ಮುಡಾ ಹಗರಣ: ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯಗೂ ಇಡಿ ತನಿಖೆ ಬಿಸಿ, ಪತ್ನಿ ಪಾರ್ವತಿ, ಪುತ್ರ ಯತೀಂದ್ರ ವಿಚಾರಣೆ ಸಾಧ್ಯತೆ

| Updated By: ಗಣಪತಿ ಶರ್ಮ

Updated on: Oct 19, 2024 | 5:58 PM

ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿಯ ಬೆನ್ನಲ್ಲೇ ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಜಮೀನಿನ ಮೂಲ ಮಾಲೀಕನ ಮನೆಗೆ ಭೇಟಿ ಕೊಟ್ಟು, ಮೈಸೂರಿನ ಮುಡಾ ಕಚೇರಿಯಲ್ಲಿ ಬೀಡುಬಿಟ್ಟಿರುವ ಇಡಿ ಅಧಿಕಾರಿಗಳ ತಮಾಸಣೆ ಹೇಗಿದೆ? ದೇವರಾಜ್ ಇಡಿ ವಿಚಾರಣೆ ವೇಳೆ ಹೇಳಿದ್ದೇನು? ಇಡಿ ವಿಚಾರಣೆ ಎತ್ತ ಸಾಗುತ್ತಿದೆ ಎಂಬ ವಿವರ ಇಲ್ಲಿದೆ.

ಮುಡಾ ಹಗರಣ: ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯಗೂ ಇಡಿ ತನಿಖೆ ಬಿಸಿ, ಪತ್ನಿ ಪಾರ್ವತಿ, ಪುತ್ರ ಯತೀಂದ್ರ ವಿಚಾರಣೆ ಸಾಧ್ಯತೆ
ಮುಡಾ ಹಗರಣ: ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯಗೂ ಇಡಿ ತನಿಖೆ ಬಿಸಿ, ಪತ್ನಿ ಪಾರ್ವತಿ, ಪುತ್ರ ಯತೀಂದ್ರ ವಿಚಾರಣೆ ಸಾಧ್ಯತೆ
Follow us on

ಬೆಂಗಳೂರು, ಅಕ್ಟೋಬರ್ 19: ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಶುಕ್ರವಾರದಿಂದ ಮೈಸೂರಿನ ಮುಡಾ ಕಚೇರಿ ಹಾಗೂ ಬೆಂಗಳೂರಿನ ಕೆಂಗೇರಿ ಉಪನಗರದ ಜಮೀನಿನ ಮೂಲ‌ ಮಾಲೀಕ ದೇವರಾಜು ಮನೆಗೆ ಭೇಟಿ ಕೊಟ್ಟಿರುವ ಇಡಿ ಅಧಿಕಾರಿಗಳು ಇಡೀ ದಿನ ತಲಾಶ್ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೂ ಇಡಿ ಕಂಟಕ ಎದುರಾಗಲಿದೆ. ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಮತ್ತು ಪತ್ನಿ ಪಾರ್ವತಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಮೈಸೂರಿನ ಮುಡಾ ಕಚೇರಿ ಹಾಗೂ ಇತರೆಡೆಗಳಲ್ಲಿ ದಾಳಿ ನಡೆಸುವ ಮೂಲಕ ಇಡಿ ತನಿಖೆ ಚುರುಕುಗೊಳಿಸಿದೆ. 14 ನಿವೇಶಗಳನ್ನು ಸಿಎಂ ಪತ್ನಿ ಮುಡಾಗೆ ಹಿಂದಿರುಗಿಸಿದ್ದರೂ ವಿಚಾರಣೆ ಅನಿವಾರ್ಯ ಎನ್ನಲಾಗಿದೆ. ಇಡಿ ಇಕ್ಕಳದಲ್ಲಿ ಸಿಎಂ ಸಿದ್ದು ಪುತ್ರ ಯತೀಂದ್ರ ಸಿದ್ದರಾಮಯ್ಯ ಸಿಲುಕುವ ಸಾಧ್ಯತೆಗಳಿದೆ. ಇದಕ್ಕೆ, ಯತೀಂದ್ರ ಸಿದ್ದರಾಮಯ್ಯ ಮುಡಾ ಸಭೆಯಲ್ಲಿ ಭಾಗಿಯಾಗಿದ್ದಾಗಿ ಆರೋಪವಿರುವುದೇ ಮುಖ್ಯ ಕಾರಣ.

ಪರಿಹಾರ ನಿವೇಶನ ಮಂಜೂರು ಸಭೆಯಲ್ಲಿದ್ದ ಯತೀಂದ್ರ!

ಕೆಸೆರೆ ಗ್ರಾಮದ ಸರ್ವೆ ನಂ. 464 ರ 3 ಎಕರೆ16 ಗುಂಟೆ ಜಮೀನು ಅನ್ನು ಮುಡಾ ಡಿನೋಟಿಫಿಕೇಷನ್ ಮಾಡಿತ್ತು. ಬದಲಿ ನಿವೇಶನಕ್ಕೆ ಪತ್ರ ಬರೆದಿದ್ದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ, ತಮ್ಮ ಅರಿಶಿಣ ಕುಂಕುಮಕ್ಕೆಂದು ತವರು ಮನೆಯಿಂದ ಸಹೋದರ ಮಲ್ಲಿಕಾರ್ಜುನ ಸ್ವಾಮಿ ನೀಡಿದ್ದ ಕೆಸೆರೆ ಗ್ರಾಮದ ಸರ್ವೆ ನಂ.464 ರ 3 ಎಕರೆ 16 ಗುಂಟೆ ಜಮೀನ ಡಿನೋಟಿಫಿಕೇಷನ್ ಮಾಡಿದ್ದಕ್ಕೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದರು. ಈ ಪತ್ರದ ಬಳಿಕ ಬದಲಿ 14 ನಿವೇಶನಗಳನ್ನು ಪಾರ್ವತಿ ಸಿದ್ದರಾಮಯ್ಯಗೆ ನೀಡುವಂತೆ ಮುಡಾ ಸಭೆ ತೀರ್ಮಾನ ಮಾಡಿತ್ತು. ಇದೇ ಮುಡಾ ಸಭೆಯಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ. ಬದಲಿ‌ ನಿವೇಶನ ನೀಡಿದ್ದ ಯಾವುದೇ ದಾಖಲೆಗಳಲ್ಲೂ ಸಿಎಂ ಸಿದ್ದರಾಮಯ್ಯ ಅಥವಾ ಯತೀಂದ್ರ ಸಿದ್ದರಾಮಯ್ಯ ಸಹಿ ಇಲ್ಲ. ಆದಾಗ್ಯೂ ಸಿಎಂ ಸಿದ್ದರಾಮಯ್ಯ ಪ್ರಭಾವ ಬಳಸಿ ಬದಲಿ ನಿವೇಶನ ಪಡೆದಿರುವ ಗಂಭೀರ ಆರೋಪವಿದೆ.

50-50 ನಿಯಮದಡಿ ಬದಲಿ 11 ನಿವೇಶನಗಳನ್ನು ಪರಿಹಾರವಾಗಿ ಪಾರ್ವತಿ ಸಿದ್ದರಾಮಯ್ಯಗೆ ನೀಡುವಂತೆ ಕೈಗೊಂಡಿದ್ದ ತೀರ್ಮಾನವಾದ ಸಭೆಯಲ್ಲಿ ಭಾಗಿಯಾಗಿದ್ದ ಕಾರಣ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಇಡಿ ವಿಚಾರಣೆ ಎದುರಿಸಬೇಕಾಗಬಹುದು.

ಹಂತ ಹಂತವಾಗಿ ಆರೋಪಿಗಳ ವಿಚಾರಣೆ ನಡೆಸಲಿರುವ ಇಡಿ

ಮೈಸೂರಿನ ಸರಸ್ವತಿ ನಗರದಲ್ಲಿ 14 ನಿವೇಶನ ನೀಡುವುದಕ್ಕೆ ಸಂಬಂಧಿಸಿ ಮುಡಾ ಸಭೆ ನಡೆಸಿತ್ತು‌. ಮುಡಾ ಹಗರಣ ಸಂಬಂಧ ಇಡಿ ಅಧಿಕಾರಿಗಳು ಮೂಲ ಮಾಲೀಕ ಎನ್ನಲಾಗಿರುವ ದೇವರಾಜ್ ಮನೆಯಲ್ಲಿ ಕೆಲ ದಾಖಲೆಗಳು ವಶಕ್ಕೆ ಪಡೆದಿದ್ದಾರೆ. ಮೈಸೂರು ಹೊರವಲಯದ ಕೆಸೆರೆ ಗ್ರಾಮದ ಸರ್ವೆ ನಂ. 464 ರ ದಾಖಲೆ, ಭೂ ದಾಖಲೆಗಳನ್ನು ವಶಕ್ಕೆ ಪಡೆದು ತೆರಳಿರುವ ಇಡಿ ಅಧಿಕಾರಿಗಳು, ಶುಕ್ರವಾರ ಇಡೀ ದಿನ 12 ಗಂಟೆಗಳ ನಿರಂತರ ಪರಿಶೀಲನೆ ನಡೆಸಿದ್ದಾರೆ. ದೇವರಾಜ್ ಬಳಿ ದಾಖಲೆಗಳನ್ನು ಮುಂದಿಟ್ಟುಕೊಂಡು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಜಮೀನು ಪರಭಾರೆ, ಮಾಲೀಕತ್ವ ಸೇರಿದಂತೆ ಹಲವು ವಿಚಾರಗಳ ಸಂಬಂಧ ವಿಚಾರಣೆ ನಡೆಸಿದ್ದು, ಪ್ರಾಥಮಿಕ ವಿಚಾರಣೆ ನಡೆಸಿ ಹೊರಟಿರುವ ನಾಲ್ವರು ಇಡಿ ಅಧಿಕಾರಿಗಳು, ಅಗತ್ಯವಿದ್ದಲ್ಲಿ ನೋಟಿಸ್ ಜಾರಿ ಮಾಡಿದಾಗ ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಅಗತ್ಯ ದಾಖಲೆಗಳೊಂದಿಗೆ ದೇವರಾಜ್​ಗೆ ಹಾಜರಾಗುವಂತೆ ಸೂಚಿಸಿರುವ ಇಡಿ ಅಧಿಕಾರಿಗಳು, ಪ್ರಕರಣ ಗಂಭೀರವಾಗಿದ್ದು ಸಹಕರಿಸುವಂತೆ ತಾಕೀತು ಮಾಡಿದ್ದಾರೆ.

ಜಮೀನು ಮೂಲ ದಾಖಲೆಗಳೇನು? ಯಾರಿಂದ ದೇವರಾಜ್​​ಗೆ ಜಮೀನು ಬಂದಿದ್ದು, ಆ ಬಳಿಕ ನಡೆದ ವಿದ್ಯಮಾನಗಳೇನು, ಮಲ್ಲಿಕಾರ್ಜುನ ಸ್ವಾಮಿಗೆ ಜಮೀನು ಮಾರಾಟ ಸೇರಿದಂತೆ ಹಲವು ಆಯಾಮಗಳಲ್ಲಿ ಪ್ರಶ್ನೆಗಳನ್ನಿಟ್ಟು ಉತ್ತರ ಪಡೆಯಲು ಅಧಿಕಾರಿಗಳು ಯತ್ನಿಸಿದ್ದಾರೆ. ನಿಂಗ ಎಂಬಾತನಿಂದ ತನಗೆ ಜಮೀನು ಬಂದಿದ್ದಾಗಿ ದೇವರಾಜ್ ಇಡಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದು, ಜಮೀನಿಗೆ ಸಂಬಂಧಿಸಿದ ಕೆಲ ಮಹತ್ವದ ದಾಖಲೆಗಳನ್ನು ಇಡಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮೇಲೆ ಮತ್ತೊಂದು ಭೂ ಅಕ್ರಮ ಆರೋಪ

ರಾಷ್ಟ್ರೀಯ ತನಿಖಾ ಸಂಸ್ಥೆಯಾಗಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತನಿಖಾ ಶೈಲಿ ಇತರೆ ತನಿಖಾ ಸಂಸ್ಥೆಗಳಿಗಿಂತ ಭಿನ್ನವಾಗಿರಲಿದೆ. ಸದ್ಯ ಇಡಿ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇಡಿ ಕುಣಿಕೆ ಬಿಗಿಯಾಗುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ