ರಂಜಾನ್ ನಂತರ ಮೂರು ತಿಂಗಳಿಗೆ ಬರುವ ಬಕ್ರೀದ್ ಹಬ್ಬವನ್ನು ಆಚರಿಸಲು ಮುಸ್ಲಿಂ ಬಾಂಧವರು ಭರದ ಸಿದ್ಧತೆಗಳನ್ನು ನಡೆಸಿರುವರಾದರೂ ಕೊರೊನ ಸೋಂಕಿನ ಭೀತಿ ಅವರ ಉತ್ಸಾಹವನ್ನು ಕೊಂಚ ತಗ್ಗಿಸಿದೆ. ಈದ್-ಉಲ್-ಅದಾ ಎಂದೂ ಕರೆಯಲ್ಪಡುವ ಬಕ್ರೀದ್ ಹಬ್ಬವನ್ನು ಆಗಸ್ಟ್ ಒಂದರಂದು ವಿಶ್ವದಾದ್ಯಂತ ಆಚರಿಸಲಾಗುವುದು.
ಪ್ರವಾದಿ ಇಬ್ರಾಹಿಂ ದೇವರಿಗೆ ತನ್ನ ಸ್ವಂತ ಮಗನನ್ನೇ ಬಲಿಕೊಡಲು ಮುಂದಾಗಿದ್ದು ಇಸ್ಲಾಂ ಧರ್ಮದ ಒಂದು ಪ್ರಮುಖ ಭಾಗವಾಗಿದೆ. ಅವರ ವಿಧೇಯತೆ ಮತ್ತು ಅಲ್ಲಾಹು ಕಡೆಗಿನ ಭಕ್ತಿಯನ್ನು ಸ್ಮರಿಸುವ ಪ್ರತೀಕವಾಗಿ ಇಸ್ಲಾಂ ಅನುಯಾಯಿಗಳು ಈ ಹಬ್ಬವನ್ನು ಕುರಿ, ಮೇಕೆ, ಹಸು, ದನ ಮತ್ತು ಒಂಟೆಯನ್ನು ಬಲಿ ಕೊಡುವ ಮೂಲಕ ಆಚರಿಸುತ್ತಾರೆ.ಇಸ್ಲಾಂ ಧರ್ಮದ ಪ್ರಕಾರ ಬಕ್ರೀದ್ ರಂಜಾನ್ನಷ್ಟೇ ಅಥವಾ ಅದಕ್ಕಿಂತಲೂ ಪವಿತ್ರವಾದದ್ದು. ರಂಜಾನ್ನಂತೆ ಈ ಹಬ್ಬದಂದು ಸಹ ಮುಸ್ಲಿಮರು ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ.
ಆದರೆ, ಕೊರೊನಾ ಪೀಡೆ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದನ್ನು ನಿರ್ಬಂಧಿಸಲಾಗಿದೆ. ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿ ಎ ಬಿ ಇಬ್ರಾಹಿಂ ಅವರು ಈ ಕುರಿತು ಆದೇಶವೊಂದನ್ನು ಹೊರಡಿಸಿದ್ದು, ಈದ್ಗಾ ಮೈದಾನವಲ್ಲದೆ, ಸಮುದಾಯ ಭವನ, ಶಾದಿ ಮಹಲ್ ಹಾಗೂ ಇತರ ಬಯಲು ಪ್ರದೇಶಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಜನ ಸೇರಬಾರದೆಂದು ತಿಳಿಸಿದ್ದಾರೆ.
ಸಮಾಧಾನಕರ ಅಂಶವೆಂದರೆ, ಹಬ್ಬದಂದು ಮುಸ್ಲಿಂ ಸಮುದಾಯದವರು ಮಸೀದಿಗಳಲ್ಲಿ ನಮಾಜ್ ಮಾಡಬಹುದು, ಆದರೆ ಒಂದೇ ಸಮಯದಲ್ಲಿ 50ಕ್ಕಿಂತ ಜಾಸ್ತಿ ಜನ ಸೇರುವಂತಿಲ್ಲ. ಪಂಗಡಗಳಲ್ಲಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ.
ಹಬ್ಬದ ವಾತಾವರಣ ರಾಜ್ಯದಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಈಗಾಗಲೇ ಸೃಷ್ಟಿಯಾಗಿದೆ. ಕುರಿ ಮತ್ತು ಮೇಕೆಗಳ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಮುಸ್ಲಿಂ ಜನಾಂಗದವರು ಕುರಿ ಮತ್ತು ಅವುಗಳ ಆಹಾರಕ್ಕೆಂದು ಮೇವು ಹಾಗೂ ಕಾಳುಗಳ ಖರೀದಿಯಲ್ಲಿ ವ್ಯಸ್ತರಾಗಿದ್ದಾರೆ.