ಕೇರಳ ಚುನಾವಣೆ ನಂಟು ಶಂಕೆ: ಪೊಲೀಸ್​ ಸಬ್​ಇನ್ಸ್​ಪೆಕ್ಟರ್​​ ಮೇಲೆ ಗುಂಡಿನ ದಾಳಿ; ಮಂಗಳೂರಿನಲ್ಲಿ ಮೂವರ ಬಂಧನ

| Updated By: ಸಾಧು ಶ್ರೀನಾಥ್​

Updated on: Mar 26, 2021 | 11:07 AM

ಆರೋಪಿಗಳು ಕೇರಳ-ಕರ್ನಾಟಕ ಗಡಿ ಮೂಲಕ ಮಂಗಳೂರನ್ನು ಪ್ರವೇಶ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡ ವಿಟ್ಲ ಪೊಲೀಸರು, ಆರೋಪಿಗಳನ್ನ ಹಿಡಿಯಲು ಗಡಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿದ್ದರು. ಚೆಕ್‌ಪೋಸ್ಟ್‌ ಬಳಿ ಪಿಎಸ್​ಐ ವಿನೋದ್‌ ರೆಡ್ಡಿ ಕಾರು ಅಡ್ಡಹಾಕಿದ್ದು, ಈ ವೇಳೆ ಪೊಲೀಸರತ್ತ ಫೈರಿಂಗ್ ಮಾಡಿದ್ದಾರೆ.

ಕೇರಳ ಚುನಾವಣೆ ನಂಟು ಶಂಕೆ: ಪೊಲೀಸ್​ ಸಬ್​ಇನ್ಸ್​ಪೆಕ್ಟರ್​​ ಮೇಲೆ ಗುಂಡಿನ ದಾಳಿ; ಮಂಗಳೂರಿನಲ್ಲಿ ಮೂವರ ಬಂಧನ
ಆರೋಪಿಗಳು ಪರಾರಿಯಾಗುತ್ತಿದ್ದ ಕಾರಿನ ದೃಶ್ಯ
Follow us on

ದಕ್ಷಿಣ ಕನ್ನಡ: ಪಿಎಸ್‌ಐ ಮೇಲೆ ಗುಂಡಿನ ದಾಳಿ ಮಾಡಲು ಯತ್ನಿಸಿದ ಮೂವರನ್ನ ಪೊಲೀಸರು ಬಂಧಿಸಿದ ಘಟನೆ ರಾಜ್ಯದ ಗಡಿ ಸಾಲೆತ್ತೂರು ಕೊಡಂಗೆ ಬಳಿ ನಡೆದಿದೆ. ಕೇರಳದ ಚೆಕ್​ಪೋಸ್ಟ್​ನಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಕರ್ನಾಟಕದ ಗಡಿಯೊಳಗೆ ಪ್ರವೇಶಿಸುತ್ತಿದ್ದ ಕಾರನ್ನು ಪೊಲೀಸರು ತಡೆದಾಗ ಕಾರಿನಲ್ಲಿದ್ದ ದುಷ್ಕರ್ಮಿಯೊಬ್ಬ ವಿಟ್ಲ ಪೊಲೀಸ್ ಠಾಣೆಯ ಪಿಎಸ್​ಐ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಕಾರಿನಲ್ಲಿ ಪರಾರಿಯಾಗುತ್ತಿದ್ದ ಮೂವರ ತಂಡವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವ್ಯಾಪ್ತಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಕೇರಳ-ಕರ್ನಾಟಕ ಗಡಿ ಮೂಲಕ ಮಂಗಳೂರನ್ನು ಪ್ರವೇಶ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡ ವಿಟ್ಲ ಪೊಲೀಸರು, ಅವರನ್ನ ಹಿಡಿಯಲು ಗಡಿಯಲ್ಲಿ ಚೆಕ್‌ ಪೋಸ್ಟ್ ನಿರ್ಮಿಸಿದ್ದರು. ಚೆಕ್‌ ಪೋಸ್ಟ್‌ ಬಳಿ ಪಿಎಸ್​ಐ ವಿನೋದ್‌ ರೆಡ್ಡಿ ಕಾರು ಅಡ್ಡಹಾಕಿದ್ದು, ಈ ವೇಳೆ ಪೊಲೀಸರತ್ತ ಫೈರಿಂಗ್ ಮಾಡಿದ್ದಾರೆ.

ಈ ಘಟನೆ ವೇಳೆ ವಿಟ್ಲ ಪೊಲೀಸ್ ಠಾಣೆಯ ಎಸ್​ಐ ವಿನೋದ್ ಗಾಯಗೊಂಡಿದ್ದಾರೆ. ಆದರೆ ಗುಂಡು ಹಾರಿಸಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬೆನ್ನಟ್ಟಿದ ಬಳಿಕ ಪೊಲೀಸರು ಕಾರಿನಲ್ಲಿದ್ದ ಸಾಕೀರ್ ಯಾನೆ ಮಹಮ್ಮದ್ ವಾಕೀರ್ (26), ಅಬ್ದುಲ್ ಲತೀಫ್ ಯಾನೆ ಲತ್ತಿ ಯಾನೆ ಲತೀಫ್ (23), ಅಸ್ಪಕ್ (25) ಎಂಬ ಮೂವರು ಬಂಧಿಸಿದ್ದಾರೆ. ಈ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕೇರಳದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಈ ಆರೋಪಿಗಳ ಪರಾರಿ ಯತ್ನದ ಹಿಂದೆ ಚುನಾವಣೆಯ ನಂಟು ಇರುವ ಬಗ್ಗೆ ಹಲವು ಅನುಮಾನಗಳು ಇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ:

Traffic Rules: ವಾಹನಗಳ ನಂಬರ್​ ಪ್ಲೇಟ್​ ಇನ್ಮುಂದೆ ಹೀಗೆ ಇರಬೇಕಂತೆ..ಇಲ್ಲದಿದ್ದರೆ ದಂಡ!; ಫೋಟೋ ಶೇರ್​ ಮಾಡಿದ ಬೆಂಗಳೂರು ಟ್ರಾಫಿಕ್​ ಪೊಲೀಸ್​

ಬೆಳ್ಳಂಬೆಳಗ್ಗೆ ಪೊಲೀಸ್ ಗನ್ ಸದ್ದು , ಆರೋಪಿಗಳ ಕಾಲಿಗೆ ಗುಂಡು