AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮೇಲೆ ಮತ್ತೊಂದು ಭೂ ಅಕ್ರಮ ಆರೋಪ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಸಂಬಂಧ ಇದೀಗ ಜಾರಿ ನಿರ್ದೇಶನಾಲಯ ಮುಡಾ ಕಚೇರಿ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ. ಈ ಸಂದರ್ಭದಲ್ಲೇ ಇದೀಗ ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಏನಿದು ಆರೋಪ? ಈಗ್ಯಾಕೆ ಮುನ್ನೆಲೆಗೆ ಬಂತು? ಇತ್ಯಾದಿ ವಿವರಗಳು ಇಲ್ಲಿವೆ.

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮೇಲೆ ಮತ್ತೊಂದು ಭೂ ಅಕ್ರಮ ಆರೋಪ
ಮುಡಾ ಹಗರಣ
ರಾಮ್​, ಮೈಸೂರು
| Edited By: |

Updated on:Oct 19, 2024 | 2:44 PM

Share

ಮೈಸೂರು, ಅಕ್ಟೋಬರ್ 19: ಮುಡಾ ಹಗರಣ ಸಂಬಂಧ ತನಿಖೆ ಪ್ರಗತಿಯಲ್ಲಿರುವಾಗಲೇ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ ಕೇಳಿಬಂದಿದೆ. ಅಚ್ಚರಿಯೆಂದರೆ, ಅದೂ ಸಹ ಮುಡಾ ಭೂಮಿಗೆ ಸಂಬಂಧಿಸಿದ್ದೇ ಆಗಿದೆ. ಸಿಎಂ ಪತ್ನಿ ವಿರುದ್ಧ ಮೈಸೂರಿನಲ್ಲಿ ಆರ್​ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ.

ಸಿಎಂ ಪತ್ನಿ ವಿರುದ್ಧದ ಆರೋಪವೇನು?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 7 ಗುಂಟೆ ಜಾಗವನ್ನು 29-9-2023 ರಂದು ಸಿಎಂ ಪತ್ನಿ ಪಾರ್ವತಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ನಗರದ ಕೆಆರ್​​ಎಸ್ ರಸ್ತೆಯಲ್ಲಿರುವ‌ ಸರ್ವೇ ನಂಬರ್ 454ರ ಜಾಗ ನೋಂದಾಯಿಸಿಕೊಳ್ಳಲಾಗಿತ್ತು. ಅಲ್ಲಿ ಗಣೇಶ್ ದೀಕ್ಷಿತ್ ಎಂಬುವವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗವಿತ್ತು. ಅದರಲ್ಲಿ 20 ಗುಂಟೆ ಜಾಗವನ್ನು ಸಿಎಂ ಪತ್ನಿ ಪಾರ್ವತಿ ಖರೀದಿ ಮಾಡಿದ್ದರು. 20 ಗುಂಟೆ ಜಾಗಕ್ಕೆ 1.85 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದರು. (20 ಗುಂಟೆ) 21,771,99 ಚದರಡಿ ಜಾಗವನ್ನು ನೋಂದಣಿ ಮಾಡಿಸಿಕೊಂಡಿದ್ದರು. ಅದರಲ್ಲಿ 8998 ಚದರಡಿ ಜಾಗವನ್ನು ಗಣೇಶ್ ದೀಕ್ಷಿತ್, ರಸ್ತೆ ಮತ್ತು ಪೈಪ್ ಲೈನ್​​ಗೆಂದು ಮುಡಾಗೆ ಬಿಟ್ಟುಕೊಟ್ಟಿದ್ದರು. ಮುಡಾಗೆ ಬಿಟ್ಟು ಕೊಟ್ಟ ರಸ್ತೆ ಮತ್ತು ಪೈಪ್ ಲೈನ್​​ಗೆ ಸೇರಿದ್ದ ಜಾಗವನ್ನು ಕೂಡ ತಮ್ಮ ಹೆಸರಿಗೆ ಸೇರಿಸಿಕೊಂಡು ಪಾರ್ವತಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ.

ಆ ವಿಚಾರವಾಗಿ ಆರ್​ಟಿಐ ಕಾರ್ಯಕರ್ತರು ಅರ್ಜಿ ಹಾಕುತ್ತಿದ್ದಂತೆಯೇ ಎಚ್ಚೆತ್ತ ಸಿಎಂ ಪತ್ನಿ, 30-8-2024 ಹಾಗೂ 31-08-2024 ರಂದು ಮತ್ತೆ ರಿಜಿಸ್ಟರ್ ತಿದ್ದುಪಡಿ ಮಾಡಿಸಿದ್ದಾರೆ. ಮುಡಾದ ಜಾಗವನ್ನು ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಗಂಗರಾಜು ಹೇಳಿದ್ದಾರೆ.

ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ: ಗಂಗರಾಜು

ಈ ಪ್ರಕರಣದಲ್ಲೂ ಸಿಎಂ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡುತ್ತೇನೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ಪತ್ನಿಗೆ 1 ಕೋಟಿ 85 ಲಕ್ಷ ರೂಪಾಯಿ ಹಣ ಎಲ್ಲಿಂದ ಬಂತು? ಸಿದ್ದರಾಮಯ್ಯಗೆ ಗೊತ್ತಿಲ್ಲದೆ ಖರೀದಿ ಹೇಗೆ ಮಾಡುತ್ತಾರೆ? ಇದು ಗೊತ್ತಿದ್ದು ಮಾಡಿರುವ ತಪ್ಪು. ಒಂದು ವೇಳೆ ನಾನು ಆರ್‌ಟಿ‌ಐನಲ್ಲಿ ಮಾಹಿತಿ ಕೇಳದೆ ಇದ್ದಿದ್ದರೆ ವಾಪಸ್ಸು ಕೊಡುತ್ತಿರಲಿಲ್ಲ. ವಾಪಸ್ಸು ಕೊಟ್ಟ ಮಾತ್ರಕ್ಕೆ ನಾನು ಹೋರಾಟ ನಿಲ್ಲಿಸುವುದಿಲ್ಲ. ಕಳ್ಳ ಸಿದ್ದರಾಮಯ್ಯ ಮನೆಯಲ್ಲಿ ಕಳ್ಳತನ ಮಾಡಿ , ಸಿಕ್ಕಿಹಾಕಿಕೊಂಡಾಗ ಅದ್ದನ್ನು ವಾಪಸ್ಸು ನೀಡಿದರೆ ಅವನನ್ನು ಬಿಡುತ್ತಾರಾ? ಇದು ಅದೇ ರೀತಿ. ನಾನು ಹೋರಾಟ ನಿಲ್ಲಿಸುವುದಿಲ್ಲ ಎಂದು ಆರ್​​ಟಿಐ ಕಾರ್ಯಕರ್ತ ಗಂಗರಾಜು ಹೇಳಿಕೆ ‘ಟಿವಿ9’ಗೆ ಹೇಳಿಕೆ ನೀಡಿದ್ದಾರೆ.

ಮುಂದುವರಿದ ಇಡಿ ಶೋಧ

ಮುಡಾ ಹಗರಣ ಸಂಬಂಧ ಮೈಸೂರಿನಲ್ಲಿರುವ ಕಚೇರಿ ಮೇಲೆ ಇಡಿ ದಾಳಿ ಎರಡನೇ ದಿನ ಮಧ್ಯಾಹ್ನವರೆಗೂ ಮುಂದುವರಿದಿದೆ. ಮುಡಾ ಕಚೇರಿಗೆ ಆಗಮಿಸಿದ ಇಬ್ಬರು ಇಡಿ ಅಧಿಕಾರಿಗಳು, ದಾಖಲೆಗಳ ಕ್ರೋಡೀಕರಣಕ್ಕೆ ಡಿಜಿಟಲ್ ಹಾರ್ಡ್ ಡಿಸ್ಕ್ ತಂದಿದ್ದಾರೆ.

ಇದನ್ನೂ ಓದಿ: ಮುಡಾ ಕಚೇರಿಯಲ್ಲಿ ಇಡಿಗೆ ಸಿಕ್ತು ಅತಿದೊಡ್ಡ ಸಾಕ್ಷ್ಯ: ವೈಟ್ನರ್ ಇರುವ, ಇಲ್ಲದ ಮೂಲ ದಾಖಲೆ ಪತ್ತೆ

ಮತ್ತೊಂದೆಡೆ, ಮುಡಾ, ತಾಲೂಕು ಕಚೇರಿ ಬಳಿಕ ಡಿಸಿ ಕಚೇರಿ ಮೇಲೂ ದಾಳಿ ನಡೆಸಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಭೂ ಪರಿವರ್ತನೆ ದಾಖಲೆ ಪರಿಶೀಲನೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ತಹಶೀಲ್ದಾರ್ ಬಳಿ ಹಲವು ದಾಖಲೆ ಪಡೆದುಕೊಂಡಿರುವ ಇಡಿ ಅಧಿಕಾರಿಗಳು, ಸರ್ವೆ ನಂ. 464 ಮತ್ತು 462ರ ದಾಖಲೆಗಳ ಜೆರಾಕ್ಸ್ ಪ್ರತಿಯನ್ನೂ ಪಡೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:30 pm, Sat, 19 October 24