ಬೆಂಗಳೂರು: ಭೂ ಸುಧಾರಣಾ ಕಾಯ್ದೆ ಬಗ್ಗೆ ವಿರೋಧ ಪಕ್ಷಗಳು ಆಡಳಿತ ಪಕ್ಷದ ಮೇಲೆ ಟೀಕಾ ಪ್ರಹಾರ ಮಾಡುತ್ತಿದ್ದು, ಇಂದು ಆಡಳಿತ ಪಕ್ಷದ ಕಂದಾಯ ಸಚಿವ ಆರ್ ಅಶೋಕ್ ಪ್ರತಿಪಕ್ಷಗಳಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಗೆ ಸಾಲುಸಾಲು ಪ್ರಶ್ನೆಗಳನ್ನು ಮುಂದಿಟ್ಟಿರುವ ಸಚಿವ ಆರ್ ಅಶೋಕ್ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಬಗ್ಗೆ ನಿಮ್ಮ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಏಕೆ ಮಾತನಾಡುತ್ತಿಲ್ಲ. ಮೊದಲು ನಿಮ್ಮ ಪಕ್ಷದವರನ್ನು ಸರಿ ದಾರಿಗೆ ತನ್ನಿ ನಂತರ ಆಡಳಿತ ಪಕ್ಷದ ಬಗ್ಗೆ ಮಾತನಾಡಿ ಎಂದು ಗದರಿದ್ದಾರೆ.
ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ನಾನು ಮಂಚೂಣಿ, ನೀನು ಮುಂಚೂಣಿ ಎನ್ನುವ ವಾರ್ ನಡೆಯುತ್ತಿದೆ. ಒಂದೊಮ್ಮೆ ವಿರೋಧ ಪಕ್ಷದ ನಾಯಕರು ಮುಂಚೂಣಿಯಲ್ಲಿದ್ದಾರೆ. ಇನ್ನೊಮ್ಮೆ ಕೆಪಿಸಿಸಿ ಅಧ್ಯಕ್ಷ ಮುಂಚೂಣಿಗೆ ಬರುತ್ತಾರೆ. ಹೀಗಾಗಿ ನಿಮ್ಮಲ್ಲಿ ನಾಯಕರು ಯಾರೆಂಬುದೇ ಜನರಿಗೆ ಅರ್ಥವಾಗುತ್ತಿಲ್ಲ ಎಂದು ಅಶೋಕ್ ಕಿಚಾಯಿಸಿದರು.
ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪನವರೇ ನಮ್ಮ ಪ್ರಶ್ನಾತೀತ ನಾಯಕರು. ಹೀಗಾಗಿ ಕಾಂಗ್ರೆಸ್ನವರು ಸಿದ್ದರಾಮಯ್ಯನವರೇ ನಮ್ಮ ನಾಯಕರೆಂದು ಹೇಳಲಿ ನೋಡೋಣವೆಂದು ಪ್ರಶ್ನಿಸಿದ್ದಾರೆ. ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರೇ ಒಂದು ತೀರವಾದರೆ, ಡಿಕೆ ಶಿವಕುಮಾರ್ ಅವರೇ ಮತ್ತೊಂದು ತೀರವಾಗಿದ್ದಾರೆ. ಹೀಗಾಗಿ ಮೊದಲು ಅವರಿಬ್ಬರು ಒಂದು ತೀರ ವಾಗಲಿ. ಅನಂತರ, ಇದರ ಬಗ್ಗೆ ಮಾತನಾಡುವ ಎಂದು ಆರ್ ಅಶೋಕ್ ಸ್ವಲ್ಪ ಖಾರವಾಗಿಯೇ ಪ್ರತಿಪಕ್ಷಗಳಿಗೆ ಉತ್ತರಿಸಿದ್ದಾರೆ.