ಮೈಸೂರು: ಕೊರೊನಾ ಲಾಕ್ಡೌನ್ ಇದ್ದರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನಸಾಮಾನ್ಯರ ಆರೋಗ್ಯ ಕಾಪಾಡಲು ಹಗಲು ರಾತ್ರಿ ಬಿಡುವಿಲ್ಲದೆ ದುಡಿಯುತ್ತಿರುವ ಕೊರೊನಾ ವಾರಿಯರ್ಸ್ ವಿರುದ್ಧ ಹಲ್ಲೆಗಳಾಗುತ್ತಿವೆ. ಏಪ್ರಿಲ್ 19 ಭಾನುವಾರ ರಾತ್ರಿ ಪಾದರಾಯನಪುರದಲ್ಲಿ ತಮ್ಮ ಕರ್ತವ್ಯಕ್ಕೆ ಬಂದಿದ್ದ ಅಧಿಕಾರಿಗಳ ಮೇಲೆ ಗೂಂಡಾಗಿರಿ ಮಾಡಲಾಗಿತ್ತು. ಇದೇ ರೀತಿಯ ಮತ್ತೊಂದು ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಎನ್.ಆರ್.ಠಾಣಾ ವ್ಯಾಪ್ತಿಯ ಅಲೀಂ ನಗರದಲ್ಲಿ ಬನ್ನಿಮಂಟಪ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಸುಮಯಾ ಫಿರ್ದೋಸ್ ಮೇಲೆ ದೌರ್ಜನ್ಯ ನಡೆಸಲಾಗಿದೆ. ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳಿದ್ದಕ್ಕೆ ಮೆಹಬೂಬ್, ಖಲೀಲಾ, ಜೀಸನ್ ಎಂಬುವರು ಹಲ್ಲೆ ಮಾಡಲು ಮುಂದಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಆಶಾ ಕಾರ್ಯಕರ್ತೆಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಆಶಾ ಕಾರ್ಯಕರ್ತೆ ಎನ್.ಆರ್.ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ ಮೂವರು ಆರೋಪಿಗಳಾದ ಮೆಹಬೂಬ್, ಖಲೀಲ್, ಜೀಶಾನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನರಸಿಂಹರಾಜ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. https://www.facebook.com/Tv9Kannada/videos/365486497698961/