ಕೋಲಾರ, ಸೆಪ್ಟೆಂಬರ್ 16: ಈದ್ ಮಿಲಾದ್ (Eid Milad) ಮೆರವಣಿಗೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ ಉಂಟಾಗಿದ್ದು, ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವಂತಹ ಘಟನೆ ನಗರದ ಕ್ಲಾಕ್ ಟವರ್ ಬಳಿ ನಡೆದಿದೆ. ಸೈಯದ್ ಸಲ್ಮಾನ್, ಸೈಯದ್ ಸೈಫ್, ಹುಸೇನ್ ಕಾಷಿಪ್, ಖಲೀಲ್ ಅಹ್ಮದ್ ಮೇಲೆ ಸೈಯದ್ ವಸೀಂ ಪಾಷಾ, ತಾಹೀರ್ ಗುಂಪಿನಿಂದ ಹಲ್ಲೆ ಮಾಡಲಾಗಿದೆ. ನಾಲ್ವರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಘಟನೆ ನಂತರ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದರು. ಸ್ಥಳಕ್ಕೆ ಕೋಲಾರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಸದ್ಯ ಹಲ್ಲೆ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಕ್ಲಾಕ್ ಟವರ್ ಬಳಿ ಎಸ್ಪಿ ನಿಖಿಲ್ ಮೊಕ್ಕಾಂ ಹೂಡಿದ್ದಾರೆ.
ಗುಂಪು ಘರ್ಷಣೆ ಒಂದು ಕಡೆ ಆದರೆ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ ಕೂಗಲಾಗಿದೆ. ಕೋಲಾರದ ಅಂಜುಮನ್ ಸಂಸ್ಥೆ ಬಳಿ ಪ್ಯಾಲೆಸ್ತೀನ್ ಧ್ವಜ ಹಾರಾಟ ಮಾಡಿದ್ದು, ‘ಫ್ರೀ ಪ್ಯಾಲೆಸ್ತೀನ್’ ಬರಹವುಳ್ಳ ಬಾವುಟ ಪ್ರದರ್ಶಿಸಿ ಘೋಷಣೆ ಕೂಗಲಾಗಿದೆ. ಕೂಡಲೇ ಪೊಲೀಸರು ಆ ಬಾವುಟವನ್ನು ತೆಗೆಸಿದ್ದಾರೆ. ಈ ಮೂಲಕ ಕೋಲಾರದ ಯುವಕರ ಪ್ಯಾಲೆಸ್ತೀನ್ ಪ್ರೇಮಕ್ಕೆ ಪೊಲೀಸರು ತಿಳಿಹೇಳಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಕೋಲಾರದ ಎಂಜಿ ರಸ್ತೆಯಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿತು. ಬೃಹತ್ ಬಾವುಟಗಳನ್ನು ಹಿಡಿದು ರಸ್ತೆಯಲ್ಲಿ ಯುವಕರ ಗುಂಪು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ: ಪಾಂಡವಪುರದಲ್ಲಿ ಆರ್ಎಸ್ಎಸ್ ಕಚೇರಿಗೆ ಪೊಲೀಸ್ ದಾಳಿ: ಖಾಕಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಇನ್ನು ಈ ವೇಳೆ ಅಲ್ಲದೇ ಬೇರೆ ದೇಶದ ಬಾವುಟಗಳನ್ನು ಹಾರಿಸದಂತೆ ವಿವಾದ ಸೃಷ್ಟಿಸದಂತೆ ತಿಳಿಹೇಳಿದ್ದಾರೆ. ಕೋಲಾರ ನಗರ ಠಾಣೆ ಸಿಪಿಐ ಸದಾನಂದ ಅವರ ಸಮಯ ಪ್ರಜ್ಞೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬಾವುಟ ಹಾರಾಟ ಮಾಡದಂತೆ ಪೊಲೀಸರು ಯುವಕರಿಗೆ ತಿಳಿ ಹೇಳಿದ್ದಾರೆ. ಬಳಿಕ ಫ್ರೀ ಪ್ಯಾಲೆಸ್ತೀನ್ ತೆಗೆದು ಕಪ್ಪು ಬಾವುಟ ಹಾರಾಟ ಮಾಡಿದ ಯುವಕರ ಗುಂಪಿಗೆ ಪೊಲೀಸರು ದೇಶ ಪ್ರೇಮದ ಪಾಠ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.