ಇಡಿ ಕ್ರಮ ನ್ಯಾಯಸಮ್ಮತವಾಗಿರಬೇಕು: ಮುಡಾ ಮಾಜಿ ಆಯುಕ್ತರ ಶೋಧನೆ ರದ್ದುಗೊಳಿಸಿದ ಕೋರ್ಟ್
ಮುಡಾದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಸಂಸ್ಥೆಯು ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧ ಜಾರಿ ಮಾಡಿರುವ ಸಮನ್ಸ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಇಡಿ ಕ್ರಮ ನ್ಯಾಯಸಮ್ಮತವಾಗಿರಬೇಕು ಎಂದಿರುವ ಕೋರ್ಟ್, ಇಡಿ ಮುಂದೆ ನಟೇಶ್ ದಾಖಲಿಸಿದ್ದ ಹೇಳಿಕೆಯನ್ನೂ ರದ್ದುಗೊಳಿಸಿದೆ.

ಬೆಂಗಳೂರು, ಜನವರಿ 30: ಮುಡಾ ಹಗರಣ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧದ ಜಾರಿ ನಿರ್ದೇಶನಾಲಯ ಸಮನ್ಸ್ ರದ್ದು ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ನಟೇಶ್ ವಿರುದ್ಧ ಪಿಎಂಎಲ್‌ಎ ಕಾಯ್ದೆ ಅಡಿಯ ಇಡಿ ಶೋಧನೆಯನ್ನು ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಬಳಿ ನಟೇಶ್ ದಾಖಲಿಸಿದ್ದ ಹೇಳಿಕೆಯನ್ನೂ ಹೈಕೋರ್ಟ್ ರದ್ದುಪಡಿಸಿದೆ. ಡಿಬಿ ನಟೇಶ್ ವಿರುದ್ಧ ಯಾವುದೇ ಅಧಿಸೂಚಿತ ಕೇಸ್ ದಾಖಲಾಗಿರಲಿಲ್ಲ. 14 ಸೈಟ್ ಹಂಚಿಕೆ ಕೇಸ್ನಲ್ಲಿ ಡಿ.ಬಿ.ನಟೇಶ್ ಆರೋಪಿಯಲ್ಲ. ಮುಡಾ ಮಾಜಿ ಆಯುಕ್ತರ ವಿರುದ್ಧ ನಂಬಲರ್ಹ ಆರೋಪಗಳಿಲ್ಲ. ಪ್ರಮುಖ ತನಿಖಾ ಸಂಸ್ಥೆಯಾಗಿರುವ ಇಡಿ ಕ್ರಮ ನ್ಯಾಯಸಮ್ಮತವಾಗಿರಬೇಕು ಎಂದು ಹೈಕೋರ್ಟ್ ಹೇಳಿದೆ.
ಏಕಪಕ್ಷೀಯ ಶೋಧನೆ ವಿರುದ್ಧವೂ ವ್ಯಕ್ತಿಗೆ ಖಾಸಗಿತನದ ಹಕ್ಕಿದೆ. ಮೇಲ್ನೋಟಕ್ಕೆ ಸಾಕ್ಷ್ಯಗಳಿಲ್ಲದಿದ್ರೂ ಇಡಿ ನಟೇಶ್ ಅವರನ್ನು ಶೋಧನೆಗೆ ಒಳಪಡಿಸಿದ್ದು ಕಾನೂನುಬಾಹಿರ ಎಂದು ನ್ಯಾ. ಹೇಮಂತ ಚಂದನ ಗೌಡರ್ ಅವರ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಮತ್ತೊಂದೆಡೆ, ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ನೇಹಮಯಿ ಕೃಷ್ಣ ಹೋರಾಟ ಪ್ರಮುಖ ಹಂತಕ್ಕೆ ಬಂದು ನಿಂತಿದೆ. ಹಗರಣದ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಬೇಕು ಎಂಬ ವಿಚಾರವಾಗಿ ಸುದೀರ್ಘ ವಾದ ಪ್ರತಿವಾದಗಳನ್ನು ಹೈಕೋರ್ಟ್ ಆಲಿಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಒಂದು ವೇಳೆ ಹಗರಣದ ತನಿಖೆಯ ಹೊಣೆಯನ್ನು ಹೈಕೋರ್ಟ್ ಸಿಬಿಐಗೆ ವಹಿಸಿದ್ದೇ ಆದಲ್ಲಿ ಸಿದ್ದರಾಮಯ್ಯಗೆ ತುಸು ಹಿನ್ನಡೆಯಾದಂತೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಮುಡಾ ಹಗರಣ ತನಿಖೆ ಸಿಬಿಐಗೆ ವಹಿಸಲು ಮನವಿ: ಹೈಕೋರ್ಟ್ನಲ್ಲಿ ನಡೆದ ಸುದೀರ್ಘ ವಾದ ಪ್ರತಿ ವಾದದ ವಿವರ ಇಲ್ಲಿದೆ
ಹಗರಣದ ಬಗ್ಗೆ ಲೋಕಾಯುಕ್ತ ಈಗಾಗಲೇ ತನಿಖೆಯನ್ನು ಪೂರ್ಣಗೊಳಿಸಿದ್ದು ವರದಿ ಸಿದ್ಧಪಡಿಸಿ ಮುಚ್ಚಿದ ಲಕೋಟೆಯಲ್ಲಿ ಕರ್ನಾಟಕ ಹೈಕೋರ್ಟಿಗೆ ಸಲ್ಲಿಕೆ ಮಾಡಿದೆ. ಇದನ್ನು ಕೂಡ ಪರಿಶೀಲಿಸುವುದಾಗಿ ಹೈಕೋರ್ಟ್ ಹೇಳಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಮುಡಾ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುತ್ತಿದೆ. ಹಣಕಾಸು ಅವ್ಯವಹಾರ ವಿಷಯವಾಗಿ ಜಾರಿ ನಿರ್ದೇಶನಾಲಯ ತನಿಖೆ ಪ್ರಗತಿಯಲ್ಲಿದೆ. ಇದರ ಅಂಗವಾಗಿ ಜಾರಿ ನಿರ್ದೇಶನಾಲಯ ನಟೇಶ್ ಅವರಿಗೆ ಸಮನ್ಸ್ ನೀಡಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ