ಬ್ಲ್ಯಾಕ್ & ವೈಟ್ ಟಿವಿ, ಡಿವಿಡಿ ಇಟ್ಟುಕೊಂಡು ದೊಡ್ಡಾಲಹಳ್ಳಿಯಲ್ಲಿ ಏನು ಪ್ರದರ್ಶಿಸುತ್ತಿದ್ದರು? ಕುಮಾರಸ್ವಾಮಿ ವ್ಯಂಗ್ಯ

| Updated By: Ganapathi Sharma

Updated on: Aug 03, 2024 | 12:53 PM

BJP JDS Padayatra; ಮುಡಾ ಹಗರಣ ಪ್ರತಿಭಟಿಸಿ ಜೆಡಿಎಸ್ ಬಿಜೆಪಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಬ್ಲ್ಯಾಕ್ & ವೈಟ್ ಟಿವಿ, ಡಿವಿಡಿ ಇಟ್ಟುಕೊಂಡು ದೊಡ್ಡಾಲಹಳ್ಳಿಯಲ್ಲಿ ಏನು ಪ್ರದರ್ಶಿಸುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಬ್ಲ್ಯಾಕ್ & ವೈಟ್ ಟಿವಿ, ಡಿವಿಡಿ ಇಟ್ಟುಕೊಂಡು ದೊಡ್ಡಾಲಹಳ್ಳಿಯಲ್ಲಿ ಏನು ಪ್ರದರ್ಶಿಸುತ್ತಿದ್ದರು? ಕುಮಾರಸ್ವಾಮಿ ವ್ಯಂಗ್ಯ
ಕುಮಾರಸ್ವಾಮಿ
Follow us on

ಬೆಂಗಳೂರು, ಆಗಸ್ಟ್ 3: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಕೆಂಗೇರಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಜೈಲಿಗೆ ಹೋಗಲು ಸಿದ್ಧ ಎಂದು ಅವರೇ (ಡಿಕೆ ಶಿವಕುಮಾರ್​​ ಉದ್ದೇಶಿಸಿ) ನಿನ್ನೆ ಹೇಳಿದ್ದಾರೆ. ರಾಜಕಾರಣಕ್ಕೆ ಬರುವ ಮುಂಚೆ ಅವರ ಆಸ್ತಿ ಏನಿತ್ತು ಎಂಬುದನ್ನು ಅವರ ಗುರುಗಳು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಬ್ಲಾಕ್‌ ಅಂಡ್ ವೈಟ್ ಟಿವಿ ಮತ್ತು ಡಿವಿಡಿ ಇಟ್ಟುಕೊಂಡು ದೊಡ್ಡಾಲಹಳ್ಳಿ ಮತ್ತು ಕೋಡಿ ಹಳ್ಳಿಯಲ್ಲಿ ಏನು ಪ್ರದರ್ಶನ ಮಾಡುತ್ತಿದ್ದರು, ಅದರಿಂದ ಏನು ಹಣ ಸಂಪಾದನೆ ಮಾಡುತ್ತಿದ್ದರು ಎಂಬುದಾಗಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಪಾದಯಾತ್ರೆಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಮಾತ್ರ ಇಲ್ಲ. ನಾಡಿನ ಜನರ ಅಭಿಪ್ರಾಯ ಇಲ್ಲಿದೆ. ನಿನ್ನೆ ಬಿಡದಿಯಲ್ಲಿ ಕಾಂಗ್ರೆಸ್​ನವರು ನನಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಪ್ರಶ್ನೆಗಳಿಗೆ ಬಿಡದಿ, ರಾಮನಗರದಲ್ಲಿ ಉತ್ತರ ಕೊಡುತ್ತೇನೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಆಸ್ತಿ ಬಗ್ಗೆ ಹೇಳುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೇಳಿದ್ದಾರೆ. ಅವರ ವಿರುದ್ಧ ದಾಖಲೆ ತೆಗೆದುಕೊಂಡು ಹೋಗಿ ಕೊಟ್ಟಿದ್ದೇನಂತೆ. ಜೈಲಿಗೆ ಹೋಗಲು ಸಿದ್ಧ ಎಂದಿದ್ದಾರೆ. ರಾಜಕಾರಣಕ್ಕೆ ಬರುವ ಮೊದಲು ಅವರ ವ್ಯವಹಾರ ಏನಿತ್ತು ಎಂಬುದನ್ನು ಅವರ ಗುರು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಗೃಹ ಸಚಿವ ಪರಮೇಶ್ವರ್ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಪರಮೇಶಣ್ಣ ಯಾದಗಿರಿಯಲ್ಲಿ ನಿಮ್ಮ ಇಲಾಖೆಯ ಪಿಎಸ್​ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕೊಡಿ. ಸಿದ್ದರಾಮಯ್ಯ ಹಿಂದೆ ಸಿಎಂ ಆಗಿದ್ದಾಗ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ಯಾಕೆ ಶರಣಾದರು? ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆ ಕೊಡದ ಸರ್ಕಾರ ಹಿಂದುಳಿದ ವರ್ಗಗಳಿಗೆ ರಕ್ಷಣೆ ಕೊಡಲು ಸಾಧ್ಯವೇ ಎಂದು ಹಿಂದುಳಿದ ವರ್ಗಗಳ ಮುಖಂಡರು ತಿಳಿದುಕೊಳ್ಳಬೇಕು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ