ಸಿಎಂ ಹೆಸರು ಹೇಳ್ಕೊಂಡು ದಂಪತಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ, ಹಲ್ಲೆ: ಪ್ರಧಾನಿ ಮೋದಿ, ರಾಷ್ಟ್ರಪತಿಗೆ ದೂರು

ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಾಜು ವಿರುದ್ಧ ಕೇಳಿಬಂದಿದ್ದ ಹಲ್ಲೆ ಹಾಗೂ ಬೆದರಿಕೆ ಆರೋಪ ಇದೀಗ ಪ್ರಧಾನಿ, ರಾಷ್ಟ್ರಪತಿಗಳಿಗೆ ದೂರು ಕೊಡುವ ಮಟ್ಟಕ್ಕೆ ತಲುಪಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಅಮಿತಾಬ್-ಸುಷ್ಮಾ ದಂಪತಿಯ ಮೇಲೆ ಹಲ್ಲೆ ನಡೆಸಿ, ಸಿದ್ದರಾಮಯ್ಯ ಹೆಸರಲ್ಲಿ ಬೆದರಿಕೆ ಹಾಕಿದ ಆರೋಪ ರಾಜು ಮೇಲಿದೆ. ಪೊಲೀಸರಿಗೆ ದೂರು ನೀಡಿದ ನಂತರವೂ ಬೆದರಿಕೆ, ಧಮ್ಕಿ ಮುಂದುವರಿದೆ ಎಂದು ಸಂತ್ರಸ್ತ ದಂಪತಿ ಆರೋಪಿಸಿದ್ದಾರೆ.

ಸಿಎಂ ಹೆಸರು ಹೇಳ್ಕೊಂಡು ದಂಪತಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ, ಹಲ್ಲೆ: ಪ್ರಧಾನಿ ಮೋದಿ, ರಾಷ್ಟ್ರಪತಿಗೆ ದೂರು
ಹಲ್ಲೆಗೊಳಗಾದ ದಂಪತಿ (ಎಡಚಿತ್ರ) ಮತ್ತು ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ ರಾಜು ಸಿಎಂ ಪುತರ ಯತೀಂದ್ರ ಜತೆ
Edited By:

Updated on: Jan 27, 2026 | 12:16 PM

ಮೈಸೂರು, ಜನವರಿ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ (Varuna) ನಡೆದ ಕಾಂಗ್ರೆಸ್ (Congress) ಮುಖಂಡನ ಗಲಾಟೆ ಪ್ರಕರಣ ಇದೀಗ ರಾಷ್ಟ್ರ ರಾಜಧಾನಿ ತಲುಪಿದೆ. ತಮ್ಮ ಮೇಲೆ ನಡೆದ ಹಲ್ಲೆ ಹಾಗೂ ನಿರಂತರ ಬೆದರಿಕೆಗಳ ವಿರುದ್ಧ ನ್ಯಾಯ ಕೋರಿ ಅಮಿತಾಬ್ ಹಾಗೂ ಅವರ ಪತ್ನಿ ಸುಷ್ಮಾ ದಂಪತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಲಿಖಿತ ದೂರು ನೀಡಲು ಮುಂದಾಗಿದ್ದಾರೆ. ಆರೋಪಿ ರಾಜು ಎಂಬಾತ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡ. ಕೆಲ ದಿನಗಳ ಹಿಂದೆ ಹೆಬ್ಯಾ ಗ್ರಾಮದಲ್ಲಿ ಅಮಿತಾಬ್ ಹಾಗೂ ಅವರ ಪತ್ನಿ ಸುಷ್ಮಾ ಮೇಲೆ ರಾಜು ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಅಮಿತಾಬ್ ಜಾಗವನ್ನು ತಮ್ಮ ಹೆಸರಿಗೆ ಬರೆಯುವಂತೆ ರಾಜು ಒತ್ತಡ ಹಾಕುತ್ತಿದ್ದ ಎಂಬ ಆರೋಪವಿದೆ. ಇದಕ್ಕೆ ಅಮಿತಾಬ್ ಒಪ್ಪದ ಹಿನ್ನೆಲೆಯಲ್ಲಿ, ರಾಜು ಹಾಗೂ ಆತನ ಬೆಂಬಲಿಗರು ಮನೆಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಕಲ್ಲುಗಳಿಂದ ತಲೆಗೆ ಹೊಡೆದು ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ‘‘ನನಗೆ ಸಿದ್ದರಾಮಯ್ಯ ಗೊತ್ತು, ಯತೀಂದ್ರ ಗೊತ್ತು’’ ಎಂದು ರಾಜು ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಇದ್ದು, ಆ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರಿಗೆ ದೂರು ನೀಡಿದರೂ ನಿಂತಿಲ್ಲ ಬೆದರಿಕೆ, ಧಮ್ಕಿ

ಈ ಸಂಬಂಧ ಅಮಿತಾಬ್ ಅವರ ಪತ್ನಿ ಸುಷ್ಮಾ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿ ಎಫ್‌ಐಆರ್ ಆಗಿದೆ. ಆದರೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳಿಂದ ನಿರಂತರ ಬೆದರಿಕೆಗಳು ಮುಂದುವರಿದಿವೆ ಎಂದು ದಂಪತಿ ಆರೋಪಿಸಿದ್ದಾರೆ.

ಮೋದಿ, ಮುರ್ಮುಗೆ ಸಂತ್ರಸ್ತ ದಂಪತಿ ಪತ್ರ

ಸ್ಥಳೀಯ ಮಟ್ಟದಲ್ಲಿ ನ್ಯಾಯ ಸಿಗದ ಕಾರಣ, ದಂಪತಿ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಳ್ಳಲು ನಿರ್ಧರಿಸಿದ್ದಾರೆ. ಲಿಖಿತ ದೂರು ಸಲ್ಲಿಸುವ ಮೂಲಕ ನ್ಯಾಯಕ್ಕಾಗಿ ಅಂತಿಮವಾಗಿ ರಾಷ್ಟ್ರಪತಿ ಮತ್ತು ಪ್ರಧಾನಿಯ ಅಂಗಳ ತಲುಪಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಬಹುಕೋಟಿ ಒಡೆಯನ ಆಶ್ರಯದಲ್ಲಿದ್ದ ರಾಜೀವ್ ಗೌಡ ಸಿಕ್ಕಿಬಿದ್ದಿದ್ದು ಹೇಗೆ?

ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಅವಾಚ್ಯವಾಗಿ ನಿಂದಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜು ಗೌಡ ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ, ವರುಣಾ ಕ್ಷೇತ್ರದಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಮುಖಂಡ ರಾಜು ವಿರುದ್ಧ ಪೊಲೀಸರು ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Tue, 27 January 26