ಬದುಕಿರುವ ಮಹಿಳೆಗೆ ಡೆತ್ ಸರ್ಟಿಫಿಕೇಟ್: ಆಸ್ತಿಗಾಗಿ ಬದುಕಿರುವ ವೃದ್ಧೆಯನ್ನೇ ಸಾಯಿಸಿದ್ರು!
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಒಂದುವರೆ ಎಕರೆ ಭೂಮಿ ಲಪಟಾಯಿಸಲು ದೊಡ್ಡ ಗೋಲ್ಮಾಲೇ ನಡೆದಿದೆ. ವೃದ್ಧೆ ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ಸಿದ್ಧಪಡಿಸಿ ಆಸ್ತಿ ಲಪಟಾಯಿಸಿದ ಆರೋಪ ಕೇಳಿಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.

ಹಾಸನ, ಡಿಸೆಂಬರ್ 12: 75 ವರ್ಷದ ವೃದ್ದೆಗೆ (old woman) ಮೂರು ದಶಕಗಳ ಹಿಂದೆ ಸರ್ಕಾರದಿಂದ ದರಖಾಸ್ತು ಯೋಜನೆಯಡಿ ಒಂದುವರೆ ಎಕರೆ ಭೂಮಿ (land) ಮಂಜೂರಾಗಿತ್ತು. ಪತಿ ಬದುಕಿರುವವರೆಗೆ ಕೃಷಿ ಮಾಡಿದ್ದ ಕುಟುಂಬ ಬಳಿಕ ತಮ್ಮ ಭೂಮಿಯನ್ನ ಬೇರೊಬ್ಬರಿಗೆ ಗೇಣಿಗೆ ಕೊಟ್ಟು ಬೇರೆಡೆ ನೆಲೆಸಿದ್ದರು. ನಂಬಿಕಸ್ತ ಮನುಷ್ಯ ನ್ಯಾಯವಾಗಿ ನಡೆದುಕೊಳ್ಳುತ್ತಾರೆ ಎಂದುಕೊಂಡವರಿಗೆ ದಶಕದ ಬಳಿಕ ದೊಡ್ಡ ಶಾಕ್ ಕಾದಿತ್ತು. ಬದುಕಿರುವ ವೃದ್ದೆ ಸಾವನ್ನಪ್ಪಿರುವುದಾಗಿ ಡೆತ್ ಸರ್ಟಿಫಿಕೇಟ್ ಸಿದ್ಧಪಡಿಸಿ ತಾನೇ ಆಕೆಯ ಸಾಕು ಮಗ ಎಂದು ವಂಶ ವೃಕ್ಷವನ್ನು ತಯಾರು ಮಾಡಿ ಬೆಲೆಬಾಳುವ ಭೂಮಿಯನ್ನೇ ಲಪಟಾಯಿಸಿದ ಭೂಪನ ಬಣ್ಣ ಇದೀಗ ಬಯಲಾಗಿದೆ.
ಮೋಸದಾಟ ಬಯಲು
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಚಿಕ್ಕನಾಯಕನಹಳ್ಳಿಯ ವೃದ್ಧೆ ಸಿದ್ದಮ್ಮ (75) ಅವರು ಬದುಕಿದ್ದರು ಕೂಡ ಸರ್ಕಾರಿ ದಾಖಲೆಗಳ ಪ್ರಕಾರ ಬದುಕಿಲ್ಲ. ಇದು ಅಚ್ಚರಿ ಅನ್ನಿಸಿದರು ಸತ್ಯ. ಕಂದಾಯ ಇಲಾಖೆ ಅಧಿಕಾರಿಗಳು ಮಾಡಿರುವ ಎಡವಟ್ಟೋ ಅಥವಾ ಹಣ ಮಾಡಿದ ಕರಾಮತ್ತೋ ಗೊತ್ತಿಲ್ಲ. 2009ರಲ್ಲಿ ಸಿದ್ದಮ್ಮ ಮೃತಪಟ್ಟಂತೆ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ ನಂತರ ಅನ್ಯ ಧರ್ಮದ ವ್ಯಕ್ತಿಯೊಬ್ಬ ಇವರ ಸಾಕು ಮಗ ಎಂದು ವಂಶ ವೃಕ್ಷವನ್ನು ಸಿದ್ಧ ಪಡಿಸಿದ್ದಾರೆ. ಆ ಮೂಲಕ ಸಿದ್ದಮ್ಮನ ಹೆಸರಿನಲ್ಲಿದ್ದ ಒಂದುವರೆ ಎಕರೆ ಭೂಮಿ ಶೇಕ್ ಅಹಮದ್ ಎಂಬಾತನ ಹೆಸರಿಗೆ ಅನಾಯಾಸವಾಗಿ ವರ್ಗಾವಣೆಯಾಗಿ ಆಗಿದೆ. ಗೇಣಿಗೆ ಕೊಟ್ಟಿದ್ದ ಭೂಮಿ ಬಿಡಿಸಿಕೊಳ್ಳಲು ಸಿದ್ದಮ್ಮನ ಮಗ ಲಿಂಗರಾಜು ಬಂದಾಗಲೇ ಇಲ್ಲಿ ನಡೆದಿರುವ ದಾಖಲೆಗಳ ಮೋಸದಾಟ ಬಯಲಾಗಿದೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳಲ್ಲಿ ಕಳ್ಳತನ ಪ್ರಕರಣ: ಬೆಂಗಳೂರಿಗೆ ದೇಶದಲ್ಲೇ ಮೊದಲನೇ ಸ್ಥಾನ!
ಅಂದಹಾಗೆ ಸಿದ್ದಮ್ಮ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮವರು. ಪತಿ ಆಲೂರು ತಾಲ್ಲೂಕಿನ ಗೇಕರವಳ್ಳಿ ಗ್ರಾಮದವರು. ಸಿದ್ದಮ್ಮರ ಪತಿ ಸಿದ್ದಯ್ಯರ ಹೆಸರಿಗೆ 80ರ ದಶಕದಲ್ಲಿ ಒಂದುವರೆ ಎಕರೆ ಭೂಮಿ ಮಂಜುರಾಗಿತ್ತು. ಪತಿ ಬದುಕಿರುವವರೆಗೆ ಕೃಷಿ ಮಾಡಿದ್ದ ಸಿದ್ದಮ್ಮ ಕುಟುಂಬ, ಬಳಿಕ ಮಕ್ಕಳ ಜೊತೆಗೆ ಪತಿ ಊರು ಗೇಕರವಳ್ಳಿಗೆ ಬಂದು ನೆಲೆಸಿದ್ದಾರೆ. ಶೇಕ್ ಅಹ್ಮದ್ ಎಂಬುವವರಿಗೆ ಗೇಣಿಗೆಂದು ಭೂಮಿ ನೀಡಿದ್ದರಂತೆ. ಆದರೆ ಆ ವ್ಯಕ್ತಿ ಭೂಮಿಯಲ್ಲಿ ಬೆಳೆ ಬೆಳೆಯುವುದು ಬಿಟ್ಟು ಬದುಕಿರುವ ವೃದ್ಧೆಯನ್ನ ಸಾಯಿಸಿ ನಕಲಿ ದಾಖಲೆ ಸೃಷ್ಟಿ ಮಾಡಿ ಭೂಮಿ ಲಪಟಾಯಿಸಿರುವ ಆರೋಪ ಕೇಳಿಬಂದಿದೆ. ನನ್ನ ಭೂಮಿ ನನಗೆ ಕೊಡಿಸಿ ಎಂದು ಸಿದ್ದಮ್ಮ ಅಂಗಲಾಚುತ್ತಿದ್ದಾರೆ.
ಸರ್ಕಾರದಿಂದ ಮಂಜೂರಾದ ಭೂಮಿಯನ್ನ ಅದರಲ್ಲೂ ಕೂಡ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬವೊಂದಕ್ಕೆ ಸರ್ಕಾರದಿಂದ ಮಂಜೂರಾತಿಯಾಗುವ ಭೂಮಿಯನ್ನ ಪರಭಾರೆ ಮಾಡುವಂತಿಲ್ಲ. ಅದಕ್ಕೆ ಕಾಲ ಮಿತಿಯಿರುತ್ತದೆ. ಈ ನಿಯಮವನ್ನೂ ಉಲ್ಲಂಘನೆ ಮಾಡಲಾಗಿದೆ. ಹಾಗಾಗಿಯೇ ಸಿದ್ದಮ್ಮನ ಹೆಸರಿನಲ್ಲಿ ಒಂದು ವಿಲ್ ಮಾಡಿದಂತೆ ದಾಖಲೆ ಸೃಷ್ಟಿಸಿ, ವಿಲ್ ಆದ ಒಂದೇ ವರ್ಷಕ್ಕೆ ಮಹಿಳೆ ಸತ್ತಂತೆ ಡೆತ್ ಸರ್ಟಿಫಿಕೇಟ್ ಸಿದ್ಧ ಮಾಡಿ ಬಳಿಕ ಮುಸ್ಲಿಂ ಸಮುದಾಯದ ವ್ಯಕ್ತಿಯನ್ನ ಆಕೆಯ ದತ್ತು ಮಗ ಎಂದು ವಂಶ ವೃಕ್ಷ ಸಿದ್ದಪಡಿಸಿ ಸಿದ್ದಮ್ಮನ ಪತಿಯಿಂದ ಪೌತಿಯಾಗಿ ಖಾತೆಯಾಗಿದ್ದ ಭೂಮಿಯನ್ನ ಶೇಕ್ ಅಹ್ಮದ್ ಹೆಸರಿಗೆ ಪೌತಿ ಖಾತೆಯಾದಂತೆ ಎಲ್ಲವೂ ನಿಯಮಗಳ ಪ್ರಕಾರವೇ ಮಾಡಲಾಗಿದೆ.
ತೀರ್ಪು ನೀಡಿ ವರ್ಷಗಳೇ ಕಳೆದರೂ ಬದಲಾವಣೆಯಾಗದ ಖಾತೆ
ದಶಕದಗಳ ಬಳಿಕ ನಮ್ಮ ಜಮೀನಿನಲ್ಲಿ ನಾವೇ ಕೃಷಿ ಮಾಡುತ್ತೇವೆ, ಬಿಟ್ಟುಕೊಡಿ ಎಂದು ಸಿದ್ದಮ್ಮ ಮಗ ಲಿಂಗರಾಜು ಕೇಳಲು ಹೋದಾಗ, ಇಲ್ಲ ಈ ಭೂಮಿಯೇ ನಮ್ಮದು ಎಂದು ಶೇಖ್ ಆಹ್ಮದ್ ಕ್ಯಾತೆ ತೆಗೆದಿದ್ದಾರಂತೆ. ಆಗಿನಿಂದ ಎಸಿ ಕೋರ್ಟ್, ಡಿಸಿ ಕೋರ್ಟ್ನಲ್ಲಿ ಕಾನೂನು ಹೋರಾಟ ಮಾಡಿ ಮೂಲ ಖಾತೆದಾರರಿಗೆ ಭೂಮಿಯ ಹಕ್ಕು ಸ್ಥಾಪನೆ ಆಗಬೇಕು ಎಂದು ತೀರ್ಪು ನೀಡಿ ವರ್ಷಗಳೇ ಕಳೆದಿವೆ. ಆದರೂ ಖಾತೆ ಬದಲಾವಣೆ ಆಗಿಲ್ಲ. ಭೂಮಿಯನ್ನ ಸ್ವಾಧೀನಕ್ಕೆ ಕೊಡಿಸಿ ಎಂದರೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಿದ್ದಮ್ಮರ ಪುತ್ರ ಲಿಂಗರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಹೆಸರಿಗೆ ಬ್ರ್ಯಾಂಡ್ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!: ಉತ್ತರಹಳ್ಳಿಯಲ್ಲಿ ಇದೆಂಥಾ ಸ್ಥಿತಿ?
ಸಿದ್ದಮ್ಮ ಕುಟುಂಬಸ್ಥರು ಜಮೀನಿನ ಬಳಿ ಹೋದರೆ ಗಲಾಟೆ ಮಾಡುತ್ತಾರೆ. ಪೊಲೀಸರು ಕೂಡ ನಮಗೆ ರಕ್ಷಣೆ ಕೊಡ್ತಿಲ್ಲ, ಹೀಗಾದರೆ ನಮಗೆ ನ್ಯಾಯ ಕೊಡಿಸುವವರು ಯಾರು, ನಕಲಿ ದಾಖಲೆ ಸೃಷ್ಟಿ ಮಾಡಿ, ಬದುಕಿರುವ ವೃದ್ಧೆಯನ್ನ ಸಾಯಿಸಿ ಗೋಲ್ಮಾಲ್ ಮಾಡಿರುವವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಅವರು ಆಗ್ರಹಿಸಿದ್ಧಾರೆ.
ಯಾರದ್ದೋ ಭೂಮಿಯನ್ನ ನಕಲಿ ದಾಖಲೆ ಸೃಷ್ಟಿಸಿ ಇನ್ಯಾರದೋ ಹೆಸರಿಗೆ ಖಾತೆ ಮಾಡಿ ಮಹಾಮೋಸ ಮಾಡಿರುವ ಅಧಿಕಾರಿಗಳು ಬಡ ಕುಟುಂಬವೊಂದಕ್ಕೆ ಅನ್ಯಾಯ ಮಾಡಿರುವ ಆರೋಪ ಕೇಳಿ ಬಂದಿದೆ. ಕೋರ್ಟ್ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಸಿಕ್ಕಿದೆ, ಆದರೆ ಭೂಮಿ ಹಕ್ಕು ಮರು ಸ್ಥಾಪಿಸಬೇಕಾದ ಅಧಿಕಾರಿಗಳು ಮಾತ್ರ ಕಾನೂನು ನಿಯಮ, ನೀತಿ ಅಂತಾ ಕಾಲಹರಣ ಮಾಡುತ್ತಿರುವುದು ನಿಜಕ್ಕೂ ದುರಂತ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ.



