AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಾನತ್ತಾದ ಅಧಿಕಾರಿ ಕ್ಷಮೆಯಾಚನೆ, ಹಿಂಬಡ್ತಿ ನೀಡಿ ಸಸ್ಪೆಂಡ್ ರದ್ದಿಗೆ ಈಶ್ವರ್ ಖಂಡ್ರೆ ಶಿಫಾರಸು

ಎಚ್ಎಂಟಿ ವಶದಲ್ಲಿನ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಹಾಗೂ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದು ಐ.ಎಫ್.ಎಸ್. ಅಧಿಕಾರಿ ಆರ್. ಗೋಕುಲ್ ಅಮಾನತುಗೊಂಡಿದ್ದರು. ಆದ್ರೆ, ಇದೀಗ ತಮ್ಮ ತಪ್ಪು ಒಪ್ಪಿಕೊಳ್ಳುವುದರ ಜೊತೆಗೆ ಕ್ಷಮೆಯಾಚಿಸಿದ್ದಾರೆ. ಇದರಿಂದ ಗೋಕುಲ್ ಅವರ ಅಮಾನತು ಆದೇಶ ರದ್ದು ಮಾಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಶಿಫಾರಸು ಮಾಡಿದ್ದಾರೆ.

ಅಮಾನತ್ತಾದ ಅಧಿಕಾರಿ ಕ್ಷಮೆಯಾಚನೆ, ಹಿಂಬಡ್ತಿ ನೀಡಿ ಸಸ್ಪೆಂಡ್ ರದ್ದಿಗೆ ಈಶ್ವರ್ ಖಂಡ್ರೆ ಶಿಫಾರಸು
Eshwar Khandre
ರಮೇಶ್ ಬಿ. ಜವಳಗೇರಾ
|

Updated on: Jul 18, 2025 | 10:53 PM

Share

ಬೀದರ್, (ಜುಲೈ 18): ಎಚ್ಎಂಟಿ (HMT) ವಶದಲ್ಲಿನ ಅರಣ್ಯ ಭೂಮಿಯ ಡಿನೋಟಿಫಿಕೇಷನ್ ಹಾಗೂ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದು ಅಮಾನತುಗೊಂಡಿರುವ ಐ.ಎಫ್.ಎಸ್. ಅಧಿಕಾರಿ ಆರ್. ಗೋಕುಲ್ ತಪ್ಪೊಪ್ಪಿಕೊಂಡು ಬೇಷರತ್ ಕ್ಷಮೆ ಕೋರಿದ್ದಾರೆ. ಹೀಗಾಗು ಅವರಿಗೆ ಸಿಸಿಎಫ್ ಹುದ್ದೆಗೆ ಹಿಂಬಡ್ತಿ ನೀಡಿ ಅಮಾನತು ರದ್ದುಪಡಿಸಲು ಶಿಫಾರಸು ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ತಿಳಿಸಿದ್ದಾರೆ.

ಆರ್. ಗೋಕುಲ್ ಅಮಾನತು ಅಧಿಕೃತಗೊಳಿಸಲು ಕೇಂದ್ರ ಹವಾಮಾನ ಮತ್ತು ಪರಿಸರ ಸಚಿವಾಲಯ ಒಪ್ಪದೆ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದು ತಮ್ಮ ಗಮನಕ್ಕೆ ಬಂದಿರಲಿಲ್ಲ. ಆದರೆ ಅಮಾನತು ಮಾಡಿದ 15 ದಿನಗಳ ಒಳಗಾಗಿ ಸವಿವರವಾದ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಲ್ಲ ಎಂಬ ತಾಂತ್ರಿಕ ಕಾರಣದ ಮೇಲೆ ಅಮಾನತು ಅಧಿಕೃತಗೊಳಿಸಲು ಈ ಹಂತದಲ್ಲಿ ಪರಿಗಣಿಸಲು ಬರುವುದಿಲ್ಲ ಎಂದು ಕೇಂದ್ರ ಹವಾಮಾನ ಮತ್ತು ಪರಿಸರ ಸಚಿವಾಲಯ ಹೇಳಿದೆ ಎಂದು ಈಗ ತಿಳಿದುಬಂದಿದೆ ಎಂದರು.

ಇದನ್ನೂ ಓದಿ: ಚಾಮರಾಜನಗರ ಹುಲಿ ಹತ್ಯೆ ಪ್ರಕರಣ: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ರಾಜ್ಯ ಸರ್ಕಾರ

ಸಿಸಿಎಫ್ ಹಿಂಬಡ್ತಿಗೆ ಶಿಫಾರಸು

ಈ ಮಧ್ಯೆ ಆರ್. ಗೋಕುಲ್ ಸುಪ್ರೀಂಕೋರ್ಟ್ ನಲ್ಲಿ ಮಧ್ಯಪ್ರವೇಶಿಸಿ ಅರ್ಜಿ ಹಾಕಿರುವ ಮತ್ತು ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದಿರುವ ತಮ್ಮ ತಪ್ಪು ಒಪ್ಪಿಕೊಂಡು ಬೇಷರತ್ ಕ್ಷಮೆ ಕೋರಿ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಮಾನತು ರದ್ದುಪಡಿಸುವಂತೆ ಮುಖ್ಯ ಕಾರ್ಯದರ್ಶಿಯವರು ಶಿಫಾರಸು ಮಾಡಿದ್ದಾರೆ, ಗೋಕುಲ್ ಮಾಡಿರುವ ಸರಣಿ ತಪ್ಪು-ಒಪ್ಪುಗಳ ಹಿನ್ನೆಲೆಯಲ್ಲಿ ಹಾಲಿ ಎಪಿಸಿಸಿಎಫ್ ಆಗಿರುವ ಅವರಿಗೆ ಸಿಸಿಎಫ್ ಆಗಿ ಹಿಂಬಡ್ತಿ ನೀಡಿ, ಅಮಾನತು ರದ್ದುಪಡಿಸುವ ಬಗ್ಗೆ ಕ್ರಮವಹಿಸುವಂತೆ ತಾವು ಶಿಫಾರಸು ಮಾಡಿರುವುದಾಗಿ ತಿಳಿಸಿದರು.

ಎಚ್ಎಂಟಿ ವಶದಲ್ಲಿರುವ 14,300 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ 7 ಕೋಟಿ ಕನ್ನಡಿಗರ ಆಸ್ತಿಯಾಗಿದೆ. ಅದನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಇನ್ನೂ ಅಲ್ಲಿ 280 ಎಕರೆ ಭೂಮಿ ಅರಣ್ಯ ಸ್ವರೂಪದಲ್ಲೇ ಇದೆ. ಆದರೆ ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಗೋಕುಲ್ ಸುಪ್ರೀಂಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದಾರೆ, ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಪೀಠ ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.