬಳೆ ಮೃತ ಯುವಕ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ4 ಮಹಿಮಾಪುರ ಗೇಟ್ ಬಳಿ ಲಾರಿ ಹಾಗೂ ಕಾರಿಗೆ ಡಿಕ್ಕಿಯಾಗಿ ಕಾರು ಚಾಲಕನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಕೂಡಲೇ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಕಾರಿನಲ್ಲಿದ್ದ ಇನ್ನುಳಿದ ಮೊವರು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತದ ಬಳಿಕ ಲಾರಿ ನಿಲ್ಲಿಸಿ ಚಾಲಕ ಪರಾರಿಯಾಗಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ