ಕರ್ನಾಟಕದ ರೈಲ್ವೇ ಯೋಜನೆಗಳ ಸ್ಥಿತಿಗತಿ ಏನು?: ರಾಜ್ಯಸಭೆಯಲ್ಲಿ ಸಚಿವ ಅಶ್ವಿನಿ ವೈಷವ್ ಮಾಹಿತಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭೆಯಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ್ದಾರೆ. ಬೆಂಗಳೂರು ಉಪನಗರ ರೈಲು ಯೋಜನೆ (BSRP)ಗೆ 21,576 ಕೋಟಿ ರೂ. ಮಂಜೂರಾಗಿದ್ದು, ಕೇಂದ್ರ, ರಾಜ್ಯ ಮತ್ತು ಸಾಲದ ಮೂಲಕ ಹಣಕಾಸು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ಹಾಗೂ ಹುಬ್ಬಳ್ಳಿ-ಅಂಕೋಲಾ ಹೊಸ ಮಾರ್ಗಗಳ ಪ್ರಗತಿ ಮತ್ತು ಸವಾಲುಗಳ ಕುರಿತು ವಿವರ ನೀಡಿದ್ದಾರೆ.

ಬೆಂಗಳೂರು, ಡಿಸೆಂಬರ್ 12: ಕಳೆದ ಸಾಲಿಗೆ ಹೋಲಿಸಿದರೆ ರೈಲ್ವೇ ಯೋಜನೆಗಳಿಗಾಗಿ ಕರ್ನಾಟಕಕ್ಕೆ 9 ಪಟ್ಟು ಹೆಚ್ಚು ಹಣ ನೀಡಲಾಗಿದ್ದು, 2025-26ರಲ್ಲಿ 7,564 ಕೋಟಿ ಅನುದಾನ ನೀಡಲಾಗಿದೆ. 148 ಕಿ.ಮೀ. ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆ (BSRP)ಗೆ 215,767 ಕೋಟಿ ವೆಚ್ಚದಲ್ಲಿ ಮಂಜೂರಾತಿ ನೀಡಲಾಗಿದ್ದು, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ತಲಾ ಶೇ.20ರಷ್ಟು ಹಣಕಾಸು ಒದಗಿಸುತ್ತವೆ. ಉಳಿದ ಶೇ.60ರಷ್ಟು ಹಣವನ್ನು ಸಾಲದ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷವ್ ಹೇಳಿದ್ದಾರೆ. ರಾಜ್ಯ ಸಭೆಯಲ್ಲಿ ಜಿ.ಸಿ. ಚಂದ್ರಶೇಖರ್ ಮತ್ತು ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದು, ಕರ್ನಾಟಕದಲ್ಲಿನ ವಿವಿಧ ರೈಲ್ವೇ ಯೋಜನೆಗಳು ಮತ್ತು ಅದಕ್ಕೆ ಒದಗಿಸಲಾಗಿರುವ ಹಣಕಾಸಿನ ಮಾಹಿತಿ ನೀಡಿದ್ದಾರೆ.
ತುಮಕೂರು – ಚಿತ್ರದುರ್ಗ – ದಾವಣಗೆರೆ ಹೊಸ ಮಾರ್ಗ
ತುಮಕೂರು – ಚಿತ್ರದುರ್ಗ – ದಾವಣಗೆರೆ ಹೊಸ ಮಾರ್ಗ ಯೋಜನೆ (182 ಕಿ.ಮೀ) 50:50 ವೆಚ್ಚ ಹಂಚಿಕೆ ಆಧಾರದ ಮೇಲೆ ಮಂಜೂರಾಗಿದೆ. ಕರ್ನಾಟಕ ಸರ್ಕಾರವು ಉಚಿತವಾಗಿ ಭೂಮಿಯನ್ನು ಒದಗಿಸಲಿದ್ದು, ಒಟ್ಟು ಅಗತ್ಯವಿರುವ 998 ಹೆಕ್ಟೇರ್ ಭೂಮಿಯಲ್ಲಿ 918 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಉಳಿದ 80 ಹೆಕ್ಟೇರ್ ಭೂಮಿಯನ್ನು ಕರ್ನಾಟಕ ಸರ್ಕಾರ ಹಸ್ತಾಂತರಿಸಬೇಕಿದೆ. ಮಾರ್ಚ್ 2025ರವರೆಗೆ ಈ ಯೋಜನೆಗೆ 2412 ಕೋಟಿ ವೆಚ್ಚ ಮಾಡಲಾಗಿದ್ದು, 2025-26ರ ಹಣಕಾಸು ವರ್ಷಕ್ಕೆ 7,549 ಕೋಟಿ ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಹೊರಡುವ ಹಲವು ರೈಲುಗಳ ಸಂಚಾರ ರದ್ದು
ಹುಬ್ಬಳ್ಳಿ-ಅಂಕೋಲಾ ಹೊಸ ಜೋಡಿ ಮಾರ್ಗ
ಹುಬ್ಬಳ್ಳಿ-ಕಿರವತ್ತಿ (47 ಕಿ.ಮೀ) ವಿಭಾಗದಲ್ಲಿ ಭೂ ಕಾಮಗಾರಿ ಮತ್ತು ಸೇತುವೆ ನಿರ್ಮಾಣ ಪೂರ್ಣಗೊಂಡಿದೆ, ಆದರೆ 570 ಹೆಕ್ಟೇರ್ ಅರಣ್ಯ ಭೂಮಿ ಸಂಬಂಧಿತ ಮೊಕದ್ದಮೆಗಳಿಂದಾಗಿ ಮುಂದಿನ ಕೆಲಸಗಳು ಸ್ಥಗಿತಗೊಂಡಿದ್ದವು. ಆದರೆ ಈಗ ವ್ಯಾಜ್ಯ ಬಗೆಹರಿದಿರುವುದರಿಂದ, ವನ್ಯಜೀವಿಗಳಿಗೆ ಪದೇ ಪದೇ ತೊಂದರೆಯಾಗದಂತೆ ಅರಣ್ಯ ಪ್ರದೇಶದಲ್ಲಿ ಜೋಡಿ ಮಾರ್ಗವನ್ನು ಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ, ಹುಬ್ಬಳ್ಳಿ-ಅಂಕೋಲಾ ಹೊಸ ಜೋಡಿ ಮಾರ್ಗದ (163 ಕಿ.ಮೀ) ಡಿಪಿಆರ್ ಅನ್ನು ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ಸಿದ್ಧಪಡಿಸಲಾಗಿದೆ. ಅಂದಾಜು ಪೂರ್ಣಗೊಳಿಸುವ ವೆಚ್ಚ 118,424 ಕೋಟಿ ಆಗಿದೆ. ಈ ಯೋಜನೆಯಿಂದ ವನ್ಯಜೀವಿಗಳ ಮೇಲಿನ ಪರಿಣಾಮ ತಗ್ಗಿಸಲು ಸುರಂಗಗಳು (57 ಸುರಂಗಗಳು, 46.57 ಕಿಮೀ ಉದ್ದ ಮತ್ತು ವಯಾಡಕ್ಟ್ಗಳ (43 ವಯಾಡಕ್ಟ್ : 13.8 ಕಿಮೀ ಉದ್ದ) ನಿರ್ಮಾಣವನ್ನು ಒಳಗೊಂಡಿದೆ.
ಬೆಳಗಾವಿ ನಿಲ್ದಾಣದಲ್ಲಿ ರೈಲುಗಳನ್ನು ನಿರ್ವಹಿಸುವ ಸಾಮರ್ಥ್ಯ ಹೆಚ್ಚಳ ಮತ್ತು ನಗರ ವ್ಯಾಪ್ತಿಯಲ್ಲಿ ಸರಕು ದಟ್ಟಣೆಯನ್ನು ಕಡಿಮೆ ಮಾಡಲು ಬೆಳಗಾವಿ ಸರಕು ಶೆಡ್ ಪ್ರದೇಶವನ್ನು ಪಿಟ್ ಲೈನ್ , ಹೆಚ್ಚುವರಿ ಪ್ಲಾಟ್‌ಫಾರ್ಮ್ ಇತ್ಯಾದಿಗಳಾಗಿ ಪರಿವರ್ತಿಸಲಾಗಿದೆ. ಪ್ರಸ್ತುತ ಸರಕು ಸಾಗಣೆಯನ್ನು ಬೆಳಗಾವಿ ನಿಲ್ದಾಣದ ಪಕ್ಕದಲ್ಲಿರುವ ಸಾಂಬೆ ನಿಲ್ದಾಣದ ಸರಕು ಶೆಡ್ನಲ್ಲಿ ನಿರ್ವಹಿಸಲಾಗುತ್ತಿದೆ. ಗೋಕಾಕ್ ಪಟ್ಟಣವು ಸುಮಾರು 11 ಕಿ.ಮೀ. ದೂರದಲ್ಲಿರುವ ಗೋಕಾಕ್ ರೋಡ್ ರೈಲು ನಿಲ್ದಾಣದಿಂದ ಸೇವೆ ಪಡೆಯುತ್ತಿದೆ. ಇದಲ್ಲದೆ, ಮೀರಜ್ – ಲೋಂಡಾ ವಿಭಾಗದಲ್ಲಿ ಘಟಪ್ರಭಾ ಮತ್ತು ಗೋಕಾಕ್ ರೋಡ್ ಅಸ್ತಿತ್ವದಲ್ಲಿರುವ ಹತ್ತಿರದ ನಿಲ್ದಾಣಗಳಾಗಿವೆ. ಅಲ್ಲದೆ, ಈ ವಿಭಾಗದಲ್ಲಿ ಸಂಪರ್ಕವನ್ನು ಸುಧಾರಿಸಲು ಪುಣೆ-ಮೀರಜ್ ಲೋಂಡಾ ಜೋಡಿ ಮಾರ್ಗವನ್ನು ಇತ್ತೀಚೆಗೆ ಕಾರ್ಯಾಚರಣೆಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




