18 ವರ್ಷವಳಪಟ್ಟವರು ವಾಹನ ತಂದ್ರೆ ಪೆಟ್ರೋಲ್ ಹಾಕಲ್ಲ.. ಅಪ್ರಾಪ್ತರ ಬೈಕ್ ರೈಡ್ಗೆ ಪೊಲೀಸರ ಬ್ರೇಕ್
ಮೈಸೂರಲ್ಲಿ ಅಪ್ರಾಪ್ತರಿಗೆ ಪೆಟ್ರೋಲ್, ಡೀಸೆಲ್ ಹಾಕಬೇಡಿ ಎಂದು ಪೊಲೀಸರು ಪೆಟ್ರೋಲ್ ಬಂಕ್ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದಾರೆ. ಅಪ್ರಾಪ್ತರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದರೆ ಮಾಹಿತಿ ನೀಡಿ. ಸಿಸಿಟಿವಿಯಲ್ಲಿ ನೋಂದಣಿ ಸಂಖ್ಯೆ, ಅಪ್ರಾಪ್ತನ ಫೋಟೋ ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ.
ಮೈಸೂರು: ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ಸಹ ಬೈಕ್ ಓಡಿಸುವುದನ್ನು ಕಲ್ತಿರ್ತಾರೆ. ಲೆಸೆನ್ಸ್ ಇಲ್ಲ ಅಂದ್ರೂ ಗಾಡಿ ಓಡಿಸಿ ಮೋಜು ಮಸ್ತಿ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತಾರೆ. ಹಾಗಾಗಿ ಅಪ್ರಾಪ್ತರ ಬೈಕ್ ರೈಡ್ಗೆ ಬ್ರೇಕ್ ಹಾಕಲು ಪೊಲೀಸರು ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ. ಮೈಸೂರಲ್ಲಿ ಅಪ್ರಾಪ್ತರಿಗೆ ಪೆಟ್ರೋಲ್, ಡೀಸೆಲ್ ಹಾಕಬೇಡಿ ಎಂದು ಪೊಲೀಸರು ಪೆಟ್ರೋಲ್ ಬಂಕ್ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದಾರೆ. ಅಪ್ರಾಪ್ತರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದರೆ ಮಾಹಿತಿ ನೀಡಿ. ಸಿಸಿಟಿವಿಯಲ್ಲಿ ನೋಂದಣಿ ಸಂಖ್ಯೆ, ಅಪ್ರಾಪ್ತನ ಫೋಟೋ ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ.
ಅಪ್ರಾಪ್ತರ ಬೈಕ್ ರೈಡ್‌ನಿಂದ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಇತ್ತೀಚೆಗಷ್ಟೇ ಅಪ್ರಾಪ್ತ ಬಾಲಕನ ಬೈಕ್ ರೈಡ್‌ನಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಎಚ್ಚೆತ್ತ ಮೈಸೂರು ಸಂಚಾರಿ ಪೊಲೀಸರು ಈ ರೀತಿಯ ಪ್ಲಾನ್ ಮಾಡಿಕೊಂಡಿದ್ದಾರೆ. 18 ವರ್ಷದೊಳಗಿನವರು ಪೆಟ್ರೋಲ್ ಬಂಕ್ಗೆ ವಾಹನ ತಂದರೆ ಅವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಈಗಾಗಲೇ ಡಿಸಿಪಿ ಗೀತಾ ಪ್ರಸನ್ನ ಸೂಚಿಸಿದ್ದಾರೆ.
ಅಪ್ರಾಪ್ತರು ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳಲು ಬಂದ್ರೆ ಪೊಲೀಸರಿಗೆ ತಕ್ಷಣ ಮಾಹಿತಿ ಹೋಗುತ್ತೆ. ಬಳಿಕ ಅಪ್ರಾಪ್ತರಿಂದ ವಾಹನ ವಶಕ್ಕೆ ಪಡೆಯಲಾಗುತ್ತೆ. ಇಲ್ಲದಿದ್ದರೆ ಸಿಸಿ ಕ್ಯಾಮೆರಾ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಬಂಕ್ನಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ವಾಹನದ ನೊಂದಣಿ ಸಂಖ್ಯೆ, ಅಪ್ರಾಪ್ತನ ಫೋಟೋ ದಾಖಲಾಗುತ್ತೆ. ಈ ವೇಳೆ ಕುಟುಂಬದವರನ್ನು ಕರೆದು ಬುದ್ಧಿವಾದ ಹೇಳಿ ಅರಿವು ಮೂಡಿಸಲಾಗುತ್ತೆ. ಆಗಲೂ ಮಾತು ಕೇಳದಿದ್ದರೆ, ಅವರ ಮೇಲೆ ಪ್ರಕರಣ ದಾಖಲಾಗುತ್ತೆ ಎಂದು ಮೈಸೂರಿನಲ್ಲಿ ಡಿಸಿಪಿ ಗೀತಾ ಪ್ರಸನ್ನ ತಿಳಿಸಿದ್ದಾರೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ: ಸರ್ವ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
Published On - 11:17 am, Fri, 5 February 21