ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ಅಪರೂಪದ ಮದುವೆ; ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಜೋಡಿಯಾದ 85 ವರ್ಷದ ವರ 65 ವರ್ಷದ ವಧು

ಮೈಸೂರಿನ ಉದಯಗಿರಿಯ ಗೌಸಿಯ ನಗರದ ನಿವಾಸಿಯಾಗಿರುವ 85 ವರ್ಷದ ಹಾಜಿ ಮುಸ್ತಫಾ ಹಾಗೂ 65 ವರ್ಷದ ಫಾತಿಮಾ ಬೇಗಂ ಸತಿ ಪತಿಗಳಾಗಿದ್ದಾರೆ. ಮುಸ್ತಫಾ ಕುರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮುಸ್ತಫಾಗೆ 9 ಜನ ಮಕ್ಕಳು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ಅಪರೂಪದ ಮದುವೆ; ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಜೋಡಿಯಾದ 85 ವರ್ಷದ ವರ 65 ವರ್ಷದ ವಧು
ಇಳಿ ವಯಸ್ಸಿನಲ್ಲಿ ಮದುವೆಯಾದ ಹಿರಿಯ ಜೀವಗಳು
Follow us
TV9 Web
| Updated By: ಆಯೇಷಾ ಬಾನು

Updated on: Jan 23, 2022 | 8:57 AM

ಮೈಸೂರು: ಓದಿಗೆ ಜ್ಞಾನಾರ್ಜನೆಗೆ ವಯಸ್ಸಿಲ್ಲ ಅನ್ನೋ ಮಾತನ್ನು ನೀವು ಕೇಳಿರುತ್ತೀರಾ. ಆದರೆ ಇದೀಗ ಮದುವೆಗೂ ವಯಸ್ಸಿಲ್ಲ ಅನ್ನುವ ಮಾತನ್ನು ಮೈಸೂರಿನ ಹಿರಿಯ ಜೀವಗಳು ನಿಜ ಮಾಡಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿ ಹಸೆಮಣೆ ಏರಿ‌ ಅಚ್ಚರಿ ಮೂಡಿಸಿದ್ದಾರೆ. ಸ್ವಂತ ಮಕ್ಕಳು‌ ಮೊಮ್ಮಕ್ಕಳು ಮುಂದೆ ನಿಂತು ಹಿರಿಯ ಜೀವಗಳಿಗೆ ಮದುವೆ ಮಾಡಿಸಿರೋದು ವಿಶೇಷ.

85 ವರ್ಷದ ವರ 65 ವರ್ಷದ ವಧು ಇಂತಹ ಅಪರೂಪದ ಮದುವೆಗೆ ಸಾಕ್ಷಿಯಾಗಿರುವುದು‌ ಸಾಂಸ್ಕೃತಿಕ ನಗರಿ ಮೈಸೂರು. ಮೈಸೂರಿನ ಉದಯಗಿರಿಯ ಗೌಸಿಯ ನಗರದ ನಿವಾಸಿಯಾಗಿರುವ 85 ವರ್ಷದ ಹಾಜಿ ಮುಸ್ತಫಾ ಹಾಗೂ 65 ವರ್ಷದ ಫಾತಿಮಾ ಬೇಗಂ ಸತಿ ಪತಿಗಳಾಗಿದ್ದಾರೆ. ಮುಸ್ತಫಾ ಕುರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮುಸ್ತಫಾಗೆ 9 ಜನ ಮಕ್ಕಳು. ಎಲ್ಲಾ ಮಕ್ಕಳಿಗೂ ಮದುವೆ ಮಾಡಿಕೊಟ್ಟಿದ್ದಾರೆ. ಎಲ್ಲಾ ಮಕ್ಕಳು ತಮ್ಮ ಕೆಲಸ ನೋಡಿಕೊಂಡು ತಮ್ಮ ಪಾಡಿಗೆ ತಾವಿದ್ದಾರೆ. ಪತ್ನಿಯ ಜೊತೆ ಹಾಜಿ ಮುಸ್ತಫಾ ನಿವೃತ್ತ ಜೀವನ ನಡೆಸುತ್ತಿದ್ದರು. ಎರಡು ವರ್ಷದ ಹಿಂದೆ ಮುಸ್ತಫಾ ಪತ್ನಿ ಖುರ್ಷಿದ್ ಬೇಗಂ ನಿಧನರಾಗಿದ್ದಾರೆ. ಅಂದಿನಿಂದಲೂ ಮುಸ್ತಫಾ ಒಂಟಿಯಾಗಿ ಜೀವನ ನಡೆಸುತ್ತಿದ್ದರು.

ಒಂಟಿ ಬಾಳಿಗೆ ಜಂಟಿಯಾದ ಫಾತಿಮಾ ಸದಾ ತುಂಬು ಕುಟುಂಬದಲ್ಲಿದ್ದ ಮುಸ್ತಫಾಗೆ ಪತ್ನಿ ಸಾವು ಆಘಾತ ತಂದಿತ್ತು. ಒಂಟಿಯಾಗಿ ಜೀವನ ನಡೆಸುವುದು ತುಂಬಾ ಕಷ್ಟವಾಗಿತ್ತು. ದಿನ ಕಳೆದಂತೆ ತನ್ನ ಇಳಿ ವಯಸ್ಸಿನಲ್ಲಿ ಯಾರದಾದರೂ ಸಾಥ್ ಬೇಕು ಎಂದು ಮನಸ್ಸು ಹಾತೊರೆಯುತಿತ್ತು. ಕೊನೆಗೂ ತನಗೊಂದು ಜೊತೆಗಾತಿ ಬೇಕು ಎಂದು ನಿರ್ಧರಿಸಿದ ಮುಸ್ತಫಾಗೆ ಗೌಸಿಯಾನಗರದಲ್ಲೇ ಒಂಟಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ದೆ ಫಾತಿಮಾ ಬೇಗಂ ಕಣ್ಣಿಗೆ ಬಿದ್ದಿದ್ದಾರೆ. ಮೊದಲು ಮುಸ್ತಫಾ ತನ್ನ ಇಂಗಿತವನ್ನು ಫಾತಿಮಾ ಬೇಗಂ ಅವರಿಗೆ ತಿಳಿಸಿದ್ದಾರೆ. ಒಂಟಿಯಾಗಿದ್ದ ಫಾತಿಮಾ ಬೇಗಂ ಸಹಾ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಅಪರೂಪದ ಮದುವೆಗೆ ಸಾಕ್ಷಿಯಾದರು ಮಕ್ಕಳು‌ ಮೊಮ್ಮಕ್ಕಳು ಮುಸ್ತಫಾ ನಂತರ ವಿಚಾರವನ್ನು ತಮ್ಮ ಮನೆಯವರಿಗೆ ತಿಳಿಸಿದ್ದಾರೆ. ಮೊದಲು ಇಡೀ ಕುಟುಂಬಕ್ಕೆ ಇದು ಅಚ್ಚರಿಯಾಗಿದೆ. ಆದರೂ ತಂದೆಯ ಪರಿಸ್ಥಿತಿ ಅರ್ಥ ಮಾಡಿಕೊಂಡ ಮಕ್ಕಳು ಮೊಮ್ಮಕಳು ತಂದೆಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ತಂದೆಯ ಇಚ್ಛೆಯಂತೆ ನಿಖಾಗೆ ದಿನಾಂಕ ಫಿಕ್ಸ್ ಮಾಡಿದ್ದಾರೆ. ಗೌಸಿಯಾನಗರದ ತಮ್ಮ ಮನೆಯಲ್ಲಿ ಮದುವೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಮುಸ್ತಫಾ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಸಮ್ಮುಖದಲ್ಲಿ‌ ಫಾತಿಮಾಬೇಗಂ ವರಿಸಿದ್ದಾರೆ. ಅದು ಕಾನೂನಾತ್ಮಕವಾಗಿಯೇ ಮುಸ್ತಫಾ ಫಾತಿಮಾ ಬೇಗಂರನ್ನು ಮದುವೆಯಾಗಿರೋದು ವಿಶೇಷ. ಇಳಿ ವಯಸ್ಸಿನಲ್ಲಿ ತನಗೊಂದು ಆಸರೆ ಬೇಕೆಂದು ಬಯಸಿದ ಮುಸ್ತಫಾ ಆಸೆಯನ್ನು ಮನೆಯವರೆಲ್ಲಾ ಈಡೇರಿಸಿದ್ದಾರೆ. ಕೊನೆಗಾಲದಲ್ಲಿ ಒಬ್ಬರಿಗೊಬ್ಬರು ಸುಖಃ ದುಖಃ ಹಂಚಿಕೊಂಡು ಉಳಿದ ಜೀವನವನ್ನ ಸಾಗಿಸಲು ಜೋಡಿ ಸಿದ್ದವಾಗಿದೆ. ಇಳಿ ವಯಸ್ಸಿನಲ್ಲಿ ತಮಗೆ ಆಸರೆ ಬೇಕೆಂದು ಬಯಸಿ ಬಾಳಸಂಗಾತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಹಿರಿಯ ಜೋಡಿಗೆ ಶುಭಾಶಯಗಳು.

ವರದಿ: ರಾಮ್, ಟಿವಿ9 ಮೈಸೂರು

ಇದನ್ನೂ ಓದಿ: ‘ಯಾವ ಉಡುಪು ಧರಿಸಬೇಕು ಎಂಬ ಅರಿವಿರದ ದಡ್ಡಿ ನಾನಲ್ಲ’; ಟ್ರೋಲಿಗರಿಗೆ ಖಾರವಾಗಿ ಪ್ರತಿಕ್ರಿಯಿಸಿದ ಮಲೈಕಾ

ಬೆಂಗಳೂರಿನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ! ಪಕ್ಕದ ಮನೆಯ ಯುವಕನಿಂದ ದುಷ್ಕೃತ್ಯ