ಸ್ವಚ್ಛಗಾಳಿ ಯೋಜನೆಯನ್ನು ರಾಜ್ಯದ ಯಾವ ನಗರಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಗೊತ್ತೇ?
ಸಚಿವ ಕೋಟ ಶ್ರೀನಿವಾಸ ಪೂಜಾರಿ ನೀಡಿದ ಉತ್ತರಕ್ಕೆ ಕಾಂಗ್ರೆಸ್ ಸದಸ್ಯ ಕೊಂಡಯ್ಯ ಆಕ್ಷೇಪ ವ್ಯಕ್ತಪಡಿಸಿ, ಹಣ ಖರ್ಚು ಮಾಡಿರುವ ಬಗ್ಗೆ ಸಚಿವರು ಉತ್ತರ ನೀಡಿದ್ದಾರೆ. ಆದರೆ ಕೆಲಸ ಮಾಡಿರುವ ಒಂದೇ ಒಂದು ವಿಡಿಯೋ ಇಲ್ಲ ಎಂದು ಟೀಕಿಸಿದರು
ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಸ್ವಚ್ಛಗಾಳಿ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವ ನಗರಗಳನ್ನು ಗುರುತಿಸಲಾಗಿದೆ ಎಂದು ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಕೆ.ಸಿ.ಕೊಂಡಯ್ಯ ಪ್ರಶ್ನೆ ಎತ್ತಿದರು. ಈ ಪ್ರಶ್ನೆಗೆ ಉತ್ತರಿಸಬೇಕಾಗಿದ್ದ ಪರಿಸರ ಖಾತೆ ಸಚಿವ ಸಚಿವ ಆನಂದ್ ಸಿಂಗ್ ಪರವಾಗಿ ಉತ್ತರಿಸಿದ ಮುಜರಾಯಿ ಇಲಾಖೆ ಸಚಿವ ಶ್ರೀನಿವಾಸ ಪೂಜಾರಿ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ದಾವಣಗೆರೆ ನಗರಗಳನ್ನು ಸ್ವಚ್ಛಗಾಳಿ ಯೋಜನೆಗಾಗಿ ಗುರುತಿಸಿರುವುದಾಗಿ ತಿಳಿಸಿದರು. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ₹7.82 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅದರಲ್ಲಿ 2 ಕೋಟಿ 68 ಲಕ್ಷ ಹಣವನ್ನು ಖರ್ಚು ಮಾಡಲಾಗಿದೆ. ವಾಯುಮಾಲಿನ್ಯ ಕಡಿಮೆ ಮಾಡುವುದು, ಧೂಳು ರಹಿತ ರಸ್ತೆಗಾಗಿ ನೀರು ಸಂಪಡಣೆ ಮಾಡುವುದು ಮೊದಲಾದ ಕೆಲಸಗಳನ್ನು ಈ ಯೋಜನೆಯಡಿ ನಡೆಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಆದರೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರಕ್ಕೆ ಕಾಂಗ್ರೆಸ್ ಸದಸ್ಯ ಕೊಂಡಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಹಣ ಖರ್ಚು ಮಾಡಿರುವ ಬಗ್ಗೆ ಸಚಿವರು ಉತ್ತರ ನೀಡಿದ್ದಾರೆ. ಆದರೆ ಕೆಲಸ ಮಾಡಿರುವ ಒಂದೇ ಒಂದು ವಿಡಿಯೋ ಇಲ್ಲ. ಈ ಬಗ್ಗೆ ಚರ್ಚೆಗೆ ಅರ್ಧ ಗಂಟೆ ಸಮಯ ನೀಡಬೇಕು ಎಂದು ಅವರು ಆಗ್ರಹಿಸಿದರು.
ಜೋಯಿಡಾ ತಾಲೂಕಿನಲ್ಲಿ ಶಾಲಾ ಕಟ್ಟಡಗಳು ಹಳೆಯದಾಗಿವೆ. ಈ ಶಾಲಾ ಕಟ್ಟಡಗಳಿಂದ ಮಕ್ಕಳಿಗೆ ಅಪಾಯ ಎದುರಾಗಬಹುದು ಎಂದು ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಶ್ರೀಕಾಂತ ಲಕ್ಷ್ಮಣ ಪ್ರಸ್ತಾಪಿಸಿದರು. ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಜೋಯಿಡಾ ಭಾಗದಲ್ಲಿ 42 ಶಾಲೆ ದುರಸ್ತಿ ಮಾಡಬೇಕಾಗಿದೆ. ಮಳೆ ಹೆಚ್ಚಾಗಿರುವ ಕಾರಣ ಸದ್ಯಕ್ಕೆ ದುರಸ್ತಿ ಕಾರ್ಯ ವಿಳಂಬವಾಗಿದೆ. ಈ ಬಗ್ಗೆ ಶೀಘ್ರವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ:
ವಿಧಾನಸೌಧದೊಳಗೆ ಎತ್ತಿನಗಾಡಿ ಬಿಟ್ಟರೆ ಏನಾಗುತ್ತೆ, ಆಕಾಶ ಬಿದ್ದು ಹೋಗುತ್ತಾ; ಸಿದ್ದರಾಮಯ್ಯ ಕಿಡಿ
(Minister Kota Srinivas Poojari says Hubballi Dharwad Davangere and Kalaburagi cities are selected for National Clean Air Programme)