ಬೆಂಗಳೂರು: ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ವಿಚಾರವಾಗಿ ಉತ್ತರ ಕರ್ನಾಟಕ ಭಾಗದ ಕೆಲವು ಸಚಿವರು ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ. ಹಾಗಾಗಿ, ಕರ್ಫ್ಯೂ ನಿರ್ಧಾರಕ್ಕೆ ಆಂತರಿಕವಾಗಿ ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಜಧಾನಿ ಕೇಂದ್ರಿತ ತೀರ್ಮಾನಗಳು.. ಬೆಂಗಳೂರಿನ ಸಚಿವರ ಮಾತನ್ನೇ ಸಿಎಂ ಬಿ.ಎಸ್.ಯಡಿಯೂರಪ್ಪ ಕೇಳಿದಾಗ ಕೆಲವು ಸಲ ಹೀಗಾಗಿ ಬಿಡುತ್ತದೆ. ರಾಜ್ಯ ರಾಜಧಾನಿ ಕೇಂದ್ರಿತ ತೀರ್ಮಾನಗಳನ್ನು ತೆಗೆದುಕೊಂಡಾಗ ಹೀಗಾಗುತ್ತದೆ. ಹಾಗಾಗಿ, ಬೆಂಗಳೂರು ಕೇಂದ್ರಿತ ತೀರ್ಮಾನಗಳಲ್ಲಿ ನಾವು ಕೂಡ ಹೆಚ್ಚು ತಲೆ ಹಾಕಲು ಸಾಧ್ಯವಾಗಲ್ಲ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರಂತೆ.
ಸಂಪುಟ ಸಭೆ ಇದ್ದಾಗ ಮಾತ್ರ, ನಮ್ಮ ಇಲಾಖೆಗಳ ಕೆಲಸ ಏನಾದರೂ ಇದ್ದರೆ ಸಿಎಂ ಹತ್ತಿರ ಭೇಟಿ ಮಾಡಿ ಮಾತನಾಡುತ್ತೇವೆ. ಬೆಂಗಳೂರಿನಿಂದ ಊರಿಗೆ ಹೋಗುವಾಗ ಸಿಎಂಗೆ ಹೇಳಿ ಬಂದು ಬಿಡುತ್ತೇವೆ. ಆದರೆ, ಬೆಂಗಳೂರಿನ ಸಚಿವರು ಪ್ರತಿದಿನ ಮುಖ್ಯಮಂತ್ರಿಗಳನ್ನು ಭೇಟಿ ಮಾಡ್ತಾರೆ. ಹಾಗಾಗಿ, ಅವರು ಹೇಳಿದ್ದನ್ನೇ ಸಿಎಂ ಹೆಚ್ಚಾಗಿ ಕೇಳಿಬಿಡುತ್ತಾರೆ ಎಂದು ಹಲವು ಉತ್ತರ ಕರ್ನಾಟಕ ಭಾಗದ ಸಚಿವರು ಹೇಳಿದ್ದಾರಂತೆ.
ನಿನ್ನೆ ರಾತ್ರಿ ಕರ್ಫ್ಯೂ ನಿರ್ಧಾರ ತೆಗೆದುಕೊಂಡ ಬಳಿಕ ಅದನ್ನು ಸರ್ಕಾರದ ಕಡೆಯಿಂದ ಸರಿಯಾಗಿ ವಿವರಿಸುವಲ್ಲಿ ನಾವು ಒಂದು ರೀತಿ ವಿಫಲರಾಗಿದ್ದೇವೆ. ಸಿಎಂ ರಾತ್ರಿ ಕರ್ಫ್ಯೂ ಜಾರಿಯ ಉದ್ದೇಶವನ್ನು ಸರಿಯಾಗಿ ವಿವರಿಸಬೇಕಿತ್ತು ಅಥವಾ ಸ್ವತ: ವೈದ್ಯರೇ ಆಗಿರುವ ಸಚಿವ ಸುಧಾಕರ್ ಅವರಿಗಾದರೂ ಸ್ಪಷ್ಟವಾಗಿ ವಿವರಿಸುವಂತೆ ಹೇಳಬೇಕಿತ್ತು ಎಂದು ಹೇಳಿದ್ದಾರಂತೆ. ಹೀಗಾಗಿ, ತರಾತುರಿಯಲ್ಲಿ ನೈಟ್ ಕರ್ಫ್ಯೂ ತೀರ್ಮಾನ ಕೈಗೊಂಡಿದ್ದಕ್ಕೆ ಸಚಿವ ಸಂಪುಟ ಸದಸ್ಯರಲ್ಲಿ ಆಂತರಿಕ ಅತೃಪ್ತಿ ಕಾಣಿಸಿಕೊಂಡಿದೆ.
‘ಸಿಎಂ ವಿವೇಚನೆಯಿಂದ ತೆಗೆದುಕೊಂಡಿರುವ ನಿರ್ಧಾರವಿದು’ ಇತ್ತ, ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ವಿಚಾರವಾಗಿ ಸಮರ್ಥನೆ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಿಎಂ ವಿವೇಚನೆಯಿಂದ ತೆಗೆದುಕೊಂಡಿರುವ ನಿರ್ಧಾರವಿದು. ಕೊವಿಡ್ ನಿಯಂತ್ರಿಸಿದ್ರೂ ತಪ್ಪು, ನಿಯಂತ್ರಿಸದಿದ್ದರೂ ತಪ್ಪು. ಏನು ಮಾಡಿದರೂ ತಪ್ಪು ಎನ್ನುವಂತೆ ಆಡುತ್ತಿದ್ದಾರೆ. ರಾತ್ರಿ ಅನಗತ್ಯ ತಿರುಗಾಟ, ಪಾರ್ಟಿ ತಪ್ಪಿಸೋದು ತಪ್ಪಾ? ಎಂದು ಪ್ರಶ್ನಿಸಿ ರಾತ್ರಿ ಕರ್ಫ್ಯೂ ಬಗ್ಗೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ನೈಟ್ ಕರ್ಫ್ಯೂ: ದೂರದ ಪ್ರಯಾಣಿಕರು ಡೋಂಟ್ ವರಿ ಮಾಡ್ಕೋಬೇಡಿ ಅಂದ್ರು ಬಸವರಾಜ ಬೊಮ್ಮಾಯಿ