ಸಂಸದ ಪ್ರತಾಪ್ ಸಿಂಹ ಲೆಕ್ಕ ಕೇಳಿದ ಬೆನ್ನಲ್ಲೇ ಖರ್ಚುವೆಚ್ಚದ ವಿವರ ಬಿಡುಗಡೆಗೊಳಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

Mysuru DC Rohini Sindhuri: ಮೈಸೂರು ಜಿಲ್ಲಾಡಳಿತವು ದೂರದೃಷ್ಟಿಯಿಂದ ಏಪ್ರಿಲ್ 13ರಂದೇ ಬೆಂಗಳೂರಿನಿಂದ ಬರುವವರ ಬಗ್ಗೆ ನಿಗಾವಹಿಸಿದ್ದು, 1 ಜುಲೈ 2021ರ ಒಳಗೆ ಮೈಸೂರು ಜಿಲ್ಲೆಯನ್ನು ಕೊವಿಡ್ ಮುಕ್ತ ಮಾಡಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಂಸದ ಪ್ರತಾಪ್ ಸಿಂಹ ಲೆಕ್ಕ ಕೇಳಿದ ಬೆನ್ನಲ್ಲೇ  ಖರ್ಚುವೆಚ್ಚದ ವಿವರ ಬಿಡುಗಡೆಗೊಳಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ
ಸಂಸ ಪ್ರತಾಪ್ ಸಿಂಹ ಮತ್ತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
Follow us
guruganesh bhat
|

Updated on:May 30, 2021 | 10:41 PM

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೊವಿಡ್-19 ನಿಯಂತ್ರಣ ವಿಚಾರವಾಗಿ ಸರ್ಕಾರ ನೀಡಿದ ಅನುದಾನದ ಲೆಕ್ಕವನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದ್ದಾರೆ. ಮೈಸೂರು ಸಂಸದ ಪ್ರತಾಪ್ ಸಿಂಹ ಇಂದು ಬೆಳಗ್ಗೆಯಷ್ಟೇ ಅನುದಾನದ ಲೆಕ್ಕ ಕೇಳಿದ್ದ ಬೆನ್ನಲ್ಲೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸರ್ಕಾರ ನೀಡಿದ್ದ 41 ಕೋಟಿ‌ ಅನುದಾನವನ್ನು ಬಳಸಿದ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ನಡುವಿನ ಹಗ್ಗಜಗ್ಗಾಟ ಮುಂದುವರೆದಿದೆ.

ಜತೆಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೈಸೂರು ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿ ಏಕೈಕ ಉದ್ದೇಶ ಕೊವಿಡ್ ನಿರ್ವಹಣೆ ಹಾಗೂ ನಿಯಂತ್ರಣ. ಏನೇ ಆದರೂ ಈ ಉದ್ದೇಶ ಮತ್ತು ಕೆಲಸ ಮುಂದುವರೆಯಲಿದೆ. ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದ ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗಿದೆ. ಉದ್ದೇಶಪೂರ್ವಕವಾಗಿ ನಿರಂತರವಾಗಿ ಇದು ನಡೆಯುತ್ತಿದ್ದು, ಇದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಡಿಸಿ ರೋಹಿಣಿ ಸಿಂಧೂರಿ ದೂರಿದ್ದಾರೆ.

ಇದೀಗ ಕೊವಿಡ್ ನಿರ್ವಹಣೆ ಸಂಬಂಧ ಸುಳ್ಳು ಮತ್ತು ಬೇಜವಾಬ್ದಾರಿ ಹೇಳಿಕೆಗಳು ಆರಂಭವಾಗಿವೆ. ಹೇಳಿಕೆಗಳು ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದ ಬಂದಿರುವ ಕಾರಣ ಜನರಲ್ಲಿ ಅನುಮಾನ ಹಾಗೂ ಆತಂಕಕ್ಕೆ ಕಾರಣವಾಗಿದೆ. ಇಂತಹ ಸುಳ್ಳು ಆರೋಪಗಳು ಕೊವಿಡ್ ವಿರುದ್ದದ ಹೋರಾಟಕ್ಕೆ ಧಕ್ಕೆ ತರಲಿವೆ ಎಂದು ಅವರು ದೂಷಿಸಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಿಡುಗಡೆಗೊಳಿಸಿರುವ ಅನುದಾನದ ಅಂಕಿಅಂಶ

ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಉಪಕರಣಗಳು ಔಷಧಗಳು ಪಿಪಿಇ ಕಿಟ್ ಮಾಸ್ಕ್ ಹಾಗೂ ಸ್ಟೇಷನರಿಗೆ 13 ಕೋಟಿ ಐಸೊಲೇಷನ್ ಹಾಗೂ ಕೊವಿಡ್ ಕೇರ್ ಸ್ಥಾಪನೆ ಮತ್ತು ನಿರ್ವಹಣೆ 5 ಕೋಟಿ ಕ್ವಾರಂಟೈನ್ ಒಳಪಟ್ಟವರಿಗೆ ಹೋಟೆಲ್ ವ್ಯವಸ್ಥೆ ಮತ್ತು ರೋಗಿಗಳಿಗೆ ಊಟದ ವ್ಯವಸ್ಥೆಗೆ 4 ಕೋಟಿ ಮೈಸೂರು ಮೆಡಿಕಲ್ ಕಾಲೇಜಿಗೆ ಟೆಸ್ಟಿಂಗ್ ಉಪಕರಣಗಳು ಹಾಗೂ ಕನ್ಸ್ಯೂಮಬಲ್ಸ್ 7 ಕೋಟಿ ಸ್ವ್ಯಾಬ್ ಸಂಗ್ರಹ ಹಾಗೂ ಹೊರ ಗುತ್ತಿಗೆ ಸಿಬ್ಬಂದಿ 1 ಕೋಟಿ ಲಸಿಕೆ ಮತ್ತು ಟೆಸ್ಟಿಂಗ್ ವಾಹನ ವ್ಯವಸ್ಥೆ 4 ಕೋಟಿ ಆಮ್ಲಜನಕ ಪೂರೈಕೆ 1 ಕೋಟಿ ಇತರೆ ವೆಚ್ಚಗಳು: ದೂರವಾಣಿ, ಇಂಟರ್‌ನೆಟ್, ಕಂಪ್ಯೂಟರ್, ಶಾಮಿಯಾನ ಇತ್ಯಾದಿ 1 ಕೋಟಿ ಒಟ್ಟು ವೆಚ್ಚ 36 ಕೋಟಿ

ಈ ಮೂಲಕ  ಸರ್ಕಾರ ಒದಗಿಸಿದ 41 ಕೋಟಿ ಅನುದಾನದಲ್ಲಿ ಈವರೆಗೆ 36 ಕೋಟಿ ಹಣ ಖರ್ಚಾಗಿದ್ದು, ಅದರ ಸಂಪೂರ್ಣ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದ್ದಾರೆ.

ಸದ್ಯ ಮೈಸೂರು ಜಿಲ್ಲೆ ಕೊವಿಡ್ ನಿಯಂತ್ರಣ ಮಾದರಿಯಾಗಿದ್ದು, ಕೊವಿಡ್ ನಿಯಂತ್ರಣಕ್ಕೆ 24*7 ಕೆಲಸ ಮಾಡಲಾಗುತ್ತಿದೆ. ಮೈಸೂರಿನ ಲಸಿಕೆ ಅಭಿಯಾನವೇ ಇದಕ್ಕೆ ಸಾಕ್ಷಿಯಾಗಿದ್ದು, ಜಿಲ್ಲೆಯಲ್ಲಿ ಶೇಕಡ 72 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಮೈಸೂರಿನಲ್ಲಿ ಮರಣದ‌ ಶೇಕಡವಾರು (ಸಿಎಫ್‌ಆರ್) ರಾಜ್ಯದಲ್ಲೇ ಅತ್ಯಂತ ಕಡಿಮೆಯಾಗಿದೆ. ಮೈಸೂರಿನಲ್ಲಿ ಪರೀಕ್ಷೆ ಮಾಡುವುದು ರಾಜ್ಯ ನೀಡಿದ ಗುರಿಯ ಸುಮಾರು ಶೇ 150ರಷ್ಟಿದೆ. ಗಣಕೀಕೃತ ಬೆಡ್ ಹಂಚಿಕೆ ವ್ಯವಸ್ಥೆಯನ್ನು ಜಾರಿಗೆ ತಂದ ಮೊದಲ ಜಿಲ್ಲೆ ಮೈಸೂರಾಗಿದ್ದು, ನವೆಂಬರ್ 2020ರಲ್ಲೆ ಇದನ್ನು ಜಾರಿಗೆ ತರಲಾಗಿದೆ ಎಂದು ಮೈಸೂರು ಡಿಸಿ ರೋಹಿಣಿ ಸಿಂಧೂರಿ ಸಮರ್ಥಿಸಿಕೊಂಡಿದ್ದಾರೆ.

ಕೊವಿಡ್ ರೋಗಿಗಳಿಗೆ ತ್ವರಿತ ಆರೋಗ್ಯ ಸೇವೆ ನೀಡಲು ಕೊವಿಡ್ ಮಿತ್ರ ಆರಂಭಿಸಲಾಗಿದ್ದು, ಈ ಸೇವೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. 30 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ವೈದ್ಯಕೀಯ ಸಮಾಲೋಚನೆ ನೀಡಲಾಗಿದೆ. ಸಂಪರ್ಕ ಪತ್ತೆಹಚ್ಚುವಿಕೆ, ಪ್ರಾಥಮಿಕ ಸಂಪರ್ಕಗಳ ಸಂಪರ್ಕ ತಡೆಯನ್ನು ವೀಕ್ಷಿಸುವುದು ನಿರಂತರವಾಗಿ ನಡೆಯುತ್ತಿದೆ. ಪ್ರತಿದಿನ ಸಾವಿರಾರು ಪ್ರಾಥಮಿಕ ಸಂಪರ್ಕಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ ಮತ್ತು ಪರೀಕ್ಷಿಸಲಾಗುತ್ತಿದೆ. ಮೈಸೂರು ಜಿಲ್ಲಾಡಳಿತವು ದೂರದೃಷ್ಟಿಯಿಂದ ಏಪ್ರಿಲ್ 13ರಂದೇ ಬೆಂಗಳೂರಿನಿಂದ ಬರುವವರ ಬಗ್ಗೆ ನಿಗಾವಹಿಸಿದ್ದು, 1 ಜುಲೈ 2021ರ ಒಳಗೆ ಮೈಸೂರು ಜಿಲ್ಲೆಯನ್ನು ಕೊವಿಡ್ ಮುಕ್ತ ಮಾಡಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದ್ದಾರೆ.

ಜತೆಗೆ ತಮ್ಮ ಮೇಲೆ ಕೇಳಿಬಂದಿರುವ ಆರೋಪಗಳನ್ನು ಅಲ್ಲಗಳೆದಿರುವ ಅವರು, ಎಷ್ಟು ಪ್ರತ್ಯುತ್ತರಗಳನ್ನು ನೀಡಿದರೂ ಉದ್ದೇಶಪೂರ್ವಕ ಮತ್ತು ಸುಳ್ಳು ಆರೋಪಗಳಿಗೆ ಅಂತ್ಯವಿರುವುದಿಲ್ಲ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ. ಔಷಧಿ ಬೇಗ ತರಿಸಿಲ್ಲ, ಹಣ ದುರುಪಯೋಗ ಆಗಿದೆ ಎಂಬ ಆರೋಪಗಳನ್ನು ಮಾಡಲಾಗಿದೆ. ಆದರೆ ಎಲ್ಲವೂ ಸರ್ಕಾರದ ನಿಯಮ ಮಾರ್ಗಸೂಚಿಯಂತೆಯೇ ನಡೆದಿದೆ. ಈಗಾಗಲೇ ಮಾಡಿರುವ ಖರ್ಚು ಲೆಕ್ಕ ಪರಿಶೋಧನೆಗೆ ಒಳಪಟ್ಟಿದ್ದು, ಯಾರು ಬೇಕಾದರೂ ಪರಿಶೀಲಿಸಬಹುದು. ಜಿಲ್ಲಾಡಳಿತಕ್ಕೆ ಸಂಬಂಧಿಸಿದ ಯಾವುದೇ ಅಧಿಕಾರಿಗಳೂ ತಲೆಕೆಡಿಸಿಕೊಳ್ಳದೇ ಕೊವಿಡ್ ನಿರ್ವಹಣೆ ಬಗ್ಗೆ ಗಮನ ಕೊಡಿ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ಪ್ರಕರಣದಲ್ಲಿ ಮೈಸೂರಿಗೆ ಕಳಂಕ ತರಲು ಯತ್ನಿಸಿದರು; ಅವರೀಗ ಮೈಸೂರು ಜನತೆಯ ಕ್ಷಮೆ ಕೇಳಬೇಕು: ರೋಹಿಣಿ ಸಿಂಧೂರಿ

ಟೆಸ್ಟಿಂಗ್ ಕಡಿಮೆ ಮಾಡಿದ್ದೇ ಸೋಂಕು ಹರಡಲು ಕಾರಣವಾಯ್ತು: ಸಂಸದ ಪ್ರತಾಪ್ ಸಿಂಹ

(Mysuru DC Rohini Sindhuri released Expense details given by govt grant to MP Pratap Simha)

Published On - 10:35 pm, Sun, 30 May 21