ಬೆಂಗಳೂರು, ಸೆಪ್ಟೆಂಬರ್ 30: ನಲವತ್ತು ವರ್ಷಗಳ ರಾಜಕಾರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಕಪ್ಪು ಚುಕ್ಕೆ ಇಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯಗೆ ಮುಡಾ ಕೇಸ್ ಮುಳ್ಳಾಗಿ ಚುಚ್ಚುತ್ತಿದೆ. ಸಿಎಂ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಇಂದಿನಿಂದ ಅಸಲಿ ತನಿಖೆ ಶುರುವಾಗಲಿದೆ. ಇಂದಿನಿಂದ ಸಿಎಂ ವಿರುದ್ಧ ಲೋಕಾಯುಕ್ತ ತನಿಖೆ ಚುರುಕುಗೊಳ್ಳಲಿದ್ದು, ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ 4 ತಂಡಗಳಿಂದ ತನಿಖೆ ನಡೆಯಲಿದೆ.
ಕಳೆದೆರಡು ದಿನಗಳಿಂದ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಮುಡಾಗೆ ಸಂಬಂಧಿಸಿದ 1998 ರಿಂದ 2023ರ ವರೆಗಿನ ಸಂಪೂರ್ಣ ಕಡತಗಳ ಪಡೆಯಲಿರುವ ಲೋಕಾಯುಕ್ತ ಪೊಲೀಸರು, ರೆವೆನ್ಯೂ ಎಕ್ಸ್ಪರ್ಟ್ಗಳ ಮೂಲಕ ಮುಡಾ ಕಡತಗಳ ಪರಿಶೀಲನೆ ನಡೆಸಲಿದ್ದಾರೆ. ಜಮೀನಿನ ಮೂಲ ಮಾಲೀಕರಿಗೂ ನೋಟಿಸ್ ನೀಡಿ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ. ಎಲ್ಲಾ ಆರೋಪಿಗಳಿಗೆ ವಿಚಾರಣೆಗಾಗಿ ನೋಟಿಸ್ ಜಾರಿ ಮಾಡಿ ತನಿಖೆ ಮಾಡಲಿದ್ದಾರೆ. ತನಿಖೆಯಲ್ಲಿ ಪತ್ತೆಯಾದ ಅಂತಿಮ ವರದಿಯನ್ನು ಕೋರ್ಟ್ಗೆ ಸಲ್ಲಿಸಲಿದ್ದಾರೆ.
ಮುಡಾ ಕೇಸ್ಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ಆದರೆ, ದೂರು ಕೊಟ್ಟ ಕೊಡಲೇ ತನಿಖೆಯಾಗಲ್ಲ ಎಂದು ಸಿಎಂ ಹೇಳಿದ್ದಾರೆ.
ಮುಡಾ ಕೇಸ್ಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾದಾಗ ಸಿದ್ದರಾಮಯ್ಯ ತುಸು ಮೌನಕ್ಕೆ ಶರಣಾಗಿದ್ದರು. ಆದರೆ, ಕಾನೂನು ತಜ್ಞರ ಜೊತೆ ಚರ್ಚಿಸಿದ ಬಳಿಕ ಮೈಸೂರಲ್ಲಿ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ನಾನು ಯಾರಿಗೂ ಜಗ್ಗಲ್ಲ, ಬಗ್ಗಲ್ಲ, ಹೆದರಲ್ಲ ಅಂತಾ ಗುಡುಗಿದ್ದಾರೆ.
ಈ ಮಧ್ಯೆ ಎರಡು ದಿನ ಹಿಂದಷ್ಟೇ ಡಿಸಿಎಂ ಡಿಕೆ ಶಿವಕುಮಾರ್, ನಾನು ರಾಜ್ಯಕ್ಕೆ ಸೇವೆ ಮಾಡಬೇಕು, ಅದಕ್ಕಾಗಿ ದೊಡ್ಡ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದರು. ಇದಕ್ಕೆ ಸಿಎಂ ಆಪ್ತ ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದು, ಕೆಲವರು ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವುದನ್ನೇ ಕಾಯುತ್ತಿದ್ದಾರೆ ಎಂಬ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಇದನ್ನೂ ಓದಿ: ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿಗೂ ದೂರು ನೀಡಿದ ಸ್ನೇಹಮಯಿ ಕೃಷ್ಣ
ಅದೇನೆ ಇರಲಿ, ಸಿಎಂಗೆ ಮಗ್ಗಲ ಮುಳ್ಳಾಗಿ ಕಾಡುತ್ತಿರುವ ಮುಡಾ ಕೇಸ್ ಇಂದಿನಿಂದ ಹೊಸ ರೂಪ ಪಡೆದುಕೊಳ್ಳುತ್ತಿದೆ. ತನಿಖೆ ಆರಂಭವಾಗುತ್ತಿದ್ದಂತೆಯೇ ಏನೆಲ್ಲಾ ಬಯಲಾಗಲಿದೆ ಎಂಬುದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ