ಕೋತಿ ದಾಳಿಯಿಂದ ರೇಣುಕಾಚಾರ್ಯ ಬಚಾವ್

ಜನರನ್ನು ಕಂಡ ತಕ್ಷಣ ಸಿಟ್ಟಿಗೆದ್ದು ದಾಳಿಗೆ ಮುಂದಾಗುವ ಸ್ವಭಾವವನ್ನು ಈ ಕೋತಿ ರೂಢಿಸಿಕೊಂಡಿದೆ. ಮಕ್ಕಳನ್ನು ರಸ್ತೆಗೆ ಬಿಡಲೂ ಜನರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋತಿ ದಾಳಿಯಿಂದ ರೇಣುಕಾಚಾರ್ಯ ಬಚಾವ್
ಕೋತಿಯನ್ನು ಸೆರೆ ಹಿಡಿಯಲು ವಿಶೇಷ ತಂಡ ಕರೆಸಲು ವಲಯ ಅರಣ್ಯಾಧಿಕಾರಿ ಮುಂದಾಗಿದ್ದಾರೆ
Edited By:

Updated on: Dec 16, 2020 | 7:24 PM

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೋತಿ ದಾಳಿಯಿಂದ ಮಂಗಳವಾರ ಸ್ವಲ್ಪದರಲ್ಲಿ ಪಾರಾದರು.

ಪಟ್ಟಣದ ತಾಲೂಕು ಕಚೇರಿ ಎದುರು ಕೋತಿಯೊಂದು ಶಾಸಕರ ಮೇಲೆ ಎರಗುವುದರಲ್ಲಿತ್ತು. ಅಷ್ಟರಲ್ಲಿ ಎಚ್ಚೆತ್ತುಕೊಂಡ ಶಾಸಕರ ಪಟಾಲಂ, ರೇಣುಕಾಚಾರ್ಯರನ್ನು ದಾಳಿಯಿಂದ ರಕ್ಷಿಸಿತು. ಕಳೆದ ಒಂದು ತಿಂಗಳಿಂದ ಹೊನ್ನಾಳಿ ಜನರನ್ನು ಕಾಡುತ್ತಿರುವ ಕೋತಿ, ಈವರೆಗೆ 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ.

ಜನರನ್ನು ಕಂಡ ತಕ್ಷಣ ಸಿಟ್ಟಿಗೆದ್ದು ದಾಳಿಗೆ ಮುಂದಾಗುವ ಸ್ವಭಾವವನ್ನು ಈ ಕೋತಿ ರೂಢಿಸಿಕೊಂಡಿದೆ. ಮಕ್ಕಳನ್ನು ರಸ್ತೆಗೆ ಬಿಡಲೂ ಜನರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣ, ಪುರಸಭೆ, ದುರ್ಗಿಗುಡಿ, ಟಿ.ಬಿ.ಸರ್ಕಲ್ ಪ್ರದೇಶದಲ್ಲಿ ಈ ಕೋತಿ ನಿತ್ಯ ಸಂಚರಿಸುತ್ತದೆ. ಕೋತಿಯನ್ನು ಕಂಡರೆ ಜನರು ಭೀತಿಯಿಂದ ಓಡಿ ಹೋಗ್ತಾರೆ. ಬಾಳೆಹಣ್ಣು ಕೊಡಲು ಹೋದರೂ ಕೋತಿ ದಾಳಿ ಮಾಡುವುದು ಬಿಡುವುದಿಲ್ಲ.

‘ಅರಣ್ಯ ಇಲಾಖೆಯವರು ಬಲೆ ತೆಗೆದುಕೊಂಡು ಬಂದು ಕೋತಿಯನ್ನು ಹಿಡಿಯಲು ಯತ್ನಿಸುತ್ತಾರೆ. ಆದರೆ ಕೋತಿ ಅವರಿಂದ ತಪ್ಪಿಸಿಕೊಳ್ಳುತ್ತಿದೆ. ಈ ಕೋತಿಗೆ ಅರವಳಿಕೆ ಮದ್ದು ನೀಡಿ ಹಿಡಿಯಬೇಕು’ ಎಂದು ಸ್ಥಳೀಯರಾದ ಸತೀಶ್​ ಒತ್ತಾಯಿಸಿದರು. ಕೋತಿಯನ್ನು ಸೆರೆ ಹಿಡಿಯಲು ವಿಶೇಷ ತಂಡ ಕರೆಸಲು ವಲಯ ಅರಣ್ಯಾಧಿಕಾರಿ ಮುಂದಾಗಿದ್ದಾರೆ ಎಂದು ತಹಶೀಲ್ದಾರ್ ತುಷಾರ ಟಿವಿ9ಗೆ ಪ್ರತಿಕ್ರಿಯಿಸಿದರು.

ಸಚಿವ ಸ್ಥಾನದ ಕನಸು ಕಾಣುತ್ತಿರುವ ರೇಣುಕಾಚಾರ್ಯ ಕ್ಷೇತ್ರದ ಜನಕ್ಕೆ ಈಗ ಕೋತಿ ಕಾಟ

Published On - 9:55 am, Wed, 16 December 20