Mysuru Bengaluru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಸಣ್ಣ ವಾಹನಗಳ ನಿಷೇಧ ಸಮರ್ಥಿಸಿದ ಅಲೋಕ್ ಕುಮಾರ್

| Updated By: ಗಣಪತಿ ಶರ್ಮ

Updated on: Jul 26, 2023 | 4:52 PM

ಎತ್ತಿನಗಾಡಿ, ಕುದುರೆಗಾಡಿಯಂತಹ ಮೋಟಾರ್ ರಹಿತ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯವೇ ಇಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

Mysuru Bengaluru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಸಣ್ಣ ವಾಹನಗಳ ನಿಷೇಧ ಸಮರ್ಥಿಸಿದ ಅಲೋಕ್ ಕುಮಾರ್
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ
Follow us on

ಮೈಸೂರು: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ (Mysuru Bengaluru Expressway) ದ್ವಿಚಕ್ರ, ತ್ರಿಚಕ್ರ ವಾಹನ ಹಾಗೂ ಇತರ ಸಣ್ಣ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಸಮರ್ಥಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಎಕ್ಸ್‌ಪ್ರೆಸ್‌ ಹೆದ್ದಾರಿಯ ಅಪಘಾತದಲ್ಲಿ ಮೃತಪಟ್ಟ ಬಹುತೇಕರು ಬೈಕ್ ಸವಾರರು. 150 ಸಿಸಿ ವಾಹನಗಳಲ್ಲಿ ಹೆಚ್ಚು ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ಆಟೋ ರಿಕ್ಷಾದಂತಹ ವಾಹನಗಳ ವೇಗ ಇನ್ನೂ ಕಡಿಮೆ ಇರುತ್ತದೆ. ಎತ್ತಿನಗಾಡಿ, ಕುದುರೆಗಾಡಿಯಂತಹ ಮೋಟಾರ್ ರಹಿತ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ನಿರ್ಬಂಧಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಿಂದೆಯೇ ಅವಕಾಶ ಮಾಡಿಕೊಂಡಿದೆ. ಈ ಸಂಬಂಧ ಜುಲೈ 12ರಂದು ಅಧಿಸೂಚನೆ ಕೂಡ ಹೊರಡಿಸಲಾಗಿದೆ. ಆಗಸ್ಟ್ 1ರಿಂದ ನಿಯಮ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಗ್ರಿಲ್, ವಿದ್ಯುತ್ ಕಂಬಗಳ ಕಳ್ಳತನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಎನ್‌ಎಚ್‌ಎಐ ಅಧಿಕಾರಿಗಳು ಒಂದೇ ಒಂದು ದೂರು ಕೊಟ್ಟಿಲ್ಲ. ತಡೆಗೋಡೆ ಕಬ್ಬಿಣ ಕಳ್ಳತನದಿಂದ ಹಸು, ಪಾದಚಾರಿಗಳು ರಸ್ತೆಗೆ ಬರುತ್ತಿದ್ದಾರೆ. ಇದರಿಂದಾಗಿ ಅಪಘಾತ ಆಗುತ್ತಿವೆ ಅಂತ ಹೇಳುತ್ತಿದ್ದಾರೆ. ಆದರೆ ಪೊಲೀಸರಿಗೆ ದೂರು ಕೊಟ್ಟಿಲ್ಲ. ದರೋಡೆ ಪ್ರಕರಣಗಳ ವಿಚಾರವನ್ನೂ ನಮ್ಮ ಗಮನಕ್ಕೆ ತಂದಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: Bengaluru Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ, ಆಟೋಗಳಿಗೆ ನಿಷೇಧ, AI ಆಧಾರಿತ ಕ್ಯಾಮೆರಾ ಅಳವಡಿಕೆ

ಇದಕ್ಕೂ ಮುನ್ನ ಅವರು, ಎಕ್ಸ್​ಪ್ರೆಸ್ ವೇಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದು ಅವರು ನಡೆಸಿದ ಎರಡನೇ ಪರಿಶೀಲನೆ ಆಗಿದೆ. ನೂತನ ಹೆದ್ದಾರಿಯಲ್ಲಿ ಅಲ್ಲಲ್ಲಿ ಕೃತಕಬುದ್ಧಿಮತ್ತೆ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಯುವ ದೃಷ್ಟಿಯಿಂದ ವಾಹನಗಳಿಗೆ ವೇಗದ ಮಿತಿ ಹೇರಲಾಗಿತ್ತು. ಮಿತಿ ಮೀರಿದ ವೇಗದಲ್ಲಿ ಸಂಚರಿಸಿದ ವಾಹನಗಳಿಗೆ ದಂಡ ವಿಧಿಸಲೂ ಸೂಚಿಸಲಾಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ