ಬಳ್ಳಾರಿ: ಕೊವಿಡ್​ನಿಂದ ಗುಣಮುಖರಾದ ಮಕ್ಕಳಲ್ಲಿ ಮಿಸ್- ಸಿ ಕಾಯಿಲೆ; ಪೋಷಕರಲ್ಲಿ ಹೆಚ್ಚಿದ ಆತಂಕ

ಮಲ್ಟಿ ಆರ್ಗನ್ ಇನ್ ಫೆಮಂಟರಿ ಸಿಂಡ್ರೋಮ್ ಇನ್ ಚೀಲ್ಡ್ರನ್( ಮಿಸ್- ಸಿ) ಎಂದು ಕರೆಯಲಾಗುತ್ತದೆ. ಇದು ಕೊರೊನಾ ಬಂದು ಹೋದ ಮಕ್ಕಳಲ್ಲಿ ಕಂಡುಬಂದಿದೆ. ಅಂಥಹ ಮಕ್ಕಳಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ಧನ್ ತಿಳಿಸಿದ್ದಾರೆ.

ಬಳ್ಳಾರಿ: ಕೊವಿಡ್​ನಿಂದ ಗುಣಮುಖರಾದ ಮಕ್ಕಳಲ್ಲಿ ಮಿಸ್- ಸಿ ಕಾಯಿಲೆ; ಪೋಷಕರಲ್ಲಿ ಹೆಚ್ಚಿದ ಆತಂಕ
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on: Jul 04, 2021 | 3:12 PM

ಬಳ್ಳಾರಿ: ಕೊರೊನಾ, ಬ್ಲಾಕ್ ಫಂಗಸ್ ಹಾಗೂ ಮೂರನೇ ಅಲೆಯ ಆತಂಕದ ನಡುವೆ ಕೂಡ ಹೊಸದಾದ ಮಿಸ್- ಸಿ ಕಾಯಿಲೆ ಪತ್ತೆಯಾಗಿದ್ದು, ಬಳ್ಳಾರಿ ಮತ್ತು ವಿಜಯನಗರದ ಜನರಲ್ಲಿ ಆತಂಕ ಹೆಚ್ಚಿಸಿದೆ. ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದ ಮಕ್ಕಳಲ್ಲಿ ಮಿಸ್-ಸಿ(ಎಂಐಎಸ್- ಸಿ) ಕಾಯಿಲೆಯೊಂದು ಕಂಡುಬಂದಿದ್ದು, ಈ ಕಾಯಿಲೆಯು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ. ಬಳ್ಳಾರಿ- ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈವರೆಗೆ 29 ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, ಸದ್ಯ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಯಾವ ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿರುತ್ತಾರೋ ಅಂಥವರಿಗೆ ಎರಡು- ಮೂರು ವಾರಗಳ ನಂತರ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಈ ಸಮಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರುವುದು, ಮೂತ್ರಪಿಂಡ, ಲೀವರ್ ಸಹಿತ ದೇಹದ ಬಹುತೇಕ ಅಂಗಾಂಗಗಳಿಗೆ ತೊಂದರೆ ಎದುರಾಗುತ್ತಿರುವುದು ಕಂಡುಬಂದಿದೆ. ಇದನ್ನು ಮಲ್ಟಿ ಆರ್ಗನ್ ಇನ್ ಫೆಮಂಟರಿ ಸಿಂಡ್ರೋಮ್ ಇನ್ ಚೀಲ್ಡ್ರನ್( ಮಿಸ್- ಸಿ) ಎಂದು ಕರೆಯಲಾಗುತ್ತದೆ. ಇದು ಕೊರೊನಾ ಬಂದು ಹೋದ ಮಕ್ಕಳಲ್ಲಿ ಕಂಡುಬಂದಿದೆ. ಅಂಥಹ ಮಕ್ಕಳಿಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜನಾರ್ಧನ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯಲ್ಲಿ 4500 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿದೆ. ಆ ಪೈಕಿ ಕೊರೊನಾ ಬಂದು ಹೋದ 29 ಮಕ್ಕಳಲ್ಲಿ ಮಿಸ್- ಸಿ ಕಂಡು ಬಂದಿದ್ದು, ಈ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಕೂಡ ಅತೀವ ಕಳವಳ ಮೂಡಿಸಿದೆ. 29 ಮಕ್ಕಳ ಪೈಕಿ 25 ಮಕ್ಕಳು ಚೇತರಿಕೆ ಕಾಣಿಸಿಕೊಂಡು ಡಿಸ್ಸಾರ್ಚ್ ಆಗಿದ್ದಾರೆ.

ಇನ್ನು ಮೂವರು ಚಿಕಿತ್ಸೆ ಪಡೆಯುತ್ತಿದ್ದು, ಒಂದು ಮಗು ಮಿಸ್ -ಸಿ ಕಾಯಿಲೆಯಿಂದ ಸಾವನ್ನಪ್ಪಿದೆ. ಮಿಸ್- ಸಿ ಗಿಂತಲೂ ಭೀಕರ ಎಎನ್ಇಸಿ ಮಿಸ್- ಸಿಯನ್ನು ಮೀರಿದ ರೋಗಕ್ಕೆ ಎಎನ್ಇಸಿ ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಕೂಡ ಗಣಿನಾಡಿನಲ್ಲೇ ಮೊದಲು ಪತ್ತೆಯಾಗಿದೆ. ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ 13 ವರ್ಷದ ಬಾಲಕನಲ್ಲಿ ಮಿಸ್- ಸಿ ಕಂಡು ಬಂದಿದ್ದು, ಈ ಬಾಲಕನನ್ನು ಮತ್ತೊಮ್ಮೆ ಪರೀಕ್ಷಿಸಿದಾಗ ಎಎನ್ಇಸಿ ರೋಗ ಇರುವುದು ತಿಳಿದಿದೆ.

ಈ ರೋಗವು ನೇರವಾಗಿ ಮಕ್ಕಳ ಮೆದುಳಿನ ಮೇಲೆ ದಾಳಿ ಮಾಡುತ್ತದೆ. ಇದನ್ನೂ ಅಕ್ಯೂಟ್ ನೈಟ್ರೈ ಟೈಸಿಂಗ್ ಮೆನಿಂಗೋ ಎನ್ ಕೆಫಲೋಪಥಿ ಇನ್ ಚೀಲ್ಡ್ರನ್ (ಎ- ನೆಕ್ಆರ್ ಎಎನ್ಇಸಿ) ಎಂದು ಕರೆಯಲಾಗುತ್ತಿದ್ದು, ಈ ಬಾಲಕನಿಗೆ ಇನ್ನೂ ಚಿಕಿತ್ಸೆ ನಡೆಯುತ್ತಿದ್ದು ಈಗ ಚೇತರಿಕೆ ಕಾಣುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ಮುಗಿದು ಮೂರನೇ ಅಲೆಯ ಭೀತಿ ಎದುರಾಗಿದೆ. ಅದರಲ್ಲೂ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಜತೆಗೆ ಬ್ಲ್ಯಾಕ್ ಫಂಗಸ್, ಆತಂಕದ ನಡುವೆಯೂ ಈಗ ಮಕ್ಕಳಲ್ಲಿ ಮಿಸ್ -ಸಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ಮತ್ತು ಜಿಲ್ಲಾಡಳಿತದ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಹಾವೇರಿಯಲ್ಲಿ ವಾತ್ಸಲ್ಯ ಶಿಬಿರ ಜಾರಿ : ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ರಾಜ್ಯದ ಮೊದಲ ಯೋಜನೆ

ಏಷ್ಯಾದಲ್ಲಿ ಕೊವಿಡ್-19: ಮೂರನೇ ಅಲೆಯ ಆತಂಕದಲ್ಲಿ ಭಾರತ; ಇತರ ರಾಷ್ಟ್ರಗಳು ಏನೇನು ಸಿದ್ಧತೆ ಮಾಡಿಕೊಂಡಿವೆ?