ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ತಾತ್ಕಾಲಿಕ ತಡೆ; ಸಚಿವ ಚಲುವರಾಯಸ್ವಾಮಿ ಹೇಳಿದ್ದಿಷ್ಟು

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಸರ್ಕಾರ ಮುಂದಾಗಿದ್ದು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತುರ್ತು ಸಭೆ ನಡೆಸಿದ್ದು ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ತಾತ್ಕಾಲಿಕ ತಡೆ ನೀಡಿದ್ದಾರೆ.

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ತಾತ್ಕಾಲಿಕ ತಡೆ; ಸಚಿವ ಚಲುವರಾಯಸ್ವಾಮಿ ಹೇಳಿದ್ದಿಷ್ಟು
ಬೇಬಿ ಬೆಟ್ಟ
Follow us
| Updated By: ಆಯೇಷಾ ಬಾನು

Updated on: Jul 06, 2024 | 12:24 PM

ಮಂಡ್ಯ, ಜುಲೈ.06: ಬೇಬಿ ಬೆಟ್ಟ (Bebi Betta) ಟ್ರಯಲ್ ಬ್ಲಾಸ್ಟ್ ವಿರೋಧಿಸಿ ರೈತರು ಧರಣಿ ನಡೆಸುತ್ತಿರುವ ಹನ್ನೆಲೆ ಮಂಡ್ಯದ ಜಿಲ್ಲಾಪಂಚಾಯತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (N Chaluvarayaswamy) ನೇತೃತ್ವದಲ್ಲಿ ತುರ್ತು ಸಭೆ ನಡೆಸಲಾಗಿದೆ. ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಇದು 2018 ರಿಂದ ಇದೆ. ಸಾಕಷ್ಟು ರೈತರು ಟ್ರಯಲ್ ಬ್ಲಾಸ್ಟ್ ಬೇಡ ಎಂದು ಹೇಳಿದ್ದಾರೆ. ಸರ್ಕಾರ ಹಾಗೂ ನಮಗೆ ಬೇರೆ ಯಾವ ವಿಶೇಷ ಕಾಳಜಿ‌ ಇಲ್ಲ. ನಮಗೆ ಜಲಾಶಯದ ಸುರಕ್ಷತೆ ಮುಖ್ಯ. ಈಗಾಗಲೇ ರೈತರು ನಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದು ಸಭೆಯಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ತಾತ್ಕಾಲಿಕ ತಡೆ ನೀಡಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸಭೆಯಲ್ಲಿ ತಿಳಿಸಿದ್ದಾರೆ. ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ಕೊಡಿ ಎಂದು ಕೋರ್ಟ್ ಸೂಚನೆ ಕೊಟ್ಟಿದೆ. ನಾವು ಕೂಡ ಸಂಪೂರ್ಣ ಮಾಹಿತಿ ಪಡೆಯಲು ಮುಂದಾಗಿದ್ದೇವೆ. ನಾವು ಎಲ್ಲರ ಜೊತೆ ಚರ್ಚೆ ಮಾಡುತ್ತಿದ್ದೇವೆ. ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡಿ ಜುಲೈ 15 ರ ಒಳಗೆ ಕೋರ್ಟ್ ಗೆ ಮನವಿ ಸಲ್ಲಿಸುತ್ತೇವೆ. ಏನು ಮನವಿ ಮಾಡಬೇಕು ಎಂದು ಸರ್ಕಾರ ತೀರ್ಮಾನ ಮಾಡಲಿದೆ. ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಟ್ರಯಲ್ ಬ್ಲಾಸ್ಟ್ ಗೆ ದಿನಾಂಕ ನಿಗದಿ ಮಾಡಿಲ್ಲ. ಕೇವಲ ಕುಳಿಗಳನ್ನ ಮಾತ್ರ ಕೊರೆಸಲಾಗಿದೆ. ಸಿಎಂ ಜೊತೆ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ. ವೈಯಕ್ತಿಕ ಗಣಿಗಾರಿಕೆ ನಮಗೆ ಮುಖ್ಯವಲ್ಲ. ಮತ್ತೊಂದು ಡ್ಯಾಮ್ ಕಟ್ಟಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಜಲಾಶಯಕ್ಕೆ ಒಂದು ಸಣ್ಣ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಸಚಿವರು ಅಧಿಕಾರಿಗಳು ಮತ್ತು ರೈತ ಮುಖಂಡರ ಜೊತೆ ಮೀಟಿಂಗ್ ನಡೆಸುತ್ತಿದ್ದಾರೆ. ಶಾಸಕರಾದ ಗಣಿಗ ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ, ಎಎಸ್​ಪಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ವಿವಾದದ ಮಧ್ಯೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ಸಿದ್ದತೆ; ವಿರೋಧಿಸಿ ರೈತ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ

ಇನ್ನು ಟ್ರಯಲ್ ಬ್ಲಾಸ್ಟ್ ‌ಸಭೆಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೇಗೌಡ, 2018ರಲ್ಲಿ KRS ಸುತ್ತಮುತ್ತ ಮಹಾಸ್ಪೋಟ ಆಗಿತ್ತು. KRSಗೆ ಗಣಿಗಾರಿಕೆಯಿಂದ ಹಾನಿ ಇದೆ ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಮಂಡಳಿ ಎಚ್ಚರಿಕೆ ನೀಡಿತ್ತು. ಹೈಕೋರ್ಟ್ ಕೂಡ ಡ್ಯಾಂ‌ ಸುತ್ತ 20KM ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿತ್ತು. ಆಗ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದುಕೊಂಡೆವು. ಆದರೆ ಈಗ ಟ್ರಯಲ್ ಬ್ಲಾಸ್ಟ್ ನಡೆಸಲು ಸರ್ಕಾರ ಮುಂದಾಗಿದೆ. ಸಚಿವರು 20KM ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಕೊಡಲ್ಲ ಅಂತಾರೆ. ಹಾಗಾದರೆ 20KM ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಅವಶ್ಯಕತೆ ಇಲ್ಲ. ಡ್ಯಾಂ‌ಗೆ ಹಾನಿಯಾದರೆ ಇನ್ನೊಂದು ಡ್ಯಾಂ‌ ಕಟ್ಟಲು ಸಾಧ್ಯವಿಲ್ಲ. ಟ್ರಯಲ್ ಬ್ಲಾಸ್ಟ್ ನಡೆಸದಂತೆ ಸುಗ್ರೀವಾಜ್ಞೆ ಮಾಡಿ. ಶ್ರವಣಬೆಳಗೊಳದ ಗೊಮ್ಮಟನ ಸುತ್ತ 8KM ಗಣಿಗಾರಿಕೆ ನಡೆಸದಂತೆ ಆದೇಶ ಇದೆ. KRS ಡ್ಯಾಂ‌ನ ಕೋಟ್ಯಾಂತರ ಜನ ಅವಲಂಬಿಸಿದ್ದಾರೆ. ಯಾವ ಟ್ರಯಲ್ ಬ್ಲಾಸ್ಟ್ ಬೇಡ, ಈ ಬಗ್ಗೆ ಸುಗ್ರೀವಾಜ್ಞೆ ಮಾಡಿ ಎಂದು ಒತ್ತಾಯಿಸಿದರು.

ಮತ್ತೊಂದೆಡೆ ರಾಜ್ಯ ರೈತ ಸಂಘದ ಮುಖಂಡ ಪ್ರಸನ್ನ ಮಾತನಾಡಿದ್ದು, ವಿಶ್ವದಲ್ಲಿ ಸಾವಿರಾರು ಡ್ಯಾಂಗಳು ಇವೆ. ಗಣಿಗಾರಿಕೆಯಿಂದ ಹಲವು ಡ್ಯಾಂ‌ಗಳಿಗೆ ಹಾನಿಯಾಗಿರುವ ಉದಾಹರಣೆ ಇವೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯಾದ್ರೆ ಕೆಆರ್‌ಎಸ್‌ಗೂ ಹಾನಿಯಾಗುತ್ತೆ. ಡ್ಯಾಂ ಸೇಫ್ಟಿ ಆಕ್ಟ್‌ ಇಲ್ಲಿ ಅನ್ವಯವಾಗುತ್ತಿಲ್ಲ. ಕೋರ್ಟ್‌ಗೆ ಸರ್ಕಾರಿ ವಕೀಲರು ಮನವರಿಕೆ ಮಾಡಲು ವಿಫಲರಾಗಿದ್ದಾರೆ. ಟ್ರಯಲ್ ಬ್ಲಾಸ್ಟ್ ಬೇಡಾ ಎಂದು ವಕೀಲರು ವಾದ ಮಾಡಿಲ್ಲ. ಇದೇ ಕಾರಣಕ್ಕೆ ಕೋರ್ಟ್ ಟ್ರಯಲ್ ಬ್ಲಾಸ್ಟ್‌ಗೆ ಆದೇಶ ಮಾಡಿದೆ. ಹತ್ತಾರು ಕಡೆ ಬ್ಲಾಸ್ಟ್ ಆದ್ರೆ ಕೆಆರ್‌ಎಸ್ ಡ್ಯಾಂಗೆ ತೊಂದರೆಯಾಗುವುದು ಗ್ಯಾರಂಟಿ. ಕೆಆರ್‌ಎಸ್ ಕೋತಿರೋದು ಕಲ್ಲಿನ ಮೇಲೆ. ವೈಜ್ಞಾನಿಕವಾಗಿ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಯಾದ್ರೆ ಡ್ಯಾಂಗೆ ತೊಂದರೆಯಾಗುತ್ತೆ.ಈ ಬಗ್ಗೆ ಸುಗ್ರೀವಾಜ್ಞೆ ತರಲು ಸರ್ಕಾರಕ್ಕೆ ಅವಕಾಶವಿದೆ. ಸರ್ಕಾರ ಡ್ಯಾಂ ಉಳಿಸಲು ಈ ಟ್ರಯಲ್ ಬ್ಲಾಸ್ಟ್ ಮಾಡಬಾರದು ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ