ಜನರ ಸಮಸ್ಯೆ ಕೇಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ, ಮೇಡಂ: DC ಸಿಂಧೂರಿ ಪರ ಪ್ರತಾಪ್ ಸಿಂಹ ಭರ್ಜರಿ ಬ್ಯಾಟಿಂಗ್

ಡಿಸಿ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದಾರೆ. ಇದನ್ನು ಎಲ್ಲರೂ ಬೆಂಬಲಿಸಬೇಕು. ನೀವು ಮಾಡಲು ಆಗದ ಕೆಲಸವನ್ನ ಡಿಸಿ‌ ಮಾಡುತ್ತಿದ್ದಾರೆ, ಮಾಡಲು ಬಿಡಿ.

ಜನರ ಸಮಸ್ಯೆ ಕೇಳಲು ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ, ಮೇಡಂ: DC ಸಿಂಧೂರಿ ಪರ ಪ್ರತಾಪ್ ಸಿಂಹ ಭರ್ಜರಿ ಬ್ಯಾಟಿಂಗ್
MP ಪ್ರತಾಪ್ ಸಿಂಹ ಮತ್ತು DC ರೋಹಿಣಿ ಸಿಂಧೂರಿ
Updated By: ganapathi bhat

Updated on: Apr 07, 2022 | 5:42 PM

ಮೈಸೂರು: ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಶಾಸಕರ ನಡುವಿನ ಜಟಾಪಟಿ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಪ್ರತಿಕಿಯಿಸಿದ್ದಾರೆ. ಜಿಲ್ಲಾಧಿಕಾರಿ ಪರವಾಗಿ ಪ್ರತಾಪ್ ಸಿಂಹ ಭರ್ಜರಿಯಾಗಿ ಮಾತನಾಡಿದ್ದಾರೆ.

ಕ್ಷೇತ್ರದ ಜನರ ಸಮಸ್ಯೆ ಕೇಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಕ್ಷೇತ್ರವನ್ನು ಯಾವ ಶಾಸಕರು ಹಾಗೂ ಎಂಪಿಗೂ ಬರೆದುಕೊಟ್ಟಿರುವುದಿಲ್ಲ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಮುಗಿದ ಮೇಲೆ ನಾನು ಕೂಡ ಜನರ ಬಳಿ ಹೋಗುತ್ತೇನೆ. ಯಾರು ತಡೆಯುತ್ತಾರೆ ನೋಡೋಣ ಎಂದು ಗುಡುಗಿದ್ದಾರೆ.

ನಾಲ್ಕು ಜನ ಶಾಸಕರು ಒಟ್ಟಾಗಿ ಡಿಸಿ ವಿರುದ್ಧ ಸುದ್ದಿಗೋಷ್ಠಿ ನಡೆಸಿ‌ ಹೆದರಿಸುತ್ತಿದ್ದೀರಾ? ನೀವೂ ಹೆದರಿಸಿದರೆ ನಾವು ಹೆದರಬೇಕಾ? ನೀವು ಜನರ ಸಮಸ್ಯೆ ಬಗೆಹರಿಸಿದ್ದರೆ, ಜನ ಯಾಕೆ ಡಿಸಿ ಬಳಿ ಕಷ್ಟ ಹೇಳಿಕೊಂಡು ಹೋಗುತ್ತಿದ್ದರು? ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: DC ಸಿಂಧೂರಿಗೆ ‘ಸಾಮ್ರಾಟ್’ ಅಶೋಕ್​ ಕ್ಲಾಸ್​.. ಜನಪ್ರತಿನಿಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಸಿಕೊಟ್ಟಿದ್ದೇನೆ

ಶಾಸಕರು, ಸಂಸದರು ಎಂಬುದು ಜನರ ಕೆಲಸ ಮಾಡಲು ಇರುವ ಹುದ್ದೆ ಅಷ್ಟೇ. ಡಿಸಿ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದಾರೆ. ಇದನ್ನು ಎಲ್ಲರೂ ಬೆಂಬಲಿಸಬೇಕು. ನೀವು ಮಾಡಲು ಆಗದ ಕೆಲಸವನ್ನ ಡಿಸಿ‌ ಮಾಡುತ್ತಿದ್ದಾರೆ, ಮಾಡಲು ಬಿಡಿ ಎಂದು ಕಟುವಾಗಿ ಹೇಳಿದ್ದಾರೆ.

ಮೊದಲು ಶಾಸಕರ ಹಕ್ಕು ಚ್ಯುತಿ ಕುರಿತು ಪುಸ್ತಕ ಓದಿಕೊಳ್ಳಿ ಎಂದು ಶಾಸಕರಿಗೆ ಸಲಹೆ ನೀಡಿದ ಸಂಸದ, ಮೂರು ನಾಲ್ಕು ಬಾರಿ ಶಾಸಕರಾದವರು ನೀವು, ಯಾವುದು ಹಕ್ಕು ಚ್ಯುತಿ ಎಂಬುದು ನಿಮಗೆ ಗೊತ್ತಿಲ್ಲವೇ? ಜನರ ಸಮಸ್ಯೆ ಕೇಳುವ ಸಭೆಯಲ್ಲಿ ನಿಮ್ಮನ್ನು ಗದ್ದುಗೆ ಮೇಲೆ‌ ಕೂರಿಸದಿದ್ದರೆ ಅದು ಹಕ್ಕು ಚ್ಯುತಿಯಾ? ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ: ಮೈಸೂರು ಜಿಲ್ಲಾಧಿಕಾರಿಗೆ ಕೊಲೆಸ್ಟ್ರಾಲ್ ತಲೆಗೆ ಹತ್ತಿದೆ, ರೋಹಿಣಿ ಸಿಂಧೂರಿ ವಿರುದ್ಧ MLA, MLC ಆಕ್ರೋಶ

Published On - 2:05 pm, Wed, 2 December 20