ಬೆಂಗಳೂರು: ಕೊರೊನಾ ಕರಾಳ ಛಾಯೆಯ ನಡುವೆಯೇ ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭ ಆಗ್ತಿದೆ. ಕಲಾಪದಲ್ಲಿ ವಿಪಕ್ಷಗಳನ್ನು ಎದುರಿಸುವುದಕ್ಕಿಂತ, ಕೊರೊನಾಗೆ ಸೆಡ್ಡು ಹೊಡೆದು ಅಧಿವೇಶನ ನಡೆಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಇದೇ ರೀತಿ ಕೊರೊನಾ ನಿಭಾಯಿಸಿದ ರೀತಿ, ಡ್ರಗ್ಸ್ ಕೇಸ್, ರಾಜ್ಯದಲ್ಲಿ ಸುರೀತಿರೋ ಮಳೆ, ಸರ್ಕಾರ ಅದನ್ನ ನಿಭಾಯಿಸ್ತಿರೋ ರೀತಿ ವಿಪಕ್ಷಗಳಿಗೆ ಪ್ರಮುಖ ಅಸ್ತ್ರಗಳಾಗಿವೆ.
ಡೆಡ್ಲಿ ವೈರಸ್ ಕೊರೊನಾ ಪರಿಸ್ಥಿತಿಯನ್ನ ನಿಭಾಯಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಅನ್ನೋ ವಿಪಕ್ಷಗಳ ಆರೋಪದ ನಡುವೆ ಇಂದು ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಖುದ್ದು ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಸಚಿವರು ಮತ್ತು ಶಾಸಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ರೂ ಕೊರೊನಾ ಸೋಂಕಿಗೆ ಒಳಗಾಗಿದ್ರು. ಇಂತಹ ಸಮಯದಲ್ಲೂ ಕೊರೊನಾಗೆ ಸೆಡ್ಡು ಹೊಡೆದು ಕಲಾಪ ನಡೆಸಲು ಸರ್ಕಾರ ನಡೆಸಿರುವ ಸರ್ಕಸ್ ಒಂದಲ್ಲ ಎರಡಲ್ಲ. ಹೇಗಾದ್ರೂ ಮಾಡಿ ಮಳೆಗಾಲದ ಅಧಿವೇಶನ ಯಶಸ್ವಿಯಾಗಿ ನಡೆಸಿ, ಸರ್ಕಾರ ಸೈ ಅನ್ನಿಸಿಕೊಳ್ಳಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.
ಸರ್ಕಾರವನ್ನ ಕಟ್ಟಿ ಹಾಕಲು ತಯಾರಾಗಿವೆ ವಿಪಕ್ಷಗಳು! ಅಧಿವೇಶನದಲ್ಲಿ ಪಾಲ್ಗೊಳ್ಳೋರಿಗೆ ಕೊರೊನಾ ಸೋಂಕು ಹರಡದಂತೆ ತಡೆಯಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡು, ಸರ್ಕಾರ ಅಧಿವೇಶನವನ್ನ ನಡೆಸಲು ತಯಾರಾಗಿದೆ. ವಿಧಾನ ಮಂಡಲ ಅಧಿವೇಶನದ ಸಂದರ್ಭ ವಿಧಾನಸೌಧ, ವಿಕಾಸಸೌಧ ಪ್ರವೇಶ ನಿರ್ಬಂಧ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಅಧಿವೇಶನಕ್ಕೆ ‘ಕೊರೊನಾ’ ರೂಲ್ಸ್! ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಸಚಿವರು, ಶಾಸಕರ ಜೊತೆಗೆ ಮೂವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಬ್ಬ ಪಿಎ, ಗನ್ ಮ್ಯಾನ್ ಹಾಗೂ ಹಿರಿಯ ಅಧಿಕಾರಿ ಮಾತ್ರ ಸಚಿವರ ಜತೆಗೆ ಪ್ರವೇಶಿಸಬಹುದು. ಗನ್ ಮ್ಯಾನ್‌ಗಳಿಗೆ ಬ್ಯಾಂಕ್ವೆಟ್ ಹಾಲ್ನಲ್ಲಿ, ಆಪ್ತಸಹಾಯಕರಿಗೆ ಪೂರ್ವ ದ್ವಾರದ ಸೆಂಟ್ರಲ್ ಹಾಲ್ನಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿದೆ. ವಿಧಾನಸೌಧದ ಉತ್ತರ ದ್ವಾರದ ಮೂಲಕ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಹಾಗೂ ಮಾಧ್ಯಮದವರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕಲಾಪ ವೀಕ್ಷಣೆಗೆ ಸಾರ್ವಜನಿಕರ ಅವಕಾಶ ನಿರ್ಬಂಧಿಸಿದ್ದು, ದೈಹಿಕ ಅಂತರ ಕಾಯ್ದುಕೊಳ್ಳೋ ಉದ್ದೇಶದಿಂದ ಪತ್ರಕರ್ತರಿಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ವಿಧಾನಸೌಧ ಪ್ರವೇಶದ ವೇಳೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಅಧಿವೇಶನ ನಡೆಸಲು ಸರ್ಕಾರ ಈ ಸಿದ್ಧತೆಗಳನ್ನ ಮಾಡಿಕೊಂಡಿದ್ರೆ, ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳಿಗೆ ಹಲವಾರು ಅಸ್ತ್ರಗಳಿವೆ. ಪ್ರಮುಖವಾಗಿ ಸರ್ಕಾರ ರಾಜ್ಯದಲ್ಲಿ ಕೊರೊನಾ ನಿಭಾಯಿಸಿರುವ ರೀತಿ ವಿಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿದೆ. ಸರ್ಕಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರೋದ್ರ ಜೊತೆಗೆ ಕೊರೊನಾ ಎದುರಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ಸರಿಯಾದ ಬೆಂಬಲ ನೀಡಿಲ್ಲ ಅನ್ನೋದು ವಿಪಕ್ಷಗಳ ಬತ್ತಳಿಕೆಯಲ್ಲಿದೆ.
ಕೊರೊನಾ ಅಬ್ಬರ ಹೆಚ್ಚುತ್ತಿದ್ದ ವೇಳೆ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ, ಇದಾಗ್ತಿದ್ದಂತೆ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ, ಅದನ್ನ ಸರ್ಕಾರ ನಿಭಾಯಿಸಿದ ರೀತಿ ಸರ್ಕಾರದ ವಿರುದ್ಧ ವಿಪಕ್ಷಗಳು ಮುಗಿಬೀಳಲು ಉತ್ತಮ ಅವಕಾಶ ಒದಗಿಸಲಿವೆ. ಈಗ ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ ಶುರುವಾಗಿದೆ, ಇದರ ಜೊತೆಗೆ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್.. ಅದನ್ನ ಸರ್ಕಾರ ನಿಭಾಯಿಸ್ತಿರೋ ರೀತಿ ಕೂಡ ವಿಪಕ್ಷಗಳ ಟೀಕೆಗೆ ಆಹಾರವಾಗಿದೆ.
ಅಧಿವೇಶನದ ಹೆಸರಿನಲ್ಲಿ ಇಷ್ಟು ವರ್ಷ ಶಕ್ತಿಸೌಧದಲ್ಲಿ ನಡೆಯುತ್ತಿದ್ದ ಜನಜಾತ್ರೆಗೆ ಕೊರೊನಾ ಭಯ ಕಡಿವಾಣ ಹಾಕುತ್ತಾ ಅಥವಾ ಪ್ರತಿ ಅಧಿವೇಶನದಂತೆ ಈ ಬಾರಿಯೂ ನಾಯಕರು ತಮ್ಮ ಒಡ್ಡೋಲಗವನ್ನ ಕರೆದುಕೊಂಡು ಬಂದು ಮತ್ತೆ ಜನಜಾತ್ರೆ ನಿರ್ಮಿಸ್ತಾರಾ ಅನ್ನೋದನ್ನ ಕಾದು ನೋಡ್ಬೇಕಿದೆ.