ಮೈಸೂರು: ಬೈಕ್ ಅಡ್ಡಗಟ್ಟಿ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ಮೈಸೂರು ತಾಲೂಕಿನ ಮೆಲ್ಲಹಳ್ಳಿಯಲ್ಲಿ ನಡೆದಿದೆ. ಮೆಲ್ಲಹಳ್ಳಿಯ ಮನೋಜ್ಗೆ(24) ಅದೇ ಗ್ರಾಮದ ರಘು, ಸಚಿನ್, ಕಿರಣ್, ಶಂಕರ್ ಎಂಬುವವರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೆ ಆಗಾಗ ಗ್ರಾಮದಲ್ಲಿ ಗಲಾಟೆಯಾಗುತ್ತಿತ್ತು. ಹುಟ್ಟುಹಬ್ಬ ಆಚರಣೆ ಸೇರಿ ಹಲವು ವಿಚಾರಗಳಲ್ಲಿ ಗಲಾಟೆಯಾಗಿತ್ತು. ಇದೇ ವಿಚಾರಕ್ಕೆ ಮನೋಜ್ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ಅಡ್ಡಗಟ್ಟಿ ಮನೋಜ್ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಲಿ ದಾಳಿಗೆ ಹಸು ಬಲಿ
ಮೈಸೂರಿನಲ್ಲಿ ಮಾನವ ಕಾಡು ಪ್ರಾಣಿ ಸಂಘರ್ಷ ಮುಂದುವರೆದಿದೆ. ಹುಣಸೂರು ತಾಲ್ಲೂಕು ಗೌಡಿಕೆರೆ ಗ್ರಾಮದ ಹೊರವಲಯದಲ್ಲಿ ಹುಲಿ ದಾಳಿಗೆ ಹಸು ಬಲಿಯಾಗಿದೆ. ಗೌಡಿಕೆರೆ ಗ್ರಾಮದ ಶೇಖರ್ ಎಂಬುವವರಿಗೆ ಸೇರಿದ ಹಸು ಬಲಿಯಾಗಿದೆ. ಎರಡು ತಿಂಗಳ ಹಿಂದೆ ಇದೇ ಜಾಗದಲ್ಲಿ ಹಸುವಿನ ಮೇಲೆ ಹುಲಿ ದಾಳಿ ಮಾಡಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಲ್ಲೆನಹೊಸಹಳ್ಳಿ ಕೊಳವಿಗೆ ನೇಗತ್ತೂರು ಸೇರಿ ಸುತ್ತಮುತ್ತಲಿನ ಗ್ರಾಮದ ಹೊರವಲಯದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ಕಾಡಂಚಿನ ಗ್ರಾಮದ ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಮನೆಯಿಂದ ಹೊರ ಬರಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಆದಷ್ಟು ಬೇಗ ಹುಲಿ ಸೆರೆ ಹಿಡಿಯುವಂತೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಮಾನಸಿಕ ಅಸ್ವಸ್ಥ ತಾಯಿಗೂ ಮಗು ಪೋಷಣೆಯ ಹಕ್ಕು ಇದೆ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್
ಸಾಲಬಾಧೆಗೆ ಮನನೊಂದು ರೈತ ಸಾವು
ಮೈಸೂರು: ಹುಣಸೂರು ತಾಲೂಕಿನ ಕಿರಂಗೂರು ಗ್ರಾಮದಲ್ಲಿ ಸಾಲಬಾಧೆಗೆ ಮನನೊಂದು ರೈತ ಕೆ.ಬಿ.ರಾಮು(38) ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಗಾಗಿ ಕೈ ಸಾಲ, ಪತ್ನಿ ಹೆಸರಲ್ಲಿ ಸ್ವಸಹಾಯ ಸಂಘಗಳಿಂದ ಸಾಲ ಪಡೆದಿದ್ದ ರಾಮು ಸಾಲಗಾರರ ಕಾಟ ತಾಳದೆ ನೇಣಿಗೆ ಶರಣಾಗಿದ್ದಾರೆ. ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲು ಜಾರಿ ಬಾವಿಯಲ್ಲಿ ಬಿದ್ದು ಬಾಲಕಿ ಸಾವು
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಕುಣೆ ಕೆಲ್ಲೂರಿನಲ್ಲಿ 30 ಅಡಿ ಆಳದ ಬಾವಿಯಲ್ಲಿ ಬಿದ್ದು ಬಾಲಕಿ ಮೇಘಾ (17) ಮೃತಪಟ್ಟಿದ್ದಾಳೆ. ನಿನ್ನೆ ಸಂಜೆ ಬಾವಿಯೊಳಗಿನ ಮೀನು ನೋಡಲು ಹೋಗಿ ಘಟನೆ ಸಂಭವಿಸಿದೆ. ಘಟನೆ ಬಳಿಕ ನಿನ್ನೆ ತಡ ರಾತ್ರಿವರೆಗೂ ಮೃತದೇಹ ಪತ್ತೆಗೆ ಶೋಧ ಕಾರ್ಯ ನಡೆದಿದೆ. ಸ್ಥಳಕ್ಕೆ ಮಸ್ಕಿ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಬಂದಿದ್ದು ಕಾರ್ಯಾಚರಣೆ ನಡೆಸಿದ್ದಾರೆ.
ವಿಷಕಾರಿ ಜೇನು ಜಾತಿಯ ರಾಮ ಹುಳು ಕಡಿದು ವ್ಯಕ್ತಿ ಸಾವು
ವಿಷಕಾರಿ ಜೇನು ಜಾತಿಯ ರಾಮ ಹುಳು ಕಡಿದು ವಿಂಡ್ ಪ್ಯಾನ್ ಕಂಪನಿಯ ಸಿಬ್ಬಂದಿ ಮೃತಪಟ್ಟಿದ್ದಾರೆ. ಜಿ.ಪಿ.ಶಿವಕುಮಾರ ಅಲಿಯಾಸ್ ಬಾಬಣ್ಣ (49) ಸಾವನ್ನಪ್ಪಿದವರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಯಲೋದಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ವಿಚಿತ್ರವಾಗಿ ಗೂಡು ಕಟ್ಟುವ ಈ ಹುಳು ಶಿವಕುಮಾರ ಅವರಿಗೆ ಕಡಿದ ತಕ್ಷಣ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಚಿಕಿತ್ಸೆ ಆರಂಭಿಸುವಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
Published On - 8:24 am, Thu, 10 November 22