ಭುಗಿಲೆದ್ದ ಅಸಮಾಧಾನ.. ಇಂದು ಮತ್ತೆ ಬದಲಾಗಲಿವೆ ಕೆಲವು ಸಚಿವರ ಖಾತೆಗಳು?
ಸಚಿವರಿಗೆ ಖಾತೆ ಹಂಚಿಕೆ ಪೂರ್ಣವಾಗಿದ್ರೂ ಕೆಲವು ಸಚಿವರ ಅಸಮಾಧಾನ ಇನ್ನೂ ನಿಂತಿಲ್ಲ. ಮುನಿಸು ತಣಿಸಲು ಸಿಎಂ ಯಡಿಯೂರಪ್ಪ ಕೆಲವು ಸಚಿವರ ಖಾತೆಗಳನ್ನ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಮೂವರು ಸಚಿವರ ಖಾತೆಗಳಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದ್ದು, ಇಂದು ಅಧಿಕೃತವಾಗಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಬೆಂಗಳೂರು: ಅಳೆದೂ ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ವಿಸ್ತರಣೆ ನಡೆದ 9 ದಿನಗಳ ಬಳಿಕ ಖಾತೆ ಹಂಚಿಕೆ ಮಾಡಿದ್ರು. ಯಾವಾಗ ಸಿಎಂ ಖಾತೆ ಹಂಚಿಕೆ ಮಾಡಿದ್ರೋ ತಕ್ಷಣ ಅಸಮಾಧಾನ ಭುಗಿಲೆದ್ದಿದೆ. ಖಾತೆ ಹಂಚಿಕೆ ಮಾಡಿದ ಬಳಿಕ ನಡೆದ ಸಚಿವ ಸಂಪುಟ ಸಭೆಗೆ ಹಲವರು ಬರಲೇ ಇಲ್ಲ. ಇದು ಸಚಿವ ಸಂಪುಟ ಸದಸ್ಯರಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಸಾಬೀತು ಪಡಿಸಿದೆ. ಅದ್ರಲ್ಲೂ ಸಚಿವರಾದ ಎಂಟಿಬಿ ನಾಗರಾಜ್, ಗೋಪಾಲಯ್ಯ, ಸುಧಾಕರ್ ತಮ್ಮ ಅಸಮಾಧಾನವನ್ನ ಬಹಿರಂಗವಾಗಿ ತೋರ್ಪಡಿಸಿದ್ದು ಮತ್ತೆ ಖಾತೆಗಳು ಬದಲಾಗುವ ಸಾಧ್ಯತೆ ಹೆಚ್ಚಿದೆ.
ಇಂದು ಮತ್ತೆ ಬದಲಾಗಲಿವೆ ಕೆಲವು ಸಚಿವರ ಖಾತೆಗಳು? ನಿನ್ನೆ ಬೆಳಗ್ಗೆ ಸಚಿವರಿಗೆ ಖಾತೆ ಹಂಚಿಕೆಯಾಗ್ತಿದ್ದಂತೆ, ಕೆಲವು ಸಚಿವರು ಅಸಮಾಧಾನ ಹೊರ ಹಾಕಿದ್ರು. ಅಸಮಾಧಾನಗೊಂಡ ಸಚಿವರನ್ನು ಸಿಎಂ ನಿವಾಸಕ್ಕೆ ಕರೆದುಕೊಂಡು ಹೋಗಿ ಮನವೊಲಿಸುವ ಪ್ರಯತ್ನ ಮಾಡಿದ್ರು. ಸಿಎಂ ನಿವಾಸದಲ್ಲಿ ಒಪ್ಪಿಕೊಂಡು ಹೋಗಿದ್ದ ಸಚಿವರು, ಸಂಪುಟ ಸಭೆಗೆ ಗೈರಾಗುವ ಮೂಲಕ ತಮಗೆ ಇನ್ನೂ ಅಸಮಾಧಾನ ಇದೆ ಅನ್ನೋದನ್ನ ತೋರಿಸಿಕೊಂಡಿದ್ರು. ಅವರನ್ನು ಸಂಪುಟ ಸಭೆಗೆ ಕರೆಸುವ ಸತತ ಪ್ರಯತ್ನ ವಿಫಲವಾದ ಬಳಿಕ ಸಿಎಂ, ಆಪ್ತ ಸಚಿವರನ್ನು ತಮ್ಮ ಅಧಿಕೃತ ನಿವಾಸಕ್ಕೆ ಕರೆಸಿಕೊಂಡು ಚರ್ಚೆ ನಡೆಸಿದ್ರು.
ಸುಮಾರು ಮೂರೂವರೆ ಗಂಟೆಗೂ ಹೆಚ್ಚು ಕಾಲ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಮತ್ತು ಎಸ್.ಟಿ. ಸೋಮಶೇಖರ್ ಜೊತೆ ಸಮಾಲೋಚನೆ ನಡೆಸಿ ಅಸಮಾಧಾನಿತ ಶಾಸಕರ ಖಾತೆಗಳನ್ನು ಬದಲಾಯಿಸುವ ಚಿಂತನೆ ನಡೆಸಿದ್ದಾರೆ. ಇಂದು ಮೂವರು ಸಚಿವರ ಖಾತೆಗಳನ್ನು ಸಿಎಂ ಬದಲಾವಣೆ ಮಾಡಿ ಆದೇಶ ಹೊರಡಿಸೋ ಸಾಧ್ಯತೆ ಇದೆ.
ಸಚಿವರಾದ ಎಂಟಿಬಿ ನಾಗರಾಜ್, ಕೆ.ಗೋಪಾಲಯ್ಯ ಸಂಪುಟ ಸಭೆಗೆ ಹಾಜರಾಗದೇ ದೂರ ಉಳಿದ್ರೆ, ವೈದ್ಯಕೀಯ ಶಿಕ್ಷಣ ಖಾತೆ ಕಳೆದುಕೊಂಡಿರುವ ಡಾ.ಕೆ.ಸುಧಾಕರ್ ನಿನ್ನೆ ಇಡೀ ದಿನ ಮನೆಯಿಂದ ಹೊರಬರಲಿಲ್ಲ. ಇಂದೂ ಕೂಡಾ ಸಚಿವ ಸುಧಾಕರ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಾರಾ ಅನ್ನೋ ಕುತೂಹಲವೂ ಇದೆ. ಇದೇ ಕಾರಣಕ್ಕೆ ಸಿಎಂ ಬಿಎಸ್ವೈ ನಿನ್ನೆ ತಮ್ಮ ಆಪ್ತರಾದ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಮತ್ತು ಎಸ್. ಟಿ. ಸೋಮಶೇಖರ್ ಜೊತೆ ಚರ್ಚೆ ನಡೆಸಿದ್ರು. ಸಂಜೆ 7.30ರಿಂದ ರಾತ್ರಿ 11 ಗಂಟೆವರೆಗೆ ಯಡಿಯೂರಪ್ಪ ಸಮಾಲೋಚನೆ ನಡೆಸಿದ್ರು.
ಇನ್ನೊಂದೆಡೆ ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರಿನ ಖಾಸಗಿ ನಿವಾಸದಲ್ಲಿ ನಿನ್ನೆ ರಾತ್ರಿ ಬಿಜೆಪಿ ಶಾಸಕರ ಸಭೆ ನಡೆಸಿದ್ದಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕರಾದ ಡಾ. ಶಿವರಾಜ್ ಪಾಟೀಲ್, ರಾಜೂಗೌಡ, ಮಹೇಶ ಕುಮಟಳ್ಳಿ ಮತ್ತು ಮಾಜಿ ಶಾಸಕ ಸುರೇಶ್ ಗೌಡ ಸಭೆಯಲ್ಲಿ ಭಾಗಿಯಾಗಿದ್ರು. ಒಟ್ನಲ್ಲಿ, ಖಾತೆ ಹಂಚಿಕೆ ಬಳಿಕ ಅಸಮಾಧಾನಗೊಂಡಿರೋರನ್ನ ಸಮಾಧಾನ ಪಡಿಸಲು ಇಂದು ಸಹ ಪ್ರಯತ್ನ ಮುಂದುವರಿಯಲಿದೆ. ಇದು ಎಷ್ಟರ ಮಟ್ಟಿಗೆ ಫಲ ನೀಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.