ಮುಡಾ, ವಾಲ್ಮೀಕಿ ಹಗರಣ: ಸಂಸದರಾದ ಜಿ ಕುಮಾರ್​​ ನಾಯಕ್, ತುಕಾರಾಂ ರಾಜೀನಾಮೆಗೆ ಆಗ್ರಹ

|

Updated on: Oct 18, 2024 | 2:41 PM

ಮುಡಾ ಮತ್ತು ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಲಹರ್​ ಸಿಂಗ್​ ಸಿರೋಯಾ ಕರ್ನಾಟಕ ಕಾಂಗ್ರೆಸ್​ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಸದರಾದ ಜಿ ಕುಮಾರ್ ನಾಯಕ್​ ಮತ್ತು ಇ ತುಕಾರಾಂ ಅವರ ರಾಜಿನಾಮೆಗೆ ಆಗ್ರಹಿಸಿದ್ದಾರೆ.

ಮುಡಾ, ವಾಲ್ಮೀಕಿ ಹಗರಣ: ಸಂಸದರಾದ ಜಿ ಕುಮಾರ್​​ ನಾಯಕ್, ತುಕಾರಾಂ ರಾಜೀನಾಮೆಗೆ ಆಗ್ರಹ
ರಾಜ್ಯಸಭಾ ಸದಸ್ಯ ಲಹರ್​ ಸಿಂಗ್​ ಸಿರೋಯಾ
Follow us on

ಬೆಂಗಳೂರು, ಅಕ್ಟೋಬರ್​ 18: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ (Valmiki Scheduled Tribes Development Corporation) ನಡೆದಿದೆ ಎನ್ನಲಾಗಿರುವ ಹಗರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದೆ. ಮುಡಾ (Muda) ಹಗರಣಕ್ಕೆ ಸಂಬಂಧಿಸಿದಂತೆ ರಾಯಚೂರು ಸಂಸದ ಜಿ ಕುಮಾರ್​​ ನಾಯಕ್ (G Kumar Nayak)​ ಮತ್ತು ವಾಲ್ಮಿಕಿ ಹಗರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಸಂಸದ ಇ ತುಕಾರಾಂ (E Tukaram) ರಾಜಿನಾಮೆ ನೀಡಬೇಕೆಂದು ರಾಜ್ಯಸಭಾ ಸದಸ್ಯ ಲಹರ್​ ಸಿಂಗ್​ ಸಿರೋಯಾ (Lehar Singh Siroya) ಆಗ್ರಹಿಸಿದ್ದಾರೆ.

ಮುಡಾ ಹಗರಣದಲ್ಲಿ ರಾಯಚೂರು ಸಂಸದ ಜಿ ಕುಮಾರ್​​ ನಾಯಕ್ ಅವರ ಪಾತ್ರವೂ ಇದೆ ಎಂದು ಹೈಕೋರ್ಟ್ ವಿಚಾರಣೆ ವೇಳೆ ಉಲ್ಲೇಖಿಸಿದೆ. ಆದರೂ ಕೂಡ ಯಾಕೆ ಯಾರು ಕೂಡ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ? ಮೌನವಾಗಿ ಯಾಕೆ ಇದ್ದಾರೆ? ಎಂದು ಪ್ರಶ್ನಿಸಿದರು.

ಸಂಸದ ಜಿ ಕುಮಾರ್​​ ನಾಯಕ್ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಮುಡಾ ಹಗರಣದ ಬಗ್ಗೆ ಸುಳ್ಳು ವರದಿ ಸಲ್ಲಿಸಿದ್ದಾರೆ. ಅಲ್ಲದೇ ಈ ಹಗರಣದಲ್ಲಿ ಅವರ ಕೈವಾಡವೂ ಇದೆ. ಸಂಸದ ಜಿ.ಕುಮಾರ್​​ ನಾಯಕ್ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ ಕೂಡಲೇ ಕಾಂಗ್ರೆಸ್​ ಅವರಿಗೆ ರಾಯಚೂರು ಲೋಕಸಭಾ ಕ್ಷೇತ್ರದ ಟಿಕೆಟ್​ ನೀಡಿತು. ಏಕೆಂದರೆ ಜಿ ಕುಮಾರ್​​ ನಾಯಕ್ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಧೇಯಕರಾಗಿ ನಡೆದುಕೊಂಡಿದ್ದರು ಎಂದು ಹೇಳಿದರು.

ಹೀಗಾಗಿ, ಸಂಸದ ಜಿ ಕುಮಾರ್​​ ನಾಯಕ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಈ ವಿಚಾರವಾಗಿ ಸಂಸದ ಜಿ ಕುಮಾರ್​ ನಾಯಕ್​ ಅವರಿಗೆ ಜಾರಿ ನಿರ್ದೇಶನಾಲಯ ಮತ್ತು ಲೋಕಾಯುಕ್ತ ಕೂಡಲೇ ನೋಟಿಸ್​ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಬೇಕೆಂದು ಮನವಿ ಮಾಡಿದರು.

ಕಳೆದ ಕೆಲವು ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಈ ರಾಜಿನಾಮೆಯಿಂದ ಮುಡಾ ಹಗರಣ ಇನ್ನಷ್ಟು ಜಟಿಲವಾಗುತ್ತದೆ ಹೊರತು ಬಗೆಹರಿಯುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ನಿಜವಾಯ್ತು ಟಿವಿ9 ಡಿಜಿಟಲ್​ ನುಡಿದಿದ್ದ ಭವಿಷ್ಯ; ಮುಡಾ ಕಚೇರಿ ಮೇಲೆ ಇಡಿ ದಾಳಿ, ಸಿದ್ದರಾಮಯ್ಯಗೆ ಹೆಚ್ಚಿದ ಸಂಕಷ್ಟ

ತಮ್ಮ ಕುಟುಂಬಸ್ಥರು ನಿವೇಶನವನ್ನು ಸ್ವಾಧೀನಪಡಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ತಮ್ಮ ವಿರುದ್ಧ ತನಿಖೆಗೆ ಹೈಕೋರ್ಟ್​ ಆದೇಶ ನೀಡಿದ ಬಳಿಕವೂ ಸಿದ್ದರಾಮಯ್ಯ ಅವರು ಇದುವರೆಗೆ ಮೇಲ್ಮನವಿ ಸಲ್ಲಿಸಿಲ್ಲ ಎಂಬುದು ಕುತೂಹಲಕಾರಿಯಾಗಿದೆ. ಬಹುಶಃ ಸುಪ್ರೀಂಕೋರ್ಟ್​ ಕೂಡ ಹೈಕೋರ್ಟ್​ ತೀರ್ಪನ್ನು ಎತ್ತಿಹಿಡಿದರೆ ಏನು ಮಾಡುವುದು ಎಂಬ ಭಯ ಸಿದ್ದರಾಮಯ್ಯ ಅವರಿಗೆ ಕಾಡುತ್ತಿರಬಹುದು. ಹೀಗಾಗಿ, ಸಿದ್ದರಾಮಯ್ಯ ಅವರು ತೀರ್ಪಿಗೆ ಎದುರಾಗಿ ಹಗರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪ ಮಾಡಿದರು.

ಇನ್ನು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ ಪ್ರಕರಣದ ಚಾರ್ಜ್​​ಶೀಟ್​ ಸಲ್ಲಿಕೆ ಮಾಡಿದೆ. ಜಾರ್ಜ್​ಶೀಟ್​​ನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಬಳ್ಳಾರಿ ಚುನಾವಣೆಗೆ ಬಳಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ಹಗರಣದಲ್ಲಿ ಬಳ್ಳಾರಿ ಸಂಸದ ಇ ತುಕಾರಾಂ ಭಾಗಿಯಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ಇ ತುಕಾರಾಮ ಕೂಡ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.

ಹಾಗೇ ರಾಜ್ಯದ ಹಣಕಾಸು ಇಲಾಖೆ ಸಚಿವ ಮತ್ತು ಹಣಕಾಸು ಇಲಾಖೆ ಕಾರ್ಯದರ್ಶಿ ಕೂಡ ತನಿಖೆಗೆ ಒಳಗಾಗಬೇಕು. ಆರೋಪಿಗಳಿಗೆ ಕ್ಲೀನ್​ಚಿಟ್ ನೀಡುವ ಅವಶ್ಯಕತೆ ಇಲ್ಲ. ಅಲ್ಲದೇ, ಮಾಜಿ ಸಚಿವ ಬಿ ನಾಗೇಂದ್ರ​ ಜೈಲಿಂದ ಬಿಡುಗಡೆಯಾದ ಬಳಿಕ ನೀಡಿದ ಹೇಳಿಕೆ ಬಗ್ಗೆ ಇಡಿ ಗಮನಹರಿಸಬೇಕು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:28 pm, Fri, 18 October 24