ಮೈಸೂರಿನಲ್ಲಿ ಯೋಗ ದಿನ: ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿರುವ ಕಾರ್ಯಕ್ರಮಗಳ ಪಟ್ಟಿ, ಮಾರ್ಗಸೂಚಿ ಹೀಗಿದೆ

ಪ್ರಧಾನಿ ಮೋದಿ ಜೊತೆ ರಾಣಿ ಪ್ರಮೋದ ದೇವಿ ಸ್ಟೇಜ್ ಹಂಚಿಕೊಳ್ಳಲಿದ್ದಾರೆ. ಕೇವಲ ಬೆರಳಣಿಕೆಯ ವಿವಿಐಪಿಗಳಿಗಷ್ಟೇ ಸ್ಟೇಜ್ ಮೇಲೆ ಅವಕಾಶ ನೀಡಲಾಗಿದೆ. ಮೋದಿ ಭಾಗಿಯಾಗುವ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಮೈಸೂರಿನಲ್ಲಿ ಯೋಗ ದಿನ: ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿರುವ ಕಾರ್ಯಕ್ರಮಗಳ ಪಟ್ಟಿ, ಮಾರ್ಗಸೂಚಿ ಹೀಗಿದೆ
ಪ್ರಧಾನಿ ನರೇಂದ್ರ ಮೋದಿ
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jun 19, 2022 | 10:06 AM

ಮೈಸೂರು: ನಗರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಹಿನ್ನೆಲೆ ಜೂನ್‌ 21ಕ್ಕೆ ಅರಮನೆ ಆವರಣದಲ್ಲಿ ನಡೆಯಲಿವರು ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಕಾರ್ಯಕ್ರಮದ ಮಾರ್ಗಸೂಚಿ ಪ್ರಕಟಿಸಿದ್ದಾರೆ. ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಗಳ ತಪಾಸಣೆಗೆ ಸಹಕರಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ನೀರಿನ ಬಾಟಲ್, ಗಾಜಿನ ಬಾಟಲ್, ಬ್ಯಾಗ್, ವ್ಯಾನಿಟಿ ಬ್ಯಾಗ್‌ ಹರಿತವಾದ ವಸ್ತು ಯಾವದೇ ರೀತಿಯ ಆಯುಧಗಳು, ಲೋಹದ ವಸ್ತುಗಳಿಗೆ ನಿರ್ಬಂಧ ವಿಧಿಸಲಾಗಿದೆ. ಯಾವುದೇ ರೀತಿಯ ಕರಪತ್ರ, ಬ್ಯಾನರ್, ಕಪ್ಪು ಬಟ್ಟೆ, ಬಾವುಟ ಭಿತ್ತಿಪತ್ರಕ್ಕೆ ಅವಕಾಶವಿಲ್ಲ. ಮೊಬೈಲ್‌ ಹೊರತುಪಡಿಸಿ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳಿಗೆ ಅವಕಾಶ ಇಲ್ಲ. ಕ್ಯಾಮರಾ, ವಿಡಿಯೋಕ್ಯಾಮರಾ, ಪವರ್ ಬ್ಯಾಂಕ್ ಇಯರ್‌ಫೋನ್‌‌ಗೆ ಅವಕಾಶ ಇಲ್ಲ. ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಬೇಕು. ಬೆಂಕಿ ಉತ್ಪತ್ತಿ ಮಾಡುವ ಬೆಂಕಿಪೊಟ್ಟಣ, ಲೈಟರ್, ಪಟಾಕಿ ಹಾಗೂ ಇತ್ಯಾದಿ ವಸ್ತುಗಳಿಗೂ ನಿರ್ಬಂಧ ವಿಧಿಸಲಾಗಿದೆ. ಕರ್ಕಶ ಶಬ್ದ ಮಾಡುವ ಪೀಪಿ, ತಮಟೆ, ನಗಾರಿ ಇತ್ಯಾದಿ ವಸ್ತುಗಳನ್ನು ನಿಷೇಧಿಸಲಾಗಿದೆ. ವಾರಸುದಾರರಿಲ್ಲದ ಬ್ಯಾಗುಗಳು, ಪೊಟ್ಟಣ, ಆಟದ ಸಾಮಾನು ಇತರೆ ವಸ್ತುಗಳು ಕಂಡು ಬಂದಲ್ಲಿ ಅದನ್ನು ಮುಟ್ಟದೇ ಕೂಡಲೇ ಪೋಲೀಸರಿಗೆ ಮಾಹಿತಿ ನೀಡಬೇಕು. ಇದು ಜೂನ್ 20ರಂದು ಮಹಾರಾಜ‌ ಕಾಲೇಜು ಮೈದಾನದಲ್ಲಿ   ನಡೆಯುವ ಫಲಾನುಭವಿಗಳ ಸಂವಾದ ಸಮಾವೇಶಕ್ಕೂ ಅನ್ವಯವಾಗಲಿದೆ. ಕೇಂದ್ರದ ಯೋಜನೆಯ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ.

ಮೋದಿ ಭಾಗಿಯಾಗುವ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ

ಜೂ.20,21 ಎರಡು ದಿನಗಳ ಕಾಲ ಮೋದಿ ಕರ್ನಾಟಕ ಪ್ರವಾಸದಲ್ಲಿದ್ದು, ಬೆಂಗಳೂರು ಮತ್ತು ಮೈಸೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಜೂ.20 ಮ.11.55ಕ್ಕೆ ಬೆಂಗಳೂರು ಯಲಹಂಕ ವಾಯುನೆಲೆಗೆ ಆಗಮಿಸುತ್ತಿದ್ದು, ಮ.12:30ಕ್ಕೆ ಇಂಡಿಯನ್ ಇನ್ಸಟ್ಯೂಟ್ ಆಫ್ ಸೈನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1.45ಕ್ಕೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ .3.35ಕ್ಕೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟಿಸಲಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಅನಾವರಣ. ಸಂ.5 ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಸಂ.5:50ಕ್ಕೆ ಮೈಸೂರಿಗೆ ಆಗಮನ. ಸಂ.6ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಲಿದ್ದು, ಕೇಂದ್ರ ಯೋಜನಗೆಳ ಫಲಾನುವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: Father’s Day 2022: ನಮ್ಮ ಕಣ್ಣಿನಿಗೆ ಹೀರೋ ನನ್ನ ಅಪ್ಪ

ಬಳಿಕ ಸಂಜೆ 7:30 ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ಸುತ್ತೂರು ಮಠದ ಆವರಣದಲ್ಲಿ ವೇದ ಪಾಠಶಾಲೆ ಕಟ್ಟಡ ಲೋಕಾರ್ಪಣೆಗೊಳಿಸಲಿದ್ದಾರೆ. ರಾತ್ರಿ 8:15ಕ್ಕೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ರ್ಯಾಡಿಷನ್ ಬ್ಲೂ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜೂ.21 ಬೆ 6.30ಕ್ಕೆ ಮೈಸೂರು ಅರಮನೆ ಆವರಣಕ್ಕೆ ಆಗಮಿಸಲಿದ್ದು, ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲ್ಲಿದ್ದಾರೆ. ಸ್ವತಃ ಯೋಗಾಭ್ಯಾಸ ಮಾಡಲಿರುವ ಪ್ರಧಾನಿ‌, ಅಂತರಾಷ್ಟ್ರೀಯ ಯೋಗದಿನದ ಕುರಿತು ಸಂದೇಶ ನೀಡಲಿದ್ದಾರೆ. ರಾಜ ಮನೆತನದವರ ಜೊತೆ ಉಪಹಾರ ಮಾಡಲಿದ್ದು, ಬಳಿಕ ಬೆ 9:25ಕ್ಕೆ ಮೈಸೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮೋದಿ ಜೊತೆ ಸ್ಟೇಜ್ ಹಂಚಿಕೊಳ್ಳಲಿರುವ ರಾಣಿ ಪ್ರಮೋದ ದೇವಿ

ಪ್ರಧಾನಿ ಮೋದಿ ಜೊತೆ ರಾಣಿ ಪ್ರಮೋದ ದೇವಿ ಸ್ಟೇಜ್ ಹಂಚಿಕೊಳ್ಳಲಿದ್ದಾರೆ. ಕೇವಲ ಬೆರಳಣಿಕೆಯ ವಿವಿಐಪಿಗಳಿಗಷ್ಟೇ ಸ್ಟೇಜ್ ಮೇಲೆ ಅವಕಾಶ ನೀಡಲಾಗಿದೆ. ಕೇಂದ್ರ ಆಯುಷ್ ಮಂತ್ರಿ. ಸಿ.ಎಂ ಬೊಮ್ಮಾಯಿ, ಹಾಗೂ ರಾಣಿ ಪ್ರಮೋದ ದೇವಿಗೆ ಮಾತ್ರ ಸ್ಟೇಜ್​ನಲ್ಲಿ ಅವಕಾಶ ಒದಗಿಸಲಾಗಿದೆ. ಪ್ರತಿ ಬ್ಯಾರಕ್​ನಲ್ಲಿ 100 ಮಂದಿಗೆ ಅವಕಾಶಯಿದೆ. 12 ಬ್ಯಾರಕ್​ಗಳ ವ್ಯವಸ್ಥೆ ಮಾಡಿರುವ ಜಿಲ್ಲಾಡಳಿತ, ಇದರಲ್ಲಿ 2 ಬ್ಯಾರೆಕ್​ಗಳನ್ನ ಕಾಯ್ದಿರಿಸಿದೆ. ವಿವಿಐಪಿಗಳಿಗೆ ಜಯಮಾರ್ಥಾಂಡ ದ್ವಾರದಿಂದ ಪ್ರವೇಶವಿದ್ದು, ಯೋಗ ಶಿಬಿರದಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಯೋಗಪಟುಗಳಿಗೆ ಗುರುತಿನ ಚೀಟಿ ಕಡ್ಡಾಯವಾಗಿದೆ. ಜೂನ್ 20 ಸೋಮವಾರದಂದು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನ‌ ಪಡೆಯಲಿದ್ದಾರೆ. ಸೋಮವಾರ 12 ಗಂಟೆಯಿಂದ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಬಂಧಿಸಿದ್ದು, ಜೂನ್ 21ರಂದು ಎಂದಿನಂತೆ ದೇವಿಯ ದರ್ಶನಕ್ಕೆ ಅವಕಾಶವಿರಲಿದೆ.

ಭದ್ರತೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ ಗೃಹ ಸಚಿವ

ಅರಮನೆಯ ಯೋಗ ಕಾರ್ಯಕ್ರಮದ ಅಂತಿಮ ಸಿದ್ದತೆಯನ್ನು ಗೃಹ ಸಚಿವ ಆರಗಜ್ಞಾನೇಂದ್ರ ವೀಕ್ಷಿಸಿದ್ದು ಭದ್ರತೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದರು. ಪಿ.ಎಂ ಕಾನ್ವೆಗೆ ಯಾವುದೇ ರೀತಿಯಾದಂತ ಅಡ್ಡಿಯಾಗದಂತೆ ಸಿದ್ದತೆ ಮಾಡಲಾಗಿದೆ. ನಿನ್ನೆ ಕುದ್ದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್​ ಸ್ಥಳ ಪರಿಶೀಲನೆ ನಡೆಸಿದರು. ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತರ ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ. ಜೂನ್ 21 ರ ಬೆಳೆಗ್ಗೆ 6.30 ರಿಂದ 7.45 ರವರೆಗೆ ಯೋಗಭ್ಯಾಸ ಕಾರ್ಯಕ್ರಮ ನಡೆಯಲಿದ್ದು, ಈಗಾಗ್ಲೆ ಸ್ಟೇಜ್ ಎಲ್.ಇ.ಡಿ ಸೇರಿದಂತೆ ಸಕಲ ಸಿದ್ದತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಮಳೆ ಬಂದರೆ ಯೋಗಭ್ಯಾಸಕ್ಕೆ ಅಡಚಣೆಯಾಗುವ ಹಿನ್ನಲೆ, ಮಳೆ ಬಾರದೆ ಇದ್ರೆ ಸಾಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಆತಂಕದ ನುಡಿಗಳನ್ನಾಡಿದರು.

ಅಂತಿಮ ಹಂತದ ಯೋಗ ತಾಲೀಮು

ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ ಹಿನ್ನಲೆ ಮೈಸೂರಿಗೆ ಪ್ರಧಾನಿ ನರೇಂದ್ರಮೋದಿ ಆಗಮಿಸುತ್ತಿದ್ದು, ಮೈಸೂರು ಅರಮನೆ ಆವರಣದಲ್ಲಿ ಇಂದು ಅಂತಿಮ ಹಂತದ ಯೋಗ ತಾಲೀಮು ನಡೆಯಿತು. ಸಾವಿರಾರು ಯೋಗಾಸಕ್ತರಿಂದ ಯೋಗ ಪ್ರದರ್ಶನ ಮಾಡಿದರು. ಶಾಸಕ ರಾಮದಾಸ್​, ಸಂಸದ ಪ್ರತಾಪ್ ಸಿಂಹ, ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್​ ಅಂತಿಮ ಹಂತದ ಯೋಗ ರಿಹರ್ಸಲ್​ನಲ್ಲಿ ಭಾಗಿಯಾಗಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada