ಉಡುಪಿ: ಕೊರೊನಾದಂಥ ಸಂಕಷ್ಟದ ಸಮಯದಲ್ಲೂ ಅಂಜದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಉಡುಪಿಯ ಆಶಾ ಕಾರ್ಯಕರ್ತೆ ಶ್ರೀಮತಿ ರಾಜೀವಿ ಅವರ ಸೇವೆಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಆಶಾ ಕಾರ್ಯಕರ್ತೆ ಶ್ರೀಮತಿ ರಾಜೀವಿ ಗ್ರಾಮ ಸೇವೆ ಜೊತೆಗೆ ಉಪಜೀವನಕ್ಕಾಗಿ ಆಟೋವನ್ನು ಕೂಡಾ ಚಲಾಯಿಸುತ್ತಾರೆ. ಇತ್ತೀಚೆಗೆ ಅವರು ಬೆಳಗಿನ ಜಾವ 3 ಗಂಟೆ ಸಮಯದಲ್ಲಿಯೂ ಅಂಜದೇ ಸಂಕಷ್ಟದಲ್ಲಿದ್ದ ಗರ್ಭಿಣಿ ಮಹಿಳೆಯನ್ನ ತಮ್ಮ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಕೊರೊನಾದಂಥ ಸಮಯದಲ್ಲೂ ಆಕೆ ಅಂಜಿರಲಿಲ್ಲ. ಇದು ಈಗ ಉಪರಾಷ್ಟ್ರಪತಿಗಳ ಗಮನಕ್ಕೆ ಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆಶಾ ಕಾರ್ಯಕರ್ತೆ ಶ್ರೀಮತಿ ರಾಜೀವಿ ಅವರ ಉದಾತ್ತ ಕಾರ್ಯವನ್ನು ಶ್ಲಾಘಿಸುತ್ತೇನೆ. ತಮ್ಮ ಬಿಡುವಿನ ವೇಳೆಯಲ್ಲಿ ಆಟೋ ಚಲಾಯಿಸುವ ಶ್ರೀಮತಿ ರಾಜೀವಿ ಅವರು ಗರ್ಭಿಣಿಯರಿಗೆ ಉಚಿತ ಸವಾರಿಯ ಸೇವೆ ಒದಗಿಸುತ್ತಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ದೇವರು ಆಕೆಗೆ ಮಂಗಳವನ್ನುಂಟು ಮಾಡಲಿ ಎಂದು ಕನ್ನಡದಲ್ಲಿಯೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಮ್ಮ ಬಿಡುವಿನ ವೇಳೆಯಲ್ಲಿ ಆಟೋ ಚಲಾಯಿಸುವ ಶ್ರೀಮತಿ ರಾಜೀವಿ ಅವರು ಗರ್ಭಿಣಿಯರಿಗೆ ಉಚಿತ ಸವಾರಿಯ ಸೇವೆ ಒದಗಿಸುತ್ತಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.ದೇವರು ಆಕೆಗೆ ಮಂಗಳವನ್ನುಂಟು ಮಾಡಲಿ!
— Vice President of India (@VPSecretariat) July 25, 2020