ವಿಜಯಪುರ: ಮೇ 2ರೊಳಗೆ ಪಕ್ಷದಲ್ಲಿ ಭಾರಿ ಸ್ಫೋಟವಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾಗದಿದ್ದರೆ, ಇನ್ನೂ ದೊಡ್ಡ ಸ್ಫೋಟವಾಗಲಿದೆ. ಬಿಜೆಪಿಯನ್ನು ಈ ಹಿಂದೆ ಕಟ್ಟಿದವರು ಸಚಿವ ಈಶ್ವರಪ್ಪ. ನಿನ್ನೆ, ಮೊನ್ನೆ ಬಂದವರು ಅವರ ಬಗ್ಗೆ ಕಮೆಂಟ್ ಮಾಡಬಾರದು ಮತ್ತು ಹಾಗೆ ಕಮೆಂಟ್ ಮಾಡುವುದು ಸರಿಯೂ ಅಲ್ಲ. ನಾನು ಮತ್ತು ಸಿಎಂ ಯಡಿಯೂರಪ್ಪ ಒಮ್ಮೆ ಪಕ್ಷ ತೊರೆದು ಮತ್ತೆ ಬಿಜೆಪಿಗೆ ಬಂದವರು. ಆದರೆ, ಸಚಿವ ಕೆ.ಎಸ್.ಈಶ್ವರಪ್ಪ ಎಂದಿಗೂ ಬಿಜೆಪಿಯಲ್ಲೇ ಇದ್ದವರು. ಕ್ಯಾಬಿನೆಟ್ ದರ್ಜೆ ಸಚಿವರಿಗೇ ಅಧಿಕಾರ ಇಲ್ಲದಿದ್ದಾಗ ಸಚಿವ ಈಶ್ವರಪ್ಪನವರು ಏನು ಮಾಡಬೇಕು? ಎಂದು ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಹೇಳಿದರು. ಈಮೂಲಕ ಸಚಿವ ಕೆ.ಎಸ್.ಈಶ್ವರಪ್ಪ ಪರ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಬ್ಯಾಟಿಂಗ್ ಮಾಡಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಿಜೆಪಿ ಪರವಿದ್ದಾರಾ? ಅಥವಾ ಬಿಎಸ್‌ವೈ ಪರವಿದ್ದಾರಾ? ಸಿಎಂ ಬಿಎಸ್‌ವೈಗೆ ಅರುಣ್ ಸಿಂಗ್ ಏಕೆ ನಿರ್ದೇಶನ ನೀಡುವುದಿಲ್ಲ? ಸಚಿವ ಕೆ.ಎಸ್.ಈಶ್ವರಪ್ಪ ಮಾಡಿದ್ದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅರುಣ್ ಸಿಂಗ್ ಈ ರೀತಿಯಾಗಿ ಹೇಳಬಾರದಿತ್ತು. ಅವರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ನೀಡಿದ್ದಾರೆ. ಬದಲಿಗೆ ಸಿಎಂ ಯಡಿಯೂರಪ್ಪ ಅವರ ಉಸ್ತುವಾರಿ ನೀಡಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಅರುಣ್ ಸಿಂಗ್ ಜೀ ಕ್ಯಾ ಚಲ್ ರಹಾ ಹೇ?
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕಕ್ಕೆ ಬರುತ್ತಾರೆ. ಬಂದಾಗಲೆಲ್ಲ ಸಿಎಂ ಯಡಿಯೂರಪ್ಪ ಮತ್ತು ಅವರ ಪುತ್ರನಿಗೆ ಶಹಬ್ಬಾಸ್ಗಿರಿ ಕೊಡುತ್ತಾರೆ. ಇಲ್ಲಿ ಏನು ನಡೆಯುತ್ತಿದೆ ಅರುಣ್ ಸಿಂಗ್ ಅವರೇ? “ಅರುಣ್‌ಸಿಂಗ್ ಜೀ ಕರ್ನಾಟಕ ಕೋ ಆತೇ ಹೋ.. ಯಡಿಯೂರಪ್ಪ ಕೋ ಔರ್ ಉನಕಾ ಬೇಟೆಕೋ ಶಹಬ್ಬಾಸಿ ದೇಕೇ ಚಲೆ ಜಾತೇ ಹೇ.. ಏ ಕ್ಯಾ ಚಲ್ ರಹಾಹೇ ಅರುಣ್‌ಸಿಂಗ್ ಜೀ” ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿರುವುದು ಪ್ರಧಾನಿ ಮೊದಿ ಕನಸಿನ ಸರ್ಕಾರ ಅಲ್ಲ..
ಅಪ್ಪ, ಮಗ ‘ಕಾವೇರಿ’ಯಲ್ಲಿ ಕುಳಿತು ಡೀಲ್ ಮಾಡುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಅವರು ಡೀಲ್ ಮಾಡುತ್ತಿದ್ದಾರೆ. ಬಿ.ವೈ ವಿಜಯೇಂದ್ರ ಯಾವ ಸಂವಿಧಾನಾತ್ಮಕ ಹುದ್ದೆಯಲ್ಲಿದ್ದಾರೆ? ರಾಜ್ಯದಲ್ಲಿ ಪ್ರಧಾನಿ ಮೋದಿ ಕನಸಿನ ಬಿಜೆಪಿ ಸರ್ಕಾರ ಇಲ್ಲ. ಬದಲಿಗೆ ಇಲ್ಲಿ ಅಪ್ಪ, ಮಕ್ಕಳ ಸರ್ಕಾರ ಇದೆ ಎಂದು ಬಸನಗೌಡ ಪಾಟಿಲ್ ಕಿಡಿಕಾರಿದರು.
ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಸಹಿ ಸಂಗ್ರಹ ವಿಚಾರದ ಕುರಿತೂ ಪ್ರತಿಕ್ರಿಯಿಸಿದ ಅವರು, ಇದು ಪಕ್ಷದ ವಿರುದ್ಧ ಸಹಿ ಸಂಗ್ರಹ ಮಾಡಿದಂತಾಗುತ್ತದೆ. ಸಚಿವ ಈಶ್ವರಪ್ಪ ಮಾಡಿರುವ ತಪ್ಪಾದರೂ ಏನು? ಸಚಿವ ಈಶ್ವರಪ್ಪ ಅವರಿಗೆ ಒಂದು ವರ್ಷದಿಂದ ತೊಂದರೆ ನೀಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಟೀಕಿಸಿದರು.
ಇದನ್ನೂ ಓದಿ: ಕೆಜೆಪಿ ಕಟ್ಟುವಾಗಲೂ ಯಡಿಯೂರಪ್ಪನವರಿಗೆ ಬೇಡವೆಂದೇ ಹೇಳಿದ್ದೆ.. ಎಂಬುದನ್ನು ಸ್ಮರಿಸಿದ ಕೆ.ಎಸ್.ಈಶ್ವರಪ್ಪ
ಬಿಜೆಪಿಯಲ್ಲಿ ತಳಮಳ: ಸಿಎಂ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿ ವಿರುದ್ಧ ರಾಜ್ಯಪಾಲರು, ಹೈಕಮಾಂಡ್ಗೆ ಈಶ್ವರಪ್ಪ ದೂರು
(MLA Basanagouda Patil Yatnal batts for Karnataka Minister K S Eshwarappa for wrote letter to governor against CM Yediyurappa)