ಹಾವೇರಿಯಲ್ಲಿ ವಾತ್ಸಲ್ಯ ಶಿಬಿರ ಜಾರಿ : ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ರಾಜ್ಯದ ಮೊದಲ ಯೋಜನೆ
ಈವರೆಗೆ 58,560 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ 3,515 ಮಕ್ಕಳಿಗೆ ತಪಾಸಣೆ ವೇಳೆ ವಿವಿಧ ಆರೋಗ್ಯ ಸಮಸ್ಯೆಗಳು ಕಂಡುಬಂದಿದ್ದು, 313 ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಪತ್ತೆಯಾಗಿದ್ದಾರೆ. ಬೆಳವಣಿಗೆ ಕುಂಠಿತ 180 ಮಕ್ಕಳನ್ನು ಗುರುತಿಸಲಾಗಿದ್ದು, 590 ಮಕ್ಕಳಿಗೆ ಸೌಮ್ಯ ಸ್ವಭಾವದ ಕೊವಿಡ್ ಲಕ್ಷಣಗಳು ಕಂಡುಬಂದಿದೆ.
ಹಾವೇರಿ: ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಹಾವೇರಿ ಜಿಲ್ಲೆಯಲ್ಲಿಯೂ ನೂತನ ಕಾರ್ಯಕ್ರಮಕ್ಕೆ ಯೋಜನೆ ರೂಪಿಸಿದ್ದು, ಮಕ್ಕಳ ಆರೋಗ್ಯ ತಪಾಸಣಾ ಶಿಬಿರಕ್ಕೆ ವಾತ್ಸಲ್ಯ ಎಂದು ನಾಮಕರಣ ಮಾಡಲಾಗಿದೆ. ಇಡಿ ರಾಜ್ಯದಲ್ಲಿಯೇ ಮೊದಲು ಈ ಯೋಜನೆ ಆರಂಭಿಸಿದ ಹೆಗ್ಗಳಿಕೆ ಸದ್ಯ ಹಾವೇರಿ ಜಿಲ್ಲೆಗೆ ಸಲ್ಲುತ್ತದೆ. ತಪಾಸಣೆಗೆ ಒಳಗಾದ ಪ್ರತಿ ಮಗುವಿಗೂ ವಾತ್ಸಲ್ಯ ಹೆಸರಿನ ಪ್ರತ್ಯೇಕ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಈಗಾಗಲೇ 3 ಲಕ್ಷ ಆರೋಗ್ಯ ಕಾರ್ಡ್ಗಳು ಮುದ್ರಣಗೊಂಡಿದ್ದು, ಕಾರ್ಡ್‍ನಲ್ಲಿ ಮಕ್ಕಳ ವಿವರದೊಂದಿಗೆ ಅವರ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆ, ಶಿಫಾರಸ್ಸುಗಳ ಮಾಹಿತಿ ಇರಲಿದೆ.
ಅಂಗನವಾಡಿ, ಶಾಲೆಗಳ ಮಕ್ಕಳ ತಪಾಸಣೆ ಜಿಲ್ಲೆಯಲ್ಲಿ 1320 ಶಾಲೆಗಳು, 1918 ಅಂಗನವಾಡಿಗಳ ಪೈಕಿ ಈಗಾಗಲೇ 314 ಶಾಲೆಗಳು ಹಾಗೂ 510 ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗಿದೆ. ಸೊನ್ನೆಯಿಂದ 18 ವರ್ಷದೊಳಗಿನ ಜಿಲ್ಲೆಯ 2,98,875 ಮಕ್ಕಳ ಆರೋಗ್ಯ ತಪಾಸಣೆ ಗುರಿ ಹೊಂದಲಾಗಿದೆ. ಈವರೆಗೆ 58,560 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ 3,515 ಮಕ್ಕಳಿಗೆ ತಪಾಸಣೆ ವೇಳೆ ವಿವಿಧ ಆರೋಗ್ಯ ಸಮಸ್ಯೆಗಳು ಕಂಡುಬಂದಿದ್ದು, 313 ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಪತ್ತೆಯಾಗಿದ್ದಾರೆ. ಬೆಳವಣಿಗೆ ಕುಂಠಿತ 180 ಮಕ್ಕಳನ್ನು ಗುರುತಿಸಲಾಗಿದ್ದು, 590 ಮಕ್ಕಳಿಗೆ ಸೌಮ್ಯ ಸ್ವಭಾವದ ಕೊವಿಡ್ ಲಕ್ಷಣಗಳು ಕಂಡುಬಂದಿದೆ. ಸೌಮ್ಯ ಲಕ್ಷಣ ಕಂಡುಬಂದ ಎಲ್ಲ ಮಕ್ಕಳಿಗೂ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದ್ದು, ಎಲ್ಲ ಮಕ್ಕಳ ವರದಿಯು ನೆಗಟಿವ್ ಬಂದಿವೆ.
ಮಕ್ಕಳಿಗೆ ಪೌಷ್ಟಿಕಾಂಶ, ಮಾತ್ರೆ, ಆಹಾರ ಸಾಮಗ್ರಿಗಳ ವಿತರಣೆ ತೀವ್ರ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮತ್ತು ಸೂಕ್ತ ಚಿಕಿತ್ಸೆಗೆ ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗಿದ್ದು, ವಿವಿಧ ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಸುವರ್ಣ ಆರೋಗ್ಯ ಟ್ರಸ್ಟ್ ಯೋಜನೆಯಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಎರಡು ಮಾದರಿಯ ಪುಷ್ಟಿಪೌಡರ್, ಪ್ರೋಟಿನ್ ಪೌಡರ್, ಹಸಿವನ್ನು ಹೆಚ್ಚಿಸುವ ಮಾತ್ರೆಗಳು, ಪೌಷ್ಟಿಕ ಆಹಾರ ಸಾಮಾಗ್ರಿ ಜತೆಗೆ ಬಾಲವಿಕಾಸ ಯೋಜನೆಯಡಿ ತಿಂಗಳಿಗೆ 25 ಮೊಟ್ಟೆಗಳ ವಿತರಣೆ, ಜತೆಗೆ ಎಂಟು ಮೊಟ್ಟೆಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಡ್ರೈರೇಷನ್ ವಿತರಣೆಗೆ ಜಿಲ್ಲಾಡಳಿತ ಯೋಜನೆ ರೂಪಿಸಿ ಜಾರಿಗೆ ತಂದಿದೆ.
ಮಕ್ಕಳ ಆರೋಗ್ಯ ತಪಾಸಣೆಗೆ ಜಿಲ್ಲೆಯ ಎಲ್ಲಾ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗಳು, ಸೇರಿ 27ಖಾಸಗಿ ವೈದ್ಯರು ಮಕ್ಕಳ ಆರೋಗ್ಯ ತಪಾಸಣೆಯಲ್ಲಿ ಕೈಜೋಡಿಸಿದ್ದಾರೆ. ಜುಲೈ 30ರೊಳಗಾಗಿ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲು ಜಿಲ್ಲಾಡಳಿತ ಗುರಿ ಹಾಕಿಕೊಂಡಿದೆ. ಮೊದಲ ಸುತ್ತಿನಲ್ಲಿ ಆರೋಗ್ಯ ತಪಾಸಣೆಯಿಂದ ಹೊರಗುಳಿದ ಮಕ್ಕಳಿಗಾಗಿ ಎರಡನೇ ಸುತ್ತಿನಲ್ಲಿ ಕಾರ್ಯಕ್ರಮ ಹಾಕಿಕೊಂಡು ನಿಗದಿತ ಗುರಿಯಂತೆ ಎಲ್ಲಾ ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರು ಮಾಹಿತಿ ನೀಡಿದ್ದಾರೆ.
ಕೊವಿಡ್ ಸೋಂಕಿತ ಮಕ್ಕಳಿಗೆ ವಿಶೇಷ ವಾರ್ಡ್ ಮೂರನೆ ಅಲೆಯಲ್ಲಿ ಕೊವಿಡ್ ಸೋಂಕಿತರಾಗುವ ಮಕ್ಕಳ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ 30 ಹಾಸಿಗೆ ಹಾಗೂ ಪ್ರತಿ ತಾಲೂಕಿನಲ್ಲಿ ತಲಾ 10 ಹಾಸಿಗೆಗಳ ಐಸಿಯು ಸಹಿತ ಮಕ್ಕಳ ವಿಶೇಷ ಕೊವಿಡ್ ವಾರ್ಡ್ ಸಿದ್ಧಮಾಡಲಾಗಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದು ಬೆಡ್ ವ್ಯವಸ್ಥೆ ಮಾಡಿ ಮಕ್ಕಳ ಡೇ ಕೇರ್ ಮಾಡಲಾಗುತ್ತದೆ. ಮಕ್ಕಳ ನ್ಯೂಟ್ರೀಷಿಯನ್ ಪುನರ್ವಸತಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಕೊವಿಡ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಪುನಃ ಎನ್ಆರ್ಸಿ ಸೆಂಟರ್ ಮುಂದುವರಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ವಾತ್ಸಲ್ಯ ಹೆಸರಿನ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಇಡಿ ರಾಜ್ಯಕ್ಕೆ ಮಾದರಿಯಾಗಿದೆ. ಈ ಕಾರ್ಯಕ್ರಮ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿಯವರ ಕನಸಿನ ಯೋಜನೆ. ಮೂರನೆ ಅಲೆ ಆರಂಭವಾಗುವ ಮುನ್ನ ಮಕ್ಕಳ ರಕ್ಷಣೆಗಾಗಿ ಪ್ರತಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುವ ಈ ಕಾರ್ಯಕ್ರಮಕ್ಕೆ ವಾತ್ಸಲ್ಯ ಎಂದು ನಾಮಕರಣ ಮಾಡಲಾಗಿದೆ. ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸುವ ಆಶಯ ಹೊಂದಿದೆ. ಈ ಕಾರ್ಯಕ್ರಮ ಕುರಿತಂತೆ ಕರ್ನಾಟಕ ಸರ್ಕಾರದ ಅಭಿವೃದ್ಧಿ ಅಪರ ಕಾರ್ಯದರ್ಶಿಗಳಾದ ವಂದನಾ ಶರ್ಮಾ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವಿದ್ ಅಕ್ತರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಸಿಇಓ ಮೊಹಮ್ಮದ ರೋಶನ್ ಹೇಳಿದ್ದಾರೆ.
ಹಳ್ಳಿಗೆ ನಡೆಯಿರಿ ಮಕ್ಕಳ ತಜ್ಞರೆ; ಕೊರೊನಾ ಮೂರನೇ ಅಲೆ ತಡೆಯಲು ಸರ್ಕಾರದಿಂದ ವಿವಿಧ ಕ್ರಮ: ಆರ್ ಅಶೋಕ್
Published On - 10:39 am, Sun, 4 July 21