ಬೆಂಗಳೂರು ಅಭಿವೃದ್ಧಿ ಸಚಿವರನ್ನು ಬದಲಾಯಿಸಿ: ಸಿಎಂ ಸಿದ್ದರಾಮಯ್ಯಗೆ ಶಾಸಕ ಮುನಿರತ್ನ ಪತ್ರ

| Updated By: Ganapathi Sharma

Updated on: Feb 13, 2025 | 3:45 PM

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಬೆಂಗಳೂರು ಅಭಿವೃದ್ಧಿ ಇಲಾಖೆ ಸಚಿವರ ಬದಲಾವಣೆಗೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮತ್ತು ಪಾರದರ್ಶಕ ಆಡಳಿತಕ್ಕಾಗಿ ಅವರು ಒತ್ತಾಯಿಸಿದ್ದಾರೆ. ಹೊರ ರಾಜ್ಯದ ಗುತ್ತಿಗೆದಾರರಿಗೆ ಅನುಚಿತ ಅನುದಾನ ನೀಡುವ ಆರೋಪವನ್ನು ಸಹ ಅವರು ಮಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಸಚಿವರನ್ನು ಬದಲಾಯಿಸಿ: ಸಿಎಂ ಸಿದ್ದರಾಮಯ್ಯಗೆ ಶಾಸಕ ಮುನಿರತ್ನ ಪತ್ರ
ಮುನಿರತ್ನ, ಸಿದ್ದರಾಮಯ್ಯ
Follow us on

ಬೆಂಗಳೂರು, ಫೆಬ್ರವರಿ 13: ಬೆಂಗಳೂರು ಅಭಿವೃದ್ಧಿ ಇಲಾಖೆ ಸಚಿವರ ಬದಲಾವಣೆಗೆ ಆಗ್ರಹಿಸಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. 16ನೇ ಬಜೆಟ್​ನಲ್ಲಿ ಬೆಂಗಳೂರು ನಗರಕ್ಕೆ ನೀಡುವ ಅನುದಾನ ಸಂಬಂಧ ಪತ್ರದಲ್ಲಿ ಉಲ್ಲೇಖಿಸಿರುವ ಮುನಿರತ್ನ, ಬೆಂಗಳೂರಿನ ಒಳಿತಿಗೆ ಯಾರನ್ನಾದರೂ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಆಗ್ರಹಿಸಿದ್ದಾರೆ.

ಆಂಧ್ರ ಸಿಎಂ ಸಹಚರರು, ಗುತ್ತಿಗೆದಾರರು ನಮ್ಮ ರಾಜ್ಯದ ಗುತ್ತಿಗೆದಾರರ ಮೇಲೆ ಸವಾರಿ ಮಾಡಲು ಬಂದಿದ್ದಾರೆ. ಹೊರ ರಾಜ್ಯದ ಗುತ್ತಿಗೆದಾರರಿಗೆ ಶೇ 12ರಷ್ಟು ಮುಂಗಡ ಅನುದಾನ ನೀಡಿದ್ದಾರೆ. ಅನುದಾನ ಖರೀದಿ ಮಾಡಲು ಶೇ 12ರಷ್ಟು ಮುಂಗಡ ಹಣ ನೀಡಿದ್ದಾರೆ. ಕಾರ್ಯಾದೇಶ ಕೊಟ್ಟ ನಂತರ ಶೇ 8, ಅನುದಾನ ಬಿಡುಗಡೆ ಮಾಡಲು ಶೇ 15 ರಷ್ಟು ಸೇರಿ ಒಟ್ಟಾರೆ‌ ಶೇ 35 ಕ್ಕೆ ವ್ಯವಹಾರ ಕುದುರಿಸಿ ಮುಂಗಡ ಹಣ ನೀಡಿದ್ದಾರೆ. ಈಗಾಗಲೇ ಫೈವ್ ಸ್ಟಾರ್ ಹೋಟೆಲ್​ಗಳಲ್ಲಿ ವ್ಯವಹಾರ ಕುದುರಿಸಿದ್ದಾರೆ ಎಂದು ಬೆಂಗಳೂರು ಅಭಿವೃದ್ಧಿ ಇಲಾಖೆ ಸಚಿವರ ವಿರುದ್ಧ ಮುನಿರತ್ನ ಆರೋಪ ಮಾಡಿದ್ದಾರೆ.

ಅನುದಾನ ನೀಡುವ ವೇಳೆ ಬೆಂಗಳೂರು ನಗರದ ಶಾಸಕರ ಸಭೆ ಮಾಡಿ. ಬಳಿಕ ನೇರವಾಗಿ ತಾವೇ ಕ್ಷೇತ್ರಗಳಿಗೆ ಅನುದಾನ ಘೋಷಣೆ ಮಾಡಬೇಕು. ಬೆಂಗಳೂರು ನಗರದ ಉಸ್ತುವಾರಿ ಸಚಿವರಾಗಿ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್ ಅವರನ್ನು ಮರು ನೇಮಕ ಮಾಡಬಹುದು ಎಂದು ಮುನಿರತ್ನ ಸಿಎಂಗೆ ಸಲಹೆ ನೀಡಿದ್ದಾರೆ.

ಇಷ್ಟೇ ಅಲ್ಲದೆ, ಕೃಷ್ಣ ಭೈರೇಗೌಡ, ಎಂ ಕೃಷ್ಣಪ್ಪ ಅಥವಾ ದಿನೇಶ್ ಗುಂಡೂರಾವ್ ಇವರಿಗೆ ಉಸ್ತುವಾರಿ ನೀಡಿದರೆ 2 ವರ್ಷಗಳ ಕಳಂಕ‌ ತೊಳೆಯಬಹುದು. ಪಾಲಿಕೆ ಇಂಜಿನಿಯರ್​​ಗಳು ಗುತ್ತಿಗೆದಾರರ ಜತೆ ದಲ್ಲಾಳಿಗಳಾಗಿ ಬದುಕುತ್ತಿದ್ದಾರೆ. ವಸೂಲಿ ಮಾಡಲು ಏಜೆಂಟ್​​ಗಳನ್ನೂ ನೇಮಕ ಮಾಡಿದ್ದಾರೆ. ಅನುದಾನ ದುರುಪಯೋಗವಾದರೆ ಕಪ್ಪು ಚುಕ್ಕೆ ಬರುವ ಸಾಧ್ಯತೆ ಇದೆ. ನಿಮ್ಮಂತಹ ಪ್ರಾಮಾಣಿಕ ಸಿಎಂ ಆಡಳಿತಾವಧಿಯಲ್ಲಿ ಕಪ್ಪು ಚುಕ್ಕೆ ಸಾಧ್ಯತೆ ಇದೆ ಎಂದೂ ಅವರು ಉಲ್ಲೇಖಿಸಿದ್ದಾರೆ.

ಇನ್ನಷ್ಟು ಕೇಸ್ ದಾಖಲಾಗಬಹುದು: ಮುನಿರತ್ನ

ನಾನು ಈ ಪತ್ರ ಬರೆದಿರುವುದಕ್ಕೆ ನನ್ನ ಮೇಲೆ ಮತ್ತೆ ದಲಿತ ದೌರ್ಜನ್ಯ, ಅತ್ಯಾಚಾರ, ಪೋಕ್ಸೋ ಸೇರಿ ಇನ್ನೂ ಒಂದಷ್ಟು ಸುಳ್ಳು ಆರೋಪಗಳ ಕೇಸ್ ದಾಖಲಾಗಬಹುದು ಎಂದೂ ಮುನಿರತ್ನ ಹೇಳಿದ್ದಾರೆ. ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯಗೆ ಬರೆದ ಪತ್ರದಲ್ಲಿಯೂ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ