KSRTC Dasara Tour: ದಸರಾದಲ್ಲಿ ಮೈಸೂರು ಸುತ್ತಬೇಕಾ?; ಕೆಎಸ್​ಆರ್​ಟಿಸಿಯಿಂದ ಪ್ರವಾಸದ ಪ್ಯಾಕೇಜ್ ಘೋಷಣೆ

| Updated By: ಸುಷ್ಮಾ ಚಕ್ರೆ

Updated on: Oct 08, 2021 | 3:59 PM

Mysuru Dasara 2021: ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಕೆಎಸ್​ಆರ್​ಟಿಸಿಯಿಂದ ಟೂರ್ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದ್ದು, ಅಕ್ಟೋಬರ್ 9ರಿಂದ 24ರವರೆಗೆ ಗಿರಿ ದರ್ಶಿನಿ, ದೇವ ದರ್ಶಿನಿ, ಜಲ ದರ್ಶಿನಿ ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ.

KSRTC Dasara Tour: ದಸರಾದಲ್ಲಿ ಮೈಸೂರು ಸುತ್ತಬೇಕಾ?; ಕೆಎಸ್​ಆರ್​ಟಿಸಿಯಿಂದ ಪ್ರವಾಸದ ಪ್ಯಾಕೇಜ್ ಘೋಷಣೆ
ಕೆಎಸ್​ಆರ್​ಟಿಸಿ ಬಸ್
Follow us on

ಮೈಸೂರು: ದಸರಾ ಹಬ್ಬದ ಮೇಲೆ ಮೈಸೂರು ರಂಗೇರಿರುತ್ತದೆ. ಈ ವರ್ಷ ಮೈಸೂರಿನ ದಸರಾ ವೀಕ್ಷಣೆಗೆ ಹೆಚ್ಚು ಜನರಿಗೆ ಅವಕಾಶವಿಲ್ಲದಿದ್ದರೂ ಇಡೀ ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಈ ಸಂದರ್ಭದಲ್ಲಿ ಪ್ರವಾಸಿಗರ ದಂಡೇ ಬರುತ್ತದೆ. ದಸರಾ ಹಬ್ಬದ ವೇಳೆ ಸಾಲು ಸಾಲು ರಜೆಗಳು ಕೂಡ ಇರುವುದರಿಂದ ಕೆಎಸ್​ಆರ್​ಟಿಸಿಯಿಂದ ಮೈಸೂರು ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.

ನಿನ್ನೆಯಿಂದ ಮೈಸೂರು ದಸರಾ ಉತ್ಸವ ಶುರುವಾಗಿದ್ದು, ಅಕ್ಟೋಬರ್ 15ರವರೆಗೆ ಸರಳವಾಗಿ ಈ ಬಾರಿಯ ಮೈಸೂರು ದಸರಾ ನಡೆಯಲಿದೆ. ಪ್ರವಾಸಿಗರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮೈಸೂರು ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಕೆಎಸ್​ಆರ್​ಟಿಸಿಯಿಂದ ಟೂರ್ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದ್ದು, ಅಕ್ಟೋಬರ್ 9ರಿಂದ 24ರವರೆಗೆ ಗಿರಿ ದರ್ಶಿನಿ, ದೇವ ದರ್ಶಿನಿ, ಜಲ ದರ್ಶಿನಿ ಪ್ಯಾಕೇಜ್‌ಗಳನ್ನು ಘೋಷಿಸಲಾಗಿದೆ.

ಗಿರಿ ದರ್ಶಿನಿ ಟೂರ್ ಪ್ಯಾಕೇಜ್​ನಲ್ಲಿ ಮೈಸೂರು ಕೇಂದ್ರಿಯ ಬಸ್ ನಿಲ್ದಾಣದಿಂದ ಬೆಳಗ್ಗೆ 6.30ಕ್ಕೆ ಬಸ್ ಹೊರಡಲಿದೆ. ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿಬೆಟ್ಟ ಸೇರಿದಂತೆ ಒಟ್ಟು 325 ಕಿ. ಮೀ. ಪ್ಯಾಕೇಜ್ ಇದು ಒಳಗೊಂಡಿದೆ. ಈ ಪ್ಯಾಕೇಜ್‌ಗೆ ದೊಡ್ಡವರಿಗೆ 350 ರೂ., ಮಕ್ಕಳಿಗೆ 175 ರೂ. ದರ ನಿಗದಿ ಮಾಡಲಾಗಿದೆ.

ಜಲ ದರ್ಶಿನಿ ಪ್ಯಾಕೇಜ್ ಘೋಷಣೆ ಮಾಡಿದವರಿಗೆ ಬೆಳಗ್ಗೆ 6.30ರಿಂದ ಮೈಸೂರು ಬಸ್​ ನಿಲ್ದಾಣದಿಂದ ಗೋಲ್ಡನ್ ಟೆಂಪಲ್, ನಿಸರ್ಗ ಧಾಮ, ದುಬಾರೆ ಅರಣ್ಯ, ಚಿಕ್ಲಿಹೊಳೆ ಡ್ಯಾಂ, ರಾಜಾಸೀಟ್, ಅಬ್ಬಿ ಜಲಪಾತ, ಹಾರಂಗಿ ಜಲಾಶಯ, ಕೆಆರ್‌ಎಸ್ ಪ್ರವಾಸ ಇರುತ್ತದೆ. ಈ ಪ್ಯಾಕೇಜ್​ಗೆ ದೊಡ್ಡವರಿಗೆ 400 ರೂ. ಮತ್ತು ಮಕ್ಕಳಿಗೆ 200 ರೂ. ನಿಗದಿ ಮಾಡಲಾಗಿದೆ.

ದೇವ ದರ್ಶಿನಿ ಪ್ಯಾಕೇಜ್ ಆಯ್ಕೆ ಮಾಡಿಕೊಂಡರೆ ಮೈಸೂರು ಬಸ್ ನಿಲ್ದಾಣದಿಂದ ಬೆಳಗ್ಗೆ 6.30ರಿಂದ ನಂಜನಗೂಡು, ತಲಕಾಡು, ಮೂಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್‌ಎಸ್ ಸೇರಿದಂತೆ 250 ಕಿ. ಮೀ. ಪ್ರವಾಸ ಇರುತ್ತದೆ. ಈ ಪ್ಯಾಕೇಜ್​ಗೆ ದೊಡ್ಡವರಿಗೆ 275 ರೂ. ಮತ್ತು ಮಕ್ಕಳಿಗೆ 140 ರೂ. ನಿಗದಿ ಮಾಡಲಾಗಿದೆ.

ಹಾಗೇ, ದಸರಾ ಹಬ್ಬದ ಹಿನ್ನೆಲೆಯಲ್ಲಿ ಅ. 13ರಿಂದ ಅ. 21ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯದ ಸ್ಥಳಗಳಿಗೆ 1000 ಹೆಚ್ಚುವರಿ ಕೆಎಸ್​ಆರ್​ಟಿಸಿ ಬಸ್‌ ಸಂಚಾರ ಮಾಡಲಿದೆ. ಕರ್ನಾಟಕದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌ ಮುಂತಾದ ಸ್ಥಳಗಳಿಗೆ ಹೆಚ್ಚುವರಿ KSRTC ಬಸ್​ಗಳು ಸಂಚರಿಸಲಿವೆ.

ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್‌, ತಿರುವನಂತಪುರಂ, ಕೊಟ್ಟಾಯಂ, ಚೆನ್ನೈ, ಕೊಯಮತ್ತೂರು, ಪೂನಾ, ಪಣಜಿ ಮೊದಲಾದ ಸ್ಥಳಗಳಿಗೆ ಕೆಎಸ್​ಆರ್​ಟಿಸಿ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗಿದೆ. ಈ ಹೆಚ್ಚುವರಿ ಬಸ್‌ಗಳ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ.

ಇದನ್ನೂ ಓದಿ: KSRTC: ದಸರಾ ಪ್ರಯುಕ್ತ ಧರ್ಮಸ್ಥಳ, ಶಿವಮೊಗ್ಗ, ತಿರುಪತಿ ಸೇರಿ ವಿವಿಧೆಡೆಗೆ 1,000 ಹೆಚ್ಚುವರಿ ಕೆಎಸ್​ಆರ್​ಟಿಸಿ ಬಸ್ ಸಂಚಾರ

Madikeri Dasara 2021: ಮಡಿಕೇರಿ ದಸರಾ: ಕರಗಗಳಿಗೆ ಪೂಜೆ ಸಲ್ಲಿಸಿ ವಿದ್ಯುಕ್ತ ಚಾಲನೆ

Published On - 3:55 pm, Fri, 8 October 21