ಮುಡಾ ಹಗರಣ: ವಿಚಾರಣೆ ಮುಂದಕ್ಕೆ, ಡಿ.10ರಂದು ಕೇಸ್​ ವರದಿ ಹೈಕೋರ್ಟ್​ ಅಂಗಳಕ್ಕೆ

| Updated By: ವಿವೇಕ ಬಿರಾದಾರ

Updated on: Nov 26, 2024 | 12:38 PM

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಭೂ ಹಗರಣಕ್ಕೆ ಸಂಬಂಧಿಸಿದಂತೆ ದೇವರಾಜು ಮತ್ತು ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್‌ಗೆ ಮುಂದೂಡಿದೆ. ಲೋಕಾಯುಕ್ತರ ತನಿಖಾ ವರದಿಯನ್ನು ಡಿಸೆಂಬರ್ 10ಕ್ಕೆ ಸಲ್ಲಿಸಲಿದ್ದಾರೆ. ಸಿಬಿಐ ತನಿಖೆಗೆ ಆಗ್ರಹಿಸಿ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯೂ ಡಿಸೆಂಬರ್ 10ರಂದು ನಡೆಯಲಿದೆ.

ಮುಡಾ ಹಗರಣ: ವಿಚಾರಣೆ ಮುಂದಕ್ಕೆ, ಡಿ.10ರಂದು ಕೇಸ್​ ವರದಿ ಹೈಕೋರ್ಟ್​ ಅಂಗಳಕ್ಕೆ
ಹೈಕೋರ್ಟ್​
Follow us on

ಬೆಂಗಳೂರು, ನವೆಂಬರ್​ 26: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕ ದೇವರಾಜು ಸಲ್ಲಿಸಿದ್ದ ಎರಡು ಅರ್ಜಿ ಮತ್ತು ದೂರುದಾರ ಸ್ನೇಹಮಯಿ ಕೃಷ್ಣ (Snehamayi Krishna) ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ (High Court) ಮುಂದೂಡಿದೆ. ​​

ಮುಡಾ ಹಗರಣದ ತನಿಖಾ ಪ್ರಗತಿ ವರದಿಯನ್ನು ಇಂದು (ನ.26) ಸಲ್ಲಿಸುವಂತೆ ಹೈಕೋರ್ಟ್ ಲೋಕಾಯುಕ್ತರಿಗೆ ಸೂಚನೆ ನೀಡಿತ್ತು. ಈ ಆದೇಶವನ್ನೂ ಪ್ರಶ್ನಿಸಿ ಜಮೀನು ಮಾಲೀಕ ದೇವರಾಜು ಅರ್ಜಿ ಸಲ್ಲಿಸಿದ್ದಾರೆ. ಹಾಗೇ, ಹಗರಣ ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಹೈಕೋರ್ಟ್​ ಎತ್ತಿ ಹಿಡಿದಿತ್ತು. ಹೈಕೋರ್ಟ್ ಈ ತೀರ್ಪನ್ನೂ ಪ್ರಶ್ನಿಸಿ ದೇವರಾಜು ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿ ವಿಚಾರಣೆಯನ್ನು ಡಿಸೆಂಬರ್​ 5 ರಂದು ನಡೆಸುವುದಾಗಿ ಹೈಕೋರ್ಟ್ ವಿಭಾಗೀಯ ಪೀಠ​​ ಹೇಳಿದೆ.

ಹೀಗಾಗಿ, ಲೋಕಾಯುಕ್ತ ಪೊಲೀಸರು ತನಿಖಾ ವರದಿಯನ್ನು ಹೈಕೋರ್ಟ್​ಗೆ ಡಿಸೆಂಬರ್​ 10ರಂದು ವರದಿ ಸಲ್ಲಿಸಲಿದ್ದಾರೆ. ಇನ್ನು, ಮುಡಾ ಹರಗಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ರಿಟ್​ ಅರ್ಜಿ ವಿಚಾರಣೆಯನ್ನು ಹೈಕೋರ್ಟ್​ ಡಿಸೆಂಬರ್​ 10ರಂದು ನಡೆಸಲಿದೆ.

ಏನಿದು ಮುಡಾ ಹಗರಣ?

ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು.

ಇದನ್ನೂ ಓದಿ: ಮುಡಾ ಹಗರಣ: ಸರ್ಚ್ ವಾರಂಟ್ ಜಾರಿಯಾಗಿದ್ರೂ ದಾಳಿ ಮಾಡಿರಲಿಲ್ಲ ಲೋಕಾಯುಕ್ತ, ಹಲವು ಅನುಮಾನ ಸೃಷ್ಟಿ

ಅದರ ಬದಲಿಗೆ ಮುಡಾ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ಅಂದರೆ 14 ನಿವೇಶನ ಕೊಟ್ಟಿದ್ದಾರೆ ಇದು ಈಗ ಚರ್ಚೆಗೆ ಕಾರಣವಾಗಿದೆ. ವಿಜಯನಗರ ಬಡಾವಣೆಯಲ್ಲಿ 14 ನಿವೇಶನ ಪತ್ನಿ ಪಾರ್ವತಿ ಅವರಿಗೆ ಮಂಜೂರು ಆಗಲು, ಸಿದ್ದರಾಮಯ್ಯ ಅವರು ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮುಡಾ ಇಡಿ ತನಿಖೆ

ಮುಡಾ ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳೂ ಕೂಡ ನಡೆಸುತ್ತಿದ್ದಾರೆ. ಇಡಿ ಅಧಿಕಾರಿಗಳು ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರ ವಿಚಾರಣೆ ನಡೆಸಿದ್ದಾರೆ. ಮುಡಾ ಹಗರಣದಲ್ಲಿ ಮಲ್ಲಿಕಾರ್ಜುನ​ ಸ್ವಾಮಿ 3ನೇ ಆರೋಪಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ