ಬೆಂಗಳೂರು, ಅಕ್ಟೋಬರ್ 09: ಮುಡಾ ಪ್ರಕರಣದ ತನಿಖೆ ಚುರುಕುಗೊಂಡಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ದಾಖಲೆ ಕೆದಕೋದಕ್ಕೆ ಮುಂದಾಗಿದೆ. ಇದೆಲ್ಲಾ ಜಟಾಪಟಿ ನಡುವೆ ಸಿಎಂ ಸಿದ್ದರಾಮಯ್ಯ (Siddaramaiah) ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರನ್ನು ಭೇಟಿ ನೀಡಿದ್ದಾರೆ. ಬೆಂಗಳೂರಿಗೆ ಮಾಲ್ಡೀವ್ಸ್ ಅಧ್ಯಕ್ಷರ ಭೇಟಿ ಹಿನ್ನೆಲೆಯಲ್ಲಿ ರಾಜಭವನದಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಹೀಗಾಗಿ ರಾಜ್ಯಪಾಲರ ಆಹ್ವಾನ ಮೇರೆಗೆ ರಾಜಭವನಕ್ಕೆ ತೆರಳಿದ್ದ ಸಿದ್ದರಾಮಯ್ಯ ಈ ವೇಳೆ ಭೇಟಿ ಮಾಡಿ ನಗುಮುಖದಿಂದಲೇ ಕೈಕುಲುಕಿ ಕುಶಲೋಪರಿ ವಿಚಾರಿಸಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಆರೋಪ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ಗೆ ಇತ್ತೀಚೆಗೆ ಅನುಮತಿ ನೀಡಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚನಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದರು. ಇದನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಬಿಜೆಪಿ ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡುತ್ತಿದ್ದರು.
ಇದನ್ನೂ ಓದಿ: ಸಿಎಂರನ್ನು ನಾನು ಭೇಟಿಯಾಗದೆ ವಿರೋಧ ಪಕ್ಷದವರು ಭೇಟಿಯಾಗ್ತಾರಾ? ಡಿಕೆ ಶಿವಕುಮಾರ್
ಬಳಿಕ ಎಚ್ಚೆತ್ತುಕೊಂಡ ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಆ ಮೂಲಕ ಕಾನೂನು ಹೋರಾಟಕ್ಕೆ ಮುಂದಾದರು. ಕಾನುನೂ ತಜ್ಞರೊಂದಿಗೆ ಸಮಾಲೋಚನೆ ಮಾಡಿದ್ದರು. ಬಳಿಕ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ ಆದೇಶಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಇದನ್ನೂ ಓದಿ: ಸಿಎಂ ಮನೆಗೆ ಡಿಸಿಎಂ ಭೇಟಿ, ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್ ಆಗಮನ
ಮುಡಾ ಹಗರಣದಲ್ಲಿ ಇಡಿ ಎಂಟ್ರಿ ಬಳಿಕ ಪಕ್ಷದಲ್ಲಿ ಕೆಲ ಬೆಳವಣಿಗೆಗಳಾಗುತ್ತಿವೆ. ಸಿಎಂ ಆಗಿ ಸಿದ್ದರಾಮಯ್ಯ ಅವರು ಇರ್ತಾರಾ ಅಥವಾ ಇಲ್ವಾ ಅನ್ನೋ ಗುಮಾನಿ ಹಿಂದಿಗಿಂತ್ಲೂ ತುಸು ಜೋರಾಗಿಯೇ ಇದೆ. ಇದೇ ವಿಚಾರಕ್ಕೆ ಕಾಂಗ್ರೆಸ್ ಕೋಟೆಯೊಳಗೆ ರಹಸ್ಯ ಸಭೆಗಳು ಆಗುತ್ತಿರುವ ಮಾಹಿತಿ ಇದೆ. ಹೀಗಾಗಿ ಕಾಂಗ್ರೆಸ್ನಲ್ಲಿ ಯಾವುದೇ ಅಸಮಾಧಾನಗಳು ಭುಗಿಲೇಳದಂತೆ ಎಚ್ಚರಿಕೆ ವಹಿಸಲು, ಪ್ರತಿನಿತ್ಯದ ಚಟುವಟಿಕೆಗಳ ಮೇಲೆ ವರಿಷ್ಠರು ಕಣ್ಣಿಟ್ಟಿದ್ದಾರೆ.
ವರದಿ: ಈರಣ್ಣ ಬಸವ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:10 pm, Wed, 9 October 24