ಹಾಸನ-ಚಿಕ್ಕಮಗಳೂರು ಕಾಡಾನೆ ರಾಜಕೀಯ:ಸಚಿವ ಸ್ಥಾನ ಬಿಟ್ಟುಕೊಡ್ತೇನೆ ಎಂದ ರಾಮಲಿಂಗಾರೆಡ್ಡಿ

ಹಾಸನದಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧದ ಕಿಚ್ಚು ಹೊತ್ತಿಕೊಂಡಿದೆ. ಹೀಗಾಗಿ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಇತ್ತ ಆನೆಗಳ ವಿಚಾರವೇ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಕೊನೆಗೆ ಸಿಎಂ ಡಿಕೆ ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಎಂಟ್ರಿಯಿಂದ ರಾಜೀನಾಮೆ ಪ್ರಹಸನಕ್ಕೆ ತೆರೆ ಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಶಾಸಕರ ನಡೆ ಬಗ್ಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಗರಂ ಆಗಿದ್ದು, ಮಂತ್ರಿ ಸ್ಥಾನ ಬಿಟ್ಟುಕೊಡುವ ಮಾತುಗಳನ್ನಾಡಿದ್ದಾರೆ.

ಹಾಸನ-ಚಿಕ್ಕಮಗಳೂರು ಕಾಡಾನೆ ರಾಜಕೀಯ:ಸಚಿವ ಸ್ಥಾನ ಬಿಟ್ಟುಕೊಡ್ತೇನೆ ಎಂದ ರಾಮಲಿಂಗಾರೆಡ್ಡಿ
Minister Ramalingareddy
Edited By:

Updated on: Nov 25, 2026 | 4:25 PM

ಬೆಂಗಳೂರು, ನವೆಂಬರ್ 25: ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರಕ್ಕೆ ಚಿಕ್ಕಮಗಳೂರಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಮುಖ್ಯವಾಗಿ ಚಿಕ್ಕಮಗಳೂರು ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ, ತಮ್ಮಯ್ಯ ರಾಜೀನಾಮೆ ಮುಂದಾಗಿದ್ದು, ಈ ವೇಳೆ ಕೆಪಿಸಿಸಿ ಅಧ್ತಕ್ಷ ಬಿಕೆ ಹರಿಪ್ರಸಾದ್ ಅವರು ಮಧ್ಯೆ ಪ್ರವೇಶಿಸಿ ತಡೆದಿದ್ದಾರೆ. ಇನ್ನೊಂದೆಡೆ ಶಾಸಕರ ನಡೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಕೆಂಡಾಮಂಡಲರಾಗಿದ್ದು, ಅರಣ್ಯದಲ್ಲೇ ಹುಟ್ಟಿ ಬೆಳೆದವರು ಯಾರಾದ್ರೂ ಇದ್ರೆ ಅವರಿಗೆ ಮಂತ್ರಿ ಸ್ಥಾನ ಬಿಟ್ಟು ಕೊಡುತ್ತೇನೆ. ನಾನು ಬನ್ನೆರುಘಟ್ಟ ಅರಣ್ಯ ಭಾಗದಿಂದ ಬಂದವನು. ನನಗೂ ಅರಣ್ಯದ ಬಗ್ಗೆ ಅರಿವು ಇದೆ ಎಂದು ಸ್ವಪಕ್ಷದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಅರಣ್ಯ ಸಚಿವರಿಗೆ ಕಾಡಿನ ಬಗ್ಗೆ ಗೊತ್ತಿಲ್ಲವೆಂದು H.D.ತಮ್ಮಯ್ಯ ಹೇಳಿದ್ದಾರೆ. ನಮ್ಮದು ಆನೇಕಲ್, ಅಲ್ಲಿ ಬನ್ನೇರುಘಟ್ಟ ಅರಣ್ಯ ಪ್ರದೇಶ ಇದೆ. ಅಲ್ಲಿ ನಮ್ಮ ತೋಟ ಕೂಡ ಇದೆ, ಅಲ್ಲಿಗೆ ಕಾಡಾನೆಗಳು ಕೂಡ ಬರುತ್ತವೆ.ಅರಣ್ಯದಲ್ಲಿ ಹುಟ್ಟಿ, ಅರಣ್ಯದಲ್ಲಿ ಬೆಳೆದವರೇ ಮಂತ್ರಿಯಾದರೆ ಅಭ್ಯಂತರವಿಲ್ಲ.ನಾನು ಅರಣ್ಯ ಇಲಾಖೆ ಬಿಟ್ಟುಕೊಡ್ತೀನಿ. ನಾನು ಅರಣ್ಯ ಖಾತೆಗೆ ಅಂಟಿಕೊಂಡವನಲ್ಲ. ಅರಣ್ಯ ಮಂತ್ರಿಯಾಗಿ ಜನರಿಗೆ ತೊಂದರೆ ಆಗದಂತೆ ಗಮನ ಹರಿಸಿದ್ದೇನೆ. ಇವಾಗ ಆಗುತ್ತಿರುವ ಸಾವು ನೋವು ಕಡಿಮೆ ಆಗಬೇಕೆಂದು ನಮ್ಮ ಗುರಿ ಎಂದು ಸ್ವಪಕ್ಷದ ಶಾಸಕ ತಮ್ಮಯ್ಯಗೆ ಟಾಂಗ್ ಕೊಟ್ಟರು.

Loading...

ಇದನ್ನೂ ಓದಿ: ಕಾಡಾನೆಗಳ ಸ್ಥಳಾಂತರ ವಿವಾದ: ಸರ್ಕಾರದ ಭರವಸೆ ಬೆನ್ನಲ್ಲೇ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಕೈ ಶಾಸಕರು

ಶಾಸಕರು ಸ್ಪೀಕರ್ ಭೇಟಿಯಾಗಿದ್ದಕ್ಕೆ ರಾಮಲಿಂಗಾರೆಡ್ಡಿ ಬೇಸರ

ಶಾಸಕರು ನನಗಿಂತ ಮುಂದೆ ಹೋಗಿ ಸಿಎಂ, ಸ್ಪೀಕರ್ ಭೇಟಿಯಾಗಿದ್ದಾರೆ. ಚಿಕ್ಕಮಗಳೂರು ಭಾಗದ ಶಾಸಕರು ಅವರನ್ನೇ ಕೇಳಲಿ. ಇವಾಗ ಪುಷ್ಕರ್, ಮನೋಜ್ ಜೊತೆ ಅರ್ಧಗಂಟೆ ಮಾತಾಡಿದ್ದೇನೆ. ನಾನು 8 ಬಾರಿ ಶಾಸಕನಾಗಿದ್ದೇನೆ, ನನಗೆ ಅರ್ಥಮಾಡಿಕೊಳ್ಳಲು ಆಗಲ್ವಾ? ಯಾವ ಅಧಿಕಾರಿಯೂ ನನ್ನನ್ನು ದಾರಿ ತಪ್ಪಿಸಿಲ್ಲ. ಇವಾಗ ಏನೇ ನಿರ್ಣಯ ತೆಗೆದುಕೊಂಡ್ರೂ ನಾನೇ ತೆಗೆದುಕೊಂಡಿದ್ದೇನೆ. ನನ್ನ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಶ್ನೆಯೇ ಇಲ್ಲ. ನಾನು ಯಾವಾಗಲಾದ್ರೂ ಭಯಗೊಂಡಿರುವುದನ್ನು ನೋಡಿದ್ದೀರಾ? ನವೆಂಬರ್ 30ರಂದು ಕಾಡನೆ ಸ್ಥಳಾಂತರ ಬಗ್ಗೆ ಸಭೆಯಿದೆ. ಸಭೆಯ ತೀರ್ಮಾನ ನೋಡಿಕೊಂಡು ಆನೆಗಳ ಸ್ಥಳಾಂತರ ಬಗ್ಗೆ ನಿರ್ಧಾರ ಮಾಡುತ್ತೇವೆ. ಅರಣ್ಯ ಇಲಾಖೆಗೆ ಕಾಡು ಪ್ರಾಣಿಗಳು ಮುಖ್ಯ, ಜನರ ಜೀವನವೂ ಮುಖ್ಯ. ಎರಡನ್ನು ಗನದಲ್ಲಿಟ್ಟುಕೊಂಡು ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ. ಬೆಲೂರು ಆನೆ, ಚಿಕ್ಕಮಗಳೂರು ಆನೆ ಅಂತಾ ಇರಲ್ಲ. ಕಾಡು ಇರುವ ಎಲ್ಲಾ ಕಡೆ ಓಡಾಡಿಕೊಂಡು ಇರುತ್ತವೆ. ಈಗ ಆನೆಗಳ ಎಲ್ಲಿ ಇವೆಯೋ ಅಲ್ಲಿ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.

ನವೆಂಬರ್ 30ರ ಸಭೆಯಲ್ಲಿ ತೀರ್ಮಾನ

ಕಾಡಾನೆಗಳು ಎಲ್ಲಿದೆಯೋ ಇವಾಗಲೂ ಅಲ್ಲೇ ಇವೆ.ಇದು ಸಿಎಂ ಗಮನಕ್ಕೆ ಹೋಗಿದೆ. ಅರಣ್ಯ ಇಲಾಖೆಗೆ ನಾನೂ ಹೊಸಬ. ಚಿಕ್ಕಮಗಳೂರಿನಲ್ಲಿ ಸಭೆ ನಡೆಸಿದಾಗ ಅಲ್ಲಿಗೆ ಆ ಶಾಸಕರೂ ಬಂದಿದ್ದರು.ಬೇಲೂರಿಂದ ಚಿಕ್ಕಮಗಳೂರಿಗೆ ಶಿಫ್ಟ್‌ ಮಾಡ್ತಿರುವುದಕ್ಕೆ ಶಾಸಕರು ಸುಮ್ಮನೇ ಇಲ್ಲ. ಇನ್ನೂ ಬಂಡೀಪುರಕ್ಕೆ ಶಿಫ್ಟ್‌ ಮಾಡಿದರೆ ಸುಮ್ಮನೇ ಇರುತ್ತಾರಾ ಎಂದು ಪ್ರಶ್ನಿಸಿದ ರಾಮಲಿಂಗಾರೆಡ್ಡಿ, ಸಿಎಂ ಡಿ.ಕೆ.ಶಿವಕುಮಾರ್‌ ನವೆಂಬರ್ 30ರಂದು ಸಭೆ ಕರೆದಿದ್ದಾರೆ. ಬೇಲೂರು, ಸಕಲೇಶಪುರ, ಶೃಂಗೇರಿ ಅವರಿಗೂ ತೊಂದರೆ ಆಗಬಾರದು. ಕೆಲವೊಂದನ್ನು ಬಹಿರಂಗವಾಗಿ ಹೇಳೋಕೆ ಆಗಲ್ಲ. ಅಧಿಕಾರಿಗಳಿಗೆ ಏನು ಸೂಚನೆ ಕೊಡಬೇಕೋ ಅದನ್ನು ಕೊಟ್ಟಿದ್ದೇನೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:24 pm, Wed, 25 November 26

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us