ಜೆಡಿಎಸ್ ನಂಬಿ ಎಂದು ನಾವು ಯಾರನ್ನೂ ಕೇಳುತ್ತಿಲ್ಲ: ಎಚ್​ಡಿ ರೇವಣ್ಣ

ಯಾರು ಏನು ಕೆಲಸ ಮಾಡಿದ್ದಾರೆ ಎನ್ನುವುದನ್ನು ಕಾಲವೇ ನಿರ್ಧಾರ ಮಾಡಲಿದೆ ಎಂದು ರೇವಣ್ಣ ಹೇಳಿದರು.

ಜೆಡಿಎಸ್ ನಂಬಿ ಎಂದು ನಾವು ಯಾರನ್ನೂ ಕೇಳುತ್ತಿಲ್ಲ: ಎಚ್​ಡಿ ರೇವಣ್ಣ
ಎಚ್.ಡಿ. ರೇವಣ್ಣ

ಹಾಸನ: ನಾವು ಯಾರನ್ನೂ ಜೆಡಿಎಸ್ ನಂಬಿ ಎಂದು ಕೇಳುತ್ತಿಲ್ಲ. ಹೀಗೆ ವಿನಂತಿಸಲು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ ಎಂದು ಮಾಜಿ ಸಚಿವ ಎಚ್​.ಡಿ.ರೇವಣ್ಣ ಹೇಳಿದರು. ಜೆಡಿಎಸ್ ನಂಬಿಕೆಗೆ ಅರ್ಹವಲ್ಲ ಎಂಬ ಶಾಸಕ ಪ್ರೀತಂಗೌಡ ಅವರ ಹೇಳಿಕೆಗೆ ಈ ಮೂಲಕ ತಿರುಗೇಟು ನೀಡಿದರು. ನಾವೇನು ಬಿಜೆಪಿಯವರ ಮನೆಬಾಗಿಲಿಗೆ ಹೋಗಿ ವಿನಂತಿ ಮಾಡಿದ್ದೇವಾ ಎಂದು ಪ್ರಶ್ನಿಸಿದರು.

ಬಿಜೆಪಿಯ ಜನಪ್ರತಿನಿಧಿಯಿದ್ದರೂ ಹಾಸನದಲ್ಲಿ ಒಂದೇ ಒಂದು ಫ್ಲೈಓವರ್ ಮಾಡಲು ಆಗಲಿಲ್ಲ. ಒಂದು ಹಾಸ್ಟೆಲ್ ಸಹ ನಿರ್ಮಾಣವಾಗಿಲ್ಲ. ಯಾರು ಏನು ಕೆಲಸ ಮಾಡಿದ್ದಾರೆ ಎನ್ನುವುದನ್ನು ಕಾಲವೇ ನಿರ್ಧಾರ ಮಾಡಲಿದೆ ಎಂದು ರೇವಣ್ಣ ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದು ಕುಮಾರಸ್ವಾಮಿ. ಬಿಜೆಪಿ ಬೆಂಬಲಿಗರು ತಮ್ಮ ಮನೆಗಳಲ್ಲಿ ಕುಮಾರಸ್ವಾಮಿ ಅವರು ಫೋಟೊ ಇಟ್ಟುಕೊಳ್ಳಬೇಕು. ಬಿಜೆಪಿಯಲ್ಲಿರುವ ಎಲ್ಲರೂ ಕೆಟ್ಟವರೇನಲ್ಲ, ಆದರೆ ಹಲವರಿಗೆ ದುಡ್ಡಿನ ಮದವಿದೆ, ಹೀಗಾಗಿ ಏನೇನೋ ಮಾತಾಡ್ತಾರೆ ಎಂದು ನುಡಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹಾಸನ ಜಿಲ್ಲೆಗೆ ಏನು ಮಾಡಿದ್ದಾರೆ? ಜಿಲ್ಲೆಯಲ್ಲಿ ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ಕೊಟ್ಟಿದ್ದೇ ಅವರ ಕೊಡುಗೆ. ಜಿಲ್ಲೆಯ ಜನರು ಚೆನ್ನಾಗಿ ಕುಡಿದು ಅರೋಗ್ಯ ಕಾಪಾಡಿಕೊಳ್ಳಲಿ, ಹೊಲ-ಮನೆ, ಹೆಂಡತಿಯ ಮಾಂಗಲ್ಯ ಸರ ಅಡವಿಟ್ಟು ಕುಡಿಯಿರಿ ಎಂದು ವ್ಯಂಗ್ಯವಾಡಿದರು.

ಇವರೇನು ರಾಜ್ಯದ ಅಭಿವೃದ್ಧಿ ಮಾಡಿ ಅದಿಕಾರಕ್ಕೆ ಬಂದ್ರಾ ಎಂದು ಪ್ರಶ್ನಿಸಿದ ರೇವಣ್ಣ, ಬಿಜೆಪಿ ಈ ರಾಜ್ಯದ ರಾಷ್ಟ್ರದ ಜನರಿಗೆ ಯಾವ ರೀತಿ ಸುಳ್ಳು ಹೇಳುತ್ತಿದೆ ಎನ್ನುವುದು ಜನರಿಗೆ ಗೊತ್ತಿದೆ. 2023ರಲ್ಲಿ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ. ಉಪ ಚುನಾವಣೆಯಲ್ಲಿ ನಾವು ಅಭ್ಯರ್ಥಿ ಹಾಕಿದ್ದಕ್ಕೆ ಎರಡೂ ಪಕ್ಷಗಳು ಹೆದರಿವೆ. ಕಾಂಗ್ರೆಸ್​ ಪಕ್ಷಕ್ಕೆ ಅಭ್ಯರ್ಥಿಗಳು ಸಿಕ್ಕಿಲ್ಲ. ಹೀಗಾಗಿಯೇ ನಮ್ಮ ಪಕ್ಷದ ಅಭ್ಯರ್ಥಿಯ ಮಗನನ್ನೇ ಅವರು ಅಭ್ಯರ್ಥಿ ಮಾಡಿದ್ದಾರೆ ಎಂದು ಹೇಳಿದರು. ನಾವು ಈಗ ಕೆಳಗೆ ಬಿದ್ದಿದ್ದೀವಿ ಹೀಗಾಗಿ ನಮಗೆ ಮೇಲೇಳಲು ಆಗುತ್ತೋ ಇಲ್ಲವೋ ಎಂದು ಹಲವರು ಗಮನಿಸುತ್ತಿರುತ್ತಾರೆ. ಪಕ್ಷವನ್ನು ಹೇಗೆ ಮೇಲೆತ್ತಬೇಕು ಎಂದು ದೇವೇಗೌಡರಿಗೆ ಗೊತ್ತಿದೆ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.

ಹಾಸನದಲ್ಲಿ ದೇವರ ದರ್ಶನ ಮಾಡಿದ ಅವರು, ತಮ್ಮದೇ ಆದ ವ್ಯಾಖ್ಯಾನವನ್ನೂ ಹಂಚಿಕೊಂಡರು. ವೈರಿಗಳ ಕಾಟ ಇರುವಾಗ ದೇವರ ದರ್ಶನ ಮಾಡಬೇಕಲ್ವಾ? ಲಕ್ಷ್ಮಿ ನರಸಿಂಹನ ದರ್ಶನ ಮಾಡಿದರೆ ಮಾಟಾ ಮಾಡಿದ್ರೆ ರಿವರ್ಸ್ ಆಗುತ್ತಂತೆ. ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಬೇಕು ಅಂದುಕೊಂಡಿದ್ದೇನೆ. ವೈರಿಗಳ ಕಾಟ ತಡೆಯೋಕೆ ದೇವರ ಮೊರೆ ಹೋಗ್ತೀನಿ, ಹಾಸನಾಂಬೆಯ ದರ್ಶನ ಮಾಡ್ತೀನಿ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ಗೆ ತಾಕತ್ತಿದ್ದರೆ ಒಕ್ಕಲಿಗರು, ಲಿಂಗಾಯತರನ್ನು ಹೊರತುಪಡಿಸಿ ಸಿಎಂ ಮಾಡಲಿ; ರೇವಣ್ಣ ಸವಾಲ್

ಇದನ್ನೂ ಓದಿ: ಹಾಸನದ ಆಲೂಗಡ್ಡೆ ಬೆಳೆಗಾರರಿಗೆ 129 ಕೋಟಿ ನಷ್ಟವಾಗಿದೆ: ಎಚ್.ಡಿ.ರೇವಣ್ಣ ಆಕ್ಷೇಪ

Read Full Article

Click on your DTH Provider to Add TV9 Kannada