Mekedatu Padayatra Updates: ಕರ್ನಾಟಕ ಕಾಂಗ್ರೆಸ್ ನಾಯಕರ 2ನೇ ದಿನದ ಪಾದಯಾತ್ರೆ ಅಂತ್ಯ

TV9 Web
| Updated By: ganapathi bhat

Updated on:Jan 10, 2022 | 10:54 PM

ಕಾಂಗ್ರೆಸ್ ಪಾದಯಾತ್ರೆ Live: ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತಾ ದಿನಕ್ಕೆ 15 ಕಿಲೋಮೀಟರ್ ನಡೆಯುತ್ತಿದ್ದಾರೆ. ಇಂದು ಎರಡನೇ ದಿನದ ಪಾದಯಾತ್ರೆ ನಡೆಸಲಾಗಿದೆ.

Mekedatu Padayatra Updates: ಕರ್ನಾಟಕ ಕಾಂಗ್ರೆಸ್ ನಾಯಕರ 2ನೇ ದಿನದ ಪಾದಯಾತ್ರೆ ಅಂತ್ಯ
ಮೇಕೆದಾಟು ಪಾದಯಾತ್ರೆ

ಮೇಕೆದಾಟು ಯೋಜನೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿದೆ. ನಿನ್ನೆ (ಜ. 9) ಆರಂಭವಾದ ಪಾದಯಾತ್ರೆ ಜನವರಿ 19ರ ವರೆಗೆ ನಡೆಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ಸಂಗಮದಿಂದ ಬೆಂಗಳೂರಿನವರೆಗೆ ಕಾಂಗ್ರೆಸ್ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಘೋಷಣೆ ಕೂಗುತ್ತಾ ದಿನಕ್ಕೆ 15 ಕಿಲೋಮೀಟರ್ ನಡೆಯುತ್ತಿದ್ದಾರೆ. ಇಂದು ಎರಡನೇ ದಿನದ ಪಾದಯಾತ್ರೆ ನಡೆಸಲಾಗಿದೆ. ಎರಡನೇ ದಿನದ ಪಾದಯಾತ್ರೆಯ ಸಂಪೂರ್ಣ ಅಪ್ಡೇಟ್ಸ್ ಈ ಕೆಳಗೆ ಲಭ್ಯವಿದೆ.

LIVE NEWS & UPDATES

The liveblog has ended.
  • 10 Jan 2022 10:46 PM (IST)

    ರಾಜ್ಯ ಕಾಂಗ್ರೆಸ್​ ನಾಯಕರ 2ನೇ ದಿನ ಪಾದಯಾತ್ರೆ ಅಂತ್ಯ

    ಮೇಕೆದಾಟು ಸಂಗಮದಿಂದ ಆರಂಭವಾಗಿರುವ ರಾಜ್ಯ ಕಾಂಗ್ರೆಸ್​ ನಾಯಕರ 2ನೇ ದಿನ ಪಾದಯಾತ್ರೆ ಅಂತ್ಯವಾಗಿದೆ. ನಾಳೆ ಬೆಳಗ್ಗೆ 9.30ಕ್ಕೆ ರಾಮನಗರ ಜಿಲ್ಲೆಯ ಕನಕಪುರದಿಂದ ಮತ್ತೆ ಪಾದಯಾತ್ರೆ ಆರಂಭವಾಗಲಿದೆ. ಪಾದಯಾತ್ರೆಯಲ್ಲಿ ಭಾಗಿಯಾದ ಶಾಸಕರಿಗೆ ಜಯವಾಗಲಿ ಎಂದು ಡಿಕೆಶಿ ಇಂದಿನ ಪಾದಯಾತ್ರೆ ಮುಗಿಸಿದ್ದಾರೆ.

  • 10 Jan 2022 10:08 PM (IST)

    ಕನಕಪುರ ತಲುಪಿದ ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆ

    ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆ ಕನಕಪುರ ತಲುಪಿದೆ. ಕೈ ಕಾರ್ಯಕರ್ತರು ಪಟಾಕಿ ಸಿಡಿಸಿ ಪಾದಯಾತ್ರೆ ಸ್ವಾಗತಿಸಿದ್ದಾರೆ. ಡಿಕೆಶಿಗೆ ಸೇಬಿನ ಹಾರ ಹಾಕಿ ಕಾಂಗ್ರೆಸ್​ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಈ ವೇಳೆ ಹಾರದಲ್ಲಿದ್ದ ಸೇಬು ಕಿತ್ತುಕೊಂಡು ಡಿ.ಕೆ.ಶಿವಕುಮಾರ್​ ಸೇವಿಸಿದ್ದಾರೆ. ಟೈಮ್​ ಆಯ್ತು ಬಿಡ್ರೋ ಎಂದು ಡಿ.ಕೆ.ಶಿವಕುಮಾರ್ ಗೋಗರೆದಿದ್ದಾರೆ.​

  • 10 Jan 2022 09:50 PM (IST)

    ಕುರುಪೇಟೆಯಲ್ಲಿ ಡಿಕೆಶಿಗೆ ಅದ್ದೂರಿ ಸ್ವಾಗತ

    ಮೇಕೆದಾಟು ಪಾದಯಾತ್ರೆ ಮುಂದುವರಿದಿದ್ದು, ಸದ್ಯ ಕುರುಪೇಟೆಗೆ ಪಾದಯಾತ್ರೆ ತಲುಪಿದೆ. ರಸ್ತೆಯ  ಎರಡು ಮಗ್ಗಲುಗಳಲ್ಲಿ ನಿಂತು ಡಿಕೆಶಿ ಪಾದಯಾತ್ರೆಯನ್ನು ಗ್ರಾಮಸ್ಥರು ಕಣ್ತುಂಬಿಸಿಕೊಂಡಿದ್ದಾರೆ.

  • 10 Jan 2022 09:42 PM (IST)

    ಕನಕಪುರ ಗೂಡಿನ ಮಾರ್ಕೇಟ್ ತಲುಪಿದ ಪಾದಯಾತ್ರೆ

    ಮೇಕೆದಾಟು ಪಾದಯಾತ್ರೆ ಕನಕಪುರ ಗೂಡಿನ ಮಾರ್ಕೇಟ್ ತಲುಪಿದೆ. ಡಿಕೆಶಿ ಬರುತ್ತಿದ್ದಂತೆ ಕನಕಪುರದಲ್ಲಿ ಪಟಾಕಿ ಸಿಡಿಸಿದ್ದಾರೆ. ಆಕಾಶದಲ್ಲಿ ಬಣ್ಣಗಳ ಚಿತ್ತಾರ ಮೂಡಿದೆ.

  • 10 Jan 2022 09:07 PM (IST)

    ಯಾರು ಕೂಗಬೇಡಿ ಬರೀ ತಮಟೆ ಹೊಡೀರೋ: ಡಿಕೆಶಿ

    ಡಿ.ಕೆ. ಶಿವಕುಮಾರ್​ ಮೇಲೆ ಹೂವು ಚೆಲ್ಲಿ ಜನರು ಸ್ವಾಗತಿಸಿದ್ದಾರೆ. ಜತೆಗೆ ಜೆಸಿಬಿ ಮೇಲತ್ತಿ ಯುವಕರು ಹೂವಿನ ಸುರಿಮಳೆಗೈತ್ತಿದ್ದಾರೆ. ಈ ವೇಳೆ ಕೆಪಿಸಿಸಿ ವ್ಯಾನ್ ಹತ್ತಿದ ಡಿಕೆಶಿ, ಯಾರು ಕೂಗಬೇಡಿ ಬರೀ ತಮಟೆ ಹೊಡೀರೋ ಎಂದು ಶಿವನಹಳ್ಳಿ ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.

  • 10 Jan 2022 09:01 PM (IST)

    ಜಾಗ ಬಿಡಲಿಲ್ಲ ಎಂದು ಕಾರ್​ ಹತ್ತಿದೆ: ಡಿ.ಕೆ.ಶಿವಕುಮಾರ್

    ನಾನ್ ನಡೆಯೋಕೆ ಆಗಲ್ಲ ಅಂತಲ್ಲ, ಅಲ್ಲಿ ಯಾರು ಜಾಗಬಿಡಲಿಲ್ಲ ಎಂದು 150 ಮೀಟರ್​ ಕಾರ್​ ಹತ್ತಿದ್ದೆ. ದೊಡ್ಡಆಲಹಳ್ಳಿಯಲ್ಲೂ ಅಷ್ಟೇ ಜಾಗಬಿಡಲಿಲ್ಲ ಎಂದು ಕಾರ್​ ಹತ್ತಿದ್ದಷ್ಟೇ ಎಂದು ವ್ಯಾನ್​ನಿಂದ ಕೆಳಗೆ ಇಳಿದು ಡಿ.ಕೆ.ಶಿವಕುಮಾರ್​ ಪಾದಯಾತ್ರೆ ಮತ್ತೆ ಆರಂಭಿಸಿದ್ದಾರೆ.

  • 10 Jan 2022 06:58 PM (IST)

    ಪಾದಯಾತ್ರೆ ವೇಳೆ ಮೌನಕ್ಕೆ ಶರಣಾದ ಡಿ.ಕೆ.ಶಿವಕುಮಾರ್

    ಪಾದಯಾತ್ರೆ ವೇಳೆ ಮೌನಕ್ಕೆ ಶರಣಾದ ಡಿ.ಕೆ.ಶಿವಕುಮಾರ್, ಬಿಜೆಪಿಯವರು ತಿರುಗೇಟು ನೀಡುತ್ತಾರೆ. ಹೀಗಾಗಿ 3 ದಿನ ಮೌನ ಪ್ರತಿಭಟನೆ ನಡೆಸುತ್ತೇನೆ ಎಂದು ಮಾಧ್ಯಮಗಳಿಗೆ ಕೈಮುಗಿದು ಡಿಕೆಶಿ ಮುಂದೆ ಸಾಗಿದ್ದಾರೆ.

  • 10 Jan 2022 06:48 PM (IST)

    ರಾಜಕೀಯ ದುರುದ್ದೇಶದಿಂದ ಪಾದಯಾತ್ರೆ ಮಾಡುತ್ತಿದ್ದಾರೆ: ಈರಣ್ಣ ಕಡಾಡಿ

    ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್​ನಿಂದ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿಕೆ ನೀಡಿದ್ದಾರೆ. ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್​ನಿಂದ ಪಾದಯಾತ್ರೆ ಮಾಡುತ್ತಿದೆ. ಕರ್ನಾಟಕದಲ್ಲಿ ಪಾದಯಾತ್ರೆ ಮಾಡುವುದರ ಬದಲು ತಮಿಳುನಾಡಿನಲ್ಲಿ ಮಾಡಲಿ. ಕೊರೊನಾ ಸೋಂಕಿನ ಮಧ್ಯೆ ಸಾವಿರಾರು ಜನರು ಸೇರಿದ್ದು ಸರಿಯಲ್ಲವೆಂದು ತಿಳಿಸಿದ್ದಾರೆ.

  • 10 Jan 2022 06:35 PM (IST)

    ತುರ್ತಾಗಿ ದೂರವಾಣೆಯಲ್ಲಿ ಮಾತನಾಡಲು ದಿನಸಿ ಅಂಗಡಿ ಒಳಗೆ ತೆರಳಿದ ಡಿಕೆಶಿ

    ತುರ್ತಾಗಿ ದೂರವಾಣಿ ಕರೆ ಮಾಡಲು ದಿನಸಿ ಅಂಗಡಿ ಒಳಗೆ ಡಿ.ಕೆ.ಶಿವಕುಮಾರ್​ ತೆರಳಿದ್ದಾರೆ. ಅಂಗಡಿಯ ಅರ್ಧ ಬಾಗಿಲು ಮುಚ್ಚಿ ದೂರವಾಣಿ ಕರೆಯಲ್ಲಿ ಡಿಕೆಶಿ ಮಾತನಾಡಿದ್ದಾರೆ. ತೇರಿನದೊಡ್ಡಿಯಲ್ಲಿನ ಅಂಗಡಿಯೊಂದರ ಒಳಗೆ ತೆರಳಿ ಡಿಕೆಶಿ ಮಾತನಾಡಿದ್ದಾರೆ.

  • 10 Jan 2022 06:00 PM (IST)

    ಕನಕಪುರ ಬಂಡೆ ಅಂತಾ ಘೋಷಣೆ ಕೂಗಬೇಡಿ ಎಂದ ಡಿಕೆಶಿ

    ಕರಿರಾಯರದೊಡ್ಡಿ ಬಳಿ ಮಹಿಳೆಯರು ಡಿ.ಕೆ.ಶಿವಕುಮಾರ್​ಗೆ ಆರತಿ ಮಾಡಿದ್ದಾರೆ. ನಂತರ ಡಿಕೆಶಿ ಬೀಡ ಸವಿದಿದ್ದಾರೆ. ಈ ವೇಳೆ ಕನಕಪುರ ಬಂಡೆ ಎಂದು ಘೋಷಣೆ ಕೂಗಬೇಡಿ ಎಂದು ಡಿಕೆಶಿ ಕಾರ್ಯಕರ್ತರಿಗೆ ಹೇಳಿದ್ದಾರೆ.

  • 10 Jan 2022 05:57 PM (IST)

    ಮಧ್ಯಾಹ್ನದ ನಂತರ; ಡಿಕೆಶಿಗೆ ಹೂವಿನ ಸುರಿಮಳೆ

    ಮಧ್ಯಾಹ್ನದ ನಂತರ ಮತ್ತೆ ಮೇಕೆದಾಟು ಪಾದಯಾತ್ರೆ ಆರಂಭವಾಗಿದೆ. ಡಿ.ಕೆ.ಶಿವಕುಮಾರ್​ಗೆ ಕಾರ್ಯಕರ್ತರು ಹೂವಿನ ಸುರಿಮಳೆ ಮೂಲಕ ಸ್ವಾಗತಿಸಿದ್ದಾರೆ. ಈ ವೇಳೆ ಕಾರ್ಯಕರ್ತರಿಂದ ನೂಕಾಟ ತಳ್ಳಾಟ ನಡೆದಿದ್ದು, ತಳ್ಳಬೇಡಿ ಎಂದ ಡಿಕೆಶಿ ಹೇಳಿದ್ದಾರೆ.

  • 10 Jan 2022 03:23 PM (IST)

    ಮೇಕೆದಾಟು ಪಾದಯಾತ್ರೆಗೆ ಭೋಜನ ವಿರಾಮ

    ಮೇಕೆದಾಟು ಪಾದಯಾತ್ರೆಗೆ ಭೋಜನ ವಿರಾಮ ನೀಡಲಾಗಿದೆ. ವಿಶ್ರಾಂತಿ ಕೊಠಡಿಯಲ್ಲಿ ಡಿ.ಕೆ ಶಿವಕುಮಾರ್, ಹಿರಿಯ ಶಾಸಕರಾದ ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟಿಲ್, ಸಲಿಂ ಅಹಮದ್, ಮಾಜಿ ಎಂಎಲ್‌ಸಿ ಜೊತೆ ಮಾತುಕತೆ ನಡೆಸಿದ್ದಾರೆ. ಭೋಜನ ಶಾಲೆಯಲ್ಲಿ ಶಾಸಕರಿಗೆ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆ ಬಳಿಕ ಪಾದಯಾತ್ರೆ ಮುಂದುವರಿಯಲಿದೆ.

  • 10 Jan 2022 02:55 PM (IST)

    ಗೋವಿಂದ ಕಾರಜೋಳರಿಂದ ಮತ್ತೊಂದು ಸರ್ಕಾರಿ ದಾಖಲೆ ಬಿಡುಗಡೆ

    ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತೊಂದು ಸರ್ಕಾರಿ ದಾಖಲೆ ಬಿಡುಗಡೆ ಮಾಡಿದ್ದಾರೆ. 2014ರಲ್ಲಿ ಮೇಕೆದಾಟು ಯೋಜನೆ ಸಂಬಂಧ ಕಾನೂನು ಸಚಿವರು ಬರೆದಿದ್ದ ಟಿಪ್ಪಣಿ ಬಿಡುಗಡೆ ಮಾಡಿದ್ದಾರೆ. ಟಿಪ್ಪಣಿಯಲ್ಲಿ ಮೇಕೆದಾಟು ಯೋಜನೆ ಈಗಾಗಲೇ ವಿಳಂಬವಾಗಿದೆ ಎಂದು ಉಲ್ಲೇಖ ಮಾಡಲಾಗಿದೆ. ಇದನ್ನೇ ಪುರಾವೆ ಎಂದು ಬಿಜೆಪಿ ಬಿಡುಗಡೆ ಮಾಡುತ್ತಿದೆ.

  • 10 Jan 2022 02:53 PM (IST)

    ಡಿ ಕೆ ಶಿವಕುಮಾರ್ ಬಳಿ ಬಂದಿದ್ದ ಅಧಿಕಾರಿಗೆ ಕೊರೊನಾ ಪಾಸಿಟಿವ್

    ನಿನ್ನೆ ಡಿ ಕೆ ಶಿವಕುಮಾರ್ ಬಳಿ ಬಂದಿದ್ದ ಅಧಿಕಾರಿಗೆ ಕೊರೊನಾ ಸೋಂಕು ತಗುಲಿದೆ.  ಡಿ ಕೆ ಶಿವಕುಮಾರ್ ಕುಮಾರ್ ತಂಗಿದ್ದ ಟೆಂಟ್​ಗೆ ಹಿರಿಯ ಅಧಿಕಾರಿ ಬಂದಿದ್ದರು. ಅಧಿಕಾರಿಯ ಬಗ್ಗೆ ಮಾಹಿತಿ ಪಡೆದ ಡಿಕೆ ಸುರೇಶ್, ಅಧಿಕಾರಿಗೆ ಕೊರೊನಾ ಪಾಸಿಟಿವ್ ಇರುವ ಬಗ್ಗೆ ಟಿವಿ9 ಗೆ ಮಾಹಿತಿ ನೀಡಿದ್ದಾರೆ.

  • 10 Jan 2022 02:50 PM (IST)

    ಸರ್ಕಾರವೇ ನಮ್ಮ ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ; ಡಿಕೆ ಸುರೇಶ್

    ಸರ್ಕಾರವೇ ನಮ್ಮ ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ ಅಂತ ಟಿವಿ9ಗೆ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಕೊರೊನಾ ರೋಗಿಯನ್ನ ಡಿ ಕೆ ಶಿವಕುಮಾರ್ ಬಳಿ ಕಳುಹಿಸಿದ್ದರು. ಈ ಮೂಲಕ ಡಿ ಕೆ ಶಿವಕುಮಾರ್​ಗೆ ಕೊರೊನಾ ಅಂಟಿಸುವ ಕೆಲಸ ಮಾಡ್ತಾ ಇದಾರೆ. ಪಾದಯಾತ್ರೆಯಲ್ಲಿಯೂ ಕೂಡ ಕೊರೊನಾ ರೋಗ ಹರಡಿಸುವಂತೆ ಮಾಡ್ತಾ ಇದ್ದಾರೆ. ಇದಕ್ಕೆಲ್ಲಾ ಸರ್ಕಾರದವರೇ ಕಾರಣ. ಇದೊಂದು ರಾಜಕೀಯ ಷಡ್ಯಂತ್ರ ಅಂತ ಹೇಳಿದರು.

  • 10 Jan 2022 02:40 PM (IST)

    ಪಾದಯಾತ್ರೆ ಕಾಂಗ್ರೆಸ್​ನವರ ದೊಡ್ಡ ನಾಟಕ; ಕೃಷಿ ಸಚಿವ ಬಿ ಸಿ ಪಾಟೀಲ್

    ಮೇಕೆದಾಟು ವಿಚಾರದಲ್ಲಿ ನಡಿತಿರೋ ಪಾದಯಾತ್ರೆ ಕಾಂಗ್ರೆಸ್ ನವರ ದೊಡ್ಡ ನಾಟಕ ಅಂತ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಸಚಿವ ಬಿಸಿ ಪಾಟೀಲ್​​ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರ ಮುಂದೆ ಪಾದಯಾತ್ರೆ ಮೂಲಕ ಡಿಕೆ ಶಿವಕುಮಾರ ದೊಡ್ಡ ಜನಾನುರಾಗಿ ಆಗಲು ಹೊರಟಿದ್ದಾರೆ. ಜನರನ್ನ ಸೇರಿಸಿ ಸಿದ್ದರಾಮಯ್ಯ ಮುಂದೆ ನಾಟಕ ಮಾಡ್ತಿದ್ದಾರೆ. ಜನರು ಹಾಳಾದರೆ ಹಾಳಾಗಲಿ, ಸತ್ತರೆ ಸಾಯಲಿ ಅಂತಾ ತಮ್ಮ ಪಾಪ್ಯುಲಾರಿಟಿಗಾಗಿ ಪಾದಯಾತ್ರೆ ಮಾಡ್ತಿದ್ದಾರೆ. ಹಿಂದೆ ಕಾಂಗ್ರೆಸ್ ಸರಕಾರವೆ ಅಧಿಕಾರದಲ್ಲಿತ್ತು. ಆಗ ಮೇಕೆದಾಟು ಯೋಜನೆ ಬಗ್ಗೆ ಡಿಪಿಆರ್ ಕೂಡ ಮಾಡಿರಲಿಲ್ಲ. ಮೇಕೆದಾಟು ಯೋಜನೆ ವಿಚಾರ ಇನ್ನೂ ಸುಪ್ರೀಂಕೋರ್ಟ್​ನಲ್ಲಿ ಪೆಂಡಿಂಗ್ ಇದೆ. ಈ ಸಂದರ್ಭದಲ್ಲಿ ಹೋರಾಟದ ಮೂಲಕ ಸುಪ್ರೀಂಕೋರ್ಟ್ ಮೇಲೆ ಒತ್ತಡ ಹೇರೋದು ಕಾನೂನುಬಾಹಿರ ಆಗುತ್ತದೆ. ಇದು ಸರಿಯಾದುದಲ್ಲ. ಇದು ಉದ್ಧಟತನ, ಗೂಂಡಾಗಿರಿ, ಮೂರ್ಖತನದ ಪರಮಾವಧಿ. ದೇಶದಲ್ಲಿ ಕೊರೊನಾ ಆರ್ಭಟವಿದೆ. ಹೀಗಿದ್ದಾಗ ಕಾಂಗ್ರೆಸ್​ನವರ ಪಾದಯಾತ್ರೆ ಚುನಾವಣೆ ಗಿಮಿಕ್. ಚುನಾವಣೆಗೆ ಜನರ ಗಮನ ಸೆಳೆಯಲು ಕಾಂಗ್ರೆಸ್​ನವರು ಈ ಪಾದಯಾತ್ರೆ ಮಾಡ್ತಿದ್ದಾರೆ ಅಂತ ಬಿ ಸಿ ಪಾಟೀಲ್ ಹೇಳಿದರು.

  • 10 Jan 2022 02:34 PM (IST)

    ಸಿದ್ಧರಾಮಯ್ಯ, ಡಿಕೆಶಿ ಜವಬ್ದಾರಿ ಅರಿಯಬೇಕು- ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

    ಆರೋಗ್ಯ ಇಲಾಖೆ, WHO ನಿಯಂತ್ರಣ ಮೀರಿ ಕೊವಿಡ್ ವಿಶ್ವಾದ್ಯಂತ ಹೆಚ್ಚುತ್ತಿದೆ. ಕೊವಿಡ್ ನಿಯಂತ್ರಣ ದೊಡ್ಡ ಸಮಸ್ಯೆ ಆಗಿದೆ. ಈ ವೇಳೆ ಕಾಂಗ್ರೆಸ್ ಮೇಕೆದಾಟು ಹೋರಾಟ ಸರಿಯಲ್ಲ. ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅದ್ಯಕ್ಷ ಡಿಕೆಶಿ ಜವಬ್ದಾರಿ ಅರಿಯಬೇಕು. ಹೋರಾಟ ಹತ್ತಿಕ್ಕಲು ಕೊವಿಡ್ ಕರ್ಫ್ಯೂ ವಿಧಿಸಲಾಗಿದೆ ಎನ್ನುವುದು ಹಾಸ್ಯಾಸ್ಪದ. ಕಳೆದ 2 ಅಲೆಗಿಂತ 3ನೇ ಅಲೆಯ ವೇಗ ಭಯ ಹುಟ್ಟಿಸುತ್ತಿದೆ. ನಾಯಕರು ಹೋರಾಟಕ್ಕಿಳಿದಾಗ ಜನ ಸೇರುವುದು ಸಹಜ. ಹತ್ತಾರು ಸಾವಿರ ಜನಕ್ಕೆ ಕೊವಿಡ್ ಹರಡುವ ಸಾಧ್ಯತೆಯಿದೆ. ಬೊಮ್ಮಾಯಿ ಸರ್ಕಾರಕ್ಕೆ ಮುಜುಗರ ತರುವ ದೃಷ್ಠಿಯಿಂದ ಹೋರಾಟ ಸರಿಯಲ್ಲ. ಚುನಾವಣೆ ದೃಷ್ಠಿಯಿಂದ ಕಾಂಗ್ರೆಸ್ ನಿಂದ ಮೇಕೆದಾಟು ಹೋರಾಟ ನಡೆಯುತ್ತಿದೆ ಅಂತ ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ ಜಿಹೆಚ್​ ತಿಪ್ಪಾರೆಡ್ಡಿ ಹೇಳಿಕೆ ನೀಡಿದ್ದಾರೆ.

  • 10 Jan 2022 02:12 PM (IST)

    ಕಾಂಗ್ರೆಸ್ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ

    ಎರಡನೇ ದಿನ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬಾದುಶಾ, ಪಕೋಡಾ, ಚಪಾತಿ ಚಟ್ನಿ, ಹಪ್ಪಳ, ವಾಂಗಿಬಾತ್, ರಾಗಿ ಮುದ್ದೆ, ಸೊಪ್ಪು ಸಾರು, ಅನ್ನ ಸಾಂಬಾರ್,  ರಸಂ, ಮೊಸರನ್ನ, ಬಾಳೆಹಣ್ಣು,  ಐಸ್ ಕ್ರೀಂ ಇದೆ.

  • 10 Jan 2022 02:10 PM (IST)

    ಡಿಕೆಶಿ, ಸಿದ್ದರಾಮಯ್ಯ, ಎಂಬಿ ಪಾಟೀಲ್ ತ್ರಿಮೂರ್ತಿಗಳಿದ್ದಂತೆ- ಅಶ್ವತ್ಥ್ ನಾರಾಯಣ ವ್ಯಂಗ್ಯ

    ಡಿಕೆಶಿ, ಸಿದ್ದರಾಮಯ್ಯ, ಎಂಬಿ ಪಾಟೀಲ್ ತ್ರಿಮೂರ್ತಿಗಳಿದ್ದಂತೆ ಅಂತ ಬೆಂಗಳೂರಿನಲ್ಲಿ ಸಚಿವ ಡಾ ಎನ್ಅ ಶ್ವತ್ಥ್ ನಾರಾಯಣ ವ್ಯಂಗ್ಯವಾಡಿದ್ದಾರೆ. ಇವರು ರಾಜಕೀಯವಾಗಿ ಮೇಲೆ ಬರಬೇಕೆಂದು ಯತ್ನಿಸುತ್ತಿದ್ದಾರೆ. ಅವರಿಗೆ ಅವರ ಮೇಲೆ ಎಷ್ಟೆಷ್ಟು ಪ್ರೀತಿ ಇದೆ ಎಂದು ನೋಡಬೇಕು ಅಂತ ಹೇಳಿದರು.

  • 10 Jan 2022 02:08 PM (IST)

    ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿ ನಾಯಕರು ಹೆದರಿದ್ದಾರೆ; ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ

    ಎಲ್ಲ ವಿಚಾರಗಳಲ್ಲೂ ಬಿಜೆಪಿ ಸರ್ಕಾರ ವಿಫಲವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಜನರು ರೋಶಿ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮುಂದಿನ‌ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಲಿದೆ. ಜನರಿಗಾಗಿ ಮೇಕೆದಾಟು ಯೋಜನೆ ಜಾರಿಗೆಗೆ ಆಗ್ರಹಿಸಿ ಪಾದಯಾತ್ರೆ ಮಾಡಲಾಗುತ್ತಿದೆ. ಬಿಜೆಪಿಯವರೇ ಅಸಹಾಯಕ ಧೋರಣೆ ಯೋಜನೆ ಹಿನ್ನಡೆಗೆ ಕಾರಣ. ಮೇಕೆದಾಟು ಯೋಜನೆ ಜಾರಿಗೆಗೆ ಬಿಜೆಪಿ ಸಂಸದರು ಶ್ರಮಿಸುತ್ತಿಲ್ಲ. ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿ ನಾಯಕರು ಹೆದರಿದ್ದಾರೆ ಅಂತ ಬೆಳಗಾವಿಯಲ್ಲಿ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಹೇಳಿದರು.

  • 10 Jan 2022 02:05 PM (IST)

    ರಾಜಕೀಯ ಮಾಡುವ ಸಮಯದಲ್ಲಿ ಮಾಡೋಣ, ಈಗ ಬೇಡ; ಎಂಟಿಬಿ ನಾಗರಾಜ್ ಮನವಿ

    ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಕೈಗೊಂಡಿದೆ. ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ನಾನು ಮನವಿ ಮಾಡುತ್ತೇನೆ. ನಾವು ರಾಜಕೀಯ ಮಾಡುವುದಕ್ಕೆಂದೇ ಇಲ್ಲಿಗೆ ಬಂದಿದ್ದೇವೆ. ರಾಜಕೀಯ ಮಾಡುವ ಸಮಯದಲ್ಲಿ ಮಾಡೋಣ, ಈಗ ಬೇಡ. ಕೊರೊನಾ 3ನೇ ಅಲೆ ಅತಿ ವೇಗವಾಗಿ ಹರಡುತ್ತಿರುವ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕೆ ಪಕ್ಷಾತೀತವಾಗಿ ಸಹಕಾರ ನೀಡಿ. ಜನರ ಜೀವ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಅಂತ ಕಾಂಗ್ರೆಸ್ ನಾಯಕರಿಗೆ ದೇವನಹಳ್ಳಿಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿದರು.

  • 10 Jan 2022 02:04 PM (IST)

    ಪಾದಯಾತ್ರೆಯಲ್ಲಿ ನಟ ಶಿವರಾಜ್​​ಕುಮಾರ್ ಭಾಗಿಯಾಗಲಿದ್ದಾರೆ-ಮಾಜಿ ಸಚಿವೆ ಉಮಾಶ್ರೀ

    ಮೇಕೆದಾಟು ಯೋಜನೆಗಾಗಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ನಟ ಶಿವರಾಜ್​​ಕುಮಾರ್ ಭಾಗಿಯಾಗಲಿದ್ದಾರೆ ಅಂತ ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.

  • 10 Jan 2022 02:00 PM (IST)

    ಡಿಕೆಶಿ ಮಾತ್ರ ಸ್ವಾಬ್ ಟೆಸ್ಟ್ ಮಾಡಿಸಿಕೊಳ್ಳ ಬೇಕೆ? ಅಂಜಲಿ ನಿಂಬಾಳ್ಕರ್ ಪ್ರಶ್ನೆ

    ಸರ್ಕಾರ ಅನಗತ್ಯವಾಗಿ ಕೇಸ್ ಹಾಕುತ್ತಿದೆ. ಜನರೇ ಪಾದಯಾತ್ರೆ ಯಲ್ಲಿ ಬರುತ್ತಿದ್ದಾರೆ. ಸರ್ಕಾರ ಟಾರ್ಗೇಟ್ ಮಾಡಿ ಕೇಸ್ ದಾಖಲಿಸಿದೆ. ಏಕೆ ಡಿಕೆಶಿ ಮಾತ್ರ ಸ್ವಾಬ್ ಟೆಸ್ಟ್ ಮಾಡಿಸಿಕೊಳ್ಳ ಬೇಕೆ? ಎಂದು ಪ್ರಶ್ನಿಸಿದ ಅಂಜಲಿ ನಿಂಬಾಳ್ಕರ್, ಬೇರೆ ಬೇರೆ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾದಾಗ ಸ್ವಾಬ್ ಟೆಸ್ಟ್ ಮಾಡಿಸಿದ್ರಾ?  ವಿಶ್ವ ಆರೋಗ್ಯ ಸಂಸ್ಥೆ ಏನಾದರೂ ಈ ರೀತಿ ನಿಯಮ ಮಾಡಿದೆಯಾ? ಬೇಕು ಆಂತಲೇ ಈ ರೀತಿ ಮಾಡ್ತಾ ಇದೆ ಅಂತ ಹೇಳಿದ್ದಾರೆ.

  • 10 Jan 2022 01:58 PM (IST)

    ಪಾದಯಾತ್ರೆ ವೇಳೆ ಕುಸಿದು ಬಿದ್ದ ವೃದ್ದ

    ಪಾದಯಾತ್ರೆ ವೇಳೆ ವೃದ್ದರೊಬ್ಬರು ಕುಸಿದು ಬಿದ್ದಿದ್ದಾರೆ. ಚಲುವಯ್ಯ ಎಂಬ ವೃದ್ಧ ಕುಸಿದು ಬಿದ್ದಿದ್ದು, ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ.

  • 10 Jan 2022 01:51 PM (IST)

    ಬೆಂಗಳೂರಿನವರೆಗೂ ಯಶಸ್ವಿಯಾಗಿ ಪಾದಯಾತ್ರೆ ಸಾಗಲಿದೆ -ಮಾಜಿ ಸಚಿವೆ ಉಮಾಶ್ರೀ

    ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನಮ್ಮ ಸ್ಯಾಂಡಲ್ ವುಡ್ ಸಂಪೂರ್ಣವಾಗಿ ಕೈ ಜೋಡಿಸಿದೆ. ಅಣೆಕಟ್ಟು ನಿರ್ಮಾಣವಾಗಲೇಬೇಕು. ಈ ಪಾದಯಾತ್ರೆಯಲ್ಲಿ ಜನರು ತೋರಿಸುತ್ತಿರುವ ಪ್ರೀತಿ ಸಹಕಾರ ತುಂಬಾ ದೊಡ್ಡದು. ಬೆಂಗಳೂರಿನವರೆಗೂ ಯಶಸ್ವಿಯಾಗಿ ಪಾದಯಾತ್ರೆ ಸಾಗಲಿದೆ. ಹೋರಾಟದ ಹೆಜ್ಜೆಗೆ ನಮ್ಮ ಮಹಿಳಾ ಶಕ್ತಿ ಕೂಡ ದೊಡ್ಡಮಟ್ಟದಲ್ಲೇ ಕೈ ಜೋಡಿಸಿದೆ. ನಟ ಶಿವರಾಜ್ ಕುಮಾರ್ ಕೂಡ ನಮಗೆ ಬೆಂಬಲ ಕೊಡ್ತಾರೆ. ದೊಡ್ಮನೆ ನಮ್ಮ ಹೋರಾಟಕ್ಕೆ ಸಾಥ್ ನೀಡಲಿದೆ ಎಂದು ಹಿರಿಯ ಕಲಾವಿದೆ ಮಾಜಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

  • 10 Jan 2022 01:46 PM (IST)

    ಮೇಕೆದಾಟು ವಿಚಾರದಲ್ಲಿ ನಡಿತಿರೋ ಪಾದಯಾತ್ರೆ ಕಾಂಗ್ರೆಸ್ ನವರ ದೊಡ್ಡ ನಾಟಕ -ಬಿ.ಸಿ.ಪಾಟೀಲ್

    ಮೇಕೆದಾಟು ವಿಚಾರದಲ್ಲಿ ನಡಿತಿರೋ ಪಾದಯಾತ್ರೆ ಕಾಂಗ್ರೆಸ್ ನವರ ದೊಡ್ಡ ನಾಟಕ ಎಂದು ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕಿಡಿ ಕಾರಿದ್ದಾರೆ. ಜನರನ್ನ ಸೇರಿಸಿ ಸಿದ್ದರಾಮಯ್ಯ ಮುಂದೆ ನಾಟಕ ಮಾಡ್ತಿದ್ದಾರೆ. ಜನರು ಹಾಳಾದರೆ ಹಾಳಾಗಲಿ, ಸತ್ತರೆ ಸಾಯಲಿ ಅಂತಾ ತಮ್ಮ ಉದ್ದೇಶಕ್ಕಾಗಿ ಪಾದಯಾತ್ರೆ ಮಾಡ್ತಿದ್ದಾರೆ. ಹಿಂದೆ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿತ್ತು. ಆಗ ಮೇಕೆದಾಟು ಯೋಜನೆ ಬಗ್ಗೆ ಡಿಪಿಆರ್ ಕೂಡ ಮಾಡಿರಲಿಲ್ಲ. ಮೇಕೆದಾಟು ಯೋಜನೆ ವಿಚಾರ ಇನ್ನೂ ಸುಪ್ರೀಂಕೋರ್ಟ್ ನಲ್ಲಿ ಪೆಂಡಿಂಗ್ ಇದೆ ಎಂದರು.

  • 10 Jan 2022 01:37 PM (IST)

    ಪಾದಯಾತ್ರೆಯಲ್ಲಿ ಶಿವರಾಜ್‌ಕುಮಾರ್ ಭಾಗಿಯಾಗುತ್ತಾರೆ -ಮಧು ಬಂಗಾರಪ್ಪ

    ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ ಹಿನ್ನೆಲೆ ಪಾದಯಾತ್ರೆಯಲ್ಲಿ ಶಿವರಾಜ್‌ಕುಮಾರ್ ಭಾಗಿಯಾಗುತ್ತಾರೆ. ನಿನ್ನೆಯೂ ಅರ್ಧ ದಾರಿಗೆ ಬಂದು ವಾಪಸ್ ಹೋಗಿದ್ದಾರೆ ಎಂದು ಟಿವಿ9ಗೆ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇದು ಪಕ್ಷಾತೀತವಾಗಿ ನಡೆಯುತ್ತಿರುವ ಹೋರಾಟ ಎಲ್ಲರು ಇದಕ್ಕೆ ಕೈ ಜೋಡಿಸಬೇಕು. ಬಿಜೆಪಿಯವರೇ ಇದರಲ್ಲಿ ರಾಜಕೀಯ ಮಾಡದೇ ಯೋಜನೆ ಜಾರಿ ಮಾಡಲಿ. ಈ ಪಾದಯಾತ್ರೆ ಯಶಸ್ವಿಯಾಗಿ ಸಾಗಲಿದೆ. ಕನ್ನಡ ಚಿತ್ರರಂಗ ಕೂಡ ಕೈ ಜೋಡಿಸಲಿದೆ ಎಂದಿದ್ದಾರೆ.

  • 10 Jan 2022 01:34 PM (IST)

    ಡಿಕೆಶಿ ವಿರುದ್ಧ ಅಶ್ವತ್ಥ್ ನಾರಾಯಣ ಗರಂ

    ಇದು ಪಾದಯಾತ್ರೆ ಅಲ್ಲ, ಇದೊಂದು ಡಿಕೆ ಇವೆಂಟ್. ಜನರಿಗೆ ಏನಾದ್ರೂ ಆಗಲಿ ನಮ್ಮ ಪಕ್ಷ ಪ್ರಚಲಿತದಲ್ಲಿ ಇರಬೇಕು ಅನ್ನೋದಷ್ಟೇ ಇವರ ಉದ್ದೇಶ. ಪಾದಯಾತ್ರೆ ಒಂದು ಮಾಡಲ್ ಅಷ್ಟೇ. ಸ್ವಾರ್ಥದ ಪಶ್ಚಾತ್ತಾಪದ ಪಾದಯಾತ್ರೆ ಅಷ್ಟೇ ಎಂದು ಅಶ್ವತ್ಥ್ ನಾರಾಯಣ ಕಿಡಿಕಾರಿದ್ದಾರೆ.

  • 10 Jan 2022 01:17 PM (IST)

    ಧ್ರುವಕುಮಾರನ ಮಾದರಿಯಲ್ಲಿ ಬಿಂದಿಗೆ ಹೊತ್ತು ಪಾದಯಾತ್ರೆ ಮಾಡಿದ ಕೆಪಿಸಿಸಿ ಕಾರ್ಯದರ್ಶಿ ಹುಸೇನ್

    ಎರಡು ಬಿಂದಿಗೆ ಹಿಡಿದು ಧ್ರುವಕುಮಾರನ ಮಾದರಿಯಲ್ಲಿ ಹೊತ್ತು ಕೆಪಿಸಿಸಿ ಕಾರ್ಯದರ್ಶಿ ಹುಸೇನ್ ಪಾದಯಾತ್ರೆ ಮಾಡುತ್ತಿದ್ದಾರೆ.  ಸುಮಾರು 25 ಕೆಜಿ ಭಾರದ ಬಿಂದಿಗೆ ಹೊತ್ತು ಪಾದಯಾತ್ರೆ ಮಾಡುತ್ತಿದ್ದಾರೆ.

  • 10 Jan 2022 01:12 PM (IST)

    ಮೇಕೆದಾಟು ಯೋಜನೆಗೆ ಬದ್ದವಾಗಿದ್ದೇವೆ; ಡಾ.ಅಶ್ವತ್ಥ್ ನಾರಾಯಣ

    ಪದಾಯತ್ರೆ ಮಾಡಬೇಡಿ ಎಂದು ಮನವಿ ಮಾಡಿದ್ವಿ. ಮೇಕೆದಾಟು ಯೋಜನೆಗೆ ಬದ್ದವಾಗಿದ್ದೇವೆ. ಸರ್ಕಾರದ ಏನೆಲ್ಲ ಕೆಲಸ ಮಾಡ್ತಿದ್ದೆ ಎಂದು ಹೇಳಿದ್ವಿ. ಈಗಾಗಲೇ 20 ಜನರ ಮೇಲೆ ಕೇಸ್ ದಾಖಲು ಮಾಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿದೆ. ಕೇಸ್ ಹಾಕಿದ ಮೇಲೆ ಅದ್ರ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಿದೆ. ಜಾಗೃತಿ ಮೂಡಿಸಿದ್ರು ಇವರು ಮಾತು ಕೇಳಿಲ್ಲ. ಇದು ರಾಜಕೀಯವಾಗಿ ಈ ಪಾದಯಾತ್ರೆ ಮಾಡ್ತಿದೆ ಅಷ್ಟೇ. ಪೊಲಿಟಿಕಲ್ ಡ್ರಾಮ ಮಾಡಲು ಹೊರಟಿದ್ದಾರೆ. ಜನ ವಿರೋಧ ಮಾಡ್ತಿದ್ದಾರೆ. ಸ್ವಾರ್ಥಕ್ಕಾಗಿ ಅವರ ಏಳಿಗಾಗಿ ಈ ಪಾದಯಾತ್ರೆ ಮಾಡ್ತಿದ್ದಾರೆ. ಜನರ ಮುಂದೆ ಇವರ ಉದ್ದೇಶ ಸಂಪೂರ್ಣ ಬದಲಾಗಿದೆ. ಕಾಂಗ್ರೆಸ್ ಭಂಡತನದ ರಾಜಕೀಯ ಮಾಡ್ತಿದೆ. ರಾಜಕೀಯವಾಗಿ ಉತ್ತರ ಕೊಡ್ತೇವೆ. ಕಾನೂನು ಪಾಲನೆ ಮಾಡಿ ಅಂದ್ರೆ ಕಾನೂನು ಉಲ್ಲಂಘನೆ ಮಾಡ್ತಿದ್ದಾರೆ. ಜನರೂ ಕೂಡ ಇದೇ ಪ್ರಶ್ನೆ ಮಾಡ್ತಿದ್ದಾರೆ ಅಂತ ಸಚಿವ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

  • 10 Jan 2022 12:57 PM (IST)

    ಡಿಕೆಶಿ ದಾದಾಗಿರಿ, ಗೂಂಡಾಗಿರಿ ಮಾಡ್ತಾರೆಂದು ಗೊತ್ತಿತ್ತು; ಈಶ್ವರಪ್ಪ

    ಡಿಕೆಶಿ ದಾದಾಗಿರಿ, ಗೂಂಡಾಗಿರಿ ಮಾಡ್ತಾರೆಂದು ಗೊತ್ತಿತ್ತು. ಅದಕ್ಕಾಗಿ ನಾನು ಕೇಡಿ ಡಿಕೆಶಿ ಎಂದು ಕರೆದಿದ್ದು ಅಂತ ಸಚಿವ ಈಶ್ವರಪ್ಪ ಹೇಳಿದರು. ಈಗ ಡಿಕೆಶಿಯವರು ಅದನ್ನು ಸಾಬೀತು ಮಾಡುತ್ತಿದ್ದಾರೆ. ಹೀಗೆ ದಾದಾಗಿರಿ ಮಾಡುವುದು ಯಾರಿಗೆ ಒಳ್ಳೆಯದು? ಅಂತ  ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.

  • 10 Jan 2022 12:52 PM (IST)

    ಕೊವಿಡ್ ಕೇಸ್ ಜಾಸ್ತಿಯಾದರೆ ಅದಕ್ಕೆ ಬಿಜೆಪಿಯವರೇ ಹೊಣೆ; ಮಾಜಿ ಸಚಿವ ಈಶ್ವರ್ ಖಂಡ್ರೆ

    ಕೊವಿಡ್ ಕೇಸ್ ಜಾಸ್ತಿಯಾದರೆ ಅದಕ್ಕೆ ಬಿಜೆಪಿಯವರೇ ಹೊಣೆ. ಮೇಕೆದಾಟು ಪಾದಯಾತ್ರೆ ಮುಗಿದ ಬಳಿಕ ಮಹಾದಾಯಿಗಾಗಿ ಪಾದಯಾತ್ರೆ ಮಾಡುತ್ತೇವೆ. ಕೇಂದ್ರ ಹಾಗೂ ರಾಜ್ಯ ಎರಡು ಕಡೆ ಅವರದ್ದೇ ಆಡಳಿತವಿದೆ. ಆದ್ರೆ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸದೇ ಕುಂಭಕರ್ಣನಂತೆ ನಿದ್ದೆಯಲ್ಲಿದ್ದಾರೆ. ಇವತ್ತು ಎರಡನೇ ದಿನದ ಪಾದಯಾತ್ರೆಯಲ್ಲಿ ನಿನ್ನೆಗಿಂತ ಹೆಚ್ಚು ಮಂದಿ ಬಂದಿದ್ದಾರೆ. ನಮ್ಮ ಹೋರಾಟ ಬೆಂಗಳೂರಿಗೆ ಮುಟ್ಟಿ ಯಶಸ್ವಿಯಾಗುವುದು ನಿಶ್ಚಿತ. ಸಿದ್ದರಾಮಯ್ಯನವರು ಬೂಸ್ಟರ್ ಡೋಸ್ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಜ್ವರ ಬಂದಿದೆ. ಆದಷ್ಟು ಬೇಗ ಅವರು ಪಾದಯಾತ್ರೆ ಸೇರಿಕೊಳ್ಳಲಿದ್ದಾರೆ ಅಂತ ಮಾಜಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

  • 10 Jan 2022 12:41 PM (IST)

    ಕಾಂಗ್ರೆಸ್ ಹರಡುವುದಕ್ಕೆ, ಕಾಂಗ್ರೆಸ್ ಪಕ್ಷವೇ ಕಾರಣ ಆಗುತ್ತದೆ; ಈಶ್ವರಪ್ಪ

    ರಾಜ್ಯದಲ್ಲಿ ಕಾಂಗ್ರೆಸ್ ಹರಡುವುದಕ್ಕೆ. ಕಾಂಗ್ರೆಸ್ ಪಕ್ಷವೇ ಕಾರಣ ಆಗುತ್ತದೆ. ಪಾದಯಾತ್ರೆ ಮಾಡಿದ ಸಿದ್ಧುಗೆ ಜ್ವರ ಬಂದಿದೆ. ಇಂದಿನ ಪಾದಾಯಾತ್ರೆಗೆ ಸಿದ್ದು ಹೋಗಿಲ್ಲ. ಪಾದಯಾತ್ರೆಯಲ್ಲಿ ಎಲ್ಲ ಕೊವಿಡ್ ನಿಯಮ ಉಲ್ಲಂಘನೆ ಆಗಿದೆ. ಈ ಹಿನ್ನೆಲೆಯಲ್ಲಿ ಕೊವಿಡ್ ನಿಯಮ ಪ್ರಕಾರ ಕ್ರಮಕ್ಕೆ ಸಿಎಂ ಮತ್ತು ಗೃಹ ಸಚಿವರು ಸೂಚನೆ ನೀಡಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳುತ್ತಾರೆ. ನೀವು ನೀತಿ ನಿಯಮ ಮೀರಿ ಹೋದರೆ ನಾವು ಏನು ಮಾಡಬೇಕು ಅಂತ ಡಿಕೆಶಿ ಮತ್ತು ಸಿದ್ದು ಪಾದಯಾತ್ರೆಗೆ ಈಶ್ವರಪ್ಪ ಗರಂ ಆಗಿದ್ದಾರೆ.

  • 10 Jan 2022 12:35 PM (IST)

    ಅಧಿಕಾರ ಹೋದ ಬಳಿಕ ಹೋರಾಟ ಮಾಡುತ್ತಿದ್ದಾರೆ; ಶಾಸಕ ನೆಹರು ಓಲೇಕಾರ್

    ಸಿಎಂ ಬೊಮ್ಮಾಯಿ ಹಿಡಿದ ಕೆಲಸ ಮಾಡ್ತಾರೆಂಬುದು ಗೊತ್ತಿದೆ. ಹೀಗಾಗಿ ಕಾಂಗ್ರೆಸ್‌ನವರು ಪಾದಯಾತ್ರೆ ನಾಟಕ ಮಾಡ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏಕೆ ಯೋಜನೆ ಮಾಡಲಿಲ್ಲ. ಅಧಿಕಾರ ಹೋದ ಬಳಿಕ ಹೋರಾಟ ಮಾಡುತ್ತಿದ್ದಾರೆ ಅಂತ ಹಾವೇರಿಯಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಹೇಳಿದರು.

  • 10 Jan 2022 12:32 PM (IST)

    ಮತ್ತೆ ಲಾಕ್‌ಡೌನ್ ಜಾರಿ ಪರಿಸ್ಥಿತಿ ಬಂದ್ರೆ ಕಾಂಗ್ರೆಸ್ ಹೊಣೆ; ಗೃಹ ಸಚಿವ ಆರಗ ಜ್ಞಾನೇಂದ್ರ

    ಕಾಂಗ್ರೆಸ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ಮಾಡುತ್ತಿದೆ. ಕಾಂಗ್ರೆಸ್ ಪಾದಯಾತ್ರೆಯಿಂದ ಕೊರೊನಾ ಕೇಸ್ ಹೆಚ್ಚಾದರೆ, ಮತ್ತೆ ಲಾಕ್‌ಡೌನ್ ಜಾರಿ ಪರಿಸ್ಥಿತಿ ಬಂದ್ರೆ ಕಾಂಗ್ರೆಸ್ ಹೊಣೆ. ಕಾಂಗ್ರೆಸ್‌ನವರೇ ಹೊಣೆಯಾಗುತ್ತಾರೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

  • 10 Jan 2022 12:31 PM (IST)

    ಇದು ಕಾಂಗ್ರೆಸ್‌ನ ಹಠಮಾರಿ ಧೋರಣೆ; ಶಾಸಕ ಎಲ್ ನಾಗೇಂದ್ರ ಹೇಳಿಕೆ

    ಇದು ಕಾಂಗ್ರೆಸ್‌ನ ಹಠಮಾರಿ ಧೋರಣೆ. ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಅಂತ ಚಾಮರಾಜ ಬಿಜೆಪಿ ಶಾಸಕ ಎಲ್ ನಾಗೇಂದ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನೆ ಎಲ್ಲರ ಹಕ್ಕು ಪ್ರತಿ ಪಕ್ಷವಾಗಿ ಪ್ರತಿಭಟನೆ ಮಾಡಲಿ. ಆದರೆ ಇದು ಪಾದಯಾತ್ರೆಗೆ ಸೂಕ್ತ ಸಮಯವಲ್ಲ. ಕೇಂದ್ರ ರಾಜ್ಯ ಸರ್ಕಾರ ಜನರ ಪ್ರಾಣ ಉಳಿಸಲು ಹೋರಾಡುತ್ತಿದೆ. ಈ ವೇಳೆ ಕಾಂಗ್ರೆಸ್ ಮಾಡುತ್ತಿರುವುದು ಏನು ? ಕೇಂದ್ರದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಅವರು ಏನು ಮಾಡಲಿಲ್ಲ ಈಗ ರಾಜಕೀಯ ಕಾರಣಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ ಅಂತ ಸಚಿವರು ಹೇಳಿದರು.

  • 10 Jan 2022 12:30 PM (IST)

    ಪಾದಯಾತ್ರೆ ‌ಮಾರ್ಗಮಧ್ಯೆ ಶಾಲಾ ಮಕ್ಕಳನ್ನ ಭೇಟಿ‌ ಮಾಡಿದ ಡಿಕೆಶಿ

    ಪಾದಯಾತ್ರೆ ‌ಮಾರ್ಗಮಧ್ಯೆ ಡಿಕೆ ಶಿವಕುಮಾರ್ ಶಾಲಾ ಮಕ್ಕಳನ್ನ ಭೇಟಿ‌ ಮಾಡಿದ್ದಾರೆ. ಕೃಷ್ಣಯ್ಯನದೊಡ್ಡಿ ಗ್ರಾಮದಲ್ಲಿ ಶಾಲಾ ವಿದ್ಯಾರ್ಥಿಗಳನ್ನ ಭೇಟಿ ಮಾಡಿದರು. ವಿದ್ಯಾರ್ಥಿಗಳ ಜೊತೆ ಶಿವಕುಮಾರ್ ಫೋಟೊ ತೆಗಿಸಿಕೊಂಡರು. ಈ ವೇಳೆ ವಿದ್ಯಾರ್ಥಿಗಳು ಡಿಕೆಶಿಗೆ ಜೈಕಾರ ಹಾಕಿದರು.

  • 10 Jan 2022 12:28 PM (IST)

    ಕಾಂಗ್ರೆಸ್ ಪಾದಯಾತ್ರೆ ಅನವಶ್ಯಕ; ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

    ಕೈ ಪಾದಯಾತ್ರೆಗೆ ಮಾಜಿ ಸಚಿವ ಬಿಜೆಪಿಯ ಅಪ್ಪು ಪಟ್ಟಣಶೆಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್​ನವರ ಹೋರಾಟ ಅನವಶ್ಯಕವಾಗಿದೆ. ಸರ್ಕಾರ ಹಾಗೂ ತಜ್ಞರ ನಿಮಯಗಳನ್ನು ಮೀರುತ್ತಿದ್ಧಾರೆ. ಕೊರೊನಾ ಹಾಗೂ ಒಮಿಕ್ರಾನ್ ಹರಡುತ್ತಿರೋ ವೇಳೆ ಪಾದಯಾತ್ರೆ ಮಾಡುತ್ತಿರೋದು ಸರಿಯಲ್ಲ. ಇದರಿಂದ ಮಹಾಮಾರಿ ರೋಗ ಹರಡಲು ಅನುಕೂಲವಾಗುತ್ತದೆ. ಪಾದಯಾತ್ರೆಯಲ್ಲಿ ವಿವಿಧ ಸ್ಥಳಗಳಿಂದ ಜನರು ಆಗಮಿಸಿ ಭಾಗಿಯಾಗುತ್ತಾರೆ. ಇದರಿಂದ ರಾಜ್ಯಾದ್ಯಂತ ಕೊರೊನಾ ಹರಡುತ್ತದೆ. ಡಿಕೆಶಿ ರಾಕ್ಯದ ಜನರ ಆರೋಗ್ಯದ ಬಗ್ಗೆ ಸರ್ಕಾರದ ಬಗ್ಗೆ ಚಾಲೆಂಜ್ ಮಾಡಿದ್ದಾರಾ? ಬಿಜೆಪಿಗೆ ಕೆಟ್ಟ ಹೆಸರು ತರಲು ಹಾಗೂ, ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಅಂತ ವಿಜಯಪುರ ನಗರದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದರು.

  • 10 Jan 2022 12:25 PM (IST)

    ಕಾಂಗ್ರೆಸ್ ಬೇಜವಾಬ್ದಾರಿ ವರ್ತನೆ ಬಿಡಬೇಕು; ಆರಗ ಜ್ಞಾನೇಂದ್ರ

    ಕೊರೊನಾ ಪ್ರಕರಣಗಳೇ ಇಲ್ಲ ಎಂದು ಹೇಳುತ್ತಿದ್ದಾರೆ. 2ನೇ ಅಲೆಯಲ್ಲಿ ಎಷ್ಟು ಪ್ರಾಣಗಳು ಹೋಯಿತು? ಸ್ಮಶಾನಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ಬಂತು. ಹೀಗಾಗಿ ಕಾಂಗ್ರೆಸ್ ಬೇಜವಾಬ್ದಾರಿ ವರ್ತನೆ ಬಿಡಬೇಕು. ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳದಿರುವುದು ದಾಸ್ಯತನ. ಅಧಿಕಾರಿಗಳನ್ನು ಹೆದರಿಸಿ ಕಳಿಸಿರುವುದು ಸರಿಯಲ್ಲ. ಡಿಕೆಶಿ ಮಾಸ್ಕ್ ಧರಿಸದೆ ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಜ್ವರದಿಂದ ಬಳಲುತ್ತಿದ್ದಾರೆ. ಏನು ಜ್ವರ ಇದೆ ಎಂದು ನನಗೂ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯ ಆದಷ್ಟು ಬೇಗ ಗುಣಮುಖರಾಗಲಿ ಅಂತ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

  • 10 Jan 2022 12:23 PM (IST)

    ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರಿಗೆ ಎಳನೀರು, ಕಬ್ಬಿನ ಹಾಲು, ಬಾಳೆಹಣ್ಣಿನ ವ್ಯವಸ್ಥೆ

    ಪಾದಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಕಾರ್ಯಕರ್ತರಿಗೆ ಎಳನೀರು, ಕಬ್ಬಿನ ಹಾಲು, ಬಾಳೆಹಣ್ಣಿನ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ಸಾಗುವ ಮಾರ್ಗ ಮಧ್ಯೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಎಳನೀರು ವ್ಯವಸ್ಥೆ ಮಾಡಿಲಾಗಿದೆ. ಪ್ರತಿ ಒಂದು ಕಿಲೋಮೀಟರ್​ಗೆ ಒಂದರಂತೆ ವ್ಯವಸ್ಥೆ ಮಾಡಲಾಗಿದೆ.

  • 10 Jan 2022 12:21 PM (IST)

    ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ; ಸಚಿವ ಹಾಲಪ್ಪ ಹೇಳಿಕೆ

    ಜನರಿಗಾಗಿ ರಾಜಕಾರಣ ಮಾಡಬೇಕು, ಕೆಲಸ ಮಾಡಬೇಕು. ಆದರೆ, ಕಾಂಗ್ರೆಸ್​ನವರು ರಾಜಕೀಯಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಇವರಿಗೆ ಜನರ ಜೀವ ರಕ್ಷಣೆ ಬಗ್ಗೆ ಕಾಳಜಿ ಇಲ್ಲ. ಅವರಿಗೆ ರಾಜಕೀಯವೇ ಮುಖ್ಯ ಆಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಇಂಥ ನಾಟಕ ಮಾಡುತ್ತಿದ್ದಾರೆ. ಇನ್ನೂ ಚುನಾವಣೆ ಮುಂದೆ ಇದೆ. ಮೇಕೆದಾಟು ಯೋಜನೆ ಜಾರಿ ಬಗ್ಗೆ ಸಿಎಂ ಬೊಮ್ಮಯಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕೂಡಲ ಸಂಗಮಕ್ಕೆ ಪಾದಯಾತ್ರೆ ಮಾಡಿದ್ದಾಗ ಏನು ಹೇಳಿದ್ರು. ಪ್ರತಿ‌ವರ್ಷ 10 ಸಾವಿರ ಕೋಟಿ ಕೊಡ್ತಿವಿ ಅಂತಾ ಹೇಳಿದ್ದರು. ದೇವರ ಆಣೆ ಮಾಡಿ‌ ಹೇಳಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ಡಿಪಿಆರ್ ಮಾಡಲು ಆಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಡಿಪಿಆರ್ ಮಾಡಿದ್ದಾರೆ. ಕಾಂಗ್ರೆಸ್ ಗೆ ಮೇಕೆದಾಟು ಬಗ್ಗೆ ಪ್ರಾಮಾಣಿಕ ಕಳಕಳಿ ಇಲ್ಲ. ಜನರು ರಾತ್ರಿ ಕಂಡ ಭಾವಿಗೆ ಹಗಲು ಬೀಳುವುದಿಲ್ಲ. ಇವರ ನಾಟಕವನ್ನ ರಾಜ್ಯದ ಜನರು ಒಪ್ಪುವುದಿಲ್ಲ.  ಚುನಾವಣೆ ಇನ್ನೂ ಒಂದೂವರ ವರ್ಷ ಉಳಿದಿದೆ. ಚುನಾವಣೆ ವೇಳೆ ಇಂಥ ಡೊಂಬರಾಟ ಆಡುವುದು ಕಾಂಗ್ರೆಸ್​ಗೆ​ ಹೊಸದಲ್ಲ. ಜನರ ದಾರಿ ತಪ್ಪಿಸುವುದು ಕಾಂಗ್ರೆಸ್ ‌ನವರಿಗೆ ಮೊದಲಿಂದಲೂ ಇದ್ದ ಗುಣ ಅಂತ ಸಚಿವ ಹಾಲಪ್ಪ ಹೇಳಿಕೆ ನೀಡಿದ್ದಾರೆ.

  • 10 Jan 2022 12:18 PM (IST)

    ಆ ರಸ್ತೆಯಿಂದ ಈ ರಸ್ತೆ ದಂಡೆಗೆ ಡಿಕೆಶಿ ಬಂದಿದ್ದರು; ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕೆ

    ಪಾದಯಾತ್ರೆಯಲ್ಲಿ ಡಿಕೆಶಿ ಓಲಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ  ಶಾಸಕ ಬಸನಗೌಡ ಪಾಟೀಲ ಯತ್ನಾಳ, ಆ ರಸ್ತೆಯಿಂದ ಈ ರಸ್ತೆ ದಂಡೆಗೆ ಅವರು ಬಂದಿದ್ದರು. ಓಲಾಡುತ್ತ ಹೊರಟಿದ್ದರು. ಯಾಕೆ ತೂರಾಡಿದರು ಅಂತಾ? ಯಾವ ಮಾಧ್ಯಮವೂ ವರದಿ ಮಾಡಲಿಲ್ಲ. ಒಂದು ತಾಸಿನ ವಿಶೇಷ ಕಾರ್ಯಕ್ರಮ ಮಾಡಬೇಕಿತ್ತು. ಪೂಜೆ ಮಾಡಲು ಹೋಗಿ ಡಬ್ಬ ಬಿದ್ದಿದ್ದರು.  ಅವರೆಲ್ಲ ಶ್ರೀಮಂತರು, ದೊಡ್ಡ ರಾಜಕಾರಣಿಗಳು. ಐವತ್ತು ವರ್ಷದಿಂದ ಲೂಟಿ ಮಾಡಿದಂತವರು ಅಂತ ಟೀಕೆ ಮಾಡಿದ್ದಾರೆ.

  • 10 Jan 2022 12:15 PM (IST)

    ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲು; ಆರಗ ಜ್ಞಾನೇಂದ್ರ ಹೇಳಿಕೆ

    ನಿನ್ನೆ 30 ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲವನ್ನು ರಾಮನಗರ ಜಿಲ್ಲಾಡಳಿತಕ್ಕೆ ಬಿಡಲಾಗಿದೆ. ಮೊದಲು ಕಾರಣಕರ್ತರ ವಿರುದ್ಧ ಪ್ರಕರಣ ಆಗುತ್ತೆ. ನಂತರ ತನಿಖೆ ಬಳಿಕ ಇತರರ ವಿರುದ್ಧ ಕ್ರಮವಾಗುತ್ತೆ. 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ್ದರು. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಏನು ಮಾಡಿದ್ದಾರೆ? ಆಡಳಿತದಲ್ಲಿದ್ದಾಗ ಯೋಜನೆ ಮಾಡಿಲ್ಲ ಈಗ ಪಾದಯಾತ್ರೆ ಮಾಡುತ್ತಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕು. ಮೊಣಕಾಲು ಮೇಲೆ ಕುಳಿತು, ಕಿವಿ ಹಿಡಿದುಕೊಂಡು ಕ್ಷಮೆ ಕೇಳಬೇಕು. ಕಾಂಗ್ರೆಸ್ ನಾಯಕರು ರಾಜ್ಯದ ಜನರ ಕ್ಷಮೆಯಾಚಿಸಬೇಕು. ನಾವು ಅಧಿಕಾರದಲ್ಲಿದ್ದಾಗ ಯೋಜನೆ ಮಾಡುವುದಕ್ಕೆ ಆಗಿಲ್ಲ, ಇದಕ್ಕಾಗಿ ಕ್ಷಮೆ ಕೇಳುತ್ತಿದ್ದೇವೆ ಎಂದು ಅವರು ಹೇಳಲಿ ಅಂತ ಆರಗ ಜ್ಞಾನೇಂದ್ರ ಹೇಳಿದರು.

  • 10 Jan 2022 12:13 PM (IST)

    ಪಾದಯಾತ್ರೆ ಅಲ್ಲ ತಮಾಷೆ ಎಂದ ಶಾಸಕ ಮುದ್ನಾಳ್

    ಕಾಂಗ್ರೆಸ್​ನ​ ಮೇಕೆದಾಟು ಪಾದಯಾತ್ರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಮುದ್ನಾಳ್, ಅದು ಪಾದಯಾತ್ರೆ ಅಲ್ಲ ತಮಾಷೆ  ಇಂತಹ ಸಂದರ್ಭದಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ಕಾಂಗ್ರೆಸ್​ನವರು ದೊಡ್ಡ ತಪ್ಪು ಮಾಡ್ತಾಯಿದ್ದಾರೆ. ಇದು ಹೋರಾಟ ಅಲ್ಲ ಬರೀ ನಾಟಕ ಅಷ್ಟೇ. ಕೊವಿಡ್ ಪ್ರಕರಣಗಳು ಡಬಲ್ ಆಗ್ತಾಯಿವೆ. ಪಾದಯಾತ್ರೆಗೆ ಬೇರೆ ಸಮಯ ಸಿಗಲಿಲ್ವಾ ಇವರಿಗೆ. ಕೊವಿಡ್ ಪ್ರಕರಣಗಳು ಹೆಚ್ಚಾದ್ರೆ ಸರ್ಕಾರದ ಮೇಲೆಯೇ ಆರೋಪ ಮಾಡ್ತಾರೆ. ಒಂದು ತಿಂಗಳು ಮೊದ್ಲೆ ಮಾಡಬೇಕಾಗಿತ್ತು ಈಗೇ ಯಾಕೆ ಮಾಡ್ತಾಯಿದ್ದಾರೆ ಅಂತ ಹೇಳಿದರು.

  • 10 Jan 2022 12:10 PM (IST)

    ಈಗಲೂ ಕಾಲ ಮಿಂಚಿಲ್ಲ ಪಾದಯಾತ್ರೆಯನ್ನು ನಿಲ್ಲಿಸಿ; ಈಶ್ವರಪ್ಪ

    ಈಗಲೂ ಕಾಲ ಮಿಂಚಿಲ್ಲ ಪಾದಯಾತ್ರೆಯನ್ನು ನಿಲ್ಲಿಸಿ. ಇಲ್ಲದಿದ್ದರೆ ರಾಜ್ಯದ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ ಅಂತ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಡಿಕೆಶಿ ಸಿಎಂ ಆಗಬೇಕೆಂದು ಹಗಲು ಗನಸು ಕಾಣುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಸಿಎಂ ಆಗುವುದಿಲ್ಲ ಅಂತ ಸಚಿವ ಈಶ್ವರಪ್ಪ ಹೇಳಿದರು.

  • 10 Jan 2022 12:04 PM (IST)

    ಬೆಂಗಳೂರು ನಿವಾಸಿಯಾಗಿ ನಮ್ಮ ಬೇಡಿಕೆ ಇದು; ಟಿವಿ9ಗೆ ಕುಸುಮಾ ಹನುಮಂತರಾಯಪ್ಪ ಹೇಳಿಕೆ

    ಹಿಂದೆ ನಾವು ನಾಡಿನ ಮಣ್ಣಿಗಾಗಿ ಪಾದಯಾತ್ರೆ ಮಾಡಿದ್ವಿ. ಈ ಬಾರಿ ನೀರಿಗಾಗಿ ಮಾಡುತ್ತಿದ್ದೇವೆ. ಈ ಯೋಜನೆಯನ್ನ ಸರ್ಕಾರ ವಿಳಂಬ ಮಾಡುತ್ತಿದೆ. ಬೆಂಗಳೂರು ನಿವಾಸಿಯಾಗಿ ನಮ್ಮ ಬೇಡಿಕೆ ಇದು. ಇದರಿಂದ 2.5 ಕೋಟಿ ಜನರಿಗೆ ನೀರು ಸಿಗಲಿದೆ. ಸರ್ಕಾರ ನಮ್ಮನ್ನ ತಡೆದರೆ ಅದು ಪ್ರಜಾಪ್ರಭುತ್ವ ವಿರೋಧಿ. ಕೇಸ್​ಗಳೇ ಇಲ್ಲದಿದ್ದರು ಅನಗತ್ಯವಾಗಿ ಕೇಸ್ ದಾಖಲಾಗುತ್ತದೆ ಅಂತ ಟಿವಿ9ಗೆ ಕುಸುಮಾ ಹನುಮಂತರಾಯಪ್ಪ ಹೇಳಿಕೆ ನೀಡಿದ್ದಾರೆ.

  • 10 Jan 2022 12:02 PM (IST)

    ಪಾದಯಾತ್ರೆ ಕೈ ಬಿಟ್ಟರೆ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು; ಶಾಸಕ ಎಸ್ ಎ ರಾಮದಾಸ್

    ರಾಜ್ಯದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಪಾದಯಾತ್ರೆ ಸರಿಯಲ್ಲ. ಪಕ್ಷದ ಅಧ್ಯಕ್ಷರಾಗಿರುವವರು ಜನರ ಹಿತದೃಷ್ಟಿಯಿಂದ ಮುಂದೂಡಬೇಕಿತ್ತು. ಇದು ಪಾದಯಾತ್ರೆ ಮಾಡುವ ಸಂದರ್ಭ ಅಲ್ಲ. ತಮಿಳುನಾಡಿನ ಜನಪ್ರತಿನಿಧಿಗಳಂತೆ ನಾವು ಒಟ್ಟಾಗಬೇಕು. ರಾಜ್ಯದ ಹಿತಕಾಯುವ ನಿಟ್ಟಿನಲ್ಲಿ ಒ‌ಂದಾಗಬೇಕು. ಪಾದಯಾತ್ರೆ ಕೈ ಬಿಟ್ಟರೆ ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಈ ಮೂಲಕ ನಿಮ್ಮ ದೊಡ್ಡತನ ಹಿರಿತನ ತೋರಿಸಿ ಅಂತ ಮೈಸೂರಿನಲ್ಲಿ ಶಾಸಕ ಎಸ್ ಎ ರಾಮದಾಸ್ ಹೇಳಿದ್ದಾರೆ.

  • 10 Jan 2022 12:01 PM (IST)

    ಕೊವಿಡ್ ಸಮಯದಲ್ಲಿ ಮೇಕೆದಾಟು ಪಾದಯಾತ್ರೆ ಬೇಕಿತ್ತಾ; ಜಿಎಂ ಸಿದ್ದೇಶ್ವರ ಆಕ್ರೋಶ

    ಕೊವಿಡ್ ಸಮಯದಲ್ಲಿ ಮೇಕೆದಾಟು ಪಾದಯಾತ್ರೆ ಬೇಕಿತ್ತಾ ಅಂತ ಜಿಎಂ ಸಿದ್ದೇಶ್ವರ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್​ನ ಮೇಕೆ ದಾಟು ಪಾದಯಾತ್ರೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಿದ್ದೇಶ್ವರ, ಮೇಕೆದಾಟು ವಿಚಾರದ ಬಗ್ಗೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈಗ ತಮಿಳುನಾಡಿನಲ್ಲಿ ಕಾಂಗ್ರೆಸ್ ಡಿಎಂಕೆ ಸರ್ಕಾರ ಇದೆ. ಅಲ್ಲಿ ಹೇಳಿ ಕೋರ್ಟ್​ ಕೇಸ್ ಹಿಂದಕ್ಕೆ ಪಡೆಯಲಿ. ನಾನು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುತ್ತೇವೆ. ಅದನ್ನು ಬಿಟ್ಟು ಜನರಲ್ಲಿ ತಪ್ಪು ಭಾವನೆ ಹರಡಿಸುವ ಸಲುವಾಗಿ ಪಾದಯಾತ್ರೆ ಮಾಡಲಾಗುತ್ತಿದೆ ಅಂತ ಸಿದ್ದೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 10 Jan 2022 11:59 AM (IST)

    ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಪಾದಯಾತ್ರೆ ಮಾಡ್ತಿದೆ; ಸಕ್ಕರೆ ಖಾತೆ ಸಚಿವ ಮುನೇನಕೊಪ್ಪ

    ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಪಾದಯಾತ್ರೆ ಮಾಡ್ತಿದೆ ಅಂತ ಹುಬ್ಬಳ್ಳಿಯಲ್ಲಿ ಸಕ್ಕರೆ ಖಾತೆ ಸಚಿವ ಮುನೇನಕೊಪ್ಪ ಹೇಳಿಕೆ ನೀಡಿದ್ದಾರೆ. BBMP, ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ವಿಧಾನಮಂಡಲ ಅಧಿವೇಶನ ನಡೆದು 15 ದಿನಗಳಾಗಿಲ್ಲ. ಅಧಿವೇಶನದಲ್ಲಿ ಕಾಂಗ್ರೆಸ್​ ಮೇಕೆದಾಟಿನ ಬಗ್ಗೆ ಚರ್ಚಿಸಿಲ್ಲ.  ಚುನಾವಣೆಯ ಸಂದರ್ಭದಲ್ಲಿ ಜನರು ತಕ್ಕ ಉತ್ತರ ನೀಡ್ತಾರೆ ಅಂತ ಸಚಿವ ಮುನೇನಕೊಪ್ಪ ಹೇಳಿದ್ದಾರೆ.

  • 10 Jan 2022 11:57 AM (IST)

    ಪಾದಯಾತ್ರೆಯನ್ನು ತಡೆಯಲು ನಾವು ಹೋಗೋದಿಲ್ಲ; ಮಾಜಿ ಸಿಎಂ ಜಗದೀಶ್ ಶೆಟ್ಟರ್

    ಸರ್ಕಾರ ಅಸಮರ್ಥವಿಲ್ಲ, ಸಿಎಂ ಸೂಕ್ತ ನಿರ್ಧಾರ ಕೈಗೊಳ್ತಾರೆ ಅಂತ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನವರು ಹಠಕ್ಕೆ ಬಿದ್ದು ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯನ್ನು ತಡೆಯಲು ನಾವು ಹೋಗೋದಿಲ್ಲ. ಅನಗತ್ಯವಾಗಿ ಗೊಂದಲ ಆಗಬಾರದು ಎಂದು ಬಿಟ್ಟಿದ್ದೇವೆ. ಕಾಂಗ್ರೆಸ್‌ಗೆ ನಾಡಿನ ಹಿತಾಸಕ್ತಿ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಅಧಿವೇಶನದಲ್ಲಿ ಯೋಜನೆ ಬಗ್ಗೆ ಚರ್ಚೆಯನ್ನೇ ಮಾಡಿಲ್ಲ. ಈಗ ಬೀದಿ ಹೋರಾಟ ಮಾಡಲು ಹೋಗಿದ್ದಾರೆ ಅಂತ ಜಗದೀಶ್ ಶೆಟ್ಟರ್ ಹೇಳಿದರು.

  • 10 Jan 2022 11:29 AM (IST)

    ಮಾರ್ಗ ಮಧ್ಯೆ ಕಬ್ಬಿನ ಹಾಲು ಕುಡಿದ ಡಿಕೆ ಶಿವಕುಮಾರ್

    ಎರಡನೇ ದಿನ ಪಾದಯಾತ್ರೆ ಈಗಾಗಲೇ ಆರಂಭವಾಗಿದೆ. ನಡಿದು ಬಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ಕಾರ್ಯಕರ್ತರು ಮಾರ್ಗ ಮಧ್ಯೆ ಕಬ್ಬಿನ ಹಾಲು ಕುಡಿದರು.

  • 10 Jan 2022 11:03 AM (IST)

    ಕೊವಿಡ್ ‌ನಿರ್ಬಂಧ ಎಲ್ಲರೂ ಪಾಲನೆ ಮಾಡಬೇಕು; ಸುಧಾಕರ್

    ಕೊವಿಡ್ ‌ನಿರ್ಬಂಧ ಎಲ್ಲರೂ ಪಾಲನೆ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ವಿಪಕ್ಷ ಎಂದರೆ ಶ್ಯಾಡೋ ಸರ್ಕಾರ. ಆಡಳಿತದ ನಿಯಮ ಪಾಲನೆ ಮಾಡುವ ಜವಾಬ್ದಾರಿ ಸರ್ಕಾರಕ್ಕೆ ಮಾತ್ರ ಅಲ್ಲ, ವಿಪಕ್ಷಗಳಿಗೂ ಇರುತ್ತದೆ. ಆದರೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಕೊವಿಡ್​ಗೆ ಬಿಗಿ ಕ್ರಮ ತೆಗೆದುಕೊಳ್ಳಬೇಕು ಅಂತಾ ಪ್ರಧಾನಿಗೆ ಹೇಳುತ್ತದೆ. ಇಲ್ಲಿ ಕಾಂಗ್ರೆಸ್ ಅಧ್ಯಕ್ಷರು ಕೊವಿಡ್ ಇಲ್ಲ ಬಿಜೆಪಿ ಸೃಷ್ಟಿ ಅಂತಾ ಹೇಳುತ್ತಾರೆ. ರಾಜ್ಯದ ಜನರ ಹಿತ ಬಲಿಕೊಟ್ಟು ಪಾದಯಾತ್ರೆ ಮಾಡ್ತಿದ್ದಾರೆ. ಬೇರೆ ಬೇರೆ ಜಿಲ್ಲೆಯ ಜನರನ್ನು ಕರೆಸಿಕೊಂಡು ಪಾದಯಾತ್ರೆ ಮಾಡ್ತಿದ್ದಾರೆ. ಕೊವಿಡ್ ಪರೀಕ್ಷೆ ಮಾಡಲು ಹೋದರೆ ನಿಂದಿಸಿ ಕಳುಹಿಸುವ ಕೆಲಸ ಮಾಡಿದ್ದಾರೆ. ಮೂಲ ಆಶಯ ಹಾಳು ಮಾಡುವ ಕೀರ್ತಿ ಅವರಿಗೆ ಸಲ್ಲುತ್ತದೆ. ಜನರಿಗೊಂದು ರಾಜಕಾರಣಿಗಳಿಗೊಂದು ಕಾನೂನು ಆಗುವುದಿಲ್ಲ. ನಿಯಮ ಗಾಳಿಗೆ ತೂರಿ ಪಾದಯಾತ್ರೆ ಮಾಡುವವರನ್ನು ಜನ ಕ್ಷಮಿಸಲ್ಲ. ಅಗತ್ಯ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಮರ್ಥವಾಗಿದೆ ಅಂತ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.

  • 10 Jan 2022 10:41 AM (IST)

    ಪಾದಯಾತ್ರೆಯಿಂದ ಮತ್ತಷ್ಟು ಕೊರೊನಾ​ ಹೆಚ್ಚಳ ಸಾಧ್ಯತೆ

    ಕಾಂಗ್ರೆಸ್​ ಪಕ್ಷದಿಂದ ಮೇಕೆದಾಟುಗಾಗಿ ಪಾದಯಾತ್ರೆ ನಡೆಯುತ್ತಿರುವ ಹಿನ್ನೆಲೆ ಆರೋಗ್ಯ ಸಚಿವರ ಬಳಿ‌ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆಯಿಂದ ಮತ್ತಷ್ಟು ಕೊರೊನಾ​ ಹೆಚ್ಚಳವಾಗುವ ಸಾಧ್ಯತೆಯಿದೆ.

  • 10 Jan 2022 10:40 AM (IST)

    ನಾನು ಕುಡಿಯುತ್ತೇನೋ, ಬಿಡುತ್ತೇನೋ ಅದೆಲ್ಲಾ ಬೇಡ; ಡಿಕೆಶಿ

    ಪಾದಯಾತ್ರೆ ವೇಳೆ ನಿನ್ನೆ ಯಾರೋ ನನ್ನನ್ನು ತಳ್ಳಿದ್ದರು. ಅದಕ್ಕೆ ಬಿಜೆಪಿಯವರು ಡಿಕೆಶಿ ಕುಡಿದ್ದಿದ್ದ ಅಂತಿದ್ದಾರೆ. ನಾನು ಕುಡಿಯುತ್ತೇನೋ, ಬಿಡುತ್ತೇನೋ ಅದೆಲ್ಲಾ ಬೇಡ. ಅದಕ್ಕೆ ಯುವಕರು ಯಾರೂ ನನ್ನ ಹಿಂದೆ ಬರಬೇಡಿ. ಪಾದಯಾತ್ರೆಯಲ್ಲಿ ಶಾಸಕರು ನನ್ನ ಜೊತೆಯಲ್ಲಿ ಬರುತ್ತಾರೆ. ನೀವು ಡಿಕೆ ಮುಂದಿನ ಸಿಎಂ ಎಂದು ಜೈಕಾರ ಹಾಕಬೇಡಿ ಅಂತ  ಕಾಂಗ್ರೆಸ್ ಕಾರ್ಯಕರ್ತರಲ್ಲಿ ಡಿಕೆಶಿ ಮನವಿ ಮಾಡಿದ್ದಾರೆ.

  • 10 Jan 2022 10:34 AM (IST)

    ನಮ್ಮ ಹೋರಾಟ ನೋಡಿ ಕೇಂದ್ರ ಬಿಜೆಪಿ ಷಡ್ಯಂತ್ರ ಮಾಡ್ತಿದೆ; ಡಿಕೆ ಸುರೇಶ್

    ನಮ್ಮ ಹೋರಾಟ ನೋಡಿ ಕೇಂದ್ರ ಬಿಜೆಪಿ ನಿರಂತರವಾಗಿ ಷಡ್ಯಂತ್ರ ಮಾಡ್ತಿದೆ. ಇದ್ಯಾವುದಕ್ಕೂ ನಾವೂ ಹೆದರೋದಿಲ್ಲ ಅಂತ ಟಿವಿ9ಗೆ  ಸಂಸದ ಡಿಕೆ ಸುರೇಶ್ ಹೇಳಿಕೆ ನೀಡಿದ್ದಾರೆ. ನಿರಂತರವಾಗಿ ಕೇಂದ್ರ ಬಿಜೆಪಿ ಷಡ್ಯಂತ್ರ ಮಾಡ್ತಿದೆ. ಇಡಿಗಾದ್ರು ಕೊಡಲಿ ಸಿಬಿಐಗಾದ್ರು ಕೊಡಲಿ ನಾವೂ ಭಯಪಡಲ್ಲ. ಮೇಕೆದಾಟುಗಾಗಿ ಹೋರಾಟ ಮಾಡುತ್ತೇವೆ. ಈ ಯೋಜನೆ ಜಾರಿಯಾಗಲೇಬೇಕು. ಅವರು ಕೇಸ್ ಹಾಕಲಿ ನಮ್ಮ ಹೋರಾಟ ನಾವೂ ಮಾಡ್ತಿವಿ ಅಂತ ಹೇಳಿದರು.

  • 10 Jan 2022 10:32 AM (IST)

    ಎರಡನೇ ದಿನದ ಪಾದಯಾತ್ರೆ ಆರಂಭ

    ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಿದೆ. ಎರಡನೇ ದಿನದ ಪಾದಯಾತ್ರೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಿಂದ  ಆರಂಭವಾಗಿದೆ.

  • 10 Jan 2022 10:29 AM (IST)

    ಡಿಕೆಶಿ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ

    ಬಾಯಿಗೆ ಬಂದಂತೆ ಮಾತಾಡುವುದು ಅವರ ಸಂಸ್ಕೃತಿ ಅಂತ ಡಿಕೆಶಿ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ನಾವು ಅವರ ಅರೋಗ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಬಹುತೇಕ ಎಲ್ಲಾರಿಗೂ ಆರೋಗ್ಯ ತಪಾಸಣೆ ಮಾಡಿದ್ದೇವೆ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ತನ್ನ ಕೆಲಸ ಮಾಡುತ್ತಿದೆ ಅಂತ ಬೊಮ್ಮಾಯಿ ಹೇಳಿದರು.

  • 10 Jan 2022 10:26 AM (IST)

    ಪಾದಯಾತ್ರೆ ಆರಂಭಕ್ಕೂ ಮೊದಲು ಒಂದು ನಿಮಿಷ ಮೌನಾಚರಣೆ

    ಸಾಹಿತಿ ಚಂಪಾ ನಿಧನರಾದ ಹಿನ್ನೆಲೆ ಪಾದಯಾತ್ರೆ ಆರಂಭಕ್ಕೂ ಮೊದಲು ಒಂದು ನಿಮಿಷ ಮೌನಾಚರಣೆ ಮಾಡಿದ್ದಾರೆ.

  • 10 Jan 2022 10:22 AM (IST)

    ಮನೆಯಿಂದ ತೆರಳಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮನೆಯಿಂದ ತೆರಳಿದ್ದಾರೆ. ದೊಡ್ಡಆಲಹಳ್ಳಿ ಸರ್ಕಲ್​ನಿಂದ ಪಾದಯಾತ್ರೆ ಆರಂಭವಾಗಲಿದೆ.

  • 10 Jan 2022 10:19 AM (IST)

    ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ; ಡಿಕೆ ಶಿವಕುಮಾರ್ ಮಾಹಿತಿ

    ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ಇಂದು ಸಂಜೆ ಪಾದಯಾತ್ರೆಗೆ ಬರುವುದಾಗಿ ಹೇಳಿದರು. ಆದರೆ ನಾನೇ ಇಂದು ಬರಬೇಡಿ ಎಂದು ಹೇಳಿದ್ದೇನೆ. ನಾಳೆ ಬೆಳಗ್ಗೆ ಪಾದಯಾತ್ರೆಗೆ ಬರುವಂತೆ ಹೇಳಿದ್ದೇನೆ ಅಂತ  ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ನಾನು ಒಂದು ಹೆಜ್ಜೆ ಇಟ್ಟ ಮೇಲೆ ಹಿಂದೆ ಇಡುವುದಿಲ್ಲ. ಹೆಜ್ಜೆ ಇಡುವುದಕ್ಕೂ ಮುನ್ನವೇ ಚರ್ಚೆ ಮಾಡುತ್ತೇನೆ. ಕಾಂಗ್ರೆಸ್ ನಾಯಕರು ಚರ್ಚೆ ಮಾಡಿ ನಿರ್ಧರಿಸಿದ್ದೇವೆ. ಪಾದಯಾತ್ರೆ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದೇವೆ. ಬೋಗಸ್ ಕೊವಿಡ್ ಟೆಸ್ಟ್ ಮಾಡಿಸುತ್ತಿದ್ದಾರೆ. ಈ ಬಗ್ಗೆ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸ್ತೇನೆ. ಸುಮ್ಮನೆ ಹಣ ಹೊಡೆಯಲು ಟೆಸ್ಟ್‌ಗಳನ್ನು ಮಾಡುತ್ತಿದ್ದಾರೆ ಅಂತ ಶಿವಕುಮಾರ್ ಆರೋಪಿಸಿದ್ದಾರೆ.

  • 10 Jan 2022 10:14 AM (IST)

    ಎಡಿಸಿ ಜವರೇಗೌಡ, ಡಿಹೆಚ್​​ಒ ನಿರಂಜನ್​​ಗೆ ಡಿಕೆಶಿ ಕ್ಲಾಸ್​​

    ಕೊರೊನಾ ಟೆಸ್ಟ್​ ಮಾಡಿಸಿಕೊಳ್ಳಿ ಎಂದ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.​ ಎಡಿಸಿ ಜವರೇಗೌಡ, ಡಿಹೆಚ್​​ಒ ನಿರಂಜನ್​​ಗೆ ಡಿಕೆಶಿ ಕ್ಲಾಸ್​​ ತೆಗೆದುಕೊಂಡಿದ್ದಾರೆ. ಐ ಆ್ಯಮ್​ ಫಿಟ್​ ಆ್ಯಂಡ್​ ಫೈನ್​ ಎಂದು ಹೇಳಿದ ಡಿಕೆಶಿ, ನನಗೇ ಸಲಹೆ ಕೊಡಲು ಬಂದಿದ್ದೀರಾ ಎಂದು ಗರಂ ಆಗಿದ್ದಾರೆ. ನಾನೊಬ್ಬ ಜನಪ್ರತಿನಿಧಿ ನನಗೇ ಬ್ಲ್ಯಾಕ್​​ಮೇಲ್​ ಮಾಡ್ತಿದ್ದೀರಾ? ನೀವು ನಿಮ್ಮ ಆರೋಗ್ಯ ಇಲಾಖೆ ಸಚಿವರಿಗೆ ಹೋಗಿ ಹೇಳಿ. ಬಚ್ಚಾಗಳ ಹತ್ತಿರ ಆಟ ಆಡಲು ಹೋಗಿ ಹೇಳಿ ಅಂತ ಡಿಕೆಶಿ ಹೇಳಿದ್ದಾರೆ. ನನಗೆ ಏನಾಗಿದೆ ಎಂದು ಟೆಸ್ಟ್​ ಮಾಡಲು ಬಂದಿದ್ದೀರಾ. ಅಧಿಕಾರಿಗಳಿಗೆ ನಿಮ್ಮ ಹುದ್ದೆ ಯಾವುದು ಎಂದು ಪ್ರಶ್ನಿಸಿದ ಅವರು, ನಾನು ಟೆಸ್ಟ್​ ಮಾಡಿಸಿಕೊಳ್ಳಲ್ಲ ಅಂತ ವಾಪಸ್​ ಕಳಿಸಿದ್ದಾರೆ.

  • 10 Jan 2022 10:07 AM (IST)

    ಭದ್ರತೆ ಪರಿಶೀಲನೆ ನಡೆಸಿದ ಎಸ್​ಪಿ ಗಿರೀಶ್

    ಎರಡನೇ ದಿನದ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಭದ್ರತೆ ಬಗ್ಗೆ ಪರಿಶೀಲನೆ ನಡೆಸಲು ಸ್ಥಳಕ್ಕೆ ರಾಮನಗರ ಎಸ್​ಪಿ ಗಿರೀಶ್ ಭೇಟಿ ನೀಡಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

  • 10 Jan 2022 10:02 AM (IST)

    ಜನರ ಹಿತದೃಷ್ಟಿಯಿಂದ ನಡೆಯುತ್ತಿರುವ ಪಾದಯಾತ್ರೆ ಅಲ್ಲ ಇದು -ಸಚಿವ ಗೋವಿಂದ ಕಾರಜೋಳ

    ರಾಜ್ಯದಲ್ಲಿ ಕೊರೊನಾ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ವೇಳೆ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಗರಂ ಆಗಿದ್ದಾರೆ. ಜನರ ಹಿತದೃಷ್ಟಿಯಿಂದ ನಡೆಯುತ್ತಿರುವ ಪಾದಯಾತ್ರೆ ಅಲ್ಲ. ಪಾದಯಾತ್ರೆಯಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಳ್ಳಲಿ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎಲ್ಲರ ಹಕ್ಕು. ಅದನ್ನು ಮೊಟಕುಗೊಳಿಸಬಾರದೆಂದು ತೊಂದರೆ ಕೊಟ್ಟಿಲ್ಲ ಎಂದರು. ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿಕೆ

  • 10 Jan 2022 10:00 AM (IST)

    ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲು

    ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಪಾದಯಾತ್ರೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ 30 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆ್ಯಕ್ಟ್ ವಿಪತ್ತು ನಿರ್ವಹಣಾ ಕಾಯ್ದೆ 2005ರ ಐಪಿಸಿ ಸೆಕ್ಷನ್ 141, 143, 290, 336ರ ಅಡಿ ಸಾತನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 10 Jan 2022 09:55 AM (IST)

    ತೀವ್ರ ಜ್ವರ ಹಿನ್ನಲೆ ಆಸ್ಪತ್ರೆಗೆ ತೆರಳಿದ ಸಿದ್ದರಾಮಯ್ಯ

    ಸಿದ್ದರಾಮಯ್ಯ ಅವರಿಗೆ ತೀವ್ರ ಜ್ವರ ಹಿನ್ನಲೆ ಸಿದ್ದರಾಮಯ್ಯ ಆಸ್ಪತ್ರೆಗೆ ತೆರಳಲಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿ ವೈದ್ಯರ ಸಲಹೆ ಪಡೆದು ಮುಂದಿನ‌ ನಿರ್ಧಾರ ಕೈಗೊಳ್ಳಲಿದ್ದಾರೆ. ಪಾದಯಾತ್ರೆಗೆ ವೈದ್ಯರು ಸಲಹೆ ನೀಡಿದರೆ ಇಂದು ಮಧ್ಯಾಹ್ನ ಪಾದಯಾತ್ರೆಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

  • 10 Jan 2022 09:53 AM (IST)

    ಶಾನಬೋಗರ ಕಾಲಿಗೆ ಬಿದ್ದು ನಮಸ್ಕರಿಸಿದ ಡಿಕೆ ಶಿವಕುಮಾರ್

    ಡಿಕೆ ಶಿವಕುಮಾರ್ ಶಾನಬೋಗರ ಕಾಲಿಗೆ ಬಿದ್ದು ನಮಸ್ಕರಿಸಿದ್ರು. ಬಳಿಕ ಮಾತನಾಡಿದ ಅವರು, ಇವರು ನಮ್ಮ ಪಕ್ಕದ ಮನೆಯವರು. ಇವರದ್ದೇ ಇಲ್ಲಿ ಕಾಲುಭಾಗ ಮನೆಗಳಿತ್ತು. ಗೌಡ ನೀನು ಇಲ್ಲೇ ಇರಬೇಕು ಅಂತಾ ನನ್ನನ್ನ ಇರಿಸಿಕೊಂಡರು ಎಂದರು.

  • 10 Jan 2022 09:44 AM (IST)

    ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ -ಡಿಕೆಶಿ

    ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಇನ್ನು ಸ್ವಲ್ಪಹೊತ್ತಲ್ಲಿ ಇಲ್ಲೇ ಉಪಾಹಾರ ಸೇವಿಸುತ್ತಾರೆ. ಮೆಸೇಜ್ ಬಂದಿದೆ ನೀವೇ ನೋಡ್ತಿರಿ ಎಂದು ರಾಮನಗರ ಜಿಲ್ಲೆ ದೊಡ್ಡಆಲಹಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಭಾಗವಹಿಸಲಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

  • 10 Jan 2022 09:20 AM (IST)

    ದೇವರಿಗೆ ಪೂಜೆ ಸಲ್ಲಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

    ಎರಡನೇ ದಿನದ ಪಾದಯಾತ್ರೆಗೆ ಕ್ಷಣಗಣನೆ ಶುರುವಾಗಿದೆ. ಸದ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೇವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ತವರೂರಾದ ದೊಡ್ಡಆಲಹಳ್ಳಿಯ ಮನೆಯಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಪೂಜೆ ಮುಗಿಸಿ ಪಾದಯಾತ್ರೆ ಆರಂಭಿಸಲಿದ್ದಾರೆ.

  • 10 Jan 2022 08:47 AM (IST)

    ಕಾಂಗ್ರೆಸ್ ಪಾದಯಾತ್ರೆ 9 ಗಂಟೆಯಿಂದ ಆರಂಭ

    ಕಾಂಗ್ರೆಸ್ ಕಾರ್ಯಕರ್ತರು ಇಂದು ಒಟ್ಟು 16 ಕಿಲೋಮೀಟರ್ ಪಾದಯಾತ್ರೆ ನಡೆಸಲಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಆರಂಭವಾಗಲಿದ್ದು, ಮಧ್ಯಾಹ್ನ ವೇಳೆಗೆ ಮಾದಪ್ಪನದೊಡ್ಡಿಗೆ ತಲುಪುತ್ತದೆ.

  • 10 Jan 2022 08:46 AM (IST)

    ಬೇರೆ ಬೇರೆ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಆಗಮನ

    ಬೇರೆ ಬೇರೆ ಜಿಲ್ಲೆಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಬಸ್​ಗಳ ಮೂಲಕ ಆಗಮಿಸುತ್ತಿದ್ದಾರೆ.

  • 10 Jan 2022 08:45 AM (IST)

    600 ಪೊಲೀಸ್ ಸಿಬ್ಬಂದಿಯಿಂದ ಬಿಗಿ ಭದ್ರತೆ

    ಪಾದಯಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಂದು ಸುಮಾರು 600 ಜನ ಪೊಲೀಸ್ ಸಿಬ್ಬಂದಿಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

  • 10 Jan 2022 08:43 AM (IST)

    ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಅಧಿಕಾರಿಗಳಿಂದ ಡಿಕೆಶಿಗೆ ಮನವಿ

    ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಅಧಿಕಾರಿಗಳು ಡಿಕೆ ಶಿವಕುಮಾರ್​ಗೆ ಮನವಿ ಮಾಡಿದ್ದಾರೆ. ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಡಿಹೆಚ್ ಓ ಡಾ. ನಿರಂಜನ್  ಡಿಕೆಶಿಗೆ ಮನವಿ ಮಾಡಿದ್ದಾರೆ. ರಾಂಡ್ಯಮ್ ಟೆಸ್ಟ್ ಮಾಡಿಸಲು ಅಧಿಕಾರಿಗಳು ಮನವಿ ಮಾಡಿದ್ದು, ಅಧಿಕಾರಿಗಳ ಮನವಿಯನ್ನ ಡಿಕೆಶಿ ನಿರಾಕರಿಸಿದ್ದಾರೆ.

  • 10 Jan 2022 08:42 AM (IST)

    ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಒಂದು ಗಂಟೆ ಮಾತ್ರ ಭಾಗಿ

    ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಒಂದು ಗಂಟೆ ಮಾತ್ರ ಭಾಗಿಯಾಗಲಿದ್ದಾರೆ. ಜ್ವರ ಹಿನ್ನೆಲೆ ಒಂದು ಗಂಟೆ ಮಾತ್ರ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆಯೂ ಜ್ವರ ಹಿನ್ನೆಲೆ ಅರ್ಧಕ್ಕೆ ಬಿಟ್ಟುಹೋಗಿದ್ದರು.

  • 10 Jan 2022 08:38 AM (IST)

    ಇಂದು ಎರಡನೇ ದಿನದ ಪಾದಯಾತ್ರೆ: ದೊಡ್ಡ ಆಲಹಳ್ಳಿಯಿಂದ ಪಾದಯಾತ್ರೆ ಆರಂಭ

    ಎರಡನೇ ದಿನ ಪಾದಯಾತ್ರೆ ದೊಡ್ಡ ಆಲಹಳ್ಳಿಯಿಂದ ಆರಂಭವಾಗುತ್ತದೆ. ಪಾದಯಾತ್ರೆಯಲ್ಲಿ ಘಟಾನುಘಟಿ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಜ್ವರದ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

  • Published On - Jan 10,2022 8:34 AM

    Follow us
    ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
    ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
    ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
    ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
    ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
    ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
    ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
    ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
    ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
    ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
    Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
    Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
    ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
    ‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
    ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
    ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
    ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
    ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
    ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
    ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ