ಕಾರವಾರ: ಕರ್ನಾಟಕ (Karnataka)ಕ್ಕೆ ಬಿಜೆಪಿಯ ದಿಗ್ಗಜರುಗಳು ಆಗಮಿಸುತ್ತಿದ್ದು, ಮೇ ತಿಂಗಳಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಆಗಮಿಸಿದರೆ ಜೂನ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಮಿಸುತ್ತಿದ್ದಾರೆ. ಮೇ. 26ರಂದು ರಾಜ್ಯಕ್ಕೆ ರಾಜನಾಥ್ ಸಿಂಗ್ ಅವರು ಆಗಮಿಸಲಿದ್ದು, ಎರಡು ದಿನ ಜಲಾಂತರ್ಗಾಮಿ ಸಮುದ್ರಯಾನ (Navigation)ದಲ್ಲಿ ಭಾಗಿಯಾಗಲಿದ್ದಾರೆ.
ರಕ್ಷಣಾ ಸಚಿವರು ರಾಜ್ಯಕ್ಕೆ ಭೇಟಿ ನೀಡುವ ಬಗ್ಗೆ ನೌಕಾನೆಲೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜ್ಯಕ್ಕೆ ಆಗಮಿಸಿದ ದಿನ (ಮೇ 26)ದಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನೌಕಾನೆಲೆಗೆ ಭೇಟಿ ನೀಡಲಿದ್ದಾರೆ. ಕಾರವಾರದ ಅರಗಾ ಬಳಿ ಕದಂಬ ನೌಕಾನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಐಎನ್‌ಎಸ್ ವಿಕ್ರಮಾದಿತ್ಯ ನೌಕಾಯಾನದಲ್ಲಿ ಭಾಗಿಯಾಗಲಿರುವ ರಕ್ಷಣಾ ಸಚಿವರು, ಮೇ 27ರಂದು ಮಧ್ಯಾಹ್ನ 2 ಗಂಟೆಗೆ ನೌಕಾನೆಲೆಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ: 8 Years Of Modi Government: ಆರೋಗ್ಯ ವರ್ಧನೆಗೆ ಮೋದಿ ಬಿಟ್ಟ ಇಂದ್ರಧನುಷ್ ಎಂಬ ಬಾಣದ ಸುತ್ತ
ಜೂ.21ಕ್ಕೆ ನಮೋ ಮೈಸೂರಿಗೆ
ಮೈಸೂರು: ಯೋಗ ದಿನಾಚರಣೆಯಲ್ಲಿ ಪ್ರಧಾನಿ ಭಾಗವಹಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕುಟುಂಬ ಸಮೇತರಾಗಿ ಪ್ರಧಾನಿಯನ್ನು ಭೇಟಿಯಾಗಿ ಆಹ್ವಾನ ನೀಡಿದ್ದರು. ಅದರಂತೆ ಜೂನ್ 21ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಲಿದ್ದು, ಈ ಬಗ್ಗೆ ಪ್ರಧಾನಿ ಕಾರ್ಯಾಲಯ ದೃಢಪಡಿಸಿದೆ. ಅಲ್ಲದೆ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ಗೆ ಪತ್ರ ಬರೆಯಲಾಗಿದೆ.
ನಗರದ ರೇಸ್ ಕೋರ್ಸ್ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಆಯುಷ್ ಸಚಿವಾಲಯವು ಭರ್ಜರಿ ಸಿದ್ಧತೆ ನಡೆಸುತ್ತಿದೆ. ವಿಜಯನಗರದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇಗುಲದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮದ ಕುರಿತು ಪೋಸ್ಟರ್ ಬಿಡುಗಡೆ ಮಾಡಿದೆ. 2017ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದ ಮೈಸೂರು, ಮತ್ತೆ ಗಿನ್ನೆಸ್ ದಾಖಲೆ ಸೇರಲು ಸಾಂಸ್ಕೃತಿಕ ನಗರಿಯಲ್ಲಿ ಸಿದ್ಧತೆ ನಡೆದಿದೆ. ಈ ಬಾರಿ 2 ಲಕ್ಷ ಯೋಗಪಟುಗಳನ್ನು ಸೇರಿಸುವ ಆಶಯವನ್ನು ಹೊಂದಿದೆ.
ಇದನ್ನೂ ಓದಿ: ಮಕ್ಕಳ ಅಕ್ರಮ ಸಾಗಾಟ ಪ್ರಕರಣ: ಆರೋಪಿ ಸ್ಟಾಪ್ ನರ್ಸ್ ಅರೆಸ್ಟ್, ಇಂದು ಮತ್ತೊಂದು ಮಗುವಿನ ರಕ್ಷಣೆ
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Wed, 25 May 22