Kelvin Kiptum: ಭೀಕರ ರಸ್ತೆ ಅಪಘಾತದಲ್ಲಿ ವಿಶ್ವ ದಾಖಲೆ ವೀರ ಕೆಲ್ವಿನ್ ದುರ್ಮರಣ..!
Kelvin Kiptum: 24 ವರ್ಷ ವಯಸ್ಸಿನ ಕೆಲ್ವಿನ್ ಕಿಪ್ಟಮ್ ಅಕ್ಟೋಬರ್‌ನಲ್ಲಿ ಬರ್ಲಿನ್ನಲ್ಲಿ ನಡೆದ ಮ್ಯಾರಥಾನ್‌ನಲ್ಲಿ 2022 ರಲ್ಲಿ ತನ್ನದೇ ದೇಶದವರಾದ ಎಲಿಯಡ್ ಕಿಪ್‌ಚೋಗ್ ಅವರ 2:01:09 ರ ದಾಖಲೆಯನ್ನು 35 ಸೆಕೆಂಡುಗಳ ಅಂತರದಲ್ಲಿ ಮುರಿದು ವಿಶ್ವದಾಖಲೆಯನ್ನು ನಿರ್ಮಿಸಿದ್ದರು.
ಮ್ಯಾರಥಾನ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದ ಕೆಲ್ವಿನ್ ಕಿಪ್ಟಮ್ (Kelvin Kiptum) ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕೀನ್ಯಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೆಲ್ವಿನ್ ಮತ್ತು ಅವರ ಕೋಚ್ ಗೆರ್ವೈಸ್ ಹಕಿಜಿಮಾನ ಸಾವಿಗೀಡಾಗಿದ್ದಾರೆ. ಚಿಕಾಗೋ ಮ್ಯಾರಥಾನ್ ಸ್ಪರ್ಧೆಯಲ್ಲಿ 2:00:35 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಕೆಲ್ವಿನ್ ಕಿಪ್ಟಮ್ ಹೊಸ ಇತಿಹಾಸ ನಿರ್ಮಿಸಿದ್ದರು. ಕೀನ್ಯಾದ ಎಲಿಯುಡ್ ಕಿಪ್‌ಚೋಜ್ (2:01:09) ಅವರ ದಾಖಲೆಯನ್ನು ಮುರಿದು ಮ್ಯಾರಥಾನ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಕೆಲ್ವಿನ್ ಇದೀಗ 24ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕದ ಮೇಲೆ ಕೆಲ್ವಿನ್ ಕಣ್ಣಿಟ್ಟಿದ್ದರು. ಇದಕ್ಕಾಗಿ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದರು. ಹೀಗೆ ಅಭ್ಯಾಸ ಮುಗಿಸಿ ಭಾನುವಾರ ರಾತ್ರಿ 11 ಗಂಟೆಗೆ ಕಪ್ಟಗಾಟ್‌ನಿಂದ ಎಲ್ಡೊರೆಟ್‌ಗೆ ತೆರಳುತ್ತಿದ್ದರು. ಈ ವೇಳೆ ಕಾರು ಅಪಘಾತವಾಗಿದ್ದು, ಇದರಿಂದ ಕೆಲ್ವಿನ್ ಹಾಗೂ ರುವಾಂಡಾ ತರಬೇತುದಾರ ಗೆರ್ವೈಸ್ ಹಕಿಜಿಮಾನಾ ಅವರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಕಾರಿನಲ್ಲಿದ್ದ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಶ್ಚಿಮ ಕೀನ್ಯಾದ ಎಲ್ಗೆಯೊ ಮರಕ್ವೆಟ್ ಕೌಂಟಿಯ ಪೊಲೀಸ್ ಕಮಾಂಡರ್ ಪೀಟರ್ ಮುಲಿಂಗೆ ತಿಳಿಸಿದ್ದಾರೆ.
ಇನ್ನು ಈ ಅಪಘಾತಗೊಂಡ ಕಾರನ್ನು ಕೆಲ್ವಿನ್ ಅವರೇ ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಅತೀ ವೇಗದಿಂದಾಗಿ ವಾಹನವು ನಿಯಂತ್ರಣ ಕಳೆದುಕೊಂಡು ಅವಘಡ ಸಂಭವಿಸಿದೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Matheesha Pathirana: ಅತೀ ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದ ಮಥೀಶ ಪತಿರಾಣ
ಕೆಲ್ವಿನ್ ಕಿಪ್ಟಮ್ ಅವರ ಅಕಾಲಿಕ ಮರಣಕ್ಕೆ ಇದೀಗ ವಿಶ್ವದ ಪ್ರಸಿದ್ಧ ಕ್ರೀಡಾಪಟುಗಳು ಸಂತಾಪ ಸೂಚಿಸಿದ್ದಾರೆ. ಅಥ್ಲೆಟಿಕ್ಸ್ ಅಂಗಳದಲ್ಲಿ ರೈಸಿಂಗ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಕೆಲ್ವಿನ್ ಅವರ ಸಾವು ಅಥ್ಲೆಟಿಕ್ಸ್ಗೆ ತುಂಬಲಾರದ ನಷ್ಟ ಎಂದು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.