ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿ: ಮರಣ ಪತ್ರ ನೀಡಿದ್ದ ಶಿರಸ್ತೇದಾರ್ ಅಮಾನತು
ದೇಶ ಬಿಟ್ಟು ವಿದೇಶ ಕೆನಡಾದಲ್ಲಿ ವಾಸವಾಗಿರುವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ ಚಂದ್ರಶೇಖರ್ ಎಂಬುವರ ಜಮೀನು ಕಬಳಿಸಲು ಅದೇ ಗ್ರಾಮದ ಇಬ್ಬರು ಮುಂದಾಗಿದ್ದರು. ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಆರೋಪಿಗಳು ಬದುಕಿರುವ ಚಂದ್ರಶೇಖರ ಅವರನ್ನು ಮೃತಪಟ್ಟಿದ್ದಾರೆ ಎಂದು ನಕಲಿ ಮರಣ ಪತ್ರ ಸೃಷ್ಟಿಸಿದ್ದರು. ಮುಂದೇನಾಯ್ತು ಈ ಸ್ಟೋರಿ ಓದಿ
ಮೈಸೂರು, ಜೂನ್ 27: ಬದುಕಿರುವಾಗಲೇ ಮರಣ ಪತ್ರ ನೀಡಿದ ಆರೋಪದ ಮೇಲೆ ಶಿರಸ್ತೇದಾರ್ ಶ್ರೀನಾಥ್ ಎಂಬುವರನ್ನು ಅಮಾನತು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳು ಸೇರಿದಂತೆ ಐವರ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ (Biligere Police Station) ಪ್ರಕರಣ ದಾಖಲಾಗಿದೆ. ನಂಜನಗೂಡು (Nanjangud) ತಾಲ್ಲೂಕಿನ ಮುಳ್ಳೂರು ಗ್ರಾಮದ ಚಂದ್ರಶೇಖರ್ ಊರಲ್ಲಿ ಸರ್ವೆ ನಂಬರ್ 442 ರಲ್ಲಿ 1.26 ಗುಂಟೆ ಮತ್ತು 444ರ ಸರ್ವೆ ನಂಬರ್ ನಲ್ಲಿ 1.30 ಗುಂಟೆ ಜಮೀನು ಹೊಂದಿದ್ದಾರೆ.
ಕೆನಡಾದಲ್ಲಿ ವಾಸಿಸುತ್ತಿರುವುದರಿಂದ ಚಂದ್ರಶೇಖರ್ ಅವರ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಮುಳ್ಳೂರು ಗ್ರಾಮದ ಕೃಷ್ಣೇಗೌಡ ಮತ್ತು ಶಿವ ಮಲ್ಲೇಗೌಡ ಎಂಬುವರು ಅಡ್ಡದಾರಿ ಹಿಡಿದಿದ್ದಾರೆ. ಬದುಕಿರುವ ಚಂದ್ರಶೇಖರ್ ಮೃತಪಟ್ಟಿದ್ದಾರೆ ಎಂದು ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಶ್ರೀನಾಥ್ ಅವರಿಂದ ಮರಣ ಪ್ರಮಾಣ ಪತ್ರ ಪಡೆದಿದ್ದಾರೆ.
ಬಳಿಕ ಕಂದಾಯ ಇಲಾಖೆಗೆ ಭೇಟಿ ನೀಡಿ, ಅಲ್ಲಿ ಅಧಿಕಾರಿಗಳೊಂದಿಗೆ ಶಾಮಿಲಾಗಿ ಚಂದ್ರಶೇಖರ ಅವರ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಕೂಡ ಜಮೀನಿಗೆ ತೆರಳಿ ಪರಿಶೀಲನೆ ನಡೆಸದೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಸಿಎಂ ಆಪ್ತ, ಸಚಿವ ಕೆ ವೆಂಕಟೇಶ್ನಿಂದ ಮೈಮುಲ್ ಅಧ್ಯಕ್ಷನಿಗೆ ಕಿರುಕುಳ, ಆರೋಪ
ಈ ವಿಚಾರ ತಿಳಿದ ಚಂದ್ರಶೇಖರ್ ಸಂಬಂಧಿ ಎನ್.ನಾಗರಾಜರಾವ್ ಎಂಬುವರು ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಸದ್ಯ, ನಂಜನಗೂಡು ಕಂದಾಯ ಇಲಾಖೆಯ ಗೋಳೂರು ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್, ರಾಜಸ್ವ ನಿರೀಕ್ಷಕ ಜೆ.ಪ್ರಕಾಶ್, ಶಿರಸ್ತೆದಾರ್ ಶ್ರೀನಾಥ್, ಕೃಷ್ಣೇಗೌಡ ಮತ್ತು ಶಿವ ಮಲ್ಲೇಗೌಡ ವಿರುದ್ಧ ದೂರು ದಾಖಲಾಗಿದೆ.
ನಕಲಿ ಪ್ರಮಾಣ ಪತ್ರ ನೀಡಿದ್ದ ಶಿರಸ್ತೇದಾರ್ ಶ್ರೀನಾಥ್ ಅವರನ್ನು ಮೈಸೂರಿನ ಪ್ರಾದೇಶಿಕ ಆಯುಕ್ತರರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಉಳಿದಿರುವ ಅಧಿಕಾರಿಗಳ ವಿರುದ್ಧ ತನಿಖೆ ನಂತರ ಶಿಸ್ತು ಕ್ರಮಗೊಳ್ಳಲಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ