ಡಾ. ಸುಧಾಕರ್ ನಿವಾಸದ ಎದುರು ಪೊಲೀಸ್ ಬಿಗಿ ಭದ್ರತೆ; ಏಕಪತ್ನಿ ವ್ರತಸ್ಥ ಹೇಳಿಕೆ ಖಂಡಿಸಿ ಸರಣಿ ಧರಣಿಗಳ ಸಾಧ್ಯತೆ
ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ನಾನೂ ಸೇರಿದಂತೆ 224 ಶಾಸಕ ಮೇಲೆಯೂ ತನಿಖೆಯಾಗಲಿ ಎಂಬ ಡಾ. ಸುಧಾಕರ್ ಅವರ ಈ ಹೇಳಿಕೆಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಆಕ್ರೋಶ.
ಬೆಂಗಳೂರು: ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಮೊನ್ನೆ(ಮಾರ್ಚ್ 24) ನೀಡಿದ್ದ ಏಕಪತ್ನಿ ವ್ರತಸ್ಥ ಕುರಿತಾದ ಅನಾರೋಗ್ಯಕರ ಹೇಳಿಕೆಯನ್ನು ಖಂಡಿಸಿ ಸರಣಿ ಧರಣಿಗಳನ್ನು ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಸಚಿವ ಸುಧಾಕರ್ ಅಧಿಕೃತ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ. 10ಕ್ಕೂ ಹೆಚ್ಚು ಪೊಲೀಸರನ್ನು ಡಾ. ಸುಧಾಕರ್ ಅವರ ಮನೆ ಮುಂದೆ ಭದ್ರೆತೆಯ ನೆಲೆಗಟ್ಟಿನಲ್ಲಿ ನಿಯೋಜನೆ ಮಾಡಲಾಗಿದೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಸ್ವಾಮಿ, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ನಾನೂ ಸೇರಿದಂತೆ 224 ಶಾಸಕ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನು ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಹಾಲಿ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಾ ಪಂಥಾಹ್ವಾನ ನೀಡಿದ್ದರು. ಈ ವಿಚಾರದ ಬಗ್ಗೆ ತೀವ್ರ ಆಕ್ರೋಶ/ವಿರೋಧ ವ್ಯಕ್ತವಾಗಿತ್ತು.
ಅವರ ಈ ಹೇಳಿಕೆಗೆ ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇನ್ನು ಈ ವಿಚಾರವಾಗಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸಚಿವ ಡಾ.ಕೆ.ಸುಧಾಕರ್ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದರು. ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ ಸಚಿವರ ಹೇಳಿಕೆ ತಪ್ಪು. ಇದು ಮೂರ್ಖತನದ ಪರಮಾವಧಿ. ಎಲ್ಲಾ 224 ಶಾಸಕರಲ್ಲಿ ಡಾ.ಸುಧಾಕರ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ರು.
ಸುಧಾಕರ್ ಹೇಳಿಕೆಯಿಂದ ಕೆಲ ಶಾಸಕಿಯರು ಗಹಗಹಿಸಿ ನಕ್ಕಿದ್ದರೆ ಕೆಲ ಶಾಸಕಿಯರು ಕಣ್ಣೀರು ಸಹ ಹಾಕಿದ್ದರು. ಶಾಸಕಿಯರ ಕುಟುಂಬದವರು ಅವರನ್ನು ಹೇಗೆ ಸದನಕ್ಕೆ ಕಳಿಸುತ್ತಾರೆ? ಸುಧಾಕರ್ ಅವರೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸುಧಾಕರ್ ಅವರ ರಾಜೀನಾಮೆ ಪಡೆಯುವುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಟ್ಟ ವಿಚಾರ ಎಂದು ರೇಣುಕಾಚಾರ್ಯ ಹೇಳಿದ್ರು.
ಇನ್ನು ಬಿಜೆಪಿ ನಾಯಕಿ, ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಇಲ್ಲಿರುವ ಸದಸ್ಯರ ಪತ್ನಿಯರು ಬಂದು ಗ್ಯಾಲರಿಯಲ್ಲಿ ಕುಳಿತುಕೊಳ್ಳಲಿ. ಆಗ ನಾನು ಚರ್ಚೆಯಲ್ಲಿ ಭಾಗಿಯಾಗ್ತೇನೆ ಎಂದು ತಿಳಿಸಿದ್ದರು.
ಇದನ್ನೂ ಓದಿ:
ಸುಧಾಕರ್ ‘ಏಕಪತ್ನೀವ್ರತಸ್ಥ’ ಹೇಳಿಕೆಗೆ ರೇಣುಕಾಚಾರ್ಯ, ರಮೇಶ್‌ಕುಮಾರ್ ಸೇರಿ ವಿವಿಧ ನಾಯಕರ ತೀವ್ರ ಆಕ್ಷೇಪ